More

    ಏಕನಾಥ್ ಶಿಂಧೆ ಬಣವೇ ನೈಜ ಶಿವಸೇನಾ: ಮಹಾರಾಷ್ಟ್ರ ಸ್ಪೀಕರ್ ಮಹಾ ತೀರ್ಪಿಗೆ ಆಧಾರಗಳೇನು?

    ಮುಂಬೈ: ಏಕನಾಥ್ ಶಿಂಧೆ ಅವರಿಗೆ ದೊಡ್ಡ ಗೆಲುವು ದೊರೆತಿದೆ. ಪಕ್ಷದ ಬಹುಪಾಲು ಶಾಸಕರ ಬೆಂಬಲವನ್ನು ಹೊಂದಿರುವುದರಿಂದ ಶಿಂಧೆ ಅವರ ನೇತೃತ್ವದ ಶಿವಸೇನೆ ಬಣವು ನ್ಯಾಯಸಮ್ಮತವಾಗಿದೆ ಎಂದು ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ರಾಹುಲ್ ನಾರ್ವೇಕರ್ ಅವರು ಬುಧವಾರ ತೀರ್ಪು ನೀಡಿದ್ದಾರೆ.

    ಈಗಿನ ಶಿವಸೇನೆ ಮುಖ್ಯ ಸಚೇತಕ ಸುನೀಲ ಪ್ರಭು ಅವರಿಗೆ ಶಾಸಕಾಂಗ ಸಭೆ ಕರೆಯುವ ಅಧಿಕಾರ ಇಲ್ಲದ ಕಾರಣ ಶಿಂಧೆ ಬಣದ ಶಾಸಕರನ್ನು ಅನರ್ಹಗೊಳಿಸುವಂತಿಲ್ಲ ಎಂದೂ ಅವರು ತೀರ್ಪು ನೀಡಿದ್ದಾರೆ.

    ಸ್ಪೀಕರ್ ಅವರು ಪ್ರತಿಸ್ಪರ್ಧಿ ಶಿವಸೇನೆ ಬಣಗಳ ಅನರ್ಹತೆ ಅರ್ಜಿಗಳ ಕುರಿತು ತೀರ್ಪು ನೀಡಿದ್ದಾರೆ.

    ತಮ್ಮ ಆದೇಶವನ್ನು ಪ್ರಕಟಿಸಿದ ಸ್ಪೀಕರ್ ರಾಹುಲ್ ನಾರ್ವೇಕರ್, ತಿದ್ದುಪಡಿ ಮಾಡಿದ ಪಕ್ಷದ 2018 ರ ಸಂವಿಧಾನವನ್ನು ಚುನಾವಣಾ ಆಯೋಗದ ಮುಂದೆ ಇಡದ ಕಾರಣ ಶಿವಸೇನೆಯ 1999 ರ ಸಂವಿಧಾನವನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ. 1999 ರ ಶಿವಸೇನೆಯ ಸಂವಿಧಾನವು ಪಕ್ಷದ ಮುಖ್ಯಸ್ಥರ ಕೈಯಿಂದ ಅಧಿಕಾರದ ಕೇಂದ್ರೀಕೃತವಾಗುವುದನ್ನು ತೆಗೆದುಹಾಕಿದೆ. ಆದರೆ, 2018 ರಲ್ಲಿ ತಿದ್ದುಪಡಿಯಾದ ಪಕ್ಷದ ಸಂವಿಧಾನವು ಅಧಿಕಾರವನ್ನು ಮತ್ತೆ ಪಕ್ಷದ ಮುಖ್ಯಸ್ಥರ ಕೈಗೆ ನೀಡಿದೆ.

    ಇದರ ಆಧಾರದ ಮೇಲೆ ಉದ್ಧವ್ ಠಾಕ್ರೆ ಅವರು ಶಿವಸೇನಾ ಪ್ರಮುಖ (ಅಧ್ಯಕ್ಷರು) ಆಗಿರುವುದರಿಂದ ಏಕನಾಥ್ ಶಿಂಧೆ ಅವರನ್ನು ಶಾಸಕಾಂಗ ಪಕ್ಷದ ನಾಯಕ ಸ್ಥಾನದಿಂದ ತೆಗೆದುಹಾಕುವ ಅಧಿಕಾರವಿಲ್ಲ ಎಂದು ಸ್ಪೀಕರ್ ಹೇಳಿದ್ದಾರೆ. ಜೂನ್ 21ರಂದು ಅಂದಿನ ಮುಖ್ಯ ಸಚೇತಕ ಸುನೀಲ ಪ್ರಭು ಅವರು ಕರೆದಿದ್ದ ಶಾಸಕಾಂಗ ಪಕ್ಷಕ್ಕೆ ಹಾಜರಾಗಲಿಲ್ಲ ಎಂಬ ಕಾರಣಕ್ಕಾಗಿ ಉದ್ಧವ್ ಠಾಕ್ರೆ ಬಣವು ಶಿಂಧೆ ಬಣದ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿತ್ತು.

    ಶಾಸಕಾಂಗ ಪಕ್ಷದ ಸಭೆ ಕರೆಯಲು ಸುನೀಲ್ ಪ್ರಭು ಅವರಿಗೆ ಅಧಿಕಾರವಿಲ್ಲ. ಪ್ರತಿಸ್ಪರ್ಧಿ ಶಾಸಕರು ಸಭೆಗೆ ಬಂದಿಲ್ಲ ಎಂಬ ಉದ್ಧವ್ ಬಣದ ವಾದವನ್ನು ತಿರಸ್ಕರಿಸಬೇಕಾಗುತ್ತದೆ ಎಂದು ಸ್ಪೀಕರ್​ ಹೇಳಿದ್ದಾರೆ.

    “ಇದರ ಆಧಾರದ ಮೇಲೆ ಶಿಂಧೆ ಬಣವು ನಿಜವಾದ ಪಕ್ಷವಾಗಿರುವುದರಿಂದ ಅನರ್ಹಗೊಳಿಸಲು ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ಬಣ ಹೊರಹೊಮ್ಮಿದ ಕ್ಷಣದಿಂದ ಸುನೀಲ್ ಪ್ರಭು ಅವರು ವ್ಹಿಪ್ ಆಗುವುದಿಲ್ಲ” ಎಂದು ನಾರ್ವೇಕರ್ ಹೇಳಿದ್ದಾರೆ.

    ಏಕನಾಥ್ ಶಿಂಧೆ ಅವರು 40ಕ್ಕೂ ಹೆಚ್ಚು ಶಿವಸೇನೆ ಶಾಸಕರೊಂದಿಗೆ ಆಗಿನ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಬಂಡಾಯವೆದ್ದು, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಮತ್ತು ಕಾಂಗ್ರೆಸ್ ಸೇರಿದಂತೆ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರವನ್ನು ಉರುಳಿಸಿದ 18 ತಿಂಗಳ ನಂತರ ಈ ತೀರ್ಪು ಬಂದಿದೆ.

    ಏಕನಾಥ್ ಶಿಂಧೆ ನಂತರ ಬಿಜೆಪಿಯೊಂದಿಗೆ ಕೈಜೋಡಿಸಿ ಹೊಸ ಮುಖ್ಯಮಂತ್ರಿಯಾದರು, ದೇವೇಂದ್ರ ಫಡ್ನವೀಸ್ ಉಪಮುಖ್ಯಮಂತ್ರಿಯಾದರು.

    ಶಿಂಧೆ ಮತ್ತು ಠಾಕ್ರೆ ಬಣಗಳು ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್‌ಗೆ ಪಕ್ಷಾಂತರ ವಿರೋಧಿ ಕಾನೂನಿನಡಿಯಲ್ಲಿ ಪರಸ್ಪರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅರ್ಜಿಗಳನ್ನು ಸಲ್ಲಿಸಿದ್ದವು.

    ಸ್ಪೀಕರ್ ರಾಹುಲ್ ನಾರ್ವೇಕರ್ ಅವರು ಈ ಅರ್ಜಿಗಳ ಕುರಿತು ತ್ವರಿತವಾಗಿ ತೀರ್ಪು ನೀಡುವಂತೆ ಮೇ 2023 ರಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶಿಸಿತು.

    ಚುನಾವಣಾ ಆಯೋಗವು ಶಿಂಧೆ ನೇತೃತ್ವದ ಬಣಕ್ಕೆ ‘ಶಿವಸೇನೆ’ ಹೆಸರು ಮತ್ತು ‘ಬಿಲ್ಲು ಮತ್ತು ಬಾಣ’ ಚಿಹ್ನೆಯನ್ನು ನೀಡಿತ್ತು, ಆದರೆ, ಠಾಕ್ರೆ ನೇತೃತ್ವದ ಬಣವನ್ನು ಶಿವಸೇನೆ (ಯುಬಿಟಿ) ಎಂದು ಕರೆಯಲಾಯಿತು, ಜ್ವಾಲೆಯ ಜ್ಯೋತಿಯು ಅದರ ಚಿಹ್ನೆಯಾಗಿದೆ.

    ಕಳೆದ ವರ್ಷ ಜುಲೈನಲ್ಲಿ ಎನ್‌ಸಿಪಿಯ ಅಜಿತ್ ಪವಾರ್ ಬಣ ಕೂಡ ಶಿಂಧೆ ನೇತೃತ್ವದ ಸರ್ಕಾರಕ್ಕೆ ಸೇರ್ಪಡೆಗೊಂಡಿತ್ತು. ದೇವೇಂದ್ರ ಫಡ್ನವಿಸ್ ಜತೆಗೆ ಅಜಿತ್ ಪವಾರ್ ಕೂಡ ಉಪ ಮುಖ್ಯಮಂತ್ರಿಯಾಗಿದ್ದಾರೆ.

    ಮೇಲ್ಛಾವಣಿ ಸೌರ ವಿದ್ಯುತ್ ಸಬ್ಸಿಡಿ ಹೆಚ್ಚಳ ; ನಿಮ್ಮ ಮನೆಯಲ್ಲಿ ಅಳವಡಿಸಿಕೊಂಡರೆ ಲಾಭದಾಯಕ

    ಬಿಎಸ್​ಇ ಸೂಚ್ಯಂಕವು 270 ಅಂಕ ಏರಿಕೆ: ರಿಲಯನ್ಸ್, ಐಸಿಐಸಿಐ ಬ್ಯಾಂಕ್ ಷೇರುಗಳಿಗೆ ಉತ್ತಮ ಲಾಭ

    ರಾಮ ಮಂದಿರ ಉದ್ಘಾಟನೆಯಲ್ಲಿ ಪಾಲ್ಗೊಳ್ಳುವುದಿಲ್ಲ ಸೋನಿಯಾ, ಖರ್ಗೆ: ಆಹ್ವಾನ ತಿರಸ್ಕರಿಸಿದ್ದಕ್ಕೆ ಕಾಂಗ್ರೆಸ್​ ನೀಡಿದ ಕಾರಣಗಳು ಹೀಗಿವೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts