More

    ಚಿತ್ರದುರ್ಗ: ಮಂಗಳವಾರದ ಹುಣ್ಣಿಮೆ ದಿನ ಬಾನಂಗಳದಲ್ಲಿ ಕೌತುಕ ಮೂಡಿಸಿದ್ದ ಖಂಡಗ್ರಾಸ ಚಂದ್ರಗ್ರಹಣ ಸಂಜೆ 5.55ರಿಂದ 6.12ರವರೆಗೂ ಗೋಚರಿಸಿತು. ನಗರ ಸೇರಿ ಜಿಲ್ಲಾದ್ಯಂತ ಸಾಂಪ್ರದಾಯಿಕ ಆಚರಣೆಗೆ ನಡೆಯಿತು.

    ನಗರದ ವಿವಿಧ ದೇವಾಲಯಗಳಿಗೆ ಒಂದೂವರೆ ತಾಸು ಬಾಗಿಲು ಹಾಕಲಾಗಿತ್ತು. ದೇವಿಯ ಮಂದಿರಗಳಲ್ಲಿ ಬೆಳಗ್ಗೆ ಹೆಚ್ಚಿದ್ದ ಹೆಂಗಳೆಯರ ದಂಡು ಸೂರ್ಯ ನೆತ್ತಿ ಮಟ್ಟಕ್ಕೆ ಬರುವ ಹೊತ್ತಿಗೆ ಕಡಿಮೆಯಾಯಿತು.

    ಸಂಜೆ ಗ್ರಹಣ ಮೋಕ್ಷದ ಬಳಿಕ ದೇವಾಲಯಗಳ ಅಂಗಣ, ಗರ್ಭಗುಡಿ ಸ್ವಚ್ಛಗೊಳಿಸಿ ಸಾರ್ವಜನಿಕರಿಗೆ ದೇವರ ದರ್ಶನ ಒದಗಿಸಲಾಯಿತು. ಸೂರ್ಯಾಸ್ತದ ವೇಳೆಗೆ ದೇವರಿಗೆ ಅಭಿಷೇಕ, ವಿವಿಧ ಪೂಜೆ ನಡೆದವು. ಕೆಲವು ದೇವಸ್ಥಾನಗಳಲ್ಲಿ ಪ್ರಸಾದ ವಿತರಣೆ ಸ್ಥಗಿತಗೊಳಿಸಲಾಗಿತ್ತು.

    ಗ್ರಹಣ ನಂತರದಲ್ಲಿ ಮನೆಗಳಲ್ಲಿಯೂ ಸ್ವಚ್ಛತೆ ಕಾರ್ಯ ನಡೆಸಿ ಆಹಾರ ಇತರೆ ಪದಾರ್ಥಗಳಿಗೆ ಗರಿಕೆ ಹುಲ್ಲು ಅರ್ಪಿಸಿದರು. ಇನ್ನು ರಸ್ತೆಗಳಲ್ಲಿ ಎಂದಿಗಿಂತ ಕಡಿಮೆ ಸಂಖ್ಯೆಯ ಜನರು ಕಂಡುಬಂದರೆ, ಗ್ರಹಣ ಸಂಪನ್ನವಾದ ನಂತರ ಹೋಟೆಲ್, ಮಂಡಕ್ಕಿ ಇತರೆ ತಿಂಡಿಯಂಗಡಿಗಳಲ್ಲಿ ಗ್ರಾಹಕರ ದರ್ಶನ ಆರಂಭವಾಗತೊಡಗಿತು.

    ನಂಬಿಕೆಯುಳ್ಳ ಅನೇಕ ಹಿಂದುಗಳು ತಮ್ಮ ಮನೆಗಳಲ್ಲೂ ಬೆಳಗ್ಗೆಯೇ ಪೂಜೆ ನೆರವೇರಿಸಿದರು. ಗ್ರಹಣ ಆರಂಭಕ್ಕೂ ಮುನ್ನವೇ ಮಧ್ಯಾಹ್ನದ ಊಟವನ್ನು ಸವಿಸಿದ್ದರು. ನಂತರ ನೀರಿನ ಸಂಪು, ತೊಟ್ಟಿ, ಕೊಡಪಾನ, ಬಗಿಟು, ಕ್ಯಾನ್, ಆಹಾರ ಪದಾರ್ಥಗಳಿಗೆ ಗರಿಕೆ ಪತ್ರೆ, ತುಳಸಿ ಎಲೆ, ದರ್ಬೆಯನ್ನು ಹಾಕಿದ್ದರು. ಗರ್ಭಿಣಿಯರು, ಮಕ್ಕಳು, ಹಿರಿಯರು ಮನೆಯಿಂದ ಹೊರಗೆ ಕಾಲಿಡಲಿಲ್ಲ.

    ದೇಗುಲಗಳಿಗೆ ಬಾಗಿಲು: ಕೋಟೆನಗರಿಯ ರಕ್ಷಕ ದೇವತೆಗಳಾದ ಮೇಲುದುರ್ಗದ ಏಕನಾಥೇಶ್ವರಿ, ಕೋಟೆ ರಸ್ತೆಯ ಉಚ್ಚಂಗಿಯಲ್ಲಮ್ಮ, ಹೊಳಲ್ಕೆರೆ ರಸ್ತೆಯ ಬರಗೇರಮ್ಮ, ಕುಂಚಿಗನಾಳ್ ಕಣಿವೆಮಾರಮ್ಮ, ಜೋಗಿಮಟ್ಟಿ ರಸ್ತೆಯ ತ್ರಿಪುರಸುಂದರಿ ತಿಪ್ಪನಘಟ್ಟಮ್ಮ, ಕುಕ್ಕವಾಡದ ಅಂಬಾಭವಾನಿ, ಚೌಡೇಶ್ವರಿ, ಬನ್ನಿ ಮಹಾಕಾಳಮ್ಮ, ಗೌರಸಂದ್ರ ಮಾರಮ್ಮ ಒಳಗೊಂಡು ಬಹುತೇಕ ಶಕ್ತಿದೇವತೆಗಳ ದೇಗುಲಗಳ ಬಾಗಿಲು ಮುಚ್ಚಿದ್ದವು. ಸಂಜೆ 5ರವರೆಗೂ ತೆರೆದಿದ್ದ ಅವಧಿಯಲ್ಲಿ ಮಾತ್ರ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts