More

    ಸರ್ಕಾರದ ಸೌಲಭ್ಯ ಅನರ್ಹರ ಪಾಲಾಗದಿರಲಿ; ನಿಜವಾದ ಫಲಾನುಭವಿಗಳಿಗೆ ತಲುಪಲಿ..

    ಕರೊನಾ ಎರಡನೆಯ ಅಲೆಯನ್ನು ನಿಯಂತ್ರಿಸಲು ಕರ್ನಾಟಕದಲ್ಲಿ ಏಪ್ರಿಲ್ 26 ರಿಂದ ಜನತಾ ಕರ್ಫ್ಯೂ ಹಾಗೂ ಮೇ 10 ರಿಂದ ಜೂನ್ 14ರವರೆಗೆ ಕಠಿಣ ಲಾಕ್​ಡೌನ್ ಜಾರಿಗೊಳಿಸಲಾಗಿದೆ. ಈ ಅವಧಿಯಲ್ಲಿ ಕಡುಬಡವರು, ಶ್ರಮಜೀವಿಗಳು, ಕಾರ್ವಿುಕ ವರ್ಗ ಸಂಕಷ್ಟಕ್ಕೆ ಸಿಲುಕಿರುವುದರಿಂದ, ಸರ್ಕಾರ ತುರ್ತಾಗಿ ಸ್ಪಂದಿಸಿ ವಿಶೇಷ ಪ್ಯಾಕೇಜಿನ ಮುಖಾಂತರ ಹಣಕಾಸಿನ ನೆರವನ್ನು ನೀಡುತ್ತಿದೆ. ಕಟ್ಟಡ ಕಾರ್ವಿುಕರು, ಕ್ಯಾಬ್, ಆಟೋ ಚಾಲಕರು, ಕ್ಷೌರಿಕರು, ಅಗಸರು, ಬೀದಿ ಬದಿ ವ್ಯಾಪಾರಿಗಳು, ಆಶಾ ಕಾರ್ಯಕರ್ತೆಯರು, ಅನುದಾನರಹಿತ ಶಾಲೆಗಳ ಶಿಕ್ಷಕರು, ಮುಜರಾಯಿ ದೇವಸ್ಥಾನಗಳ ಅರ್ಚಕರು, ಮೀನುಗಾರರು, ನೇಕಾರರು, ದೋಣಿ ಮಾಲೀಕರು- ಹೀಗೆ ದುಡಿಮೆ ನಿಂತಿರುವ ಹಲವು ವಲಯಗಳ ಶ್ರಮಿಕರಿಗೆ 3 ಸಾವಿರ, 2 ಸಾವಿರ ರೂ.ಗಳಂತೆ ನೆರವು ನೀಡಲಾಗುತ್ತಿದೆ. ಸರ್ಕಾರದ ಈ ಕ್ರಮದಿಂದ ಅಸಂಖ್ಯ ಕುಟುಂಬಗಳು ಈ ಸಂಕಷ್ಟದ ಅವಧಿಯಲ್ಲಿ ಬಾಳಬಂಡಿ ಸಾಗಿಸಲು ಸಾಧ್ಯವಾಗಿದೆ.

    ಇನ್ನೊಂದು ಹೆಜ್ಜೆ ಮುಂದೆ ಹೋಗಿ ಅರ್ಜಿ ಪಡೆಯದೇ 1.91 ಲಕ್ಷ ಬೀದಿ ಬದಿ ವ್ಯಾಪಾರಿಗಳಿಗೆ 34 ಕೋಟಿ ರೂ. ಪರಿಹಾರ ನೀಡುವ ಕಾರ್ಯಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಂಗಳವಾರ ಚಾಲನೆ ನೀಡಿದ್ದಾರೆ. ತಲಾ ಎರಡು ಸಾವಿರದಂತೆ ಪರಿಹಾರ ನೀಡಲಾಗುತ್ತಿದ್ದು, ಈ ಧನಸಹಾಯವನ್ನು ಸಾಲಕ್ಕೆ ಹೊಂದಾಣಿಕೆ ಮಾಡದಂತೆ ಬ್ಯಾಂಕುಗಳಿಗೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ಅದೇ ರೀತಿ ಇತರ ವಲಯದವರಿಗೆ ಧನಸಹಾಯ ತಲುಪಿಸುವ ಪ್ರಕ್ರಿಯೆಯೂ ವೇಗ ಪಡೆದುಕೊಂಡಿರುವುದು ಸಮಾಧಾನಕರ ಬೆಳವಣಿಗೆ. ಈ ಮಧ್ಯೆ ಕೆಲ ಫಲಾನುಭವಿಗಳು ಸೂಕ್ತ ಮಾಹಿತಿ ಮತ್ತು ದಾಖಲಾತಿ ಇಲ್ಲದೆ ಪರದಾಡುತ್ತಿದ್ದು, ಸೇವಾಸಿಂಧು ಸಹಾಯವಾಣಿಯಿಂದಲೂ ಸ್ಪಂದನೆ ಸಿಗುತ್ತಿಲ್ಲ. ಈ ಕುರಿತಂತೆ ಸೂಕ್ತ ಅರಿವು ಮೂಡಿಸುವ, ನಿಜವಾದ ಫಲಾನುಭವಿಗಳು ಸೌಲಭ್ಯದಿಂದ ವಂಚಿತರಾಗದಂತೆ ನೋಡಿಕೊಳ್ಳುವುದು ಅವಶ್ಯ.

    ಸರ್ಕಾರ ಅದೆಷ್ಟೇ ಒಳ್ಳೆಯ ಯೋಜನೆ, ಕಾರ್ಯಕ್ರಮಗಳನ್ನು ರೂಪಿಸಿದರೂ, ಅದನ್ನು ದುರುಪಯೋಗ ಮಾಡಿಕೊಳ್ಳುವ ಒಂದಿಷ್ಟು ಜನ ಇದ್ದೇ ಇರುತ್ತಾರೆ. ಇಂಥವರಿಂದ ಯೋಜನೆಯ ಮೂಲೋದ್ದೇಶಕ್ಕೆ ಧಕ್ಕೆ ಬರುವುದಲ್ಲದೆ, ನೈಜ ಫಲಾನುಭವಿಗಳಿಗೆ ಅನ್ಯಾಯವಾಗುತ್ತದೆ. ಬೀದಿ ಬದಿ ವ್ಯಾಪಾರಿಗಳಲ್ಲದವರೂ ಧನಸಹಾಯ ಪಡೆಯಲು ಮುಂದಾಗಿರುವ ಬಗ್ಗೆ ಸಂಘಟನೆಯ ಮುಖ್ಯಸ್ಥರೇ ಮಾಹಿತಿ ನೀಡಿದ್ದಾರೆ. ಪಿಎಂ ಸ್ವನಿಧಿ ಸಾಲ ಸೌಲಭ್ಯದಡಿ ಅರ್ಜಿ ಸಲ್ಲಿಸಿದ್ದ 2.20 ಲಕ್ಷ ಬೀದಿ ಬದಿ ವ್ಯಾಪಾರಿಗಳು ಇದರ ಫಲಾನುಭವಿಗಳಾಗಿದ್ದಾರೆ. ಆದರೆ, ಈ ಪೈಕಿ ಶೇಕಡ 20 ಜನರು (44,500 ಸಾವಿರ) ಬೀದಿ ಬದಿ ವ್ಯಾಪಾರಿಗಳೇ ಅಲ್ಲ. ಬೇರೆ ಕೆಲಸಗಳಲ್ಲಿ ತೊಡಗಿಸಿಕೊಂಡು, ಬೀದಿ ಬದಿ ವ್ಯಾಪಾರಿ ಎಂದು ನಮೂದಿಸಿದ್ದಾರೆ. ಇವರಿಗೂ ಧನಸಹಾಯ ವಿತರಿಸಿದರೆ ಸರ್ಕಾರದ ಬೊಕ್ಕಸಕ್ಕೆ 8 ಕೋಟಿ ರೂ. ಹಾನಿಯಾಗುತ್ತದೆ. ಇಂಥ ನಿದರ್ಶನಗಳು ಬೇರೆಡೆಯೂ ಇವೆಯೋ ಎಂದು ಪರಿಶೀಲನೆ ನಡೆಸಿ, ಧನಸಹಾಯ ಅನರ್ಹರ ಪಾಲಾಗದಂತೆ ಕೂಡಲೇ ಕ್ರಮ ಕೈಗೊಳ್ಳಬೇಕು. ಜನರೂ ಇಂಥ ಬಿಕ್ಕಟ್ಟಿನ ಸಂದರ್ಭದಲ್ಲಿ ಸ್ವಯಂ ಅವಲೋಕನಕ್ಕೆ ಮುಂದಾಗಬೇಕು. ಇತರರ ಸೌಲಭ್ಯ, ಧನಸಹಾಯವನ್ನು ಕಿತ್ತುಕೊಂಡು ಅವರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಬಾರದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts