More

    ಗಂಭೀರ ಸಮಸ್ಯೆ; ವಾಯುಮಾಲಿನ್ಯ ನಿಯಂತ್ರಣಕ್ಕೆ ಕಠಿಣ ಕ್ರಮ ಅಗತ್ಯ..

    ಆಧುನಿಕತೆಯ ಪ್ರಕ್ರಿಯೆ ಶರವೇಗದಲ್ಲಿ ಮುನ್ನುಗುತ್ತಿದ್ದರೆ ಮತ್ತೊಂದೆಡೆ ಪ್ರಕೃತಿ ಮೇಲಿನ ಶೋಷಣೆ ಹೆಚ್ಚುತ್ತಿದೆ. ಅಭಿವೃದ್ಧಿ ಮತ್ತು ಪರಿಸರ ಎರಡೂ ಸಮತೋಲನದಲ್ಲಿ ಸಾಗಬೇಕು. ನಿಸರ್ಗಕ್ಕೆ ಹಾನಿ ಎಸಗಿದರೆ ಅದರಿಂದಾಗುವ ಆಪತ್ತುಗಳು ಒಂದೇರಡಲ್ಲ. ಎಷ್ಟಾದರೂ ಅಭಿವೃದ್ಧಿ ಸಾಧಿಸಿ, ನೀರು, ಗಾಳಿ, ಆಹಾರವನ್ನೇ ವಿಷಮಯವಾಗಿಸಿಕೊಂಡರೆ ಏನು ಪ್ರಯೋಜನ? ಈ ಬಗ್ಗೆ ಪ್ರಕೃತಿಯೇ ಹಲವು ಬಾರಿ ಎಚ್ಚರಿಕೆ ಗಂಟೆ ಮೊಳಗಿಸಿದೆ, ಸಾಗಬೇಕಾದ ದಾರಿಯನ್ನು ಬದಲಿಸಬೇಕಿದೆ ಎಂದು ಪರಿಸರ ತಜ್ಞರು ಹೇಳಿಯಾಗಿದೆ. ಆದರೆ, ಎಚ್ಚೆತ್ತುಕೊಳ್ಳುವ ಲಕ್ಷಣಗಳಿಲ್ಲ. ಪರಿಸ್ಥಿತಿ ಗಂಭೀರವಾಗುತ್ತಿದೆ. ಕಳೆದ ವರ್ಷ ತೀವ್ರ ವಾಯುಮಾಲಿನ್ಯದ ಕಾರಣ ರಾಜಧಾನಿ ದೆಹಲಿಯಲ್ಲಿ 54 ಸಾವಿರ ಜನರು ಮೃತಪಟ್ಟಿದ್ದಾರೆ ಎಂದು ಪರಿಸರ ಸಂಸ್ಥೆ ‘ಗ್ರೀನ್ ಪೀಸ್’ನ ವರದಿ ಹೇಳಿರುವುದು ಸದ್ಯದ ವಿದ್ಯಮಾನ. ಪ್ರತಿ 10 ಲಕ್ಷ ಜನರಲ್ಲಿ 18 ಸಾವಿರ ಜನರು ವಾಯುಮಾಲಿನ್ಯದ ಕಾರಣ ವಿವಿಧ ರೋಗ, ತೊಂದರೆಗೆ ಸಿಲುಕಿ ಮೃತರಾಗುತ್ತಿದ್ದಾರೆ. ಇದು ವಿಶ್ವದಲ್ಲೇ ಗರಿಷ್ಠ ಮಟ್ಟವಾಗಿದೆ ಎಂಬುದು ಕಳವಳದ ಸಂಗತಿ. ಮಾಲಿನ್ಯದಿಂದ ಕಳೆದ ವರ್ಷ -ಠಿ; 58,895 ಕೋಟಿ ಆರ್ಥಿಕ ನಷ್ಟ ಸಂಭವಿಸಿದೆ. ವಾಯುಮಾಲಿನ್ಯ ನಿಯಂತ್ರಣದಲ್ಲಿದ್ದರೆ ದೆಹಲಿಯಲ್ಲಿ 18 ಸಾವಿರ, ಬೆಂಗಳೂರಿನಲ್ಲಿ 12 ಸಾವಿರ ಜೀವಗಳನ್ನು ಉಳಿಸಬಹುದಿತ್ತು ಎಂದು ವರದಿ ಬೊಟ್ಟು ಮಾಡಿರುವುದು ಪರಿಸ್ಥಿತಿಯ ಗಂಭೀರತೆಗೆ ಸಾಕ್ಷಿ.

    ಕೈಗಾರಿಕೆಗಳಿಂದ ಬರುವ ಕಲುಷಿತ ಹೊಗೆಯಿಂದ ಶೇಕಡ 50, ವಾಹನಗಳಿಂದ ಬರುವ ಹೊಗೆಯಿಂದ ಶೇ.25, ಬೆಳೆಯ ಕಳೆ ಸುಡುವುದರಿಂದ ಶೇಕಡ 15, ಕಸ ಸುಡುವುದರಿಂದ ಶೇ.15ರಷ್ಟು ವಾಯುಮಾಲಿನ್ಯವಾಗುತ್ತಿದೆ ಎಂಬುದು ವಿಷಯತಜ್ಞರ ಅಂದಾಜು. 2020ರ ನವೆಂಬರ್-ಡಿಸೆಂಬರ್ ತಿಂಗಳಲ್ಲಿ ದೆಹಲಿ ತೀವ್ರ ವಾಯುಮಾಲಿನ್ಯದಿಂದ ತತ್ತರಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಹಾಗಂತ, ವಾಯುಮಾಲಿನ್ಯ ತಡೆಯಲು ಕ್ರಮಗಳನ್ನೇ ಕೈಗೊಂಡಿಲ್ಲ ಅಂತ ಹೇಳುವಹಾಗಿಲ್ಲ. ಆದರೆ, ಈ ಕ್ರಮಗಳು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಬರಬೇಕಿದೆ. ಸರ್ಕಾರದಲ್ಲಿ ಇರುವವರು ಮತ್ತು ಜನಸಾಮಾನ್ಯರು ಮಾಲಿನ್ಯದ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಗುಜರಾತಿನಿಂದ ದೆಹಲಿಯವರೆಗಿನ ಅರಾವಳಿ ಬೆಟ್ಟಗಳ 155 ಕಿ.ಮೀ. ವ್ಯಾಪ್ತಿಯಲ್ಲಿ 150 ಕೋಟಿ ಗಿಡಗಳನ್ನು ನೆಡುವ ಬೃಹತ್ ಯೋಜನೆ ಆರಂಭವಾಗಿದೆ. ಸಮ ಮತ್ತು ಬೆಸ ವಾಹನಗಳ ಸಂಚಾರದ ಪ್ರಯೋಗವೂ ನಡೆದಿದೆ. ಪಟಾಕಿ ನಿಷೇಧ ಮಾಡಲಾಗಿದೆ. ಇತ್ತೀಚೆಗೆ ಕೇಂದ್ರ ಸರ್ಕಾರ ಹಳೆಯ ವಾಹನ ಗುಜರಿಗೆ ಹಾಕುವ ಯೋಜನೆ ಘೋಷಿಸಿದೆ. ಸ್ಕ್ರಾ್ಯಪ್​ಗೆ ತಮ್ಮ ವಾಹನಗಳನ್ನು ಹಾಕುವವರಿಗೆ ಆ ವಾಹನದ ಉತ್ಪಾದಕರು ಕೆಲವೊಂದು ಪ್ರಯೋಜನಗಳನ್ನು ನೀಡಲಿದ್ದಾರೆ. ಈಗಾಗಲೇ ಕೆಲವು ರಾಜ್ಯಗಳಲ್ಲಿ ಹಳೆಯ ವಾಹನಗಳ ಮೇಲೆ ಮಾಲಿನ್ಯ ತೆರಿಗೆ ವಿಧಿಸಲಾಗುತ್ತಿದೆಯಾದರೂ, ಇದಕ್ಕೊಂದು ನಿಶ್ಚಿತ ಮಾನದಂಡವಿಲ್ಲ. ಹಳೆಯ ವಾಹನಗಳನ್ನು ಗುಜರಿಗೆ ಹಾಕುವುದರಿಂದ ವಾಯುಮಾಲಿನ್ಯ ತಗ್ಗಿಸಲು ಅನುಕೂಲವಾಗಲಿದೆ. ಆದರೆ, ಈ ಯೋಜನೆ ಸಮರ್ಪಕವಾಗಿ ಎಲ್ಲ ರಾಜ್ಯಗಳಲ್ಲೂ ಅನುಷ್ಠಾನಕ್ಕೆ ಬರಬೇಕು. ಆ ಕಾಳಜಿಯ ಜತೆಗೆ ಇತರ ಕ್ರಮಗಳೂ ಅವಶ್ಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts