More

    ಐಪಿಎಲ್ ಪ್ರಾಯೋಜಕತ್ವಕ್ಕೆ ಬೆಂಗಳೂರು ಮೂಲದ ಕಂಪನಿ ಪೈಪೋಟಿ!

    ನವದೆಹಲಿ: ಯೋಗಗುರು ಬಾಬಾ ರಾಮ್‌ದೇವ್ ಅವರ ಪತಂಜಲಿ ಆಯುರ್ವೇದ ಸಂಸ್ಥೆಯ ಬಳಿಕ ಶೇ. 100ರಷ್ಟು ಭಾರತೀಯ ಹೂಡಿಕೆಯನ್ನು ಹೊಂದಿರುವ ಮತ್ತೊಂದು ಕಂಪನಿ ಐಪಿಎಲ್ ಪ್ರಾಯೋಜಕತ್ವಕ್ಕೆ ಆಸಕ್ತಿ ತೋರಿದೆ. ಬೆಂಗಳೂರು ಮೂಲದ ಆನ್‌ಲೈನ್ ಶಿಕ್ಷಣ ತಂತ್ರಜ್ಞಾನದ ಕಂಪನಿ ‘ಅನ್‌ಅಕಾಡೆಮಿ’ ಐಪಿಎಲ್ ಟೂರ್ನಿಯ ಶೀರ್ಷಿಕೆ ಪ್ರಾಯೋಜಕತ್ವಕ್ಕೆ ಬಿಡ್ ಸಲ್ಲಿಸಲು ತಯಾರಿ ನಡೆಸಿದೆ.

    ಚೀನಾ ಮೂಲದ ಮೊಬೈಲ್ ಕಂಪನಿ ವಿವೋದಿಂದ ತೆರವಾಗಿರುವ ಸ್ಥಾನವನ್ನು ತುಂಬಲು ಅನ್‌ಅಕಾಡೆಮಿ ಕಂಪನಿ, ಬಿಸಿಸಿಐನಿಂದ ಬಿಡ್ ದಾಖಲೆಪತ್ರಗಳನ್ನು ಖರೀದಿಸಿದೆ. ಶೀಘ್ರದಲ್ಲೇ ಬಿಡ್ ಸಲ್ಲಿಕೆಯಾಗುವ ನಿರೀಕ್ಷೆ ಇದೆ ಎಂದು ಬಿಸಿಸಿಐ ಅಧಿಕಾರಿಗಳು ತಿಳಿಸಿದ್ದಾರೆ.

    ಬೆಂಗಳೂರಿನಲ್ಲಿ ಮುಖ್ಯ ಕಚೇರಿಯಲ್ಲಿ ಹೊಂದಿರುವ ಆನ್‌ಲೈನ್ ಶಿಕ್ಷಣದ ಅನ್‌ಅಕಾಡೆಮಿ ಈಗಾಗಲೆ ಐಪಿಎಲ್‌ನಲ್ಲಿ 2023ರವರೆಗೆ ಕೇಂದ್ರಿಯ ಪ್ರಾಯೋಜಕತ್ವ ಹೊಂದಿದೆ. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಶೀರ್ಷಿಕೆ ಪ್ರಾಯೋಜಕತ್ವಕ್ಕೆ ಕಂಪನಿ ಆಸಕ್ತಿ ತೋರಿದೆ. ಶೀರ್ಷಿಕೆ ಪ್ರಾಯೋಜಕತ್ವ ಪಡೆದರೆ ಆ ಕಂಪನಿಯ ಲಾಂಛನ ತಂಡಗಳ ಜೆರ್ಸಿಯಲ್ಲೂ ಮುದ್ರಣಗೊಳ್ಳಲಿದೆ. ಅಲ್ಲದೆ ಪಂದ್ಯದ ಬಳಿಕ ಪ್ರಶಸ್ತಿ ವಿತರಣಾ ಸಮಾರಂಭದ ಹಿನ್ನೆಲೆಯಲ್ಲಿ ಶೀರ್ಷಿಕೆ ಪ್ರಾಯೋಜಕತ್ವ ಕಂಪನಿಯ ಲಾಂಛನ ಪ್ರಮುಖವಾಗಿ ಕಾಣಿಸಲಿದೆ. ಜತೆಗೆ ವಿವಿಧ ಬ್ರಾಂಡಿಂಗ್ ಅವಕಾಶವೂ ಲಭಿಸಲಿದೆ ಎಂದು ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ.

    ವಿವೋ ಕಂಪನಿ ವಾರ್ಷಿಕ 440 ಕೋಟಿ ರೂ. ಒಪ್ಪಂದ ಹೊಂದಿತ್ತು. ಹಾಲಿ ಆರ್ಥಿಕ ಮುಗ್ಗಟ್ಟಿನ ಪರಿಸ್ಥಿತಿಯಲ್ಲಿ ಬಿಸಿಸಿಐ ಮುಂದಿನ 4 ತಿಂಗಳ ಅವಧಿಯ ಶೀರ್ಷಿಕೆ ಪ್ರಾಯೋಜಕತ್ವದ ಹಕ್ಕಿಗೆ 300ರಿಂದ 350 ಕೋಟಿ ರೂ. ಮೊತ್ತದ ಒಪ್ಪಂದದ ನಿರೀಕ್ಷೆಯಲ್ಲಿದೆ. ಅನ್‌ಅಕಾಡೆಮಿ ಕಂಪನಿಯ ಹಾಲಿ ಮೌಲ್ಯ 3,800 ಕೋಟಿ ರೂಪಾಯಿಗೂ ಅಧಿಕವಾಗಿದೆ.

    ಇದನ್ನೂ ಓದಿ: 2022ರವರೆಗೆ ಚೆನ್ನೈ ಸೂಪರ್‌ಕಿಂಗ್ಸ್‌ನಲ್ಲೇ ಧೋನಿ ಆಟ!

    ಬೆಂಗಳೂರು ಮೂಲದ ಆನ್‌ಲೈನ್ ಶಿಕ್ಷಣದ ಆ್ಯಪ್ ಕಂಪನಿ ಬೈಜುಸ್ ಈಗಾಗಲೆ ಟೀಮ್ ಇಂಡಿಯಾದ ಜೆರ್ಸಿ ಪ್ರಾಯೋಜಕತ್ವ ಹೊಂದಿದೆ. ಆದರೆ ಬೈಜುಸ್‌ನಲ್ಲಿ ಚೀನಾ ಮೂಲದ ಕಂಪನಿಯ ಹೂಡಿಕೆಯೂ ಇದೆ. ಆದರೆ ಅನ್‌ಅಕಾಡೆಮಿ ಸಂಪೂರ್ಣವಾಗಿ ಭಾರತೀಯ ಒಡೆತನದ ಕಂಪನಿಯಾಗಿದೆ. ರೋಮನ್ ಸೈನಿ, ಗೌರವ್ ಮುಂಜಲ್ ಮತ್ತು ಹಿಮೇಶ್ ಸಿಂಗ್ ಅವರು 2015ರಲ್ಲಿ ಕಂಪನಿಯನ್ನು ಸ್ಥಾಪಿಸಿದ್ದರು. 2010ರಲ್ಲಿ ಮೊದಲಿಗೆ ಯುಟ್ಯೂಬ್ ಚಾನಲ್ ಆಗಿ ಇದು ಶುರುವಾಗಿತ್ತು. ಸದ್ಯ ಬೃಹತ್ ಆಗಿ ಬೆಳೆದಿರುವ ಕಂಪನಿ, 12 ಸಾವಿರಕ್ಕೂ ಅಧಿಕ ಶಿಕ್ಷಕರನ್ನು ಹೊಂದಿದ್ದು, ವಿಡಿಯೋಗಳ ಮೂಲಕ ಶಿಕ್ಷಣ ಒದಗಿಸುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts