More

    ಕಲಿಯೋಕೆ ಯಾವ ವಯಸ್ಸಾದರೇನು… 11ನೇ ತರಗತಿಗೆ ದಾಖಲಾದ್ರು ಶಿಕ್ಷಣ ಸಚಿವರು!

    ನವದೆಹಲಿ: ಜೀವನ ಎಂದರೆ ನಿರಂತರವಾದ ಕಲಿಕೆ. ಕಲಿಯಲು ಯಾವುದೇ ವಯಸ್ಸು ಎಂಬುದೇನಿಲ್ಲ… ಎಂದು ನಾವು ಎಲ್ಲರೂ ಹೇಳುತ್ತಲೇ ಇರುತ್ತೇವೆ, ಕೇಳುತ್ತಲೂ ಇರುತ್ತೇವೆ. ಈ ಮಾತನ್ನು ನಿಜ ಮಾಡಲು ಹೊರಟಿದ್ದಾರೆ ಇಲ್ಲೊಬ್ಬ ಶಿಕ್ಷಣ ಸಚಿವರು.

    ಅರೆ, ಶಿಕ್ಷಣ ಸಚಿವರಿಗೇನು ಬಂತು ಕೇಡುಗಾಲ ಎನ್ನಬೇಡಿ. ಅವರಿಗೆ 53 ವರ್ಷ ವಯಸ್ಸಾಗಿದ್ದರೂ ಕನಿಷ್ಠ 12ನೇ ತರಗತಿಯನ್ನಾದರೂ ಪಾಸು ಮಾಡಿಕೊಳ್ಳಬೇಕು ಎಂಬ ಉಮೇದು ಈಗ ಬಂದಿದೆ. ಅದರಲ್ಲೂ ಶಿಕ್ಷಣ ಸಚಿವರಾದ ಮೇಲೆ ಈ ಜ್ಞಾನೋದಯವಾಗಿದೆ. ಅದಕ್ಕಾಗಿಯೇ ಅವರು ಈ ವಯಸ್ಸಿನಲ್ಲಿ ಈಗ 11ನೇ ತರಗತಿಗೆ ದಾಖಲಾಗಿದ್ದಾರೆ.

    ಯಾರು ಆ ಶಿಕ್ಷಣ ಸಚಿವರು ಅಂದಿರಾ? ಅವರ ಹೆಸರು ಜಗರ್​ನಾಥ್​ ಮೆಹತೋ. ಇವರು ಜಾರ್ಖಂಡ್​ನ ಶಿಕ್ಷಣ ಸಚಿವರಾಗಿದ್ದಾರೆ. ಇವರು ಜಾರ್ಖಂಡ್​ನ ಧುಮ್ರಿ ವಿಧಾನಸಭಾ ಕ್ಷೇತ್ರದ ಸದಸ್ಯರಾಗಿದ್ದಾರೆ.

    ಇವರಿಗೆ ಈಗೇಕೆ ಬಂದು ಓದುವ ಉಮೇದು ಎಂದು ಪ್ರಶ್ನಿಸಿದರೆ, ಇಲ್ಲಿದೆ ನೋಡಿ ಉತ್ತರ. ಇವರು ಶಿಕ್ಷಣ ಸಚಿವರಾಗಿ ನೇಮಕಗೊಂಡಾಗ, ಕೇವಲ 10ನೇ ತರಗತಿ ಪಾಸಾಗಿರುವ ಇವರಿಗೆ ಶಿಕ್ಷಣ ಸಚಿವರಾಗಲು ಏನು ಅರ್ಹತೆ ಇದೆ ಎಂದು ಟೀಕಿಸಿದವರೇ ಹೆಚ್ಚು. ಈ ಎಲ್ಲ ಟೀಕೆಗಳನ್ನು ಮೆಟ್ಟಿನಿಲ್ಲಲು ನಿರ್ಧರಿಸಿದ ಅವರು, 11ನೇ ತರಗತಿಗೆ ದಾಖಲಾಗಲು ಮುಂದಾಗಿದ್ದಾರೆ.

    ಇದನ್ನೂ ಓದಿ: ಫೇಸ್​ ಮಾಸ್ಕ್​ ಧರಿಸಲ್ಲ ಎಂದು ಅತ್ಯಾಚಾರ​ ಸಂತ್ರಸ್ತೆಯರ ಅಳಲು: ಇದರ ಹಿಂದಿದೆ ನೋವಿನ ಕಹಾನಿ!

    ಅದರಂತೆ ಅವರು ಬೊಕಾರೋ ಜಿಲ್ಲೆಯ ನವಾದ್ಹಿಯಲ್ಲಿರುವ ದೇವಿ ಮೆಹತೋ ಸ್ಮಾರಕ್​ ಇಂಟರ್​ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ 11ನೇ ತರಗತಿಗೆ ಪ್ರವೇಶಾತಿ ಪಡೆದುಕೊಂಡಿದ್ದಾರೆ.

    ಅರೆ, ಇವರು ಶಿಕ್ಷಣ ಸಚಿವರು ಎನ್ನುತ್ತೀರಿ. ಹಾಗಾದರೆ ಇವರು ಸಚಿವರಾಗಿ ಕೆಲಸ ಯಾವಾಗ ಮಾಡುತ್ತಾರೆ? ಅದು ಯಾವಾಗ ಶಾಲೆಗೆ ಹೋಗುತ್ತಾರೆ? ಶಿಕ್ಷಣ ಸಚಿವರೇ ತಮ್ಮ ವಿದ್ಯಾರ್ಥಿಯಾಗಿರುವಾಗ ಅವರಿಗೆ ಪಾಠ ಮಾಡುವ ಶಿಕ್ಷಕರ ಪಾಡೇನು ಎಂಬಿತ್ಯಾದಿ ಪ್ರಶ್ನೆಗಳು ಮನಸ್ಸಿನಲ್ಲಿ ಸಹಜವಾಗಿ ಮೂಡುತ್ತವೆ.

    ಈ ಎಲ್ಲ ಪ್ರಶ್ನೆಗಳಿಗೆ ಮುಂದಿನ ದಿನಗಳಲ್ಲಿ ಉತ್ತರ ದೊರೆಯಬೇಕಿದೆ. ಆದರೆ, ಸಚಿವ ಮೆಹತೋ ಮಾತ್ರ, ನಾನು ನನ್ನ ಶಿಕ್ಷಣವನ್ನು ಪೂರ್ಣಗೊಳಿಸುತ್ತೇನೆ. ಕೃಷಿ ಕೆಲಸ ಮಾಡುವ ಸಂದರ್ಭದಲ್ಲಿ ನಾನು ತರಗತಿಗಳಿಗೆ ಹಾಜರಾಗುತ್ತೇನೆ. ಶಿಕ್ಷಣ ಮತ್ತು ಕಲಿಕೆಗೆ ವಯಸ್ಸು ಎಂಬುದೇನಿಲ್ಲ. ನಾನು ಏನೇ ಮಾಡಿದರೂ ಅದರಲ್ಲಿ ಜನರಿಗೆ ಸ್ಫೂರ್ತಿ ಉಕ್ಕಿಸುವಂಥ ಕೆಲಸ ಮಾಡುತ್ತೇನೆ ಎಂದು ಹೇಳಿದ್ಧಾರೆ.

    1995ರಲ್ಲಿ 10ನೇ ತರಗತಿ ತೇರ್ಗಡೆಯಾಗಿರುವ ಇವರು, 11ನೇ ತರಗತಿಗೆ ದಾಖಲಾತಿ ಪಡೆದುಕೊಂಡಿರುವ ವಿಷಯವನ್ನು ಸುದ್ದಿಗಾರರಿಗೆ ತಿಳಿಸಿದ ಸಂದರ್ಭದಲ್ಲಿ ಜಾರ್ಖಂಡ್​ನಾದ್ಯಂತ ಹೊಸದಾಗಿ 4,416 ಶಾಲೆಗಳನ್ನು ಆರಂಭಿಸುವುದಾಗಿ ಘೋಷಿಸಿದ್ದಾರೆ.

    VIDEO | ಪಿಪಿಇ ಕಿಟ್​ ಧರಿಸಿ ಕುಣಿದ ಚಾಹಲ್​ ಭಾವಿ ಪತ್ನಿ ಧನಶ್ರೀ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts