More

    ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮ

    ನಾಪೋಕ್ಲು: ಕೊಡವ ಸಮಾಜಗಳ ಅಭಿವೃದ್ಧಿ ಕಾರ್ಯಗಳಿಗೆ ಸಂಸದರ ನಿಧಿಯಿಂದ ಅನುದಾನ ನೀಡಲಾಗಿದ್ದು ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ ಸಿಂಹ ಹೇಳಿದರು.

    ಪಾರಾಣೆ ಕೇಂದ್ರ ಕ್ರೀಡಾ ಮಂಡಳಿ ವತಿಯಿಂದ ಪಾರಾಣೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ 62ನೇ ವರ್ಷದ ಅಂತರ ಗ್ರಾಮಾಂತರ ಕೈಲ್ ಮುಹೂರ್ತ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

    ಅಭಿವೃದ್ಧಿ ಕಾರ್ಯಗಳಿಗೆ 30 ಕೊಡವ ಸಮಾಜಗಳಿಗೆ ತಲಾ 10 ಲಕ್ಷ ರೂ.ನಂತೆ 3 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ.ಬಾಳುಗೋಡು ಕೊಡವ ಕಲ್ಚರಲ್ ಸೆಂಟರ್‌ನಲ್ಲಿ ಹಾಕಿ ಸ್ಟೇಡಿಯಂ ನಿರ್ಮಾಣ ಮಾಡಲು 40 ಲಕ್ಷ ರೂ. ನೀಡಲಾಗಿದೆ ಎಂದರು.

    ಕೇಂದ್ರ ಸರ್ಕಾರದಿಂದ ರಾಜ್ಯದಲ್ಲಿ ವಿವಿಧ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಹಾಗೆಯೇ ಗ್ರಾಮೀಣ ರಸ್ತೆಗಳ ನಿರ್ಮಾಣಕ್ಕೂ ಆದ್ಯತೆ ನೀಡಲಾಗುತ್ತಿದೆ. 5.5 ಕಿ.ಮೀ. ಅಂತರದ ಬಾವಲಿ-ನರಿಯಂದಡ ಹಾಗೂ ಬಲಮುರಿ-ಕುಯ್ಯಂಗೇರಿ ರಸ್ತೆಗಳನ್ನು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಅಭಿವೃದ್ಧಿಪಡಿಸಲಾಗಿದೆ. ಉಳಿದ ಗ್ರಾಮೀಣ ರಸ್ತೆಗಳನ್ನು ನಾಲ್ಕನೇ ಹಂತದ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಅಭಿವೃದ್ಧಿಪಡಿಸಲಾಗುವುದು ಎಂದರು.

    ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಮಾತನಾಡಿ, ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಲು ಸಾಧ್ಯ. ಜಿಲ್ಲೆಯಲ್ಲಿ ಹೆಚ್ಚು ಕ್ರೀಡಾ ಚಟುವಟಿಕೆ ನಡೆಯುತ್ತಿದ್ದು, ಕ್ರೀಡಾಕೂಟದಿಂದ ಉತ್ತಮ ಪ್ರತಿಭೆಗಳು ಹೊರಹೊಮ್ಮುವಂತಾಗಲಿ ಎಂದು ಆಶಿಸಿದರು.
    ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಕೊದಂಡೇರ ಪಿ. ಬಾಂಡ್ ಗಣಪತಿ ಮಾತನಾಡಿ, 62 ವರ್ಷಗಳಿಂದ ನಿರಂತರವಾಗಿ 5 ಗ್ರಾಮಗಳ ಜನರು ಒಗ್ಗೂಡಿ ಕ್ರೀಡಾಕೂಟ ಆಯೋಜಿಸುತ್ತಿರುವುದು ಶ್ಲಾಘನೀಯ ಎಂದರು.

    ಪಾರಾಣೆ ಕೇಂದ್ರ ಕ್ರೀಡಾ ಮಂಡಳಿ ಅಧ್ಯಕ್ಷ ಮಚ್ಚಂಡ ಸಾಬಾ ದೇವಯ್ಯ ಅಧ್ಯಕ್ಷತೆ ವಹಿಸಿದ್ದರು. ಅಂತಾರಾಷ್ಟ್ರೀಯ ಮಟ್ಟದ ಆಟಗಾರ್ತಿ ಮುಲ್ಲೇರ ಪೂವಮ್ಮ ಪೂವಣ್ಣ ಅವರನ್ನು ಕ್ರೀಡಾ ಮಂಡಳಿ ಅವತಿಯಿಂದ ಸನ್ಮಾನಿಸಲಾಯಿತು.

    ಪುರುಷರ ಹಾಕಿ ಪಂದ್ಯಾಟದಲ್ಲಿ ಬಾವಲಿ ಗ್ರಾಮದ ತಂಡವು ಪ್ರಥಮ ಸ್ಥಾನ, ಕಿರುಂದಾಡು ಗ್ರಾಮದ ತಂಡ ದ್ವಿತೀಯ ಸ್ಥಾನ ಗಳಿಸಿತು. ವಾಲಿಬಾಲ್ ಪಂದ್ಯದಲ್ಲಿ ಕಿರುಂದಾಡು ತಂಡ ಪ್ರಥಮ ಸ್ಥಾನ ಗಳಿಸಿದರೆ, ಬಾವಲಿ ತಂಡ ದ್ವಿತೀಯ ಸ್ಥಾನ ಗಳಿಸಿತು. ಮಹಿಳೆಯರ ಥ್ರೋಬಾಲ್ ಸ್ಪರ್ಧೆಯಲ್ಲಿ ಬಲಮುರಿ ತಂಡ ಪ್ರಥಮ ಸ್ಥಾನ, ಕೈಕಾಡು ತಂಡ ದ್ವಿತೀಯ ಸ್ಥಾನ ಗಳಿಸಿತು. ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಬಲಮುರಿ ತಂಡ ಪ್ರಥಮ ಸ್ಥಾನ ಹಾಗೂ ಕೈಕಾಡು ತಂಡ ದ್ವಿತೀಯ ಸ್ಥಾನ ಗಳಿಸಿತು.

    ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಟ್ರೋಫಿ ಹಾಗೂ ನಗದು ಬಹುಮಾನಗಳನ್ನು ಗಣ್ಯರು ವಿತರಿಸಿದರು. ಸೆಸ್ಕ್‌ನ ಭಟ್ಕಾರಂಡ ಮುತ್ತಣ್ಣ, ಕೊಣಂಜಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಟ್ಟಿ ಕುಶಾಲಪ್ಪ, ಕಿರುಂದಾಡು ಗ್ರಾಮದ ಬಾದುಮಂಡ ನಂಜಪ್ಪ, ವಕೀಲ ಬಿಟ್ಟೀರ ರಾಜಪ್ಪ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅಪ್ಪನೆರವಂಡ ರಾಜಾ ಪೂವಯ್ಯ, ದತ್ತಿನಿಧಿ ಅಧ್ಯಕ್ಷ ನಾಯಕಂಡ ದೀಪು ಚಂಗಪ್ಪ, ಉಪಾಧ್ಯಕ್ಷ ಬೊಳ್ಳಚೆಟ್ಟಿರ ಶಾಂತಿ, ಗೌರವ ಕಾರ್ಯದರ್ಶಿ ಅಪ್ಪನೆರವಂಡ ರಾಜೇಶ್, ನಿರ್ದೇಶಕರು ಹಾಗೂ 5 ಗ್ರಾಮಗಳ ವಿವಿಧ ಸಮಿತಿ ಸದಸ್ಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts