More

    ಸೂಕ್ತ ಕ್ರಮ ಅವಶ್ಯ, ಶೈತ್ಯಾಗಾರಗಳ ಸಂಖ್ಯೆ ಹೆಚ್ಚಳವಾಗಲಿ..

    ಸಮಸ್ಯೆಗಳು ರೈತರ ಬೆನ್ನು ಬಿಡುವುದೇ ಇಲ್ಲ. ಒಂದಿಲ್ಲೊಂದು ಸಮಸ್ಯೆಗಳ ವಿರುದ್ಧ ಅವರು ಹೋರಾಡಬೇಕಾಗುತ್ತದೆ. ಕೆಲವೊಮ್ಮೆ ಪ್ರಕೃತಿ ವಿಕೋಪದ ವಿರುದ್ಧವಾದರೆ, ಮಗದೊಮ್ಮೆ ವ್ಯವಸ್ಥೆಯ ವೈಫಲ್ಯಗಳ ವಿರುದ್ಧ. ಎಕರೆಗೆ ಸಾವಿರಾರು ರೂಪಾಯಿ ಖರ್ಚು ಮಾಡಿ, ನಷ್ಟವನ್ನೇ ಎದುರಿಸುವಂತಾದಾಗ ರೈತ ಧೃತಿಗೆಡುತ್ತಾನೆ. ಕರೊನಾ ತಂದೊಡ್ಡಿದ ಲಾಕ್​ಡೌನ್ ಹಾಗೂ ಇತರ ಸಮಸ್ಯೆಗಳಿಂದ ಕೃಷಿಕರು ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದರು. ಹೀಗಿರುವಾಗ ಕರೊನಾ ಸೋಂಕಿನ ಎರಡನೇ ಅಲೆ ತೀವ್ರತೆ ಪಡೆದುಕೊಂಡಿದ್ದು, ಸರ್ಕಾರ ಜಾತ್ರೆ, ಸಮಾರಂಭಗಳ ಮೇಲೆ ನಿರ್ಬಂಧ ಹೇರಿದೆ. ಹೀಗಾಗಿ ತರಕಾರಿ ಬೆಳೆದ ಪ್ರಮಾಣ ಹೆಚ್ಚಿದ್ದರೂ, ಬೇಡಿಕೆ ಕುಸಿದ ಪರಿಣಾಮ ಮತ್ತೆ ನಷ್ಟವೇ ಎದುರಾಗಿದೆ. ಟೊಮ್ಯಾಟೊ ದರ ಪಾತಾಳಕ್ಕೆ ಕುಸಿದಿದ್ದು, ಬೆಳೆಗಾರರನ್ನು ಧೃತಿಗೆಡಿಸಿದೆ. ಬಾಗಲಕೋಟೆ ಜಿಲ್ಲೆ ಹುನಗುಂದ ಪಟ್ಟಣದಲ್ಲಿ ರೈತರೊಬ್ಬರು ಟೊಮ್ಯಾಟೊ ರಸ್ತೆಗೆ ಸುರಿದು, ಆಕ್ರೋಶ ಹೊರಹಾಕಿದ ಘಟನೆ ಸಂಭವಿಸಿದೆ.

    ಶಾಲೆಗಳಲ್ಲಿ ಬಿಸಿಯೂಟ ಇಲ್ಲ. ಪ್ರವಾಸೋದ್ಯಮ ಕುಂಠಿತವಾಗಿದೆ. ಹೋಟೆಲ್ ಉದ್ಯಮ ಕುಸಿದಿದೆ. ಜಾತ್ರೆ, ಮದುವೆ ಮುಂತಾದ ಶುಭ ಸಮಾರಂಭಗಳಿಗೆ ತಡೆ ಹಾಕಲಾಗಿದೆ. ಬೆಂಗಳೂರು, ಚೆನ್ನೈ, ಕೇರಳ, ಮುಂಬೈಗೆ ತರಕಾರಿ ರಫ್ತು ಸ್ಥಗಿತಗೊಂಡಿದೆ. ಮತ್ತೊಂದೆಡೆ, ಪೂರೈಕೆ ಹೆಚ್ಚಾಗಿರುವ ಪರಿಣಾಮ ತರಕಾರಿ ಬೆಲೆ ಕುಸಿತ ಕಂಡಿದೆ. ಎಷ್ಟೋ ಕಡೆಗಳಲ್ಲಿ ಮಾರುಕಟ್ಟೆಗಳಲ್ಲೇ ತರಕಾರಿ ಕೊಳೆಯುವಂಥ ಸ್ಥಿತಿ ನಿರ್ವಣವಾಗಿದೆ. ರೈತರು ಕಡಿಮೆ ನೀರಿನಲ್ಲಿ (ಹನಿ ನೀರಾವರಿ, ತುಂತುರು ನೀರಾವರಿ) ತರಕಾರಿ ಬೆಳೆಯುವ ತಂತ್ರಗಳನ್ನು ಅಳವಡಿಸಿಕೊಂಡಿರುವುದರಿಂದ ಉತ್ಪಾದನೆ ಹೆಚ್ಚುತ್ತಿದೆ. ಆದರೆ, ಪರಿಸ್ಥಿತಿ ಸಾಮಾನ್ಯವಾಗಿದ್ದರೆ ಅಂದರೆ ಸಮಾರಂಭಗಳು, ಜಾತ್ರೆಗಳೆಲ್ಲ ನಡೆಯುತ್ತಿದ್ದರೆ ಬೆಲೆಕುಸಿತದ ಭೀತಿ ಇರುತ್ತಿರಲಿಲ್ಲ. ಆದರೆ, ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಪರಿಣಾಮ ಸುರಕ್ಷತೆ ದೃಷ್ಟಿಯಿಂದ ಹಲವು ನಿರ್ಬಂಧಗಳನ್ನು ಹಾಕುವುದು ಅನಿವಾರ್ಯವೂ ಆಗಿದೆ.

    ತರಕಾರಿ, ಹಣ್ಣುಗಳ ಸಂರಕ್ಷಣೆಗೆ ಪೂರಕವಾಗುವಂತೆ ಶೈತ್ಯಾಗಾರಗಳನ್ನು ಸ್ಥಾಪಿಸಲಾಗುವುದು, ಇದಕ್ಕೆ ಸೂಕ್ತ ಅನುದಾನ ಒದಗಿಸಲಾಗುವುದು ಎಂಬ ಆಶ್ವಾಸನೆಗಳನ್ನು ಬಜೆಟ್ ಸಂದರ್ಭದಲ್ಲಿ ಸರ್ಕಾರದಿಂದ ನೀಡಲಾಗಿದೆ. ತಾಲೂಕು, ಹೋಬಳಿ ಮಟ್ಟದಲ್ಲಿ ಸುಸಜ್ಜಿತ ಶೈತ್ಯಾಗಾರಗಳಿದ್ದರೆ ಬೆಳೆಗಾರರು ಆತಂಕ ಪಡುವ ಸ್ಥಿತಿ ಇರುತ್ತಿರಲಿಲ್ಲ. ಆದರೆ, ಭರವಸೆ ಪೂರ್ಣಪ್ರಮಾಣದಲ್ಲಿ ಈಡೇರಿಲ್ಲ ಎಂಬುದು ವಾಸ್ತವ. ಶೈತ್ಯಾಗಾರಗಳ ಕೊರತೆ ಒಂದೆಡೆಯಾದರೆ, ಇರುವ ಶೈತ್ಯಾಗಾರಗಳು ಕೂಡ ಸುಸ್ಥಿತಿಯಲ್ಲಿಲ್ಲ. ಅಲ್ಲದೆ, ಇಂಥ ಸೌಲಭ್ಯಗಳ ಕುರಿತಂತೆ ರೈತರಿಗೆ ಸರಿಯಾದ ಮಾಹಿತಿಯೂ ಇಲ್ಲ. ಹಾಗಾಗಿ, ತರಕಾರಿಗಳನ್ನು ಎಲ್ಲಿ ಸಂಗ್ರಹ ಮಾಡಿಟ್ಟುಕೊಳ್ಳುವುದು ಎಂದು ಅರಿಯದೆ ರಸ್ತೆಗೆ ಸುರಿಯುತ್ತಿರುವ ಅಥವಾ ಬಂದ ಬೆಲೆಗೆ ಮಾರಾಟ ಮಾಡುತ್ತಿರುವ ನಿದರ್ಶನಗಳನ್ನು ಕಾಣಬಹುದಾಗಿದೆ. ಇಂಥ ಸಂದರ್ಭಗಳಲ್ಲಿ ರೈತರು ಪರ್ಯಾಯ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಹೆಚ್ಚು ಸೂಕ್ತ. ಸರ್ಕಾರ ಕೂಡ ರೈತರ ನೆರವಿಗೆ ಬರಲು ಅವಶ್ಯಕ ಹೆಜ್ಜೆಗಳನ್ನು ಇರಿಸಬೇಕು. ಅವರಲ್ಲಿ ಆತ್ಮಸ್ಥೈರ್ಯ ತುಂಬುವಂಥ, ಮಾರುಕಟ್ಟೆ ವ್ಯವಸ್ಥೆಯನ್ನು ಬಲಿಷ್ಠಗೊಳಿಸುವಂಥ ಸಮರ್ಥ ಯೋಜನೆಗಳನ್ನು ಕಾರ್ಯರೂಪಕ್ಕೆ ತರಬೇಕು. ಆಗಲೇ, ಬಿಕ್ಕಟ್ಟಿನ ಸನ್ನಿವೇಶಗಳನ್ನು ಕೃಷಿಕರು ಎದುರಿಸಲು ಸಾಧ್ಯವಾಗುವುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts