More

    ಲಸಿಕೆ ಹಾಕಿಸಿಕೊಳ್ಳಿ; ಕರೊನಾ ವಿರುದ್ಧದ ಸಮರ ಮತ್ತಷ್ಟು ಪರಿಣಾಮಕಾರಿಯಾಗಲಿ…

    ಕರ್ನಾಟಕ ಸೇರಿದಂತೆ ದೇಶದಾದ್ಯಂತ ಕರೊನಾ ಪ್ರಕರಣಗಳು ಹೆಚ್ಚುತ್ತಲೇ ಇವೆ. ಮಹಾರಾಷ್ಟ್ರ, ಪಂಜಾಬ್, ಕರ್ನಾಟಕ, ಕೇರಳ ಸೇರಿ ಆರು ರಾಜ್ಯಗಳಿಂದಲೇ ಶೇಕಡ 75ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಆರ್ಥಿಕತೆ ಈಗಷ್ಟೇ ಚೇತರಿಕೆ ಕಾಣುತ್ತಿರುವುದರಿಂದ ಯಾವುದೇ ರಾಜ್ಯ ಸರ್ಕಾರಗಳು ಲಾಕ್​ಡೌನ್ ವಿಧಿಸುವ ಸ್ಥಿತಿಯಲ್ಲಿಲ್ಲ. ಈ ನಡುವೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಸುರಕ್ಷಾ ನಿಯಮಗಳನ್ನು ಬಿಗಿಗೊಳಿಸಲಾಗಿದೆ. ಅನಗತ್ಯವಾಗಿ ಸಂಚರಿಸದಂತೆ, ಗುಂಪುಗೂಡದಂತೆ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನಗಳು ನಡೆಯುತ್ತಿವೆ. ಮಹಾರಾಷ್ಟ್ರದ ಕೆಲ ನಗರಗಳಲ್ಲಿ ರಾತ್ರಿ ಕರ್ಫ್ಯೂ ಜಾರಿಯಲ್ಲಿದೆ. ಪರೀಕ್ಷೆ ಹೆಚ್ಚಿಸುವ, ಸೋಂಕಿತರನ್ನು ಮತ್ತು ಅವರ ಸಂಪರ್ಕಕ್ಕೆ ಬಂದವರನ್ನು ಪತ್ತೆ ಹಚ್ಚುವ ಕ್ರಮಗಳು ತೀವ್ರತೆ ಪಡೆದುಕೊಂಡಿವೆ. ಜನಸಾಮಾನ್ಯರು ಕೂಡ ಪರಿಸ್ಥಿತಿಯ ಗಂಭೀರತೆ ಅರ್ಥಮಾಡಿಕೊಂಡು, ಸುರಕ್ಷಾ ನಿಯಮಗಳನ್ನು ಸರಿಯಾಗಿ ಪಾಲಿಸಬೇಕಿದೆ. ಒಂದಿಷ್ಟು ಬೇಜವಾಬ್ದಾರಿಗೆ ಭಾರಿ ಬೆಲೆ ತೆರಬೇಕಾಗುತ್ತದೆ, ಮತ್ತೆ ಲಾಕ್​ಡೌನ್ ವಿಧಿಸುವಂಥ ಸನ್ನಿವೇಶ ಸೃಷ್ಟಿಯಾದರೆ ಅದರಿಂದ ಎಲ್ಲ ವಲಯದವರಿಗೂ ಸಂಕಷ್ಟ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.

    ಕರೊನಾ ಪ್ರಕರಣಗಳು ಹೆಚ್ಚಿದಾಗ ಯಾವಾಗ ಇದಕ್ಕೆ ಲಸಿಕೆ ಬರಲಿದೆ ಎಂದು ಕೆಲವೇ ತಿಂಗಳ ಹಿಂದೆ ಜನರು ಕಾತರದಿಂದ ಕಾಯುತ್ತಿದ್ದರು. ಈಗ ಲಸಿಕೆ ಅಭಿಯಾನ ದೇಶದಾದ್ಯಂತ ನಡೆಯುತ್ತಿದ್ದರೂ, ಜನರಲ್ಲಿನ ನಿರುತ್ಸಾಹ ಕಡಿಮೆಯಾಗಿಲ್ಲ. ಭಾರತದ ಎರಡೂ ಲಸಿಕೆ ಸುರಕ್ಷಿತ ಎಂದು ಆರೋಗ್ಯತಜ್ಞರೇ ಸ್ಪಷ್ಟಪಡಿಸಿದ್ದರೂ, ಜನರಲ್ಲಿ ವಿಶ್ವಾಸ ಮೂಡದಿರುವುದು ವಿಚಿತ್ರ. ರಾಷ್ಟ್ರಪತಿ, ಪ್ರಧಾನಿ, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಲಸಿಕೆ ಪಡೆಯುವ ಮೂಲಕ, ಆತಂಕ ಬೇಡ ಎಂಬ ಸಂದೇಶವನ್ನೂ ರವಾನಿಸಿಯಾಗಿದೆ. ಆದರೆ, ವದಂತಿಗಳನ್ನು, ಸುಳ್ಳುಸುದ್ದಿಗಳನ್ನು ನಂಬಿ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿರುವುದು ಸರಿಯಲ್ಲ. 45 ವರ್ಷ ಮೇಲ್ಪಟ್ಟ ಎಲ್ಲ ನಾಗರಿಕರಿಗೆ ಏಪ್ರಿಲ್ 1ರಿಂದಲೇ ಕೋವಿಡ್ ಲಸಿಕೆ ವಿತರಣೆ ಶುರುವಾಗಲಿದೆ. ರಾಜ್ಯದಲ್ಲಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಶಿಫಾರಸು ಮೇರೆಗೆ ಆರೋಗ್ಯ ಇಲಾಖೆ ಪ್ರತಿ ದಿನ 3 -4 ಲಕ್ಷ ಮಂದಿಗೆ ಲಸಿಕೆ ವಿತರಿಸುವ ಗುರಿ ಹೊಂದಿದೆ. ಇದಕ್ಕೆ ಪೂರಕವಾಗಿ ಅಗತ್ಯ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿದೆ. ‘ಭಾರತದ ಎರಡೂ ಲಸಿಕೆಗಳು ಸುರಕ್ಷಿತವಾಗಿವೆ. ಈ ಕುರಿತು ವಾಟ್ಸ್​ಆಪ್ ಮುಂತಾದ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುವ ಊಹಾಪೋಹಗಳನ್ನು ಸಾರ್ವಜನಿಕರು ನಂಬಬಾರದು’ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಸ್ಪಷ್ಟಪಡಿಸಿದ್ದಾರೆ. 45 ವರ್ಷ ಮೇಲ್ಪಟ್ಟ ನಾಗರಿಕರು ನಾಳೆಯಿಂದ ಲಸಿಕೆ ಪಡೆಯಬೇಕಿದ್ದು, ಇನ್ನಾದರೂ ಭಯ, ಅನಗತ್ಯ ಗೊಂದಲಗಳನ್ನು ದೂರ ಇರಿಸಿ ಲಸಿಕೆ ಆಂದೋಲನ ಯಶಸ್ವಿಯಾಗಿಸಬೇಕಿದೆ.

    ಹಲವು ದೇಶಗಳು ಕೂಡ ಭಾರತದಲ್ಲಿ ತಯಾರಾದ ಲಸಿಕೆಯನ್ನು ತರಿಸಿಕೊಂಡಿರುವುದು ಗಮನಾರ್ಹ. ಸೋಂಕಿನ ಪ್ರಸರಣ ವೇಗವನ್ನು ತಡೆಯುವ, ಸುರಕ್ಷಿತ ಅಂತರ ಕಾಪಾಡುವ ಮತ್ತು ಇತರ ಸುರಕ್ಷಾ ನಿಯಮಗಳನ್ನು ಪಾಲಿಸುವ ಮೂಲಕ ಕರೊನಾ ಆತಂಕವನ್ನು ಹಿಮ್ಮೆಟ್ಟಿಸಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts