More

    ಭೀಮ್​ ಆರ್ಮಿಗೂ ಪಿಎಫ್​ಐಗೂ ಸಂಬಂಧವಿಲ್ಲ, ಹಾಥರಸ್​ ಪ್ರತಿಭಟನೆಗೆ 100 ಕೋಟಿ ಹಣವೂ ಬಂದಿಲ್ಲ: ಇಡಿ ಸ್ಪಷ್ಟನೆ

    ನವದೆಹಲಿ: ಚಂದ್ರಶೇಖರ್​ ಅಜಾದ್​ ನೇತೃತ್ವದ ಭೀಮ್​​ ಆರ್ಮಿ ಮತ್ತು ಪಾಪುಲರ್​ ಫ್ರಂಟ್​ ಆಫ್​ ಇಂಡಿಯಾ (ಪಿಎಫ್​ಐ) ಸಂಘಟನೆ ನಡುವೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿರುವ ಜಾರಿ ನಿರ್ದೇಶನಾಲಯ (ಇಡಿ) ಹಾಥರಸ್ ಘಟನೆ ನೆಪದಲ್ಲಿ ಕೋಮು ಸಂಘರ್ಷಕ್ಕೆ 100 ಕೋಟಿ ರೂ. ಹರಿದುಬಂದಿದೆ ಎಂಬ ವಿಚಾರವನ್ನು ತಳ್ಳಿಹಾಕಿದೆ.

    ಭೀಮ್​ ಆರ್ಮಿ ಮತ್ತು ಇತರೆ ಸಂಘಟನೆಗಳು ಹಾಥರಸ್​ನಲ್ಲಿ ನಡೆದಿದೆ ಎನ್ನಲಾದ ಪ್ರಕರಣವನ್ನು ತಪ್ಪು ದಾರಿಗೆ ಎಳೆಯಲು ಯತ್ನಿಸುತ್ತಿವೆ ಎಂದು ಉತ್ತರ ಪ್ರದೇಶದ ಮಾಜಿ ಡಿಜಿಪಿ ಬ್ರಿಜ್​ ಲಾಲ್​ ಹೇಳಿಕೆ ನೀಡಿದ ಬೆನ್ನಲ್ಲೇ ಇಡಿ ಈ ಸ್ಪಷ್ಟನೆ ನೀಡಿದೆ.

    ಇದೇ ವೇಳೆ ಹಾಥರಸ್​ ಸಂತ್ರಸ್ತೆ ಕುಟುಂಬದ ಭೇಟಿಗೆ ತೆರಳಿದ್ದ ಪಿಎಫ್​ಐ ಸಂಘಟನೆಯ ಸದಸ್ಯರು ಎನ್ನಲಾದ ನಾಲ್ವರನ್ನು ಬಂಧಿಸಲಾಗಿದ್ದು, ಬಂಧಿತರಲ್ಲಿ ಓರ್ವ ಪತ್ರಕರ್ತನೂ ಇದ್ದಾರೆ. ಕೇರಳ ಮೂಲದ ಪತ್ರಕರ್ತ ಸಿದ್ದಿಖ್​ ಕಪ್ಪನ್​ ಸೇರಿದಂತೆ ನಾಲ್ವರ ವಿರುದ್ಧ ದೇಶದ್ರೋಹ ಸೇರಿದಂತೆ ಇತರೆ ಪ್ರಕರಣಗಳನ್ನು ಮಥುರಾದಲ್ಲಿ ದಾಖಲಿಸಲಾಗಿದೆ.

    ಹಾಥರಸ್​ ಘಟನೆಯಲ್ಲಿ ಸಂತ್ರಸ್ತೆಯ ತಾಯಿ ಮತ್ತು ಆಕೆಯ ಕುಟುಂಬದವರೇ ಮೊದಲ ಆರೋಪಿಗಳು ಎಂದು ಬ್ರಿಜ್​ ಲಾಲ್​ ಗಂಭೀರ ಆರೋಪ ಮಾಡಿದ್ದಾರೆ. ಮಾಜಿ ಡಿಜಿಪಿ ಮಾತ್ರವಲ್ಲದೆ, ಉತ್ತರ ಪ್ರದೇಶದ ಪರಿಶಿಷ್ಟ ಜಾತಿ ಮತ್ತು ಪಂಗಡ ಆಯೋಗದ ಮಾಜಿ ಮುಖ್ಯಸ್ಥರಾಗಿರುವ ಬ್ರಿಜ್​ ಲಾಲ್​, ಹಾಥರಸ್​ ಘಟನೆಯನ್ನು ನೆಪವಾಗಿಸಿಕೊಂಡು ದೇಶದಲ್ಲಿ ಕೋಮು ಗಲಭೆ ಸೃಷ್ಟಿಸಲು ಪಿಎಫ್​ಐಗೆ 100 ಕೋಟಿ ರೂ. ಹದಿದು ಬಂದಿದೆ ಎಂದು ದೂರಿದ್ದರು.

    ಇದನ್ನೂ ಓದಿ: ಫುಟ್​ಬಾಲರ್​ ಆಗುವ ಕನಸನ್ನೇ ಕಸಿದ ಸೊಳ್ಳೆ ಕಡಿತ: ಊದಿದ ಕಾಲು, ಭಯಾನಕ ರೋಗಕ್ಕಿಲ್ಲ ಮದ್ದು..!

    ತಮ್ಮ ಬೆಂಬಲಿಗರೊಂದಿಗೆ ಭೀಮ್​ ಆರ್ಮಿ ಮುಖ್ಯಸ್ಥ ಚಂದ್ರಶೇಖರ್​ ಅಜಾದ್​ ಆಸ್ಪತ್ರೆಯಲ್ಲಿದ್ದ ಸಂತ್ರಸ್ತೆಯನ್ನು ನೋಡಲು ಹೋದಾಗಲೇ ಪ್ರಕರಣಕ್ಕೆ ಹೊಸ ತಿರುವು ಪಡೆದುಕೊಂಡಿತು. ಮೊದಲೇ ಒತ್ತಡದಲ್ಲಿದ್ದ ಕುಟುಂಬ ಜನರು ನೀಡುವ ವಿಭಿನ್ನ ಹೇಳಿಕೆಗಳಿಗೆ ಗೊಂದಲಕ್ಕೀಡಾಗಿದ್ದರು. ಇದೀಗ ಕುಟುಂಬದವರು ಸಿಬಿಐ ವಿಚಾರಣೆ ಮತ್ತು ನಾರ್ಕೊ/ಪಾಲಿಗ್ರಾಫ್ ಪರೀಕ್ಷೆಯಿಂದ ಹಿಂದೆ ಸರಿಯುತ್ತಿದ್ದಾರೆಂದು ಲಾಲ್​ ಹೇಳಿದ್ದರು.

    ಮಧ್ಯರಾತ್ರಿ ಅಂತ್ಯಕ್ರಿಯೆ ಬಗ್ಗೆ ಮಾತನಾಡಿದ್ದ ಲಾಲ್​, ಪ್ರಕರಣಕ್ಕೆ ಕೋಮು ಬಣ್ಣ ಬಳಿದು ಸಂಘರ್ಷ ಉಂಟು ಮಾಡಿ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲು ಭೀಮ್​ ಆರ್ಮಿ, ಕಾಂಗ್ರೆಸ್​ ಮತ್ತು ಆಪ್​ ಪಕ್ಷಗಳು ಸಂಚು ರೂಪಿಸಿದ್ದವು. ಇದು ಗುಪ್ತಚರ ಇಲಾಖೆ ಗಮನಕ್ಕೆ ಬಂದಿತ್ತು. ಹೀಗಾಗಿ ಆತುರವಾಗಿ ನಡುರಾತ್ರಿ ಅಂತ್ಯಕ್ರಿಯೆ ನೆರವೇರಿಸಬೇಕಾಯಿತು ಎಂದು ಉತ್ತರ ಪ್ರದೇಶದ ಪೊಲೀಸರ ಕ್ರಮವನ್ನು ಲಾಲ್​ ಸಮರ್ಥಿಸಿಕೊಂಡಿದ್ದಾರೆ.

    ಲಾಲ್​ ಹೇಳಿಕೆ ತುಂಬಾ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಎಚ್ಚೆತ್ತಿರುವ ಇಡಿ 100 ಕೋಟಿ ರೂ. ಹಣದ ಹರಿವು ಮತ್ತು ಭೀಮ್​ ಆರ್ಮಿ ಹಾಗೂ ಪಿಎಫ್​ಐ ನಡುವೆ ಸಂಬಂಧವಿದೆ ಎಂಬುದನ್ನು ತಳ್ಳಿಹಾಕಿದೆ. (ಏಜೆನ್ಸೀಸ್​)

    ಹಾಥರಸ್​ ಘಟನೆ ನೆಪದಲ್ಲಿ ಹರಿದುಬಂತು ₹100 ಕೋಟಿ: ಇ.ಡಿಗೆ ದೊರೆತಿದೆ ಭಯಾನಕ ಸಾಕ್ಷ್ಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts