More

    ಸುಗಮವಾಗಿ ನಡೆಯಲಿ; ವರ್ಗಾವಣೆ ಪ್ರಕ್ರಿಯೆಗೆ ಕೊನೆಗೂ ಚಾಲನೆ..

    ಕಳೆದ ಹದಿನಾರು ತಿಂಗಳುಗಳಿಂದ ಕೋವಿಡ್ ಹಾವಳಿ ಸರ್ಕಾರಿ ಕೆಲಸಕಾರ್ಯಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ. ಯಾವುದನ್ನೂ ಸಮಯಮಿತಿಯಲ್ಲಿ ಪೂರೈಸಲಾಗುತ್ತಿಲ್ಲ. ಕೆಲವು ಇಲಾಖೆಗಳಿಗೆ ಅನುದಾನದ ಕೊರತೆಯಾದರೆ. ಮತ್ತೆ ಕೆಲ ಇಲಾಖೆಗಳಿಗೆ ತಾಂತ್ರಿಕ ಸಮಸ್ಯೆಗಳು. ಕಾಮಗಾರಿಗಳು ಕೂಡ ಸಮರ್ಪಕವಾಗಿ ನಡೆಯದಂಥ ಸ್ಥಿತಿ. ಅದರಲ್ಲೂ, ದೀರ್ಘಾವಧಿಯ ಲಾಕ್​ಡೌನ್ ಜನಜೀವನವನ್ನೇ ಸ್ತಬ್ಧಗೊಳಿಸಿತು. ಪರಿಣಾಮ, ಆಗಲೇಬೇಕಾದ ಕೆಲಸಗಳು, ನಡೆಯಬೇಕಾದ ಪ್ರಕ್ರಿಯೆಗಳೆಲ್ಲ ನನೆಗುದಿಗೆ ಬಿದ್ದವು. ಈ ಪೈಕಿ ಪ್ರಮುಖವಾದುದು ವರ್ಗಾವಣೆ. ಪ್ರತಿ ವರ್ಷ ಮೇ ಮತ್ತು ಜೂನ್ ತಿಂಗಳಿನಲ್ಲಿ ವರ್ಗಾವಣೆ ನಡೆಯುವುದು ಸಾಮಾನ್ಯ. ಈ ಬಾರಿ ಕರೊನಾ ಕಾರಣದಿಂದ ಇದು ಕೂಡ ವಿಳಂಬವಾಗಿದೆ. ವಿವಿಧ ಇಲಾಖೆಗಳ ಸರ್ಕಾರಿ ನೌಕರರು ಯಾವಾಗ ವರ್ಗಾವಣೆ ಪ್ರಕ್ರಿಯೆ ಆರಂಭವಾಗಲಿದೆ ಎಂದು ಚಾತಕಪಕ್ಷಿಯಂತೆ ಕಾಯುತ್ತಿದ್ದಾರೆ. ಕೊನೆಗೂ, ಈ ಬಗ್ಗೆ ಸರ್ಕಾರ ಗುರುವಾರ ಅಧಿಕೃತ ಆದೇಶ ಹೊರಡಿಸಿದೆ. ಆದರೆ, ಈ ಬಾರಿ ಎಲ್ಲ ಗ್ರೂಪ್​ಗಳ ಅಧಿಕಾರಿ, ಸಿಬ್ಬಂದಿಗೆ ವರ್ಗಾವಣೆ ಭಾಗ್ಯವಿಲ್ಲ. ಗ್ರೂಪ್-ಬಿ ಮತ್ತು ಗ್ರೂಪ್-ಸಿ ವರ್ಗದ ಅಧಿಕಾರಿ/ನೌಕರರಿಗೆ ಮಾತ್ರ ಅನ್ವಯವಾಗುವಂತೆ ವರ್ಗಾವಣೆ ಕೈಗೊಳ್ಳಲಾಗುತ್ತಿದೆ ಮತ್ತು ಜುಲೈ 22ರ ಒಳಗೆ ಈ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ.

    ಆಡಳಿತಯಂತ್ರದಲ್ಲಿ ವರ್ಗಾವಣೆ ಎಂಬುದು ಸಹಜ ಪ್ರಕ್ರಿಯೆಯೇನೋ ನಿಜ. ಆದರೆ, ಇದು ಇತ್ತೀಚಿನ ವರ್ಷಗಳಲ್ಲಿ ಹಲವು ಅಪಸವ್ಯಗಳಿಗೆ ಕಾರಣವಾಗಿರುವುದು ವ್ಯವಸ್ಥೆಯ ವೈಫಲ್ಯಕ್ಕೆ ಸಾಕ್ಷಿ. ಪ್ರಮುಖವಾಗಿ, ವರ್ಗಾವಣೆ ‘ಪ್ರಕ್ರಿಯೆ’ ಆಗಿ ಉಳಿಯದೆ, ‘ದಂಧೆ’ ಆಗಿ ಮಾರ್ಪಾಡುಗೊಂಡಿರುವುದು. ಹಣಕಾಸಿನ ಭಾರಿಪ್ರಮಾಣದ ವ್ಯವಹಾರ ಈ ಹೊತ್ತಲ್ಲಿ ನಡೆಯುತ್ತದೆ. ಅದರಲ್ಲೂ, ಆಯಕಟ್ಟಿನ ಸ್ಥಳಗಳಿಗೆ, ನಗರಪ್ರದೇಶಗಳಿಗೆ ವರ್ಗಾವಣೆ ಆಗಬೇಕಾದರೆ ಸಂಬಂಧಿತ ಇಲಾಖೆಯ ಹಿರಿಯ ಅಧಿಕಾರಿಗಳೇ ಲಕ್ಷಗಟ್ಟಲೇ ಲಂಚ ಕೇಳುತ್ತಾರೆ ಎಂಬ ಆರೋಪ ವ್ಯಾಪಕವಾಗಿದೆ. ದುಡ್ಡು ಕೊಟ್ಟರೆ ಮಾತ್ರ ಟ್ರಾನ್ಸ್​ಫರ್ ಎಂಬಂಥ ಅಘೋಷಿತ ನಿಯಮ ಎಷ್ಟೋ ಇಲಾಖೆಗಳಲ್ಲಿ ಇದೆ. ತೀರಾ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿರುವ ಸಿಬ್ಬಂದಿ ಸಾಲಸೋಲ ಮಾಡಿ, ಲಂಚ ಕೊಟ್ಟು ಬೇಕಾದ ಸ್ಥಳಕ್ಕೆ ನಿಯೋಜನೆ ಪಡೆಯುವ ನಿದರ್ಶನಗಳುಂಟು. ರಾಜಕೀಯದ ಪ್ರಭಾವ, ಶಿಫಾರಸ್ಸು ಕೂಡ ದೊಡ್ಡ ಪ್ರಮಾಣದಲ್ಲಿ ಕೆಲಸ ಮಾಡುತ್ತದೆ. ಸಚಿವರು ಮತ್ತು ಶಾಸಕರ ಶಿಫಾರಸ್ಸು ಪತ್ರ ಹಿಡಿದುಕೊಂಡು ಅಥವಾ ಪ್ರಭಾವಿಗಳಿಂದ ಹೇಳಿಸಿ ವರ್ಗಾವಣೆ ಮಾಡಿಕೊಳ್ಳುವ ಪ್ರಕರಣಗಳು ಘಟಿಸುತ್ತವೆ. ಇಷ್ಟು ಮಾತ್ರವಲ್ಲದೆ, ಹಲವು ಬಗೆಯ ಗೊಂದಲ, ವಿಳಂಬ ಧೋರಣೆಯೂ ಸೇರಿಕೊಂಡು ಇಡೀ ಆಶಯವನ್ನೇ ಹಾಳುಮಾಡಿಬಿಡುತ್ತದೆ.

    ಆಡಳಿತದಲ್ಲಿ ಬದಲಾವಣೆ, ಸುಧಾರಣೆ ತರಲು ಅಗತ್ಯವಾದ ವರ್ಗಾವಣೆಯಂಥ ಕೆಲಸಗಳು ಸುಗಮವಾಗಿ, ಪಾರದರ್ಶಕವಾಗಿ ನಡೆಯಬೇಕು. ಹಲವು ತಿಂಗಳ ಕಾಲ ಇದನ್ನು ಎಳೆಯದೆ ನಿಗದಿತ ಕಾಲಮಿತಿಯಲ್ಲಿ ಮುಗಿಸಲು ಆದ್ಯತೆ ನೀಡಬೇಕು. ಹಣದ ವ್ಯವಹಾರ ಸೇರಿದಂತೆ ಎಲ್ಲ ಬಗೆಯ ಅವ್ಯವಸ್ಥೆಗಳನ್ನು ನಿವಾರಿಸಬೇಕು. ಈ ಬಾರಿಯಾದರೂ ಸರ್ಕಾರ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡರೆ, ಸರ್ಕಾರಿ ಅಧಿಕಾರಿಗಳಿಗೆ, ನೌಕರರಿಗೆ ದೊಡ್ಡ ಸಮಾಧಾನ. ವ್ಯವಸ್ಥೆ ಶುದ್ಧೀಕರಣದ ನಿಟ್ಟಿನಲ್ಲೂ ಅದು ಅಗತ್ಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts