More

    ಜನರ ತೊಂದರೆ ಗಮನಿಸಿ; ಬೆಲೆ ಏರಿಕೆಗೆ ಕಡಿವಾಣ ಬೇಕು…

    ಮೊದಲೇ ಕರೊನಾ ಕಾರಣದಿಂದಾಗಿ ಕಂಗಾಲಾಗಿರುವ ಜನರು ಈಚಿನ ದಿನಗಳಲ್ಲಿ ಬೆಲೆಯೇರಿಕೆಯಿಂದಾಗಿಯೂ ಬಸವಳಿದಿದ್ದಾರೆ. ಅದರಲ್ಲೂ ಪೆಟ್ರೋಲ್ ಮತ್ತು ಡೀಸೆಲ್ ದರವಂತೂ ದಿನಂಪ್ರತಿ ಎನ್ನುವಂತೆ ಪೈಸೆಗಳ ಲೆಕ್ಕದಲ್ಲಿ ಹೆಚ್ಚುತ್ತಿದ್ದು, ಇದರ ಸರಣಿ ಪರಿಣಾಮವಾಗಿ ಉಳಿದ ಅನೇಕ ವಸ್ತುಗಳ ದರವೂ ಏರಿದೆ. ಹೀಗಾಗಿ ಜನಸಾಮಾನ್ಯರು ದೈನಂದಿನ ಜೀವನ ನಿರ್ವಹಣೆಗೆ ಕಷ್ಟಪಡುವಂತಾಗಿದೆ. ಮೊದಲೆಲ್ಲ ಇಂಧನ ದರಕ್ಕೆ ನಿಯಂತ್ರಣ ವ್ಯವಸ್ಥೆ ಇತ್ತು. ಈಗ ಅದನ್ನು ನಿಯಂತ್ರಣಮುಕ್ತಗೊಳಿಸಲಾಗಿದೆ. ಅಂದರೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರದ ಆಧಾರದ ಮೇಲೆ ಇಂಧನದ ದರ ನಿರ್ಧಾರವಾಗುತ್ತದೆ. ಈಚಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರುತ್ತಿದೆ ಎಂಬುದು ನಿಜ. ಅದಕ್ಕೆ ಅನುಗುಣವಾಗಿ ಇಂಧನ ದರವೂ ಹೆಚ್ಚುತ್ತದೆ ಎಂಬುದು ಸರಳ ಲೆಕ್ಕಾಚಾರ. ಆದರೆ ವಿಷಯ ಅಷ್ಟು ಸುಲಭವಾಗಿಲ್ಲ. ಏಕೆಂದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಬಕಾರಿ ಸುಂಕದಿಂದಾಗಿ ಬೆಲೆ ಇಷ್ಟು ಹೆಚ್ಚಾಗುತ್ತದೆ ಎಂಬುದನ್ನು ಗಮನಿಸಬೇಕು.

    ಒಂದು ಉದಾಹರಣೆ ನೀಡುವುದಾದರೆ, ಪೆಟ್ರೋಲ್ ದರ ಲೀಟರ್​ಗೆ 90 ರೂ. ಎಂದಾದಲ್ಲಿ ಅದರಲ್ಲಿ ಮೂಲ ಬೆಲೆ 26 ರೂ. ಇದ್ದರೆ, ಕೇಂದ್ರ ಅಬಕಾರಿ ಸುಂಕ 32 ರೂ. ಮತ್ತು ರಾಜ್ಯ ಅಬಕಾರಿ ಸುಂಕ 23 ರೂ.ನಷ್ಟು ಇರುತ್ತದೆ. ಉಳಿದಂತೆ ಡೀಲರ್ ಕಮಿಷನ್ ಸುಮಾರು 3.70 ರೂಪಾಯಿ. ಹೀಗಾಗಿ ಅಂತಿಮವಾಗಿ ಗ್ರಾಹಕನ ಕಿಸೆಗೆ ಭಾರವಾಗುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಏರಿಳಿತಗಳು ಯಾವುದೇ ದೇಶದ ಕೈಲಿರುವುದಿಲ್ಲ ಎಂಬುದು ನಿಜವಾದರೂ, ತೆರಿಗೆ ವಿಚಾರ ಆಯಾ ದೇಶಗಳ ಕೈಲೇ ಇರುತ್ತದೆ. ಹೀಗಾಗಿ ಅಬಕಾರಿ ಸುಂಕ ತಗ್ಗಿಸುವ ಮೂಲಕ ಇಂಧನ ದರದಲ್ಲಿ ಇಳಿಕೆ ಮಾಡಬಹುದಾದ ಅವಕಾಶ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಇರುತ್ತದೆ. ಆದರೆ ಅಪಾರ ಪ್ರಮಾಣದ ಆದಾಯ ಕೈತಪ್ಪುವ ಕಾರಣದಿಂದಾಗಿ ಸರ್ಕಾರಗಳು ಈ ಕೆಲಸಕ್ಕೆ ಮುಂದಾಗುವುದಿಲ್ಲ. ಅದಲ್ಲದೆ, ಇಂಧನವನ್ನು ಜಿಎಸ್​ಟಿ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಇಂಧನ ದರ ಹೆಚ್ಚಾದಾಗ ಸಹಜವಾಗಿಯೇ ಸಾರಿಗೆ ದರಗಳು ಅಧಿಕವಾಗುತ್ತವೆ. ಇದರಿಂದ ಸರಕು ಸಾಗಣೆ ವೆಚ್ಚ ಹೆಚ್ಚಿ, ಅದರ ಪರಿಣಾಮವಾಗಿ ಬೇರೆ ಬೇರೆ ವಸ್ತುಗಳ ದರ ಏರಿಕೆಯಾಗುತ್ತದೆ. ಅಡುಗೆ ಎಣ್ಣೆ, ಎಲ್​ಪಿಜಿ, ಧಾನ್ಯಗಳು ಹೀಗೆ ವಿವಿಧ ಸಾಮಗ್ರಿಗಳ ಬೆಲೆ ಏರಿಕೆಯಿಂದಾಗಿ ಜನರ ಜೀವನವೆಚ್ಚವೂ ಹೆಚ್ಚಿದೆ.

    ಇನ್ನೊಂದೆಡೆ, ಹಣದುಬ್ಬರ ಪ್ರಮಾಣವೂ ಅಧಿಕವಾಗಿದೆ. ಕರೊನಾ ತಂದೊಡ್ಡಿದ ಆರ್ಥಿಕ ಸಂಕಷ್ಟ ಇನ್ನೂ ದುಷ್ಪರಿಣಾಮ ಮುಂದುವರಿಸಿದೆ ಎಂಬುದನ್ನು ಅಲ್ಲಗಳೆಯಲಾಗದು. ಕೇಂದ್ರ ಹಾಗೂ ವಿವಿಧ ರಾಜ್ಯ ಸರ್ಕಾರಗಳು ಈ ಸನ್ನಿವೇಶವನ್ನು ನಿಭಾಯಿಸುವ ಸಲುವಾಗಿ ವಿವಿಧ ಯೋಜನೆಗಳನ್ನೂ ತಂದಿವೆ ಎಂಬುದೂ ನಿಜ. ಆದರೂ ಕರೊನಾದಿಂದಾಗಿ ಜನಸಾಮಾನ್ಯರ ಸ್ಥಿತಿಯೂ ಅಷ್ಟೇ ಆಗಿದೆ. ಆದ್ದರಿಂದ ಅಗತ್ಯ ವಸ್ತುಗಳ ಬೆಲೆಯನ್ನು ತುಸುವಾದರೂ ತಗ್ಗಿಸುವ ಯತ್ನದ ಮೂಲಕ ಜನರಿಗೆ ಅನುಕೂಲ ಮಾಡಿಕೊಡಲು ಸರ್ಕಾರಗಳು ಮುಂದಾಗಬೇಕಾಗಿದೆ. ಆರ್ಥಿಕ ಪರಿಸ್ಥಿತಿಗೆ ತೊಂದರೆ ಆಗದಂತೆ ಈ ನಿಟ್ಟಿನಲ್ಲಿ ಎಚ್ಚರಿಕೆಯ ಹೆಜ್ಜೆಗಳನ್ನು ಇಡಬೇಕಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts