More

    ಭ್ರಷ್ಟಾಚಾರ ತಡೆಗಟ್ಟಿ; ಅಕ್ಷರ ಸಂಸ್ಕೃತಿಯ ಹೆಸರಲ್ಲೂ ಅವ್ಯವಹಾರ ಖಂಡನೀಯ

    ಭ್ರಷ್ಟಾಚಾರ ಭಯಂಕರವಾದ ಕಾಯಿಲೆಯಾಗಿ ಸಮಾಜವನ್ನು ಕಾಡುತ್ತಿದೆ. ಎಷ್ಟು ಒಳ್ಳೆಯ ಯೋಜನೆಗಳನ್ನು ರೂಪಿಸಿದರೂ, ಕಾರ್ಯಕ್ರಮಗಳನ್ನು ಹಾಕಿಕೊಂಡರೂ ಕೆಲ ಸ್ವಾರ್ಥಿಗಳಿಂದ ಭ್ರಷ್ಟಾಚಾರ ನುಸುಳಿ, ಸ್ವಜನ ಪಕ್ಷಪಾತವೂ ಸೇರಿ ಅಧ್ವಾನವಾಗುತ್ತದೆ. ಇನ್ನೂ ವಿಪರ್ಯಾಸದ ಸಂಗತಿಯೆಂದರೆ ವ್ಯವಸ್ಥೆ ಯನ್ನು ಪಾರದರ್ಶಕಗೊಳಿಸುವ, ಉತ್ತಮ ಸೇವೆ ನೀಡುವ ಹೊಣೆಗಾರಿಕೆ ಹೊತ್ತ ಕೆಲ ಸರ್ಕಾರಿ ಅಧಿಕಾರಿಗಳು ಅಥವಾ ಸಿಬ್ಬಂದಿಯೇ ಇಂಥ ಕೃತ್ಯಗಳಲ್ಲಿ ಶಾಮೀಲಾ ಗುವುದು. ಕೆಪಿಎಸ್​ಸಿ ಕರ್ಮಕಾಂಡ ಚರ್ಚೆಯಲ್ಲಿದೆ. ಪ್ರಶ್ನೆಪತ್ರಿಕೆ ಸೋರಿಕೆಯಿಂದ ಮುಂದೆ ಹಾಕಲಾಗಿದ್ದ ಎಫ್​ಡಿಎ ಪರೀಕ್ಷೆ ಫೆಬ್ರವರಿ 28ಕ್ಕೆ ನಿಗದಿಯಾಗಿದೆ. ಆದರೆ, ಈಗ ಗ್ರಂಥಾಲಯ ಇಲಾಖೆಯಲ್ಲಿರುವ ದೊಡ್ಡ ಮಾಫಿಯಾದ ಕೃತ್ಯಗಳು ಬೆಳಕಿಗೆ ಬಂದಿವೆ. ‘ವಿಜಯವಾಣಿ’ ಫೆಬ್ರವರಿ 3ರಂದು ‘ಲೈಬ್ರರಿ ಪುಸ್ತಕ ಮಾಫಿಯಾ’ ಶೀರ್ಷಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಿ, ಅಲ್ಲಿನ ಅವ್ಯವಹಾರಗಳನ್ನು ಬಯಲು ಮಾಡಿದೆ.

    ಗ್ರಂಥಾಲಯ ಇಲಾಖೆ ಬಗ್ಗೆ ಜನಸಾಮಾನ್ಯರಲ್ಲಿ ಗೌರವದ ಭಾವನೆ ಇದೆ. ಏಕೆಂದರೆ, ಜ್ಞಾನಾರ್ಜನೆಗೆ ಅಗತ್ಯವಾದ ಪುಸ್ತಕಗಳನ್ನು ಈ ಇಲಾಖೆ ತಲುಪಿಸುತ್ತದೆ ಎಂಬ ಕಾರಣಕ್ಕೆ. ಆದರೆ, ಈ ಇಲಾಖೆಯ ಕೆಲ ಭ್ರಷ್ಟ ಅಧಿಕಾರಿಗಳ ಕೈಚಳಕದಿಂದಾಗಿ ವಾರ್ಷಿಕ ಮೀಸಲಿಟ್ಟಿರುವ 10 ಕೋಟಿ ರೂಪಾಯಿಗಳಲ್ಲಿ, ಶೇಕಡ 50 ಪಾಲು ಲೂಟಿಯಾಗುತ್ತಿದೆ. ಹಣ ಗಳಿಸುವ ಉದ್ದೇಶದಿಂದ ಅಧಿಕಾರಿಗಳೇ ಬೇನಾಮಿ ಹೆಸರಿನಲ್ಲಿ ಪ್ರಕಾಶನ ಸಂಸ್ಥೆಗಳನ್ನು ಹುಟ್ಟುಹಾಕಿರುವ ಸಂಗತಿ ನಿಜಕ್ಕೂ ಆಘಾತಕಾರಿ. ಉಪಯೋಗಕ್ಕೆ ಬಾರದ ಸಾವಿರಾರು ಪುಸ್ತಕಗಳು ಪ್ರತಿ ವರ್ಷ ಗ್ರಂಥಾಲಯಗಳಲ್ಲಿ ಭರ್ತಿಯಾಗುತ್ತವೆ. ಈ ಪುಸ್ತಕಗಳಲ್ಲಿ ಬಹುತೇಕ ಹಿಂದಿನ ವರ್ಷಗಳಲ್ಲಿ ಬಂದಿರುವಂಥವೇ ಆಗಿರುತ್ತವೆ. ಹಳೆಯ ಪುಸ್ತಕಗಳ ಹೆಸರು ಬದಲಿಸಿ ಹೊಸ ಪುಸ್ತಕಗಳ ರೂಪದಲ್ಲಿ ಮುದ್ರಿಸಲಾಗುತ್ತದೆ. ಮಾತ್ರವಲ್ಲ, ಆಯ್ಕೆ ಸಮಿತಿಯ ಗಮನಕ್ಕೆ ತಾರದೆ ಪುಸ್ತಕ ಖರೀದಿಸಿ, ಗ್ರಂಥಾಲಯಗಳಿಗೆ ಕಳುಹಿಸುವಲ್ಲಿ ಇಲಾಖೆಯೊಳಗಿನ ಮಾಫಿಯಾ ನಿರತವಾಗಿದೆ. ಆಯ್ಕೆ ಸಮಿತಿಯ ಕಣ್ಣಿಗೆ ಮಣ್ಣೇರಚಿ ಇಂಥ ಅಕ್ರಮಗಳನ್ನು ಮಾಡಲಾಗುತ್ತಿದ್ದು, ಕೆಲ ಅಧಿಕಾರಿಗಳು ಹಲವು ಪ್ರಕಾಶನ ಸಂಸ್ಥೆಗಳಿಂದ ಕಮಿಷನ್ ವಸೂಲಿ ಮಾಡುತ್ತಿದ್ದಾರೆ. ಹೀಗೆ, ಅಕ್ಷರ ಸಂಸ್ಕೃತಿ ಹೆಸರಲ್ಲಿ ನಡೆಯುತ್ತಿರುವ ಅವ್ಯವಹಾರ ತೀವ್ರ ಅವಮಾನಕರ ಸಂಗತಿ. ಈ ಅಪಸವ್ಯಗಳಿಂದ ಬೇಸತ್ತು ಅದೆಷ್ಟೋ ಒಳ್ಳೆಯ ಪ್ರಕಾಶನ ಸಂಸ್ಥೆಗಳು ಗ್ರಂಥಾಲಯ ಇಲಾಖೆಯತ್ತ ಸುಳಿಯುತ್ತಲೇ ಇಲ್ಲ.

    ಈ ಅವ್ಯವಹಾರದ ಬಗ್ಗೆ ತನಿಖೆ ನಡೆಸಲು ಮುಂದಾಗಿರುವ ಸರ್ಕಾರದ ಕ್ರಮ ಸ್ವಾಗತಾರ್ಹ. ಬುಧವಾರ ವರದಿ ಪ್ರಕಟಗೊಂಡ ಕೆಲವೇ ಗಂಟೆಗಳಲ್ಲಿ ಸಚಿವ ಸುರೇಶಕುಮಾರ್, ‘ಈ ಪ್ರಕರಣದ ಕುರಿತು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಪೂರ್ಣಪ್ರಮಾಣದ ತನಿಖೆ ನಡೆಸಲಾಗುವುದು’ ಎಂದು ಪ್ರಕಟಿಸಿದ್ದಾರೆ. ಅಲ್ಲದೆ, ಕೈಗೊಳ್ಳಬಹುದಾದ ಸುಧಾರಣಾ ಕ್ರಮಗಳ ವಿವರಣೆಯೊಂದಿಗೆ ಒಂದು ತಿಂಗಳೊಳಗೆ ವರದಿ ಸಲ್ಲಿಸಬೇಕು ಎಂದು ಸೂಚಿಸಿದ್ದಾರೆ. ಈ ತನಿಖೆ ಪಾರದರ್ಶಕವಾಗಿ ನಡೆದು, ಇಲಾಖೆಯೊಳಗಿನ ಅವ್ಯವಹಾರ ಮಟ್ಟ ಹಾಕಬೇಕು. ಗ್ರಂಥಾಲಯ ಇಲಾಖೆಯ ಸಮಗ್ರ ಶುದ್ಧೀಕರಣವಾಗಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts