More

    ಅಂಕಿ-ಅಂಶ ಬಹಿರಂಗ ಚುನಾವಣೆ ವ್ಯವಸ್ಥೆಗೆ ಹಾನಿ; ಸುಪ್ರೀಂಗೆ ಆಯೋಗದ ಹೇಳಿಕೆ

    ನವದೆಹಲಿ: ಕೇಂದ್ರವಾರು ಮತದಾನದ ಅಂಕಿ-ಅಂಶಗಳನ್ನು ಬಹಿರಂಗಪಡಿಸುವುದರಿಂದ ನಡೆಯುತ್ತಿರುವ ಲೋಕಸಭಾ ಚುನಾವಣೆಯ ವ್ಯವಸ್ಥೆಗೆ ಹಾನಿ ಆಗಲಿದೆ ಎಂದು ಚುನಾವಣಾ ಆಯೋಗ ಸುಪ್ರೀಂಕೋರ್ಟ್​ಗೆ ತಿಳಿಸಿದೆ. ಲೋಕಸಭಾ ಚುನಾವಣೆಯ ಮೊದಲ ಎರಡು ಹಂತಗಳಲ್ಲಿ ಮತದಾನದ ದಿನದಂದು ಬಿಡುಗಡೆಯಾದ ಅಂಕಿ-ಅಂಶಗಳು ಮತ್ತು ನಂತರದ ಪತ್ರಿಕಾ ಪ್ರಕಟಣೆಗಳಲ್ಲಿ ಕಂಡು ಬಂದ ಅಂಶಗಳಲ್ಲಿ ವ್ಯತ್ಯಾಸವಿದೆ ಎಂದು ಸುಪ್ರೀಂಕೋರ್ಟ್​ಗೆ ಸಲ್ಲಿಸಲಾದ ಅರ್ಜಿಯಲ್ಲಿ ದೂರಲಾಗಿತ್ತು. ಆದರೆ ಇದನ್ನು ತಳ್ಳಿಹಾಕಿರುವ ಆಯೋಗ, ಶೇ 5-6ರಷ್ಟು ಮತದಾನ ಪ್ರಮಾಣ ಹೆಚ್ಚಳವಾಗಿದೆ ಎಂಬ ಆರೋಪ ಶುದ್ಧ ಸುಳ್ಳು ಮತ್ತು ಈ ಮೂಲಕ ಜನರನ್ನು ತಪ್ಪುದಾರಿಗೆ ಎಳೆಯಲಾಗಿದೆ ಎಂದು ಹೇಳಿದೆ.

    ಒಂದು ಮತಗಟ್ಟೆಯಲ್ಲಿ ಬಿದ್ದ ಮತಗಳ ಸಂಖ್ಯೆ ತಿಳಿಸುವ ಫಾಮ್ರ್ 17ಸಿ ತಕ್ಷಣವೇ ಸಾರ್ವಜನಿಕವಾಗಿ ಬಹಿರಂಗಪಡಿಸುವುದಕ್ಕೆ ಅವಕಾಶವಿಲ್ಲ. ಹೀಗೆ ಮಾಡಿದಲ್ಲಿ ಇಡೀ ಚುನಾವಣೆ ಮೇಲೆ ಅದು ದುಷ್ಪರಿಣಾಮ ಬೀರಬಹುದು ಎಂದು ಚುನಾವಣಾ ಆಯೋಗ ಹೇಳಿದೆ. ಲೋಕಸಭೆಯ ಪ್ರತಿ ಹಂತದ ಮತದಾನ ಮುಗಿದ 48 ಗಂಟೆಗಳ ಒಳಗಾಗಿ ತನ್ನ ವೆಬ್​ಸೈಟ್​ನಲ್ಲಿ ಮತಗಟ್ಟೆವಾರು ಅಂಕಿ-ಅಂಶಗಳನ್ನು ಅಪ್​ಲೋಡ್ ಮಾಡುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ಸರ್ಕಾರೇತರ ಸಂಸ್ಥೆಯೊಂದು ಸಲ್ಲಿಸಿದ ಮನವಿಗೆ ಆಯೋಗ ಈ ಪ್ರತಿಕ್ರಿಯೆ ನೀಡಿದೆ.

    ಆಯೋಗಕ್ಕೆ ಹಿಂಜರಿಕೆ ಏಕೆ?: ಚುನಾವಣಾ ಆಯೋಗವು ತನ್ನ ವೆಬ್​ಸೈಟ್​ನಲ್ಲಿ ಮತಗಟ್ಟೆವಾರು ಮತದಾರರ ಅಂಕಿ-ಅಂಶಗಳನ್ನು ಹಾಕದಿರುವುದು ರಾಜಕೀಯ ಪಕ್ಷಗಳಲ್ಲಿ ಅನುಮಾನ ಮೂಡುವಂತೆ ಮಾಡಿದೆ ಹಾಗೂ ಡೇಟಾಗಳನ್ನು ಅಪ್​ಲೋಡ್ ಮಾಡುವಲ್ಲಿ ಆಯೋಗಕ್ಕೆ ಏನು ಸಮಸ್ಯೆಯಾಗಿದೆ ಎನ್ನುವುದೇ ಅರ್ಥವಾಗುತ್ತಿಲ್ಲ ಎಂದು ಸಮಾಜವಾದಿ ಪಕ್ಷದ ರಾಜ್ಯಸಭೆ ಸದಸ್ಯ, ಸುಪ್ರೀಂಕೋರ್ಟ್ ವಕೀಲ ಕಪಿಲ್ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಮತದಾನದ ಕೊನೆಯಲ್ಲಿ ಫಾಮ್ರ್ 17-ಸಿಯಲ್ಲಿರುವ ಎಲ್ಲಾ ವಿವರ ಪೋಲಿಂಗ್ ಏಜೆಂಟ್​ಗೆ ನೀಡಿದ ನಂತರ ಕೇಂದ್ರವಾರು ಮತದಾನದ ಡೇಟಾ ಅಪ್​ಲೋಡ್ ಮಾಡಲೇನು ಸಮಸ್ಯೆ ಎಂದು ಪ್ರಶ್ನಿಸಿದ ಅವರು, ಎಣಿಕೆಯಾಗುವ ಮತಗಳ ಸಂಖ್ಯೆ ವಾಸ್ತವವಾಗಿ ಹಾಕಲಾದ ಮತಗಳ ಸಂಖ್ಯೆಗಿಂತ ಹೆಚ್ಚಾಗಿರುತ್ತದೆ ಎಂಬ ವಾದವಿದೆ. ಅದು ಸರಿಯೋ ತಪ್ಪೋ ಎಂಬ ಬಗ್ಗೆ ನಮಗೆ ಗೊತ್ತಿಲ್ಲ. ಆದರೆ, ಚುನಾವಣಾ ಆಯೋಗಕ್ಕೆ ಅಪ್​ಲೋಡ್ ಮಾಡಲು ಹಿಂಜರಿಕೆ ಏಕೆ? ಅದನ್ನು ಯಾರೂ ಬದಲಿಸಲು ಸಾಧ್ಯವಿಲ್ಲ ಎಂದು ವಿವರಿಸಿದರು.

    ಕ್ಲೋಸ್ ಬಟನ್ ಪ್ರೆಸ್ ಮಾಡಿದ್ರೆ ಸಾಕು…: ಕೇಂದ್ರ ಚುನಾವಣಾ ಆಯೋಗ ಯಾವುದೇ ನಾಚಿಕೆ ಇಲ್ಲದೆ ಒಟ್ಟು ಮತದಾರರ ದತ್ತಾಂಶಗಳನ್ನ ಮರೆಮಾಚಿದೆ ಎಂದು ತೃಣಮೂಲ ಕಾಂಗ್ರೆಸ್ ಪಕ್ಷದ ರಾಜ್ಯಸಭೆ ಸದಸ್ಯ ಸಾಕೇತ್ ಗೋಖಲೆ ಆರೋಪಿಸಿದ್ದಾರೆ. ಮತದಾರರ ಅಂಕಿ-ಅಂಶಗಳನ್ನು ವಿವೇಚನಾರಹಿತವಾಗಿ ಬಹಿರಂಗಪಡಿಸುವುದು ಮತ್ತು ಅದನ್ನು ತನ್ನ ವೆಬ್​ಸೈಟ್​ನಲ್ಲಿ ತಕ್ಷಣಕ್ಕೆ ಅಪ್​ಲೋಡ್ ಮಾಡುವುದರಿಂದ ಚುನಾವಣಾ ಯಂತ್ರದಲ್ಲಿ ಅವ್ಯವಸ್ಥೆ ಉಂಟಾಗಲಿದೆ ಎಂಬ ಆಯೋಗದ ಪ್ರತಿಕ್ರಿಯೆಗೆ ಕಿಡಿಕಾರಿರುವ ಅವರು, ಆಯೋಗ ಪ್ರಕಟಿಸಿರುವ ರಿಟರ್ನಿಂಗ್ ಆಫೀಸರ್​ಗಳ ಕೈಪಿಡಿಯಲ್ಲಿ ಎಲ್ಲವೂ ಸ್ಪಷ್ಟವಾಗಿದೆ. ರಿಟರ್ನಿಂಗ್ ಆಫೀಸರ್ ಮಾಡಬೇಕಾಗಿರುವುದು ಕ್ಲೋಸ್ ಬಟನ್ ಪ್ರೆಸ್ ಮಾಡಬೇಕಾದ ಕೆಲಸವಷ್ಟೇ. ಇದರಿಂದ ತಕ್ಷಣವೇ ಫಾಮ್ 17ರಲ್ಲಿ ದಾಖಲಾದ ಒಟ್ಟು ಮತಗಳ ಸಂಖ್ಯೆ ಕಾಣುತ್ತದೆ ಎಂದು ವಿವರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts