More

    ಎರೆಹುಳು ಗೊಬ್ಬರ ಆದಾಯ ಗಳಿಕೆಗೂ ದಾರಿ: ಯು.ಎನ್.ಸಂತೋಷ್

    ಶಿವಮೊಗ್ಗ: ಎರೆಹುಳು ಗೊಬ್ಬರ ತಯಾರಿಕೆ, ಎರೆಹುಳುಗಳ ಸಾಕಾಣಿಕೆ ಮತ್ತು ಮಾರಾಟದಿಂದ ಕೇವಲ ಭೂಮಿಯ ಫಲವತ್ತತೆ ಹೆಚ್ಚಾಗುವುದು ಮಾತ್ರವಲ್ಲದೆ, ಆದಾಯ ಗಳಿಕೆಗೂ ದಾರಿ ಆಗಲಿದೆ ಎಂದು ಶಿವಮೊಗ್ಗ ಸಾವಯವ ಕೃಷಿ ಸಂಶೋಧನಾ ಕೇಂದ್ರದ ಸಹ ಸಂಶೋಧಕ ಯು.ಎನ್.ಸಂತೋಷ್ ಹೇಳಿದರು.
    ನಗರದ ಕೇಂದ್ರ ಕಾರಾಗೃಹದಲ್ಲಿ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ ಕೃಷಿ ಜೀವಿಶಾಸ್ತ್ರ ವಿಭಾಗ, ನವಿಲೆ ಕೃಷಿ ಮಹಾವಿದ್ಯಾಲಯದ ಆಶ್ರಯದಲ್ಲಿ ಗುರುವಾರ ಆಧುನಿಕ ಅಣಬೆ ಕೃಷಿ ಮತ್ತು ಎರೆ ಹುಳು ಗೊಬ್ಬರದ ತಯಾರಿಕಾ ತಾಂತ್ರಿಕತೆ ತರಬೇತಿ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
    ಸಾವಯವ ಗೊಬ್ಬರದಿಂದ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ. ಸತ್ವಯುತವಾದ ಆಹಾರ ಉತ್ಪನ್ನಗಳನ್ನು ಬೆಳೆಯುವುದಕ್ಕೆ ಸಾಧ್ಯವಾಗಲಿದೆ. ಒಂದು ಎರೆ ಹುಳು 2.5 ವರ್ಷ ಬದುಕಲಿದ್ದು ಭೂಮಿಯನ್ನು ಹೆಚ್ಚು ಸತ್ವಯುತವನ್ನಾಗಿಸುತ್ತದೆ. ಭತ್ತದ ಹುಲ್ಲು, ರಾಗಿ ಹುಲ್ಲು, ತೊಗರಿ ಕಟ್ಟಿ, ಕಳೆ ಗಿಡಗಳು ಮತ್ತು ಸಗಣಿಗಳಂತಹ ತ್ಯಾಜ್ಯಗಳಿಂದ ಎರೆಹುಳುಗಳನ್ನು 20ರಿಂದ 30 ಡಿಗ್ರಿ ಉಷ್ಣಾಂಶದಲ್ಲಿ ಇಟ್ಟು ಗೊಬ್ಬರ ತಯಾರಿಸಬಹುದು. 4ರಿಂದ 5 ತಿಂಗಳಲ್ಲಿ ಸಾವಯವ ಗೊಬ್ಬರ ತಯಾರಾಗುತ್ತದೆ ಎಂದರು.
    ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕಿ ಡಾ. ಆರ್.ಅನಿತಾ ಮಾತನಾಡಿ, ಆಧುನಿಕ ಅಣಬೆ ಕೃಷಿ ಮತ್ತು ಎರೆಹುಳು ಗೊಬ್ಬರದ ತಯಾರಿಕಾ ತಾಂತ್ರಿಕತೆ ತರಬೇತಿ ಕಾರ್ಯಗಾರದ ಪ್ರಯೋಜನ ಪಡೆಯುವಂತೆ ಬಂಧಿವಾಸಿಗಳಿಗೆ ಕಿವಿಮಾತು ಹೇಳಿದರು. ಬಂಧಿವಾಸಿಗಳು ಈ ಕಾರ್ಯಾಗಾರದಿಂದ ಉತ್ತೇಜಿತರಾಗಬೇಕು. ಎಲ್ಲರೂ ಸಾವಯವ ಗೊಬ್ಬರವನ್ನು ಬಳಸುವಂತಾಗಬೇಕು ಎಂದರು.
    ಕೃಷಿ ಸೂಕ್ಷ್ಮ ಜೀವಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ. ಎಂ.ಎಸ್.ನಂದೀಶ್ ಅಣಬೆ ಬೇಸಾಯ ಮತ್ತು ತೋಟಗಾರಿಕೆ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಸೌಮ್ಯ ಕುಮಾರಿ ತೋಟಗಾರಿಕೆ ಬೆಳೆ ಬಗ್ಗೆ ಮಾತನಾಡಿದರು. ರಾಜ್ಯ ಕೃಷಿ ತಂತ್ರಜ್ಞಾನ ಸಂಸ್ಥೆ ನಿರ್ದೇಶಕ ಲೋಕೇಶ್ವರ್, ಕೇಂದ್ರ ಕಾರಾಗೃಹದ ಸಹಾಯಕ ಅಧೀಕ್ಷಕ ಶಿವಾನಂದ ಆರ್.ಶಿವಾಪುರ, ಜೈಲರ್‌ಗಳಾದ ಜಿ.ಎಂ.ಮಹೇಶ್, ಎಸ್.ಎಸ್.ಅನಿಲ್‌ಕುಮಾರ್, ಸುಷ್ಮಾ, ಶಿಕ್ಷಕರಾದ ಗೋಪಾಲಕೃಷ್ಣ, ಅಂಬಿಕಾ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts