More

    ಸಂಪಾದಕೀಯ| ತೀವ್ರಗೊಳ್ಳಲಿ ಹೋರಾಟ

    ಬೆಂಗಳೂರಿನ ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದಲ್ಲಿ ಬಂಧಿತರಾಗಿರುವ ಶಂಕಿತ ಉಗ್ರರ ವಿಚಾರಣೆ ತೀವ್ರಗೊಂಡ ಬೆನ್ನಲ್ಲೇ ಹಲವು ರಾಜ್ಯಗಳಿಗೆ ಉಗ್ರ ಬೇರು ವ್ಯಾಪಿಸಿರುವ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ. ಕರ್ನಾಟಕ, ತಮಿಳುನಾಡು, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಕೇರಳ, ಆಂಧ್ರಪ್ರದೇಶ, ತೆಲಂಗಾಣ ಸೇರಿ ಹಲವು ರಾಜ್ಯಗಳಲ್ಲಿ ಉಗ್ರರ ಸ್ಲೀಪರ್ ಸೆಲ್​ಗಳಿರುವುದು ಎನ್​ಐಎ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ಇದೀಗ ಬಂಧಿತರ ವಿಚಾರಣೆ ಮೂಲಕವೇ ಎಲ್ಲ ಸ್ಲೀಪರ್ ಸೆಲ್​ಗಳ ಪತ್ತೆಗೆ ಎನ್​ಐಎ ಮುಂದಾಗಿರುವುದು ಗಮನಾರ್ಹ.

    ಆಂತರಿಕ ಭದ್ರತೆಗೆ ಭಾರಿ ಸವಾಲಾಗಿರುವ ಈ ಉಗ್ರಶಕ್ತಿಗಳನ್ನು ಮಣಿಸಲು ಭಯೋತ್ಪಾದನೆ ವಿರುದ್ಧ ಸಮರವನ್ನು ತೀವ್ರಗೊಳಿಸಬೇಕಾದ ಅಗತ್ಯವಿದೆ. ಇತ್ತೀಚಿನ ದಿನಗಳಲ್ಲಿ ಭಯೋತ್ಪಾದಕರ ಕೃತ್ಯಗಳು ಇಳಿಕೆ ಕಂಡಿದ್ದರೂ, ಉಗ್ರಜಾಲ ವ್ಯಾಪಿಸುತ್ತಿರುವುದು ಕಳವಳಕಾರಿ ಬೆಳವಣಿಗೆ. ದೇಶದ ಹಲವು ರಾಜ್ಯಗಳಲ್ಲಿ ಸ್ಲೀಪರ್ ಸೆಲ್​ಗಳು ಇರುವುದರಿಂದ, ಯಾವಾಗ ದುಷ್ಕೃತ್ಯ ಸಂಭವಿಸುತ್ತದೆಯೋ ಎಂಬ ಆತಂಕ ಕಾಡುತ್ತಲೇ ಇರುತ್ತದೆ. ಉಗ್ರರಿಗೆ ಸ್ಥಳೀಯವಾಗಿ ಸಹಕಾರ ಸಿಗುತ್ತಿರುವುದರಿಂದಲೇ ಅವರ ಜಾಲ ವಿಸ್ತರಣೆ ಆಗುತ್ತಿರುವುದು ನಿಸ್ಸಂಶಯ. ಗಡಿಯಾಚೆಯಿಂದ ನುಸುಳಿ ಬಂದ ಭಯೋತ್ಪಾದಕರು ಭಾರತದಲ್ಲಿ ದಾಳಿಗಳನ್ನು ನಡೆಸಿದ್ದು ಸ್ಥಳೀಯರ ಸಹಕಾರದಿಂದಲೇ ಎಂಬ ಅಂಶವನ್ನು ಮರೆಯಲು ಸಾಧ್ಯವೇ ಇಲ್ಲ. ಹಾಗಾಗಿ, ಉಗ್ರರಿಗೆ ನೆರವಾಗುತ್ತಿರುವ ಸಮಾಜಕಂಟಕರ ಹೆಡೆಮುರಿಯನ್ನು ಕಟ್ಟಬೇಕಿದೆ, ಇಂಥ ರಾಷ್ಟ್ರದ್ರೋಹಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ. ಯುವಕರನ್ನು ಪ್ರಚೋದಿಸಿ, ಅವರನ್ನು ಉಗ್ರ ಸಂಘಟನೆಗಳಿಗೆ ಸೇರ್ಪಡೆಗೊಳಿಸುವಂಥ ಕೃತ್ಯಗಳು ಏರಿಕೆ ಕಂಡಿವೆ. ಇದರಿಂದ ಅಪಾಯದ ಸ್ವರೂಪಗಳು ಹೆಚ್ಚಿವೆ.

    ದೇಶದ ಸುರಕ್ಷತೆ ಎಲ್ಲಕ್ಕಿಂತ ಮುಖ್ಯ. ಪ್ರತಿ ಪ್ರಜೆಯೂ ಸುರಕ್ಷಿತ ಭಾವದಲ್ಲಿ ಬದುಕು ಸಾಗಿಸುವಂಥ ಪೂರಕ ವಾತಾವರಣ ಸ್ಥಾಪಿಸುವುದು ಪ್ರಭುತ್ವದ ಕರ್ತವ್ಯ ಕೂಡ ಹೌದು. ಆದರೆ, ದುರದೃಷ್ಟಕರ ಸಂಗತಿ ಎಂದರೆ ಭಯೋತ್ಪಾದನೆ ನಿಗ್ರಹ ವಿಷಯದಲ್ಲಿಯೂ ರಾಜಕೀಯ ನುಸುಳಿರುವುದು. ಕೆಲ ರಾಜಕಾರಣಿಗಳ ಓಲೈಕೆ ರಾಜಕಾರಣ ಆಂತರಿಕ ಭದ್ರತೆಗೆ ದುಬಾರಿಯಾಗಿ ಪರಿಣಮಿಸುತ್ತಿದೆ. ಭಯೋತ್ಪಾದನೆ ವಿರುದ್ಧದ ಸಮರ ಸಂಘಟಿತವಾಗಿ ನಡೆಯಬೇಕು. ಇದು ಬರೀ ಕೇಂದ್ರ ಸರ್ಕಾರದ ಜವಾಬ್ದಾರಿಯಲ್ಲ. ರಾಜ್ಯಗಳ ನಡುವೆ ಸಮನ್ವಯ ಹೆಚ್ಚಬೇಕು. ಪೊಲೀಸ್ ಇಲಾಖೆಗಳ ನಡುವಿನ ಮಾಹಿತಿ ವಿನಿಮಯ ಪ್ರಕ್ರಿಯೆ ಮತ್ತಷ್ಟು ವ್ಯವಸ್ಥಿತಗೊಳ್ಳಬೇಕು.

    ರಾಷ್ಟ್ರೀಯ ತನಿಖಾ ದಳ (ಎನ್​ಐಎ) ದೇಶದ ಹಲವೆಡೆ ದಾಳಿ ನಡೆಸಿ, ಮಹತ್ವದ ಮಾಹಿತಿಗಳನ್ನು ಕಲೆಹಾಕಿರುವುದು, ಉಗ್ರಬೇರುಗಳನ್ನು ಪತ್ತೆ ಮಾಡಿರುವುದು ಪ್ರಶಂಸಾರ್ಹ. ಆದರೆ, ಭಯೋತ್ಪಾದನೆ ವಿರುದ್ಧದ ಸಮರದಲ್ಲಿ ಇನ್ನಷ್ಟು ದೂರ ಕ್ರಮಿಸಬೇಕಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಎಚ್ಚರಿಕೆ ವಹಿಸುವ, ಬೇಹುಗಾರಿಕೆ ವ್ಯವಸ್ಥೆಯನ್ನು ಬಲಗೊಳಿಸುವ ಪ್ರಯತ್ನಗಳಿಗೆ ವೇಗ ಸಿಗಬೇಕಿದೆ. ಸ್ಲೀಪರ್ ಸೆಲ್ ಅಥವಾ ಇತರ ಉಗ್ರಜಾಲಗಳು ದುಷ್ಕೃತ್ಯ ನಡೆಸುವ ಮುನ್ನವೇ, ಇನ್ನಷ್ಟು ತಪಾಸಣೆ ನಡೆಸಬೇಕಿದೆ. ಉಗ್ರಬೇರುಗಳನ್ನು ಕಿತ್ತೊಗೆಯಲು ದೃಢಸಂಕಲ್ಪ ಮಾಡಿ, ಕಠಿಣ ಕ್ರಮಕ್ಕೆ ಮುಂದಾಗಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts