More

    ಸಕಾರಾತ್ಮಕ ಬೆಳವಣಿಗೆ: ಹೊಸ ಯೋಜನೆಗಳಿಗೆ ಅನುಮತಿ ಸಿಕ್ಕಿರುವುದರಿಂದ ಉದ್ಯಮ ವಲಯಕ್ಕೆ ಬಲ

    ಕಳೆದ ಕೆಲ ತಿಂಗಳುಗಳಿಂದ ಎಲ್ಲೆಲ್ಲೂ ಕರೊನಾ ಸಂಬಂಧಿತ ಅನಾಹುತಗಳದ್ದೇ ಸುದ್ದಿ. ವೈದ್ಯಕೀಯ ಸೌಕರ್ಯಗಳ ಕೊರತೆ, ರೋಗಿಗಳ ಬವಣೆ, ಸಾವು-ನೋವುಗಳ ಚರ್ಚೆ ಹಾಗಂತ ಈ ಸವಾಲು ಮುಗಿದಿದೆ ಎಂದೇನಲ್ಲ. ಕೋವಿಡ್ ಎರಡನೇ ಅಲೆಯ ವಿರುದ್ಧ ಬಲವಾದ ಹೋರಾಟ ನಡೆಯುತ್ತಿದೆ. ಲಾಕ್​ಡೌನ್ ಜಾರಿಯಲ್ಲಿ ಇರುವುದರಿಂದ ಜನಜೀವನ ಸ್ತಬ್ಧವಾಗಿದೆ. ಕರೊನಾ ವಿರುದ್ಧದ ಸಮರ ಈಗ ಮೊದಲ ಆದ್ಯತೆ ಆಗಿರುವುದರಿಂದ ಉಳಿದೆಲ್ಲ ಸಂಗತಿಗಳು ಗೌಣವಾಗಿವೆ. ಜೀವ ಉಳಿದರೆ ತಾನೇ ಜೀವನ ಎಂಬಂತೆ ರಾಜ್ಯ ಸರ್ಕಾರ ಅನಿವಾರ್ಯವಾಗಿ ಲಾಕ್​ಡೌನ್ ಘೋಷಿಸಿದೆ. ಬಿಗಿ ಕ್ರಮಗಳ ಪರಿಣಾಮದಿಂದ ಸೋಂಕು ಪ್ರಕರಣಗಳು ಕ್ರಮೇಣ ಇಳಿಮುಖವಾಗುತ್ತಿವೆ. ಈ ನಡುವೆ ಸಮಾಧಾನದ, ಅಷ್ಟೇ ಭರವಸೆಯ ಬೆಳವಣಿಗೆ ಎಂದರೆ ಕರೊನಾ ಸಂಕಷ್ಟ, ಆರ್ಥಿಕ ವಿಷಮತೆ ನಡುವೆಯೂ ಉದ್ಯಮಿಗಳು ಹಾಗೂ ಹೂಡಿಕೆದಾರರು ರಾಜ್ಯದಲ್ಲಿ ಬಂಡವಾಳ ಹೂಡಲು ಉತ್ಸಾಹ ತೋರುತ್ತಿದ್ದಾರೆ. 13,487 ಕೋಟಿ ರೂಪಾಯಿ ಹೂಡಿಕೆಯ ಹತ್ತು ಹೊಸ ಯೋಜನೆಗಳಿಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ.

    ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಮಹತ್ವದ ಸಭೆಯಲ್ಲಿ ಈ ಯೋಜನೆಗಳಿಗೆ ಹಸಿರು ನಿಶಾನೆ ನೀಡಲಾಗಿದೆ. ಈ ಯೋಜನೆಗಳಿಂದ ಆರು ಸಾವಿರಕ್ಕೂ ಹೆಚ್ಚು ಉದ್ಯೋಗಾವಕಾಶಗಳ ಸೃಷ್ಟಿ ನಿರೀಕ್ಷಿಸಲಾಗಿದೆ. ದ್ರವೀಕೃತ ಆಮ್ಲಜನಕ, ನೈಟ್ರೋಜನ್, ಪೆಟ್ರೋಲಿಯಂ ಉತ್ಪನ್ನಗಳು, ಕಟ್ಟಿಂಗ್ ಟೂಲ್ಸ್, ಸೋಲಾರ್, ಸಿಮೆಂಟ್ ಆಧಾರಿತ ಉದ್ಯಮಗಳು ರಾಜ್ಯದಲ್ಲಿ ಆರಂಭವಾಗಲಿವೆ. ವಿಶೇಷ ಎಂದರೆ ಇವು ಕೇವಲ ಬೆಂಗಳೂರಿಗೆ ಸೀಮಿತವಾಗದೆ, ಎರಡನೇ ಹಾಗೂ ಮೂರನೇ ಹಂತದ ನಗರಗಳಲ್ಲಿ ಸ್ಥಾಪನೆ ಆಗಲಿವೆ. ಕೈಗಾರಿಕೆಗಳು ಬರೀ ರಾಜಧಾನಿಗೆ ಸೀಮಿತ ಆಗುತ್ತಿವೆ ಎಂಬ ಆಕ್ಷೇಪ ಬಹುವರ್ಷಗಳಿಂದಲೂ ಇತ್ತು. ಅಲ್ಲದೆ, ಜಿಲ್ಲಾ ಕೇಂದ್ರಗಳು ಇಂಥ ಯೋಜನೆಗಳಿಂದ ವಂಚಿತವಾಗಿಯೇ ಉಳಿಯುತ್ತಿದ್ದವು. ಈ ನ್ಯೂನತೆ ಸರಿಪಡಿಸಲು ಮುಂದಾಗಿರುವುದು ಉತ್ತಮ ಬೆಳವಣಿಗೆ. ಅನುಮೋದಿತ ಒಟ್ಟು ಹತ್ತು ಯೋಜನೆಗಳು ಬೆಂಗಳೂರು, ಬಳ್ಳಾರಿ, ಚಿತ್ರದುರ್ಗ, ಚಾಮರಾಜನಗರ ಸೇರಿದಂತೆ ಏಳು ಜಿಲ್ಲೆಗಳಲ್ಲಿ ಅನುಷ್ಠಾನಕ್ಕೆ ಬರಲಿವೆ.

    ಹಲವು ರಾಜ್ಯಗಳು ಇಂಥ ಸಂದಿಗ್ಧ ಸ್ಥಿತಿಯಲ್ಲಿ ಹೂಡಿಕೆ ಹೇಗೆ ಆಕರ್ಷಿಸುವುದು ಎಂದು ತಲೆ ಕೆಡಿಸಿಕೊಳ್ಳುತ್ತಿವೆ. ಆದರೆ, ಕರ್ನಾಟಕದಲ್ಲಿ ತಂದ ಸುಧಾರಣಾ ಕ್ರಮಗಳು ಇಂಥ ಬೆಳವಣಿಗೆಗೆ ಕಾರಣವಾಗಿವೆ. ಪ್ರಮುಖವಾಗಿ, ಹೊಸ ಕೈಗಾರಿಕಾ ನೀತಿ, ಭೂ ಸುಧಾರಣೆ ಹಾಗೂ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿರುವುದು. ಮುಂಚೆ ಕೈಗಾರಿಕೆ ಸ್ಥಾಪಿಸಬೇಕೆಂದರೆ ಈ ಮೊದಲು 23 ಇಲಾಖೆಗಳಿಗೆ ಅಲೆಯಬೇಕಾಗಿತ್ತು. ಇಂಥ ಅಪಸವ್ಯಗಳನ್ನೆಲ್ಲ ದೂರ ಮಾಡಿ, ಹೂಡಿಕೆಸ್ನೇಹಿ ವಾತಾವರಣ ನಿರ್ವಿುಸಿರುವುದರಿಂದ ಹೊಸ ಯೋಜನೆಗಳು ಸಾಕಾರಗೊಳ್ಳುತ್ತಿವೆ. ಈ ಕೈಗಾರಿಕಾ ಸ್ನೇಹಿ ವಾತಾವರಣ ಮುಂದಿನ ದಿನಗಳಲ್ಲಿಯೂ ಕಾಯ್ದುಕೊಂಡು, ಮಹತ್ವದ, ಒಳ್ಳೆಯ ಯೋಜನೆಗಳಿಗೆ ಚಾಲನೆ ನೀಡಬೇಕು. ಇದರಿಂದ ಉದ್ಯೋಗಸೃಷ್ಟಿ ಜತೆಗೆ, ರಾಜ್ಯದ ವರ್ಚಸ್ಸು ಕೂಡ ಹೆಚ್ಚುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts