More

    ತಪ್ಪುಗಳು ಮರುಕಳಿಸದಿರಲಿ; ಸೂಕ್ತ ಸಿದ್ಧತೆ, ನಿರ್ಣಯಗಳ ಅನುಷ್ಠಾನ ಅಗತ್ಯ

    ಕರೊನಾ ಸೋಂಕಿನ ಎರಡನೇ ಅಲೆಯ ಅಬ್ಬರ ಕೊಂಚ ತಗ್ಗುತ್ತಿದೆಯಾದರೂ, ಮರಣ ಪ್ರಮಾಣ ನಿಯಂತ್ರಣಕ್ಕೆ ಬರಬೇಕಿದೆ. ಕಠಿಣ ಲಾಕ್​ಡೌನ್ ಪರಿಣಾಮ ಜನರ ಓಡಾಟ ಇಲ್ಲ, ಆರ್ಥಿಕ ಚಟುವಟಿಕೆಗಳು ಸ್ತಬ್ಧವಾಗಿವೆ. ಹಾಗಾಗಿ, ಹೊಸ ಪ್ರಕರಣಗಳ ಸಂಖ್ಯೆ ಇಳಿಮುಖ ಕಂಡಿದೆ ಎಂಬುದು ತಜ್ಞರ ಅಂಬೋಣ. ಆರೋಗ್ಯ ಸವಲತ್ತುಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಸಮಯಾವಕಾಶ ಸಿಗುತ್ತದೆ ಎಂಬುದೂ ಲಾಕ್​ಡೌನ್ ವಿಧಿಸಲು ಪ್ರಮುಖ ಕಾರಣ. ಮುಂಚೆಗಿಂತ ಪರಿಸ್ಥಿತಿ ಸ್ವಲ್ಪ ಸುಧಾರಿಸಿದೆ. ಹಾಸಿಗೆ ಕೊರತೆ ನೀಗಿದ್ದು, ಅಂತ್ಯಸಂಸ್ಕಾರಕ್ಕೆ ಪರದಾಟ ತಪ್ಪಿದೆ. ಆದರೆ, ಲಸಿಕೆ, ಔಷಧ ಮತ್ತು ವೈದ್ಯಕೀಯ ಆಮ್ಲಜನಕದ ಲಭ್ಯತೆ ಹೆಚ್ಚಬೇಕಿದೆ. ಚಿಕಿತ್ಸಾ ಪರಿಕರಗಳ ಕೊರತೆ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಜೂನ್ 7ಕ್ಕೆ ಎರಡನೇ ಹಂತದ ಲಾಕ್​ಡೌನ್ ಕೊನೆಗೊಳ್ಳಲಿದ್ದು, ಹಂತಹಂತವಾಗಿ ಚಟುವಟಿಕೆಗಳ ಆರಂಭಕ್ಕೆ ಸರ್ಕಾರ ಚಿಂತನೆ ನಡೆಸಿದೆ. ಆದರೆ, ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸಿಕೊಳ್ಳದಿದ್ದರೆ ಪರಿಸ್ಥಿತಿ ಮತ್ತೆ ಹದಗೆಡುವುದರಲ್ಲಿ ಸಂಶಯವಿಲ್ಲ.

    ಸರ್ಕಾರ ಕೆಲ ಪ್ರಮುಖ ನಿರ್ಣಯಗಳನ್ನು ತಳೆದಿದೆಯಾದರೂ, ಆ ಪ್ರಕ್ರಿಯೆಗಳನ್ನು ಯುದ್ಧೋಪಾದಿಯಲ್ಲಿ ಪೂರ್ಣಗೊಳಿಸಿ ಅನುಷ್ಠಾನಕ್ಕೆ ತರಬೇಕಿದೆ. ಸ್ಥಳೀಯವಾಗಿ ಆಮ್ಲಜನಕ ಉತ್ಪಾದನೆಗೆ 100 ಘಟಕಗಳ ಸ್ಥಾಪನೆಗೆ ಉದ್ದೇಶಿಸಲಾಗಿದೆ. ಚಾಲನೆ ಪಡೆದ 32 ಘಟಕಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಿ, ಜತೆಗೆ ಉಳಿದ ಘಟಕಗಳ ನಿರ್ಮಾಣ ಕಾಮಗಾರಿ ಆರಂಭವಾಗಬೇಕು. ಲಸಿಕೆ ಖರೀದಿಗಾಗಿ ಕರೆದಿದ್ದ ಜಾಗತಿಕ ಟೆಂಡರ್ ರದ್ದುಪಡಿಸಲಾಗಿದ್ದು, ಮುಕ್ತ ಮಾರುಕಟ್ಟೆಯಲ್ಲೇ ಲಸಿಕೆ ಖರೀದಿಸಬೇಕಿದೆ. ಕರೊನಾ ಮುಂಚೂಣಿ ಕಾರ್ಯಕರ್ತರೂ ಲಸಿಕೆ ಪಡೆಯಲು ಪರದಾಡುವಂತಾಗಿದೆ. 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಲಭ್ಯವಾಗುತ್ತಿಲ್ಲ. ಹೀಗಿರುವಾಗ ಲಸಿಕೆ ಪೂರೈಕೆಯ ವೇಗ ಹೆಚ್ಚಿಸಲು, ಸಂಬಂಧಿತ ಕಂಪನಿಗಳ ಮೇಲೆ ಒತ್ತಡ ಹೇರಬೇಕಿದೆ. ಎರಡನೇ ಅಲೆಯ ಸಾಧ್ಯತೆಯನ್ನು ನಿರ್ಲಕ್ಷಿಸಿ, ಸಿದ್ಧತೆಗಳನ್ನು ಮಾಡಿಕೊಳ್ಳದ್ದರಿಂದ ಈ ಬಾರಿ ಕಠಿಣ ಪರಿಸ್ಥಿತಿ ಎದುರಾಯಿತು ಎಂಬುದನ್ನು ಮರೆಯುವಂತಿಲ್ಲ.

    ಈ ನಡುವೆ ಸೆಪ್ಟೆಂಬರ್-ಅಕ್ಟೋಬರ್​ನಲ್ಲಿ 3ನೇ ಅಲೆ ಪ್ರವೇಶವಾಗುವ ಸಾಧ್ಯತೆಯನ್ನು ತಜ್ಞರು ವ್ಯಕ್ತಪಡಿಸಿದ್ದಾರೆ. ಈಗಾಗಲೇ ಹಲವಾರು ಕೊರತೆಗಳು, ಸಮಸ್ಯೆಗಳು ಇವೆ. ತೆಗೆದುಕೊಂಡ ನಿರ್ಧಾರಗಳು ನಿಧಾನಗತಿಯಲ್ಲಿ ಅನುಷ್ಠಾನವಾಗುತ್ತಿವೆ. ಇಂಥದ್ದರಲ್ಲಿ ಮೂರನೇ ಅಲೆ ಅಪ್ಪಳಿಸಿದರೆ, ಅದರನ್ನು ಎದುರಿಸಲು ರಾಜ್ಯ ಎಷ್ಟು ಸಿದ್ಧವಾಗಿದೆ ಎಂಬುದರ ಅವಲೋಕನವೂ ನಡೆಯಬೇಕು. ಕರೊನಾ ವಿರುದ್ಧದ ಹೋರಾಟದಲ್ಲಿ ವೈದ್ಯರು, ನರ್ಸ್, ಇತರ ವೈದ್ಯಕೀಯ ಸಿಬ್ಬಂದಿ ಮಾತ್ರವಲ್ಲದೆ ಪ್ರಮುಖ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಪಾಲ್ಗೊಂಡಿದ್ದಾರೆ. ಒಂದೂವರೆ ವರ್ಷದ ಸಂಘರ್ಷದಲ್ಲಿ ಅವರು ಬಸವಳಿದಿದ್ದಾರೆ ಕೂಡ. ಆದರೆ, ಅವರನ್ನು ಹುರಿದುಂಬಿಸುವ, ಸ್ಪೂರ್ತಿ ತುಂಬುವ ಕೆಲಸಗಳು ನಡೆಯಬೇಕು. ಏಕೆಂದರೆ, ಈ ಮಹಾಮಾರಿ ವಿರುದ್ಧ ಹೋರಾಡುತ್ತಿರುವವರ ಮನೋಬಲ ಕುಗ್ಗಿದರೆ ಅದರಿಂದ ಹಲವು ವ್ಯತಿರಿಕ್ತ ಪರಿಣಾಮಗಳಾಗುತ್ತವೆ. ಹಾಗಾಗದಂತೆ ಸರ್ಕಾರ ಕಾಳಜಿ ವಹಿಸಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts