More

    ಶಿಕ್ಷಣ ಎನ್ನುವುದು ವ್ಯವಹಾರವಲ್ಲ, ಬದ್ಧತೆ

    ಮೈಸೂರು: ಶಿಕ್ಷಣ ಎನ್ನುವುದು ಕೇವಲ ಕರ್ತವ್ಯ ಮತ್ತು ವ್ಯವಹಾರವಲ್ಲ. ವ್ಯವಹಾರಕ್ಕಿಂತಲೂ ಮೀರಿದ ಒಂದು ಬದ್ಧತೆ ಮತ್ತು ಶ್ರದ್ಧೆ ಎಂದು ನಿವೃತ್ತ ಪ್ರಾಂಶುಪಾಲ ಪ್ರೊ.ಎಂ.ಕೃಷ್ಣೇಗೌಡ ಅಭಿಪ್ರಾಯಪಟ್ಟರು.

    ನಗರದ ಎಸ್‌ವಿಜಿ ವಿಶ್ವಪ್ರಜ್ಞ ಸಂಯುಕ್ತ ಪದವಿ ಪೂರ್ವ ಕಾಲೇಜಿನಿಂದ ಕಲಾಮಂದಿರದಲ್ಲಿ ಆಯೋಜಿಸಿದ್ದ ವಾರ್ಷಿಕೋತ್ಸವ ‘ಪ್ರತಿಬಿಂಬ-2019’ ಉದ್ಘಾಟಿಸಿ ಅವರು ಮಾತನಾಡಿದರು.

    ಆಧುನಿಕ ಜಗತ್ತಿನ ಬಹಳ ದೊಡ್ಡ ದೋಷವೆಂದರೆ ಎಲ್ಲವನ್ನೂ ವ್ಯವಹಾರ ದೃಷ್ಟಿಯಿಂದಲೇ ನೋಡುವುದಾಗಿದೆ. ವ್ಯವಹಾರಗಳಲ್ಲಿ ಪ್ರತಿಯೊಂದಕ್ಕೂ ಒಂದು ಬೆಲೆ ಇರುತ್ತದೆ. ಇಲ್ಲಿ ಎಲ್ಲರೂ ಸಂಬಳಕ್ಕೆ ದುಡಿಯುತ್ತಿರುತ್ತಾರೆ. ಆದರೆ, ಹೊಸ ಜಗತ್ತಿನ ಬಹಳ ದೊಡ್ಡ ದೌರ್ಬಲ್ಯವೆಂದರೆ ನಾವು ಪ್ರತಿಯೊಂದರ ಮೌಲ್ಯಕ್ಕಿಂತ ಬೆಲೆಯ ಬಗ್ಗೆ ಯೋಚನೆ ಮಾಡುತ್ತಿದ್ದೇವೆ ಎಂದರು.

    ಈ ಜಗತ್ತಿನಲ್ಲಿ ಜನ ಅಧಿಕಾರ ಮತ್ತು ಹಣವೇ ಮುಖ್ಯ ಎಂದುಕೊಂಡಿದ್ದಾರೆ. ಈ ರೀತಿ ನಮ್ಮ ಯೋಚನೆ ಇದ್ದಿದ್ದರೆ ನಾವು ಸಾಧ್ಯವಾದಷ್ಟು ಪ್ರಬುದ್ಧರಾಗಿಲ್ಲ ಎಂದರ್ಥ. ಸಮಾಜಕ್ಕೆ ಎಚ್ಚರಿಕೆ ಬರಬೇಕಾದರೆ ಹಣ ಮತ್ತು ಅಧಿಕಾರಕ್ಕಿಂತ ಜ್ಞಾನ, ಗುಣ ಬಹಳ ದೊಡ್ಡದು ಎಂಬ ಭಾವನೆ ಬರಬೇಕು. ಆದರೆ, ಭಾರತೀಯರಿಗೆ ಇನ್ನೂ ಆ ಭಾವನೆ ಬಂದಿಲ್ಲ. ನಮಗೆ ಇಂದಿಗೂ ಹಣ, ಅಧಿಕಾರವೇ ಮುಖ್ಯವಾಗಿದೆ ಎಂದು ವಿಷಾದಿಸಿದರು.

    ಮಕ್ಕಳಿಗೆ ಜ್ಞಾನವನ್ನು ನೀಡಿ ಜ್ಞಾನದ ಹಿಂದೆ ಹಣ ಬರುತ್ತದೆ ಎಂಬುದನ್ನು ನಾವು ಕಲಿಸಬೇಕಾಗಿದೆ. ಶಿಕ್ಷಣ ಸಂಸ್ಥೆಯ ಧ್ಯೇಯ ಮಕ್ಕಳನ್ನು ಅತಿ ಹೆಚ್ಚು ಅಂಕ ಗಳಿಸುವಂತೆ ಮಾಡುವುದಲ್ಲ. ಹಾಗೆ ಮಾಡಿದರೆ ಅದು ವ್ಯವಹಾರವಾಗುತ್ತದೆ. ಅಂಕ ಗಳಿಸುವುದರೊಂದಿಗೆ ಈ ಸಮಾಜದಲ್ಲಿ ಶುದ್ಧವಾಗಿ, ಶ್ರದ್ಧೆಯಿಂದ ಬದುಕುವುದಕ್ಕೆ ಸಜ್ಜು ಮಾಡಬೇಕು ಎಂದು ಸಲಹೆ ನೀಡಿದರು.
    ನಂತರ ಕ್ರೀಡೆಯಲ್ಲಿ ರಾಜ್ಯಮಟ್ಟದಲ್ಲಿ ಸಾಧನೆಗೈದ ಹಿಮ ಪ್ರಸಾದ್ ಮತ್ತು ರಕ್ಷಿತ್ ಗೌಡ ಅವರಿಗೆ ವರ್ಷದ ಅತ್ಯುತ್ತಮ ಕ್ರೀಡಾಪಟುಗಳು ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.

    ಕಾಲೇಜಿನ ವ್ಯವಸ್ಥಾಪಕ ಟ್ರಸ್ಟಿ ವಿಶ್ವನಾಥ್ ಶೇಷಾಚಲ ಅಧ್ಯಕ್ಷತೆ ವಹಿಸಿದ್ದರು. ವಿಶ್ವಪ್ರಜ್ಞ ವಿದ್ಯಾಸಂಸ್ಥೆಯ ಟ್ರಸ್ಟಿ ಸುಹಾಸ್ ಪ್ರಭು, ವಿಶ್ವಪ್ರಜ್ಞ ಸಮಾಜ ಮತ್ತು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುರೇಶ್ ಬಾಬು, ಕಾಲೇಜಿನ ಖಜಾಂಚಿ ಎಸ್.ಮನೋಹರ್, ಅಧ್ಯಾಪಕರಾದ ಡಾ.ಎಚ್.ಎಸ್. ರಂಗನಾಥ್, ಆಡಳಿತಾಧಿಕಾರಿ ಡಾ.ಕೆಂಪೇಗೌಡ, ಪ್ರಾಂಶುಪಾಲ ರಚನ್ ಅಪ್ಪಣಮಯ್ಯ ಇದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts