More

    ಶೈಕ್ಷಣಿಕ ಸೌಲಭ್ಯ ಕೊರತೆ ನೀಗಿಸಲು ಪ್ರಯತ್ನ

    ಹುಬ್ಬಳ್ಳಿ: ಸರ್ಕಾರಿ ಶಾಲೆಗಳಲ್ಲಿ ಸೌಲಭ್ಯಗಳ ಹೆಚ್ಚಳಕ್ಕೆ ಸರ್ಕಾರಗಳು ಕ್ರಮ ಕೈಗೊಳ್ಳುತ್ತಿರುವ ಮಧ್ಯೆಯೂ ಕೊರತೆಯಾಗಿರುವ ಸವಲತ್ತುಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸಲು ರೋಟರಿ ಕ್ಲಬ್ ಸೇರಿ ವಿವಿಧ ಸಂಘ- ಸಂಸ್ಥೆಗಳ ಸಹಯೋಗ ಪಡೆಯಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಹೆಚ್ಚುವರಿ ಆಯುಕ್ತ ರಮೇಶ ದೇಸಾಯಿ ಹೇಳಿದರು.

    ಇಲ್ಲಿಯ ರೋಟರಿ ಕ್ಲಬ್, ಎಸ್​ಜೆಎಂವಿ ಕಲಾ- ವಾಣಿಜ್ಯ ಪದವಿಪೂರ್ವ ಮಹಿಳಾ ಕಾಲೇಜ್ ಹಳೇ ವಿದ್ಯಾರ್ಥಿಗಳ ಸಂಘ ಹಾಗೂ ಎಸ್​ಜೆಎಂವಿ ಕರಿಯರ್ ಅಕಾಡೆಮಿ ವತಿಯಿಂದ ನಗರದ ಮೂರುಸಾವಿರ ಮಠ ಸಭಾಭವನದಲ್ಲಿ ಗುರುವಾರ ಏರ್ಪಡಿಸಿದ್ದ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸರ್ಕಾರಿ ಶಾಲೆಗಳಲ್ಲಿ ಪರಿಣಿತ ಶಿಕ್ಷಕರ ಸಮೂಹ ಇದೆ. ಆದರೆ, ಕೆಲವೆಡೆ ಮೂಲ ಸೌಲಭ್ಯಗಳಿಲ್ಲದೇ ವಿದ್ಯಾರ್ಥಿಗಳಿಗೆ ಡಿಜಿಟಲ್ ತಂತ್ರಜ್ಞಾನ ಸಿಗದ ಪರಿಸ್ಥಿತಿ ಇದೆ. ಕರೊನಾ ಸಂದರ್ಭದಲ್ಲಿ ಆನ್​ಲೈನ್ ಶಿಕ್ಷಣ ಜಾರಿಯಾದಾಗ ಅನೇಕ ವಿದ್ಯಾರ್ಥಿಗಳು ಸಮರ್ಪಕ ವ್ಯವಸ್ಥೆ ಇಲ್ಲದೇ ಪರದಾಡಿದರು ಎಂದರು.

    ಇಂತಹ ಸಮಸ್ಯೆ ಇರುವ ಸ್ಥಳಗಳಲ್ಲಿ ಸಕಲ ಸೌಲಭ್ಯ ಕಲ್ಪಿಸಲು ಇಲಾಖೆ ಪ್ರಯತ್ನ ಮಾಡುತ್ತದೆ. ಈ ಕಾರ್ಯಕ್ಕೆ ಸಂಘ- ಸಂಸ್ಥೆಗಳ ಸಹಕಾರ ಪಡೆಯಲಿದೆ. ಈ ಮೂಲಕ ಗುಣಮಟ್ಟದ ಶಿಕ್ಷಣ ಎಲ್ಲರಿಗೂ ತಲುಪಿಸುವ ಕೆಲಸ ಮಾಡಲಾಗುವುದು ಎಂದರು. ಜಿಲ್ಲಾ ಸಾಕ್ಷರ ಸಮಿತಿ ಅಧ್ಯಕ್ಷ ನರೇಂದ್ರ ಬರವಾಲ್ ಮಾತನಾಡಿ, ಡಿಜಿಟಲ್ ಮಾಧ್ಯಮದ ಮೂಲಕ ಶಿಕ್ಷಣ ನೀಡುವುದು ಇಂದಿನ ಅಗತ್ಯವಾಗಿದೆ. 2025ರ ವೇಳೆಗೆ ಶೇ. 100ರಷ್ಟು ಸಾಕ್ಷರತೆ ಸಾಧಿಸುವ ಗುರಿ ಹೊಂದಿದ್ದು, ಈ ದಿಸೆಯಲ್ಲಿ ರೋಟರಿ ಕ್ಲಬ್ ರಾಜ್ಯದಲ್ಲಿ ಸುಮಾರು 25 ಸಾವಿರ ಟ್ಯಾಬ್ ವಿತರಣೆ ಮಾಡುವ ಆಶಯ ಇಟ್ಟುಕೊಂಡಿದೆ ಎಂದರು.

    ಎಸ್​ಜೆಎಂವಿ ಸಂಘದ ಗೌರವಾಧ್ಯಕ್ಷ ಅರವಿಂದ ಕುಬಸದ ಮಾತನಾಡಿ, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಟ್ಯಾಬ್​ಗಳನ್ನು ಸರಿಯಾಗಿ ಬಳಸಿ ಉತ್ತಮ ಫಲಿತಾಂಶ ದಾಖಲಿಸಬೇಕು ಎಂದು ಸಲಹೆ ನೀಡಿದರು. ಎಸ್​ಜೆಎಂವಿ ಜೆಜಿ ಬಾಲಕರ ಪ್ರೌಢಶಾಲೆ, ಸುಧಾ ಆರ್. ಶೆಟ್ಟಿ ಬಾಲಕಿಯರ ಪ್ರೌಢಶಾಲೆ ಹಾಗೂ ಕುಸುಗಲ್ ಸರ್ಕಾರಿ ಪ್ರೌಢಶಾಲೆಯ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳಿಗೆ 147 ಟ್ಯಾಬ್ ನೀಡಲಾಯಿತು.

    ಸಾನ್ನಿಧ್ಯ ವಹಿಸಿದ್ದ ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು. ಪ್ರಾಚಾರ್ಯ ಅಂಜಲಿ, ವಿದ್ಯಾರ್ಥಿನಿ ಸ್ಮಿತಾ, ಇತರರು ಅನಿಸಿಕೆ ವ್ಯಕ್ತಪಡಿಸಿದರು.

    ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಶೈಲ ಕರಿಕಟ್ಟಿ, ಅಶೋಕ ಸಿಂಗ್ರಿ, ಹಳೇ ವಿದ್ಯಾರ್ಥಿಗಳ ಸಂಘದ ಅನುರಾಧಾ ಹೊಸಕೋಟಿ, ಎಸ್.ಪಿ. ಹಿರೇಮಠ, ಬಾಪು ಬಿರಾದಾರ, ಇತರರು ಇದ್ದರು.

    ರೋಟರಿ ಕ್ಲಬ್ ಅಧ್ಯಕ್ಷ ಸುರೇಂದ್ರ ಪೋರವಾಲ್ ಸ್ವಾಗತಿಸಿದರು. ಸ್ಮಿತಾ ಶೆಟ್ಟರ್ ಅತಿಥಿಗಳ ಪರಿಚಯ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts