More

    ಎಲೇ ರಸ್ತೆ, ಏನು ನಿನ್ನ ಅವಸ್ಥೆ !

    ನೇಸರಗಿ: ಬೈಲಹೊಂಗಲ ತಾಲೂಕಿನ ನೇಸರಗಿ ಸಮೀಪದ ಹಣ್ಣಿಕೇರಿ-ಹಿರೇಮೇಳೆ ಸಂಪರ್ಕಿಸುವ ಒಳರಸ್ತೆ ಸಂಪೂರ್ಣ ಹದಗೆಟ್ಟಿದ್ದರಿಂದ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

    ಜಿಪಂ ವ್ಯಾಪ್ತಿಗೆ ಒಳಪಡುವ 2 ಕಿ.ಮೀ. ಅಂತರದ ಈ ರಸ್ತೆಯನ್ನು ಕಳೆದ 20 ವರ್ಷಗಳ ಹಿಂದೆ ಗ್ರಾಮ ಸಡಕ್ ಯೋಜನೆಯಡಿ ಅಭಿವೃದ್ಧಿಪಡಿಸಿ ಡಾಂಬರೀಕಣ ಮಾಡಲಾಗಿತ್ತು. ಬಳಿಕ ಅಧಿಕಾರಿಗಳು ಈ ರಸ್ತೆಯತ್ತ ತಿರುಗಿ ನೋಡಿಲ್ಲ. ರಸ್ತೆಯ ಎರಡೂ ಬದಿಗೆ ಚರಂಡಿ ಇಲ್ಲದಿರುವುದರಿಂದ ಮಳೆ ನೀರು ರಸ್ತೆಯಲ್ಲೇ ಹರಿಯುತ್ತದೆ. ಕಳೆದ ವರ್ಷದ ಅತಿವೃಷ್ಟಿಯಿಂದ ಡಾಂಬರ್ ಕೊಚ್ಚಿಹೋಗಿದೆ. ಅಲ್ಲಲ್ಲಿ ತಗ್ಗು ಬಿದ್ದಿರುವುದರಿಂದ ವಾಹನ ಸವಾರರು ಭಯದಲ್ಲೇ ಸಂಚರಿಸುವಂತಾಗಿದೆ. ಹಣ್ಣಿಕೇರಿ ರೈತರು ಜಮೀನುಗಳಿಗೆ ಹೋಗಲು ಇದೇ ರಸ್ತೆ ಪ್ರಮುಖವಾಗಿದೆ. ಆದರೆ, ರಸ್ತೆಯಲ್ಲಿ ದೊಡ್ಡದಾಗಿ ತಗ್ಗು-ಗುಂಡಿಗಳು ಬಿದ್ದಿರುವುದರಿಂದ ಚಕ್ಕಡಿಗಳು, ಟ್ರಾೃಕ್ಟರ್ ಚಾಲಕರು ಸಂಚರಿಸಲು ಹರಸಾಹಸ ಮಾಡಬೇಕಾಗಿದೆ.

    ಬಸ್ ಸಂಚಾರ ಸ್ಥಗಿತ: ಹಿರೇಮೇಳೆ ಗ್ರಾಮಕ್ಕೆ ಬೈಲಹೊಂಗಲ ಡಿಪೋದಿಂದ ಬೆಳಗ್ಗೆ ಹಾಗೂ ಸಂಜೆ ಎರಡು ಬಸ್‌ಗಳು ಓಡುತ್ತಿದ್ದವು. ಆದರೆ, ರಸ್ತೆ ಹಾಳಾಗಿದ್ದರಿಂದ ಎರಡು ವರ್ಷದಿಂದ ಬಸ್ ಸಂಚಾರ ಸ್ಥಗಿತಗೊಂಡಿದೆ. ಇದರಿಂದ ಗ್ರಾಮಸ್ಥರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಗ್ರಾಮಕ್ಕೆ ಖಾಸಗಿ ವಾಹನಗಳ ಸೌಲಭ್ಯವೂ ಇಲ್ಲ. ವೃದ್ಧರು, ರೋಗಿಗಳು, ಗರ್ಭಿಣಿ ಮತ್ತು ಬಾಣಂತಿಯರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಣ್ಣಿಕೇರಿ ಅಥವಾ ಕರಡಿಗುದ್ದಿ ವರೆಗೆ ಸುಮಾರು ಐದಾರು ಕಿ.ಮೀ. ನಡೆದುಕೊಂಡು ಹೋಗುವುದು ಅನಿವಾರ್ಯವಾಗಿದೆ. ಇಲ್ಲಿನ ಅವ್ಯವಸ್ಥೆ ಕುರಿತು ಗ್ರಾಮಸ್ಥರು ಹಲವು ಬಾರಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.

    ಇನ್ನಾದರೂ ಎಚ್ಚೆತ್ತುಕೊಂಡು ರಸ್ತೆ ದುರಸ್ತಿ ಮಾಡಬೇಕು. ಇಲ್ಲವಾದಲ್ಲಿ ರಸ್ತೆ ತಡೆದು ಪ್ರತಿಭಟನೆ ಮಾಡಲಾಗುವುದು ಎಂದು ಹಿರೇಮೇಳೆ ಹಾಗೂ ಹಣ್ಣಿಕೇರಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts