More

    ಸಂಪಾದಕೀಯ | ಚೀನಾ ಕುತಂತ್ರ; ಸೈಬರ್ ದಾಳಿಗೆ ಯತ್ನ

    ಪೂರ್ವ ಲಡಾಖ್ ಗಡಿಯ ಪ್ಯಾಂಗಾಂಗ್ ತ್ಸೊ ಸರೋವರ ತೀರದಿಂದ ಚೀನಾ ಸೇನೆ ಇತ್ತೀಚೆಗಷ್ಟೇ ಹಿಂದೆ ಸರಿದಿದ್ದರಿಂದ, ಕಳೆದ ಹತ್ತು ತಿಂಗಳ ಉದ್ವಿಗ್ನ ಸ್ಥಿತಿ ಶಮನಗೊಂಡಿತು. ಭಾರತದ ರಾಜತಾಂತ್ರಿಕ ಕ್ರಮಗಳು, ಸೇನಾ ಮಟ್ಟದ ಮಾತುಕತೆ- ಹೀಗೆ ಹಲವು ದಿಟ್ಟ ಹೆಜ್ಜೆಗಳ ಪರಿಣಾಮ ಚೀನಾಗೆ ಗಡಿಯಿಂದ ಸೇನೆಯನ್ನು ಹಿಂದಕ್ಕೆ ಕರೆಯಿಸಿಕೊಳ್ಳುವುದು ಅನಿವಾರ್ಯವಾಯಿತು. ಆದರೆ, ಸದಾ ಶಾಂತಿ ಕದಡಲು ಬಯಸುವ ಆ ರಾಷ್ಟ್ರ ಹೊಸ ಕುತಂತ್ರದ ಮೂಲಕ, ಭಾರತಕ್ಕೆ ಸವಾಲೆಸೆಯಲು ಮುಂದಾಗಿದೆ. ಹಲವು ವಿದ್ಯುತ್ ಮೂಲಸೌಕರ್ಯಗಳ ಮೇಲೆ ಚೀನಾದ ಹ್ಯಾಕರ್ಸ್ ಗುಂಪು ದಾಳಿ ನಡೆಸಿ ಪೂರೈಕೆ ಜಾಲವನ್ನು ಅಸ್ತವ್ಯಸ್ತಗೊಳಿಸಲು ಯತ್ನಿಸಿತ್ತು ಎಂಬ ಮಾಹಿತಿ ಬಹಿರಂಗಗೊಂಡಿದ್ದು, ಅದರ ಪರೋಕ್ಷ ಸಮರದ ಯತ್ನವನ್ನು ಹೊರಗೆಡವಿದೆ. 2020ರ ಮಧ್ಯಭಾಗದಿಂದಲೇ ಕನಿಷ್ಠ 12 ವಿದ್ಯುತ್ ಜಾಲದ ಕಂಪ್ಯೂಟರ್ ನೆಟ್​ವರ್ಕ್ ಮೇಲೆ ಮಾಲ್ವೇರ್ ಮೂಲಕ ದಾಳಿ ಪ್ರಯತ್ನ ನಡೆದಿದೆ. ಮುಂಬೈನಲ್ಲಿ ಕಳೆದ ಅಕ್ಟೋಬರ್ 12ರಂದು ಗ್ರಿಡ್ ವಿಫಲದಿಂದ ಉಂಟಾದ ವಿದ್ಯುತ್ ವ್ಯತ್ಯಯಕ್ಕೂ ಚೀನಾ ಹ್ಯಾಕರ್​ಗಳೇ ಕಾರಣ ಎನ್ನಲಾಗಿದೆ. ಹ್ಯಾಕರ್ ದಾಳಿ ವಿದ್ಯುತ್ ಮೂಲಸೌಕರ್ಯಕ್ಕೆ ಮಾತ್ರವಲ್ಲದೇ ರಕ್ಷಣಾ ಸಂಸ್ಥೆಗಳು, ಸರ್ಕಾರಿ ಕಚೇರಿಗಳು, ಸಾರ್ವಜನಿಕ ವಲಯದ ಕಂಪನಿಗಳ ಮೇಲೂ ನಡೆದಿತ್ತು ಎಂಬುದು ಕಳವಳದ ವಿಷಯ.

    ಮತ್ತೊಂದೆಡೆ, ಡ್ರ್ಯಾಗನ್ ರಾಷ್ಟ್ರ ಹೊಸ ಅಣ್ವಸ್ತ್ರಗಳನ್ನು ಹೊರ ತೆಗೆಯುತ್ತಿದೆ ಎಂಬ ಮಾಹಿತಿಯನ್ನು ಅಮೆರಿಕ ಬಹಿರಂಗ ಪಡಿಸಿದೆ. ನೆರೆರಾಷ್ಟ್ರಗಳೊಂದಿಗೂ ಗಡಿವಿವಾದ ಸೇರಿ ಹಲವು ಬಿಕ್ಕಟ್ಟುಗಳನ್ನು ಸೃಷ್ಟಿಸಿಕೊಂಡಿರುವ ಚೀನಾ, ಆಣ್ವಸ್ತ್ರ ಸೇರಿ ಇತರ ಶಸ್ತ್ರಾಸ್ತ್ರಗಳ ಸಂಗ್ರಹವನ್ನೂ ಹೆಚ್ಚಿಸುತ್ತಲೇ ಇದೆ. ಜಾಗತಿಕ ರಂಗದಲ್ಲಿ ಅಮೆರಿಕದ ಪ್ರಾಬಲ್ಯ ಕೊಂಚ ಕಡಿಮೆ ಆಗಿರುವ ಹಿನ್ನೆಲೆಯಲ್ಲಿ, ತಾನು ಜಾಗತಿಕ ನಾಯಕನಾಗಬೇಕು, ಇದಕ್ಕೆ ಅಡ್ಡಿಯಾದವರನ್ನು ಹೇಗಾದರೂ ಸರಿ ಮಣಿಸಿ ಬಿಡಬೇಕು ಎಂಬ ವಿಚಿತ್ರ ಮನೋಭಾವವನ್ನು ಚೀನಾದ ಕಮ್ಯುನಿಸ್ಟ್ ನಾಯಕತ್ವ ಹೊಂದಿದೆ. ಏಷ್ಯಾ ವಲಯದಲ್ಲಿ ಭಾರತ ಪ್ರಬಲ ಪ್ರತಿಸ್ಪರ್ಧಿಯಾಗಿ ಬೆಳೆಯುತ್ತಿರುವುದನ್ನು ಅದಕ್ಕೆ ಸಹಿಸಲಾಗುತ್ತಿಲ್ಲ. ಪಾಕಿಸ್ತಾನಕ್ಕೆ ಬೆಂಬಲ ನೀಡಿ, ಭಯೋತ್ಪಾದನೆ ರಫ್ತಿಗೆ ಕುಮ್ಮಕ್ಕು ನೀಡುವ ಡ್ರಾ್ಯಗನ್ ರಾಷ್ಟ್ರ ಈಗ ಸೈಬರ್ ದಾಳಿಗೆ ಮುಂದಾಗಿದೆ. ಇದು ಚೀನಾದ ಆತಂಕ ಮತ್ತು ಅಡ್ಡಮಾರ್ಗಗಳನ್ನು ಸ್ಪಷ್ಟವಾಗಿ ದರ್ಶಿಸುತ್ತದೆ.

    ಯಾವುದೇ ರಾಷ್ಟ್ರವನ್ನು, ಅದರಲ್ಲೂ ಮಾಹಿತಿ-ತಂತ್ರಜ್ಞಾನದಲ್ಲಿ ಸಾಧನೆಯ ಹೆಗ್ಗುರುತು ಮೂಡಿಸಿರುವ ಭಾರತವನ್ನು ಇಂಥ ಬೆದರಿಕೆ ತಂತ್ರಗಳಿಂದ ಮಣಿಸಲು ಸಾಧ್ಯವಿಲ್ಲ. ಗಡಿಯಲ್ಲಿ ನಮ್ಮ ವೀರಸೈನಿಕರು ಈಗಾಗಲೇ ಆ ದೇಶಕ್ಕೆ ಪಾಠ ಕಲಿಸಿದ್ದಾರೆ. ಸೇನಾಮಟ್ಟದ ಮಾತುಕತೆಗಳಲ್ಲಿ ಶಾಂತಿಸ್ಥಾಪನೆಗೆ ಒಲವು ತೋರುವ ಚೀನಾ ಆ ಬಗ್ಗೆ ಪ್ರಾಮಾಣಿಕತೆಯಿಂದ ವರ್ತಿಸಬೇಕು. ಇಂಥ ಕುಕೃತ್ಯಗಳ ಮೂಲಕ ರಾಷ್ಟ್ರವೊಂದರ ವ್ಯವಸ್ಥೆ, ಮೂಲಸೌಕರ್ಯಗಳನ್ನು ಹಾಳು ಮಾಡಲು ಹೊರಟಿರುವುದು ಅಕ್ಷಮ್ಯ. ಭಾರತ ಇಂಥ ಕೃತ್ಯಗಳಿಗೂ ಸೂಕ್ತ ತಿರುಗೇಟು ನೀಡಲಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts