More

    ಕನ್ನಡ ಕಲಿಕೆಗೆ ಒತ್ತು: ಶೈಕ್ಷಣಿಕ ವಲಯದಲ್ಲಿ ಇನ್ನಷ್ಟು ಪ್ರಯತ್ನಗಳು ಆಗಬೇಕು

    ಕರ್ನಾಟಕದಲ್ಲಿ ಕನ್ನಡವೇ ‘ಸಾರ್ವಭೌಮ ಭಾಷೆ’ ಆಗಬೇಕು ಎಂಬುದೇನೋ ನಿಜ. ಆದರೆ, ಇದು ಬರೀ ಘೋಷಣೆಯಾಗಿ ಉಳಿದಿರುವುದು ಕಹಿವಾಸ್ತವ. ಯುವಪೀಳಿಗೆ ಕನ್ನಡ ಕಲಿಯಲು ಅನಾಸಕ್ತಿ ತೋರುತ್ತಿರುವುದು ಭಾಷೆಯ ವಿಷಯದಲ್ಲಿ ತಲೆದೋರಿರುವ ಮತ್ತೊಂದು ಆತಂಕ. ಪಾಲಕರು ಈ ನಿಟ್ಟಿನಲ್ಲಿ ಮಕ್ಕಳಲ್ಲಿ ಕನ್ನಡಾಭಿಮಾನ, ಭಾಷೆ ಶ್ರೀಮಂತಿಕೆಯ ಅರಿವು ಮೂಡಿಸುವುದನ್ನು ಬಿಟ್ಟು ಉದಾಸೀನ ಧೋರಣೆ ತಳೆಯುವುದು ಸೂಕ್ತವಲ್ಲ. ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಲಿಸಲು ಕಾನೂನು ಹೋರಾಟ ನಡೆಯುತ್ತಿರುವ ಸಂದರ್ಭದಲ್ಲೇ ರಾಜ್ಯ ಸರ್ಕಾರ ಮಹತ್ವದ ಕ್ರಮಕ್ಕೆ ಮುಂದಾಗಿದೆ. ಕನ್ನಡ ಭಾಷಾ ಕಲಿಕಾ ಅಧಿನಿಯಮ-2015ಅನ್ನು ಅಧಿಕೃತವಾಗಿ ಅನುಷ್ಠಾನಕ್ಕೆ ತರಲು ಶಿಕ್ಷಣ ಇಲಾಖೆ ಆದೇಶಿಸಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ 8ನೇ ತರಗತಿಗೆ ತೃತೀಯ ಭಾಷೆಯ ಕನ್ನಡ ಪಠ್ಯಪುಸ್ತಕಗಳು ಚಾಲ್ತಿಯಲ್ಲಿ ಇರುವುದಿಲ್ಲ ಎಂದಿದೆ. ತೃತೀಯ ಭಾಷೆ ಕನ್ನಡ ಪಠ್ಯಪುಸ್ತಕದ ಮುದ್ರಣವನ್ನೂ ನಿಲ್ಲಿಸಿದೆ. ಈಗಾಗಲೇ 1ರಿಂದ 7ನೇ ತರಗತಿವರೆಗೂ ತೃತೀಯ ಭಾಷೆ ಕನ್ನಡವನ್ನು ನಿಲ್ಲಿಸಲಾಗಿದೆ. ಈ ವರ್ಷ 8ನೇ ತರಗತಿಗೆ ಮತ್ತು ಮುಂದಿನ ಎರಡು ವರ್ಷಗಳಲ್ಲಿ 9 ಮತ್ತು 10ನೇ ತರಗತಿಗೂ ಕನ್ನಡವನ್ನು ತೃತೀಯ ಭಾಷೆಯಾಗಿ ಬೋಧಿಸುವುದಕ್ಕೆ ಕಡಿವಾಣ ಹಾಕಲಾಗುತ್ತದೆ ಎಂದಿದ್ದಾರೆ ಶಿಕ್ಷಣ ಇಲಾಖೆಯ ಅಧಿಕಾರಿಗಳು. ಕನ್ನಡ ಕಲಿಕೆಗೆ ಒತ್ತು ನೀಡುವ ನಿಟ್ಟಿನಲ್ಲಿ ಈ ಕ್ರಮ ಸಹಕಾರಿ.

    ಆಡಳಿತ ಭಾಷೆಯಾಗಿ ಮತ್ತು ಶಿಕ್ಷಣ ಮಾಧ್ಯಮವಾಗಿ ಕನ್ನಡ ಭಾಷೆಯ ಸ್ಥಿತಿಗತಿಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಆದರೆ, ಈ ನಿಟ್ಟಿನಲ್ಲಿ ದಿಟ್ಟಕ್ರಮಗಳನ್ನು ಕೈಗೊಳ್ಳುವ, ಕನ್ನಡ ಭಾಷೆಯನ್ನು ಎಲ್ಲ ಹಂತಗಳಲ್ಲಿ ಅನುಷ್ಠಾನಕ್ಕೆ ತರುವ ಇಚ್ಛಾಶಕ್ತಿ ಬೇಕಿದೆ. ಇಲ್ಲಿಯ ಸೌಲಭ್ಯ, ಸಂಪನ್ಮೂಲಗಳನ್ನು ಉಪಯೋಗಿಸಿಕೊಂಡು ಸ್ಥಾಪನೆಯಾಗುವ ಖಾಸಗಿ ಶಾಲೆಗಳು ಕನ್ನಡ ಕಲಿಸಲು ಮಾತ್ರ ಹಿಂದೇಟು ಹಾಕುತ್ತಿರುವುದು ಸರಿಯಲ್ಲ. ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಕಲಿಸಲು ಮೀನಮೇಷ ಎಣಿಸುತ್ತಿರುವುದರಿಂದಲೇ, ಹಂತಹಂತವಾಗಿ ತೃತೀಯ ಭಾಷೆಯಾಗಿ ಕನ್ನಡವನ್ನು ರದ್ದುಗೊಳಿಸಲಾಗುತ್ತಿದೆ. ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಲಿಯುವುದರಿಂದ ವಿದ್ಯಾರ್ಥಿಗಳಲ್ಲಿ ಕನ್ನಡದ ಬಗ್ಗೆ ಅರಿವು, ಆಸಕ್ತಿ ಉಂಟಾಗಲು ಸಾಧ್ಯ. ಇಂಥ ಕ್ರಮಗಳು ಕನ್ನಡಕ್ಕೆ ಸಂಬಂಧಿಸಿದ ಇತರ ವಲಯ, ಕ್ಷೇತ್ರಗಳಿಗೂ ಅನ್ವಯವಾಗಬೇಕು.

    ಸ್ಪರ್ಧಾತ್ಮಕ ಪರೀಕ್ಷೆಗಳು, ಬ್ಯಾಂಕಿಂಗ್ ಪರೀಕ್ಷೆಗಳಲ್ಲಿ ಕನ್ನಡಿಗರಿಗೆ ಅನ್ಯಾಯವಾಗುತ್ತಿರುವ ಬಗ್ಗೆ ಹಲವು ವರ್ಷಗಳಿಂದ ಹೋರಾಟಗಳು ನಡೆಯುತ್ತಲೇ ಇವೆ. ಐಬಿಪಿಎಸ್ ನಡೆಸುವ ಬ್ಯಾಂಕಿಂಗ್ ಪರೀಕ್ಷೆಗಳನ್ನು ಕನ್ನಡ ಸೇರಿ ಹಲವು ಪ್ರಾದೇಶಿಕ ಭಾಷೆಗಳಲ್ಲಿ ಬರೆಯಲು ಇತ್ತೀಚಿನ ವರ್ಷಗಳಲ್ಲಿ ಅವಕಾಶ ಕಲ್ಪಿಸಲಾಗಿದೆಯಾದರೂ, ಕನ್ನಡದಲ್ಲಿನ ಪ್ರಶ್ನೆಪತ್ರಿಕೆ ಅರ್ಥವೇ ಆಗದಷ್ಟು ಕೆಟ್ಟ ಅನುವಾದದಿಂದ ರೂಪಿಸಲಾಗುತ್ತಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ಒಂದಿಷ್ಟು ಸಾಮಾನ್ಯ ನಿಯಮಗಳು, ಶಿಷ್ಟಾಚಾರಗಳನ್ನು ಪಾಲಿಸಬೇಕಾಗುತ್ತದೆ ಎಂಬುದೇನೋ ನಿಜ. ಆದರೆ, ಒಂದು ಭಾಷೆಯ ಮೇಲೆ, ಅದರ ಅಸ್ಮಿತೆಯ ಮೇಲೆ, ಭಾಷಿಕರ ಮೇಲೆ ಉದ್ಯೋಗ, ಕಲಿಕೆ ಮತ್ತಿತರ ವಿಚಾರಗಳಲ್ಲಿ ಅನ್ಯಾಯ ಆಗದಂತೆ ನೋಡಿಕೊಳ್ಳುವುದು ಕೂಡ ಅಷ್ಟೇ ಮುಖ್ಯ ಎಂಬುದನ್ನು ಮರೆಯುವಂತಿಲ್ಲ.

    ಚಿನ್ನದ ಸ್ಮಗ್ಲಿಂಗ್​ನಲ್ಲಿ ಕೇರಳವೇ ನಂ.1: ಈವರೆಗೂ ಸೀಜ್​ ಆಗಿರೋದ್ರಲ್ಲಿ ಚಿನ್ನದ ರಸ್ತೆಯನ್ನೇ ಮಾಡ್ಬೋದು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts