More

    ತಪ್ಪಿತಸ್ಥರನ್ನು ಶಿಕ್ಷಿಸಿ; ಪ್ರಾಣಿಗಳ ವೇದನೆಯನ್ನು ಅರ್ಥಮಾಡಿಕೊಳ್ಳಬೇಕು

    ವಂಚನೆ, ಮೋಸ, ಅನ್ಯಾಯದ ಅತಿರೇಕಗಳಿಗೆ ಕಡಿವಾಣವೇ ಬೀಳುತ್ತಿಲ್ಲ. ಮಾನವೀಯತೆಯೇ ತಲೆ ತಗ್ಗಿಸುವಂತೆ ಮಾಡುವ ಇಂಥ ಘಟನೆಗಳು ವ್ಯವಸ್ಥೆಯ ವೈಫಲ್ಯವನ್ನು ಎತ್ತಿ ತೋರಿಸುತ್ತಿವೆ. ಯಾರೋ ಒಂದಿಷ್ಟು ಜನರು ಮಾಡಿದ ತಪ್ಪಿಗೆ ದೊಡ್ಡ ಸಮೂಹ ಅಥವಾ ಇಡೀ ಸಮಾಜವೇ ಶಿಕ್ಷೆ, ನೋವು ಅನುಭವಿಸುವಂತಾಗುತ್ತದೆ. ಹಿಂದೆ ಬಿಹಾರದ ಮೇವು ಹಗರಣವನ್ನು ಕೇಳಿ ಇಡೀ ದೇಶವೇ ಬೆಚ್ಚಿಬಿದ್ದಿತ್ತು. ಪ್ರಾಣಿಗಳಿಗೆ ಹಾಕಲಾಗುವ ಮೇವಿನ ಖರೀದಿಯಲ್ಲೂ ವ್ಯಾಪಕ ಭ್ರಷ್ಟಾಚಾರ ನಡೆದ ಸಂಗತಿ ವ್ಯಾಪಕ ಕಳವಳಕ್ಕೂ ಕಾರಣವಾಗಿತ್ತು. ಆದರೆ ಕರ್ನಾಟಕದಲ್ಲೂ ಇದೇ ಮಾದರಿಯ ಪ್ರಕರಣ ಬೆಳಕಿಗೆ ಬಂದಿದೆ. ಜಾನುವಾರುಗಳ ಕಾಲು-ಬಾಯಿ ಜ್ವರಕ್ಕೆ ಕಳಪೆ ಲಸಿಕೆ ಹಾಕಲಾಗಿದ್ದು, ಅವುಗಳ ಪ್ರಾಣದೊಂದಿಗೆ ಚೆಲ್ಲಾಟವಾಡಲಾಗಿದೆ.

    ಕರ್ನಾಟಕದಲ್ಲಿ ಕಾಲು ಮತ್ತು ಬಾಯಿ ಬೇನೆ ಲಸಿಕಾ ಕಾರ್ಯಕ್ರಮವನ್ನು 2020ರ ಅಕ್ಟೋಬರ್ 2 ರಿಂದ ನವೆಂಬರ್ 15ರವರೆಗೆ ನಡೆಸಲಾಯಿತು. ಈ ಅವಧಿಯಲ್ಲಿ ಪಶುಪಾಲನಾ ಇಲಾಖೆ ಮತ್ತು ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳಿಯಿಂದ 1.15 ಕೋಟಿ ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರ 6-7 ಕೋಟಿ ರೂಪಾಯಿ ವೆಚ್ಚ ಮಾಡಿದ್ದರೆ, ರಾಜ್ಯ ಸರ್ಕಾರ ಲಸಿಕೆ ಭತ್ಯೆಗಾಗಿ 8 ಕೋಟಿಯಷ್ಟು ಖರ್ಚು ಮಾಡಿದೆ. ಲಸಿಕೆ ಹಾಕಿರುವುದರಿಂದ ಇನ್ನೇನು ಜಾನುವಾರುಗಳು ಕಾಲುಬಾಯಿ ರೋಗದಿಂದ ಮುಕ್ತವಾಗುತ್ತವೆ, ಆ ಮೂಲಕ ದೊಡ್ಡ ಸಮಸ್ಯೆಯೊಂದು ನಿವಾರಣೆಯಾದಂತೆ ಆಗುತ್ತದೆ ಎಂದು ರೈತರು ಮತ್ತು ಗ್ರಾಮೀಣಿಗರು ಸಮಾಧಾನ ಪಟ್ಟುಕೊಂಡಿದ್ದರು. ಕೋಟ್ಯಂತರ ರೂಪಾಯಿ ಖರ್ಚು ಮಾಡಿದ್ದಲ್ಲದೆ, ಮಾನವ ಶ್ರಮ ವಿನಿಯೋಗಿಸಲಾಗಿತ್ತು. ಲಸಿಕೆ ಹಾಕುವ ದೀರ್ಘ ಪ್ರಕ್ರಿಯೆ ಮುಗಿದ ಬಳಿಕ, ಇದೆಲ್ಲವೂ ವ್ಯರ್ಥ, ಏಕೆಂದರೆ ಜಾನುವಾರುಗಳಿಗೆ ನೀಡಲಾದ ಲಸಿಕೆಯೇ ಕಳಪೆ ಎಂಬುದು ಬಹಿರಂಗವಾಗಿದ್ದು, ಇದಕ್ಕೆ ಯಾರು ಹೊಣೆ ಎಂಬ ಪ್ರಶ್ನೆ ಸೃಷ್ಟಿಯಾಗಿದೆ.

    ಕೇಂದ್ರದಿಂದ ರಾಜ್ಯ ಸರ್ಕಾರಕ್ಕೆ ಡಿಸೆಂಬರ್ 18ರಂದು ಪತ್ರ ಬಂದಿದ್ದು, ‘ಈವರೆಗೂ ನೀಡಲಾಗಿರುವ ಲಸಿಕೆಯ ಗುಣಮಟ್ಟ ಸರಿ ಇಲ್ಲ ಎಂಬುದು ಪ್ರಯೋಗಾಲಯ ಪರೀಕ್ಷೆಯಿಂದ ತಿಳಿದುಬಂದಿದೆ. ಆದ್ದರಿಂದ ಲಸಿಕಾ ಕಾರ್ಯಕ್ರಮವನ್ನು ತಕ್ಷಣಕ್ಕೆ ನಿಲ್ಲಿಸಿ ಅಥವಾ ಮತ್ತೆ ಲಸಿಕೆ ಹಾಕಿ’ ಎನ್ನುವ ಸೂಚನೆ ನೀಡಲಾಗಿದೆ. ಹಾಗಾದರೆ, ಲಸಿಕೆ ನೀಡುವ ಮುಂಚೆ ಅದರ ಗುಣಮಟ್ಟ ಪರೀಕ್ಷಿಸಿರಲಿಲ್ಲವೆ? ಇಂಥ ಪ್ರಾಥಮಿಕ ಪ್ರಕ್ರಿಯೆ ಪೂರೈಸದೆ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾದರೂ ಹೇಗೆ? ರಾಜ್ಯ ಸರ್ಕಾರ ಟೆಂಡರ್ ಮೂಲಕ ಈ ಯೋಜನೆ ಜಾರಿ ಮಾಡಿತ್ತು. ಅಂದ ಮೇಲೆ, ಮೋಸದ ಜಾಲ ಕೆಲಸ ಮಾಡಿರುವುದು ಎಲ್ಲಿ? ಕಳಪೆ ಲಸಿಕೆ ನೀಡುವ ಷಡ್ಯಂತ್ರದ ಹಿಂದೆ ಯಾರೆಲ್ಲ ಇದ್ದಾರೆ ಎಂಬುದನ್ನು ಪತ್ತೆ ಹಚ್ಚಿ, ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆ ನೀಡಬೇಕು. ಇನ್ನಾದರೂ, ಗುಣಮಟ್ಟದ ಲಸಿಕೆ ನೀಡುವ ಕಾರ್ಯ ಪಾರದರ್ಶಕವಾಗಿ ನಡೆಯಬೇಕು. ಈ ಸಂಬಂಧ ಎಲ್ಲ ಬಗೆಯ ಗೊಂದಲಗಳಿಗೆ ತೆರೆ ಎಳೆಯಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts