More

    ಸಮತೋಲಿತ ಹೆಜ್ಜೆ; ಚೀನಾದೊಂದಿಗೆ ವಾಣಿಜ್ಯ ಸಂಬಂಧ…

    ಅಂತಾರಾಷ್ಟ್ರೀಯ ಸಂಬಂಧಗಳು, ಒಪ್ಪಂದಗಳು ಬಹು ಸೂಕ್ಷ್ಮ. ಅವುಗಳ ನಿರ್ವಹಣೆ ಅತ್ಯಂತ ವಿವೇಚನೆಯಿಂದ ನಡೆಯಬೇಕು. ಕಡ್ಡಿ ತುಂಡು ಮಾಡಿದಂತೆ ಈ ಸಂಬಂಧಗಳನ್ನು ಮುರಿದುಕೊಳ್ಳಲು ಸಾಧ್ಯವಿಲ್ಲ. ದಿಢೀರ್ ನಿರ್ಧಾರಗಳು ಕೂಡ ಸಮಂಜಸವಲ್ಲ. ಅಮೆರಿಕದ ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಶ್ವ ಆರೋಗ್ಯ ಸಂಸ್ಥೆ ಚೀನಾ ಪರವಾಗಿ ನಡೆದುಕೊಳ್ಳುತ್ತಿದೆ ಎಂದು ಆರೋಪಿಸಿ ಡಬ್ಲ್ಯುಎಚ್​ಒನಿಂದ ಹೊರಬರುವ ನಿರ್ಧಾರ ಕೈಗೊಂಡರು. ಪ್ಯಾರಿಸ್ ಒಪ್ಪಂದದಿಂದ ಕೂಡ ದಿಢೀರ್ ಹಿಂದೆ ಸರಿಯುವ ಮೂಲಕ ಅಚ್ಚರಿ ವ್ಯಕ್ತಪಡಿಸಿದ್ದರು. ಆದರೆ, ಜನವರಿ 20ಕ್ಕೆ ಜೋ ಬೈಡೆನ್ ಅಧ್ಯಕ್ಷರಾಗುತ್ತಿದ್ದಂತೆ, ಆ ಎರಡೂ ನಿರ್ಣಯಗಳನ್ನು ಬದಲಿಸಿದರು. ಅಮೆರಿಕ ಈಗ ಡಬ್ಲ್ಯುಎಚ್​ಒ ಮತ್ತು ಪ್ಯಾರಿಸ್ ಒಪ್ಪಂದದ ಭಾಗವಾಗಿದೆ. ಇತ್ತ, ಲಡಾಖ್ ಗಡಿಯಲ್ಲಿ ಭಾರತ-ಚೀನಾ ನಡುವಿನ ಉದ್ವಿಗ್ನ ಸ್ಥಿತಿ ಕ್ರಮೇಣ ಕರಗುತ್ತಿದ್ದು, ಪರಿಸ್ಥಿತಿ ಸಹಜತೆಗೆ ಬರುತ್ತಿದೆ ಎಂಬುದು ಸಮಾಧಾನಕರ ಅಂಶ. 2020ರ ಮೇ 5ರಂದು ಪ್ಯಾಂಗಾಂಗ್ ತ್ಸೊ ಸರೋವರದ ತೀರದಲ್ಲಿ ಉಭಯ ದೇಶಗಳ ಸೈನಿಕರ ಮಧ್ಯೆ ಘರ್ಷಣೆ ಸಂಭವಿಸಿದಾಗಿನಿಂದ ಪೂರ್ವ ಲಡಾಖ್​ನ ಗಡಿಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ವಣವಾಯಿತು. ಗಲ್ವಾನ್ ಕಣಿವೆಯಲ್ಲಿನ ರಕ್ತಸಿಕ್ತ ಹೊಡೆದಾಟದಿಂದ ಇದು ಇನ್ನಷ್ಟು ವಿಸ್ತಾರಗೊಂಡಿತು. ಈ ನಡುವೆ, ಕೇಂದ್ರ ಸರ್ಕಾರ ಚೀನಾದ ನೂರಾರು ಆಪ್​ಗಳನ್ನು ನಿಷೇಧಿಸಿತು, ಆಮದಿನ ಅವಲಂಬನೆಯನ್ನು ಕಡಿಮೆ ಮಾಡಿಕೊಂಡಿತು. ಈ ಮೂಲಕ ಡ್ರಾ್ಯಗನ್ ರಾಷ್ಟ್ರಕ್ಕೆ ಭಾರಿ ತಿರುಗೇಟು ನೀಡಿದ್ದಲ್ಲದೆ, ಅದು ಮೆತ್ತಗಾಗುವಂತೆ ಮಾಡಿತು.

    ವೈರಿರಾಷ್ಟ್ರವನ್ನು ಮಣಿಸಬೇಕಾದರೆ ಹಲವು ತಂತ್ರಗಳನ್ನು ಅನುಸರಿಸಬೇಕಾಗುತ್ತದೆ. ಸಾಮರಿಕ ವ್ಯೂಹ ಒಂದು ಭಾಗವಾದರೆ, ರಾಜತಾಂತ್ರಿಕ ಮಾತುಕತೆಗಳು, ವಾಣಿಜ್ಯ, ತಂತ್ರಜ್ಞಾನ ಸಂಬಂಧಿ ಒತ್ತಡಗಳು ಮತ್ತೊಂದೆಡೆ. ಭಾರತ ಹೀಗೆ ಚೀನಾ ವಿರುದ್ಧ ಹಲವು ಆಯಾಮದ ಶಸ್ತ್ರಗಳನ್ನು ಝುಳಪಿಸಿದ ಪರಿಣಾಮವೇ ಮಾತುಕತೆಯ ಪ್ರಕ್ರಿಯೆಯಲ್ಲಿ ಚೀನಾ ಭಾರತದ ಷರತ್ತುಗಳನ್ನು ಒಪ್ಪಿಕೊಂಡಿತು. ಪೂರ್ವ ಲಡಾಖ್​ನ ಗೋಗ್ರಾ ಮತ್ತು ಹಾಟ್​ಸ್ಪಿ›ಂಗ್ಸ್​ನ ವಾಸ್ತವ ಗಡಿ ನಿಯಂತ್ರಣ ರೇಖೆ (ಎಲ್​ಎಸಿ) ಬಳಿ ಜಮಾಯಿಸಿರುವ ಸೇನೆಯ ವಾಪಸಾತಿಗೆ ಉಭಯ ರಾಷ್ಟ್ರಗಳು ಸಮ್ಮತಿಸಿರುವುದು ಸೂಕ್ತ ನಡೆಯೇ. ಪರಿಸ್ಥಿತಿ ಸಹಜತೆಗೆ ಮರಳುತ್ತಿರುವುದರಿಂದ ಭಾರತ ಒಂದು ಹೆಜ್ಜೆ ಮುಂದೆ ಇರಿಸಿದೆ. ವಿದೇಶಿ ನೇರ ಹೂಡಿಕೆಯಲ್ಲಿ ಚೀನಾದ ಪ್ರಸ್ತಾವನೆಗಳನ್ನು ಹಂತಹಂತವಾಗಿ ಪರಿಶೀಲನೆ ಮಾಡಲು ಮುಂದಾಗಿದೆ. ಕಳೆದ 10 ತಿಂಗಳುಗಳಿಂದ ಇಂಥ ಪ್ರಸ್ತಾವನೆಗಳನ್ನು ತಡೆಹಿಡಿಯಲಾಗಿತ್ತು. ಕರೊನಾ ತಂದೊಡ್ಡಿರುವ ಆರ್ಥಿಕ ಸಂಕಷ್ಟ ಹಾಗೂ ಉದ್ಯೋಗನಷ್ಟದ ಬಳಿಕ ಚೇತರಿಕೆಯ ಹಾದಿಯತ್ತ ಶೀಘ್ರ ಮರಳಬೇಕಿದೆ. ಇದು ಸಾಧ್ಯವಾಗಬೇಕಾದರೆ ವಿದೇಶಿ ನೇರ ಹೂಡಿಕೆ ಹೆಚ್ಚಬೇಕು, ಉದ್ಯಮ ವಲಯ ಚುರುಕುಗೊಳ್ಳಬೇಕು. ವಿಶ್ವ ವ್ಯಾಪಾರ ಸಂಘಟನೆಯಲ್ಲಿ ಭಾರತವೂ ಸದಸ್ಯ ರಾಷ್ಟ್ರವಾಗಿ ಇರುವುದರಿಂದ, ಏಕಪಕ್ಷೀಯವಾಗಿ ದೀರ್ಘಾವಧಿಗೆ ವಾಣಿಜ್ಯ ಸಂಬಂಧಗಳನ್ನು ಕಡಿದುಕೊಳ್ಳಲು ಸಾಧ್ಯವಿಲ್ಲ. ಆದರೆ, ಚೀನಾದ ಹಲವು ಮುಖಗಳನ್ನು ನೋಡಿರುವ ಕೇಂದ್ರ ಸರ್ಕಾರ ಸಮತೋಲಿತ ಹೆಜ್ಜೆ ಇರಿಸುವ ಮೂಲಕ ವಾಣಿಜ್ಯ ಸಂಬಂಧಗಳತ್ತ ಮರಳುವುದು ಸೂಕ್ತ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts