

ಲಂಡನ್: ಇಂಗ್ಲೆಂಡ್ ಕ್ರಿಕೆಟ್ನಲ್ಲಿ ಕಳೆದ ಒಂದು ವಾರದಿಂದ ಹಳೇ ವಿವಾದಿತ ಟ್ವೀಟ್ಗಳದ್ದೇ ಸುದ್ದಿ. ವೈಯಕ್ತಿಕ ನಿಂದನೆ, ಜನಾಂಗೀಯ ಹಾಗೂ ಲೈಂಗಿಕತೆ ಬಗ್ಗೆ ರಾಬಿನ್ಸನ್, ತಮ್ಮ 18 ಹಾಗೂ 19 ವಯಸ್ಸಿನಲ್ಲಿದ್ದಾಗ ಟ್ವೀಟ್ ಮಾಡಿದ್ದಕ್ಕೆ ಇದೀಗ ಅಮಾನತು ಶಿಕ್ಷೆ ಅನುಭವಿಸುತ್ತಿದ್ದಾರೆ. ಈ ಪ್ರಕರಣದಿಂದ ಎಚ್ಚೆತ್ತುಕೊಂಡಿರುವ ಇಸಿಬಿ ತನಿಖೆ ಚುರುಕುಗೊಳಿಸಿದ್ದು, ಅಟಗಾರರ ಹಳೇ ಟ್ವೀಟ್ಗಳ ಇತಿಹಾಸವನ್ನು ಕೆದಕಲು ಮುಂದಾಗಿದೆ. ತಪ್ಪಿತಸ್ಥ ಆಟಗಾರರ ವಿರುದ್ಧವೂ ಕ್ರಮ ಜರುಗಿಸಲು ಮುಂದಾಗಿದೆ. ಮತ್ತೋರ್ವ ಆಟಗಾರ ರಾಬಿನ್ಸನ್ ಮಾದರಿಯಲ್ಲೇ ಟ್ವೀಟ್ ಮಾಡಿರುವ ಆರೋಪಕ್ಕೆ ಗುರಿಯಾಗಿದ್ದಾರೆ. ಆ ಆಟಗಾರ ತಮ್ಮ 16ನೇ ವಯಸ್ಸಿನಲ್ಲಿ ಮಾಡಿದ ಟ್ವೀಟ್ ಇದಾಗಿದೆ. ಇಂಗ್ಲೆಂಡ್ನ ಇತರ ಆಟಗಾರರ ಟ್ವೀಟ್ಗಳ ತನಿಖೆಗೂ ಇಸಿಬಿ ಮುಂದಾಗಿದೆ. ಕ್ರೀಡೆಯಲ್ಲಿ ಜನಾಂಗೀಯ, ವರ್ಣಭೇದ ಎಂಬುದು ಇರಬಾರದು ಎಂದು ಅಭಿಪ್ರಾಯಪಟ್ಟಿದೆ.
ಇಂಗ್ಲೆಂಡ್ ತಂಡದ ವೇಗದ ಬೌಲರ್ ಒಲಿ ರಾಬಿನ್ಸನ್ ಅವರನ್ನು 2012-13ರಲ್ಲಿ ಮಾಡಿದ್ದ ವಿವಾದಾತ್ಮಕ ಟ್ವೀಟ್ಗೆ ಸಂಬಂಧಪಟ್ಟಂತೆ ಅಮಾನತುಗೊಳಿಸಲಾಗಿದ್ದು, ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ತನಿಖೆ ಮುಗಿಯುವವರೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ಹೊರಗುಳಿಯಲಿದ್ದಾರೆ. ಇದರಿಂದ ಜೂನ್ 10 ರಿಂದ ನ್ಯೂಜಿಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯಕ್ಕೆ ರಾಬಿನ್ಸನ್ ಅಲಭ್ಯರಾಗಲಿದ್ದಾರೆ.
ರಾಬಿನ್ಸನ್ ಭಾನುವಾರ ಲಾರ್ಡ್ಸ್ನಲ್ಲಿ ಮುಕ್ತಾಯಗೊಂಡ ನ್ಯೂಜಿಲೆಂಡ್ ವಿರುದ್ಧದ ಪಂದ್ಯದ ಮೂಲಕ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಚೊಚ್ಚಲ ಟೆಸ್ಟ್ ಪಂದ್ಯದಲ್ಲಿಯೇ 7 ವಿಕೆಟ್ ಕಬಳಿಸಿದ್ದ 27 ವರ್ಷದ ರಾಬಿನ್ಸನ್, ಮೊದಲ ಇನಿಂಗ್ಸ್ನಲ್ಲಿ 42 ರನ್ ಸಿಡಿಸಿದ್ದರು. ಜನಾಂಗೀಯ ಹಾಗೂ ಲೈಂಗಿಕತೆ ಬಗ್ಗೆ ರಾಬಿನ್ಸನ್ 18 ಹಾಗೂ 19 ವಯಸ್ಸಿನಲ್ಲಿದ್ದಾಗ ಟ್ವೀಟ್ ಮಾಡಿದ್ದರು. ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಬಿನ್ಸನ್ ಮೊದಲ ದಿನದಾಟದ ಬಳಿಕ ಕ್ಷಮೆಯಾಚಿಸಿದ್ದರು. ಅಮಾನತುಗೊಂಡಿರುವ ಹಿನ್ನೆಲೆಯಲ್ಲಿ ರಾಬಿನ್ಸನ್ ಇಂಗ್ಲೆಂಡ್ ತಂಡ ತೊರೆಯಲಿದ್ದು, ತಮ್ಮ ಕೌಂಟಿ ತಂಡ ಸಸೆಕ್ಸ್ ಅನ್ನು ಕೂಡಿಕೊಳ್ಳಲಿದ್ದಾರೆ ಎಂದು ಇಸಿಬಿ ತಿಳಿಸಿದೆ.