More

    ಕನ್ನಡಕ್ಕೆ ವಿಶ್ವಮಾನ್ಯತೆ ತಂದುಕೊಟ್ಟ ರಾಮಾನುಜನ್ :  ಕಸಾಪ ಅಧ್ಯಕ್ಷ ಡಾ. ಮಹೇಶ ಜೋಶಿ ಅಭಿಮತ

    ಬೆಂಗಳೂರು: ಚಿಕಾಗೋ ವಿಶ್ವವಿದ್ಯಾಲಯದಲ್ಲಿ ಭಾಷಾಶಾಸ್ತ್ರದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಖ್ಯಾತ ಸಾಹಿತಿ ಪ್ರೊ.ಎ. ಕೆ. ರಾಮಾನುಜನ್ ಅವರು ಕನ್ನಡಕ್ಕೆ ವಿಶ್ವಮಾನ್ಯತೆ ದೊರಕಿಸಿಕೊಟ್ಟವರು ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮಹೇಶ ಜೋಶಿ ಸ್ಮರಿಸಿದ್ದಾರೆ.
    ಅಮೆರಿಕದ ಪ್ರವಾಸದಲ್ಲಿರುವ ಅವರು, ಚಿಕಾಗೋ ವಿವಿ ದ್ರಾವಿಡ ಭಾಷೆ ಅಧ್ಯಯನ ಹಾಗೂ ಸಾಹಿತ್ಯ ವಿಭಾಗಕ್ಕೆ ಭೇಟಿ ನೀಡಿ ಅಲ್ಲಿನ ವಿಶ್ವವಿಖ್ಯಾತ ಗ್ರಂಥಾಲಯವನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ರಾಮಾನುಜನ್ ಕೊಡುಗೆಗಳನ್ನು ನೆನಪಿಸಿಕೊಂಡರು.
    ಗ್ರಂಥಾಲಯದಲ್ಲಿರುವ ಎರಡು ಸಾವಿರಕ್ಕೂ ಹೆಚ್ಚು ಕನ್ನಡದ ಪುಸ್ತಕಗಳನ್ನು ನೋಡಿ, ಅಲ್ಲಿನ ವಿಷಯ ವೈವಿಧ್ಯ ಮತ್ತು ಭಾಷಾ ಪ್ರಾತಿನಿಧ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲಿ ‘ಚಿನ್ನದ ಬೆಳಕು’ ಮತ್ತು ‘ಆದಿಪುರಾಣಂ’ ಕೃತಿಗಳು ಸೇರಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣೆಗಳನ್ನು ಕಂಡು ಸಂತೋಷ ವ್ಯಕ್ತಪಡಿಸಿದರು.
    ಕನ್ನಡ ಅಧ್ಯಯನ ಕೇಂದ್ರ: ವಿವಿಯಲ್ಲಿ ಕನ್ನಡ ಚಟುವಟಿಕೆಗಳು, ಸಂಶೋಧನೆಗಳು, ಅಧ್ಯಯನಗಳ ಕುರಿತು ಹೆಚ್ಚಿನ ಅರಿವು ಇಲ್ಲದಿರುವುದನ್ನು ಮನಗಂಡ ಜೋಶಿ, ಕನ್ನಡ ಭಾಷೆಯ ಪ್ರಸ್ತುತತೆ, ಪ್ರಾಮುಖ್ಯತೆಯ ಅರಿವು ಮೂಡಿಸುವ ನಿಟ್ಟಿನಲ್ಲಿ ಚಿಕಾಗೋ ವಿವಿಯಲ್ಲಿ ಕನ್ನಡ ಭಾಷಾ ಕೇಂದ್ರವನ್ನು ಸ್ಥಾಪಿಸುವ ಯೋಜನೆ ಕುರಿತು ಅಧಿಕಾರಿಗಳೊಂದಿಗೆ ಪ್ರಸ್ತಾಪಿಸಿದರು.

    ಕೋಟ್:
    ಚಿಕಾಗೋ ವಿವಿಯಲ್ಲಿ ಕನ್ನಡ ಭಾಷಾ ಕೇಂದ್ರ ಸ್ಥಾಪನೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಅಧಿಕಾರಿಗಳು ಆಶ್ವಾಸನೆ ನೀಡಿದ್ದು, ಇದು ಕನ್ನಡ ಅಧ್ಯಯನ ಹಾಗೂ ಅಭ್ಯುದಯಕ್ಕೆ ನಾಂದಿಯಾಗಿದೆ. ಈ ಸಂಬಂಧ ಚಿಕಾಗೋ ವಿವಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ನಡುವೆ ಒಡಂಬಡಿಕೆ ಮಾಡಿಕೊಳ್ಳುವ ಕಾರ್ಯ ಸಹ ನಡೆಸುತ್ತಿದೆ.
    -ಡಾ. ಮಹೇಶ ಜೋಶಿ, ಕಸಾಪ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts