More

    ಗಟ್ಟಿಗೊಂಡ ಕನ್ನಡದನಿ; ಜಾಲತಾಣಗಳ ಅಧ್ವಾನಕ್ಕೆ ಅಂಕುಶ ಬೇಕು..

    ಅಭಿವ್ಯಕ್ತಿ ಸ್ವಾತಂತ್ರ್ಯವಿದೆ ಎಂಬ ಕಾರಣಕ್ಕಾಗಿ ಸಾಮಾಜಿಕ ಜಾಲತಾಣಗಳು ಬೇಕಾಬಿಟ್ಟಿ ವರ್ತಿಸುವಂತಿಲ್ಲ. ಸಭ್ಯತೆಯ ಚೌಕಟ್ಟನ್ನು ದಾಟಿದರೆ ಅದಕ್ಕೆ ತಕ್ಕ ಶಾಸ್ತಿ ಅನುಭವಿಸಬೇಕಾಗುತ್ತದೆ ಎಂಬುದನ್ನು ಗುರುವಾರ ಕನ್ನಡಿಗರು ಸಂಘಟಿತ ಶಕ್ತಿ, ಸಮರ್ಪಕ ಉತ್ತರದ ಮೂಲಕ ತೋರಿಸಿಕೊಟ್ಟಿದ್ದಾರೆ. ಭಾಷೆ, ನಾಡು-ನುಡಿ, ಪರಂಪರೆ ಇವೆಲ್ಲ ಬರೀ ಭಾವನಾತ್ಮಕ ಸಂಗತಿಗಳಲ್ಲ. ಆಯಾ ಪ್ರದೇಶಗಳ ಅಸ್ಮಿತೆ, ಅಲ್ಲಿಯ ಸಂಸ್ಕೃತಿಯ ಸತ್ವವೇ ಆಗಿರುತ್ತವೆ. ಆದರೆ, ಸೂಕ್ತ ನಿಯಂತ್ರಣ ಮತ್ತು ಪರಿಶೀಲನೆ, ಪರಿಷ್ಕರಣೆ ವ್ಯವಸ್ಥೆ ಇಲ್ಲದ ವೆಬ್​ತಾಣಗಳು ಜನರ ಭಾವನೆಗೆ ಘಾಸಿಯುಂಟು ಮಾಡುವಂಥ ಸಂಗತಿಗಳನ್ನು ಪ್ರಕಟಿಸುವುದು ಉದ್ಧಟತನದ ಪರಮಾವಧಿ. ಸಾಮಾಜಿಕ ಮಾಧ್ಯಮಗಳ ಮೇಲೆ ನಿಗಾ ಹಾಗೂ ನಿಯಂತ್ರಣ ವ್ಯವಸ್ಥೆ ಅತ್ಯಗತ್ಯ ಎಂಬುದು ಮತ್ತೆ ರುಜುವಾತಾಗಿದೆ.

    ವಿಶ್ವದ ಪ್ರಾಚೀನ ಹಾಗೂ ಸುಂದರ ಭಾಷೆಗಳಲ್ಲೊಂದಾದ ಕನ್ನಡವನ್ನು ‘ಭಾರತದ ಕುರೂಪಿ ಭಾಷೆ’ ಎಂದು ಬರೆದಿದ್ದ ರಷ್ಯಾದ ಮಾಸ್ಕೊ ಮೂಲದ ವೆಬ್​ಸೈಟ್​ನಲ್ಲಿದ್ದ ಲೇಖನ ಗುರುವಾರ ಕನ್ನಡಿಗರ ಭಾರಿ ಆಕ್ರೋಶಕ್ಕೆ ಕಾರಣವಾಯಿತು. ಲಕ್ಷಾಂತರ ಕನ್ನಡಿಗರು ಈ ಪ್ರಮಾದದ ಕುರಿತು ವರದಿ ಮಾಡಿದ ಹಿನ್ನೆಲೆಯಲ್ಲಿ ಗುರುವಾರ ಸಂಜೆ ವೇಳೆಗೆ ಆ ಲೇಖನದ ಪುಟವನ್ನು ತೆಗೆದುಹಾಕಲಾಯಿತು.

    ತಂತ್ರಜ್ಞಾನದ ವೇದಿಕೆಗಳಲ್ಲಿ ಇಂಥ ಸಮಸ್ಯೆ ಅಥವಾ ಅಪಸವ್ಯಗಳು ಕಂಡುಬಂದಾಗ ಅದಕ್ಕೆ ತಂತ್ರಜ್ಞಾನದಿಂದಲೇ ಪರಿಹಾರ ಕಂಡುಕೊಳ್ಳಬಹುದು ಎಂಬುದಕ್ಕೂ ಈ ಪ್ರಕರಣ ನಿದರ್ಶನವಾಗಿದೆ. ತಂತ್ರಜ್ಞಾನದಲ್ಲಿ ಕನ್ನಡದ ಬಳಕೆ ಎಷ್ಟು ಮುಖ್ಯ ಎಂಬುದನ್ನೂ ತೋರಿಸಿಕೊಟ್ಟಿದೆ. ಕನ್ನಡಿಗರು ಗೂಗಲ್ ಉತ್ತರಕ್ಕೆ ‘ಫೀಡ್​ಬ್ಯಾಕ್’ನಲ್ಲಿ ದೂರು ದಾಖಲಿಸಿದರು. ಅದೇ ರೀತಿ ವೆಬ್​ಸೈಟ್ ಲೇಖನದ ಕುರಿತು ಆಕ್ಷೇಪ ದಾಖಲಿಸಿದರು. ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಈ ಬಗೆಯ ಆಕ್ಷೇಪಗಳು ವ್ಯಕ್ತವಾದ ಬೆನ್ನಲ್ಲೇ, ಗೂಗಲ್ ಆ ಪುಟವನ್ನು ತೆಗೆದುಹಾಕಿತು. ನೋಡುಗರ ಅಥವಾ ವೆಬ್​ತಾಣಕ್ಕೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಿಸಿಕೊಳ್ಳಲು ಕೆಲ ಸಾಮಾಜಿಕ ಮಾಧ್ಯಮಗಳು ಉದ್ದೇಶಪೂರ್ವಕವಾಗಿ ಇಂಥ ವಿವಾದಗಳನ್ನು ಸೃಷ್ಟಿಸುವ ಧಾಷ್ಟರ್್ಯ ತೋರುತ್ತವೆ.

    ರಾಜ್ಯ ಸರ್ಕಾರ ಗೂಗಲ್ ಸಂಸ್ಥೆಗೆ ನೋಟಿಸ್ ನೀಡಲು, ಕಾನೂನು ಕ್ರಮ ಜರುಗಿಸಲು ನಿರ್ಧರಿಸಿದೆ. ಕೋರಾ ಸಹಿತ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ವಿಷಯ ಪ್ರಸ್ತಾಪವಾಗಿ ಜನರು, ‘ಜಗತ್ತಿನಲ್ಲಿ ಕೆಟ್ಟ ಭಾಷೆ ಎಂಬುದಿಲ್ಲ’ ಎನ್ನುವ ಮೂಲಕ, ಉದ್ಧಟತನ ತೋರಿದ ಶಕ್ತಿಗಳಿಗೆ ಸಮರ್ಥ ಉತ್ತರ ನೀಡಿದರು. ಜಾಲತಾಣಗಳಲ್ಲಿ ತಪು್ಪ ಅಥವಾ ಅವಮಾನಕಾರಿ ವಿಷಯಗಳು ಬಂದರೆ ಅದರ ಬಗ್ಗೆ ಸಂಬಂಧಿತ ಸಂಸ್ಥೆಗೆ ವರದಿ ಮಾಡಲು, ದೂರ ನೀಡಲು ಸಾಧ್ಯವಿದೆ.

    ಎರಡು ಸಾವಿರ ವರ್ಷಗಳಿಗೂ ಹೆಚ್ಚಿನ ಭವ್ಯ ಇತಿಹಾಸದ ಹೆಗ್ಗಳಿಕೆ ಕನ್ನಡದ್ದು. ಸಂಸ್ಕೃತಿ, ಪರಂಪರೆ, ಸಂಸ್ಕಾರ, ಮೌಲ್ಯ ನಿರ್ಮಾಣದಲ್ಲಿ ಕನ್ನಡದ ಪಾತ್ರ ಅಸಾಧಾರಣ ಎಂಬುದು ಗೊತ್ತಿರುವ ಸಂಗತಿಯೇ. ಆದರೂ, ಯಾವುದೇ ಆಧಾರ, ಅಧ್ಯಯನ, ಸಮೀಕ್ಷೆಗಳಿಲ್ಲದೆ ಸುಖಾಸುಮ್ಮನೆ ಭಾಷೆಯನ್ನು ಅವಮಾನಿಸುವ ಕೃತ್ಯ ಖಂಡನೀಯ. ಸಾಮಾಜಿಕ ಜಾಲತಾಣಗಳ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಹೊಸ ನಿಯಮಗಳನ್ನು ರೂಪಿಸಿದೆ. ಆದರೆ, ಕೆಲ ಕಂಪನಿಗಳು ನ್ಯಾಯಾಲಯದ ಮೆಟ್ಟಿಲು ಹತ್ತಿದರೆ, ಮತ್ತೆ ಕೆಲವು ನಿಯಮ ಜಾರಿಗೆ ಸಮಯಾವಕಾಶ ಕೋರಿವೆ. ಅದೇನಿದ್ದರೂ ಸಾಮಾಜಿಕ ಸ್ವಾಸ್ಥ್ಯ ಕಾಪಾಡಲು ಜಾಲತಾಣಗಳ ನಿಯಂತ್ರಣ ಅಗತ್ಯವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts