

ನವದೆಹಲಿ: ಜೆ&ಕೆ ಬ್ಯಾಂಕ್ನ ವಿವಿಧ ಖಾತೆಗಳ ಮೂಲಕ ನಡೆದಿರುವ ಹಣಕಾಸು ಅಕ್ರಮಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ(ಇಡಿ)ದ ಅಧಿಕಾರಿಗಳು ಶನಿವಾರ ಜಮ್ಮು-ಕಾಶ್ಮೀರದ ವಿವಿಧೆಡೆ ಏಕಕಾಲದಲ್ಲಿ ಶೋಧ ಕಾರ್ಯಾಚರಣೆ ನಡೆಸಿದರು. ಪ್ರಿವೆನ್ಶನ್ ಆಫ್ ಮನಿ ಲಾಂಡರಿಂಗ್ ಆ್ಯಕ್ಟ್ (ಪಿಎಂಎಲ್ಎ) ಪ್ರಕಾರ ಈ ದಾಳಿಯನ್ನು ನಡೆಸಿರುವುದಾಗಿ ಇಡಿ ಮೂಲಗಳು ತಿಳಿಸಿವೆ.
ಅನಂತನಾಗ ಜಿಲ್ಲೆಯ ಒಂದು ಕಡೆ, ಶ್ರೀನಗರದ ಆರು ಕಡೆ ಈ ದಾಳಿ ನಡೆದಿತ್ತು. ಮೊಹಮ್ಮದ್ ಇಬ್ರಾಹಿಂ ಧರ್ ಗೆ ಸೇರಿದ ಮುರ್ತಾಝ ಎಂಟರ್ಪ್ರೈಸೆಸ್, ಆಜಾದ್ ಆಗ್ರೋ ಟ್ರೇಡರ್ಸ್, ಎಂಆ್ಯಂಡ್ಎಂ ಕಾಟೇಜ್ ಇಂಡಸ್ಟ್ರೀಸ್, ಉದ್ಯಮಿ, ಮಧ್ಯವರ್ತಿ ಮೊಹಮ್ಮದ್ ಸುಲ್ತಾನ್ ತೇಲಿ ಅವರಿಗೆ ಸೇರಿದ ಸಂಸ್ಥೆಗಳಲ್ಲಿ ಶೋಧ ಕಾರ್ಯ ನಡೆಯಿತು. ಅಲ್ಲಿದ್ದ ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಇಡಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಜೆ&ಕೆ ಬ್ಯಾಂಕ್ನಲ್ಲಿ ನಡೆದಿರುವ ಹಣಕಾಸು ಅಕ್ರಮಕ್ಕೆ ಸಂಬಂಧಿಸಿ ಶ್ರೀನಗರ ಸಿಐಡಿ ಪೊಲೀಸರು ಕೇಸ್ಗೆ ಸಂಬಂಧಿಸಿ ಎಫ್ಐಆರ್ ದಾಖಲಿಸಿಕೊಂಡಿದ್ದರು. ಬ್ಯಾಂಕ್ನ ಅಧಿಕಾರಿಗಳು, ಗುರುತಿಸಲಾಗದ ಸಾರ್ವಜನಿಕ ಅಧಿಕಾರಿಗಳು, ಖಾಸಗಿ ವ್ಯಕ್ತಿಗಳು ಮತ್ತು ಇತರರನ್ನು ಆರೋಪಿಗಳನ್ನಾಗಿ ಮಾಡಲಾಗಿದೆ. ಇದರಂತೆ, ಇಡಿ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. (ಏಜೆನ್ಸೀಸ್)