More

    ಎರೆಹುಳುಗಳೇ ಅನ್ನದಾತರ ನೈಜ ಆಸ್ತಿ

    ಮುದ್ದೇಬಿಹಾಳ: ಭಾರತದಲ್ಲಿ ಕೃಷಿಕರು ಕೃಷಿ ಸಂಸ್ಕಾರ ಮರೆತು ಭೂತಾಯಿ, ಜೀವಜಲ ಗಂಗೆಗೆ ವಿಷವುಣಿಸುತ್ತಿದ್ದಾರೆ. ರೈತ ಸಾಯಲೂ ಸಹಿತ ಪರಾವಲಂಬಿಯಾಗುವಂಥ ದುಸ್ಥಿತಿ ಬಂದಿದೆ. ಇತ್ತೀಚಿನ ಸರ್ಕಾರಗಳು ರೈತರನ್ನು ಭಿಕ್ಷುಕರನ್ನಾಗಿ ಮಾಡುತ್ತಿವೆಯೇನೋ ಅನ್ನಿಸುತ್ತಿದೆ ಎಂದು ಮಹಾರಾಷ್ಟ್ರದ ಕನ್ಹೇರಿಯ ಸಿದ್ಧಗಿರಿ ಸಂಸ್ಥಾನಮಠದ ಸಾವಯವ ಕೃಷಿ ಪ್ರೇರಕ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಚಾಟಿ ಬೀಸಿದರು.

    ಕುಂಟೋಜಿಯ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಚನ್ನವೀರ ದೇವರ ಗುರುಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಸಾವಯವ ಕೃಷಿ ಚಿಂತನ-ರೈತರ ಜತೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ರೈತನಲ್ಲಿ ಕೊಡುವ ಸಂಸ್ಕೃತಿ ಹಾಳಾಗಿ ಬೇಡುವ ಸಂಸ್ಕೃತಿ ಬಂದಿದೆ. ರೈತರು ಬೀಜ, ಕೀಟನಾಶಕ ಸ್ವಂತವಾಗಿ ತಯಾರಿಸುವುದನ್ನು ಮರೆತು ಬಜಾರ್‌ನಿಂದ ಖರೀದಿಸುತ್ತಿರುವುದರಿಂದಾಗಿ ಇಂದಿನ ಕೃಷಿ ಬಜಾರ್ ಕೇಂದ್ರಿತವಾಗುತ್ತಿದೆ. ಎರೆಹುಳುಗಳೇ ನಿಜವಾದ ರೈತರು. ಇವುಗಳ ನೆಲದಾಳದ ಮನೆಗಳನ್ನು ಆಳವಾದ ನೇಗಿಲು ಹಚ್ಚಿ ನಾಶಮಾಡುವವರು ರೈತರೇ ಅಲ್ಲ. ಎರೆಹುಳು, ಭೂಮಿಯೊಳಗಿನ ಅವಾತಿಯಾ, ಸುವಾತಿಯಾ ಸೂಕ್ಷ್ಮ ಜೀವಾಣುಗಳು ರೈತನ ಆಸ್ತಿ. ಇವುಗಳನ್ನು ನಿರಂತರ ಕೊಲ್ಲುತ್ತಿರುವುದರಿಂದ ಹೊಸ ಜೀವಾಣು ಸೃಷ್ಟಿ ಕಡಿಮೆಯಾಗಿ ಕೃಷಿ ವಿನಾಶದತ್ತ ಸಾಗಿದೆ ಎಂದರು.

    ಯಾವ ರೈತನ ಜಮೀನಿನ ಮಣ್ಣಿನಲ್ಲಿ ಸೂಕ್ಷ್ಮ ಜೀವಾಣು, ಕೀಟ, ಜಾನುವಾರು ಹೆಚ್ಚಾಗಿರುತ್ತವೆಯೋ ಅವನೇ ಶ್ರೀಮಂತ. ಹೊಲದಲ್ಲಿ ಕಸಕಡ್ಡಿಗೆ ಬೆಂಕಿ ಹಚ್ಚುವುದು ನಿಲ್ಲಬೇಕು. ಕಸಕಡ್ಡಿ ಕೊಳೆಸುವವನು ನಿಜವಾದ ರೈತ. ನೀರು, ಮಣ್ಣು, ಗಾಳಿ ಸುರಕ್ಷಿತವಾಗಿಟ್ಟುಕೊಂಡು ಷಡ್ರಸವನ್ನೇ ಅಮೃತವಾಗಿಸಬೇಕು. ಕರ್ನಾಟಕದಲ್ಲಿ ನಾಲ್ಕು ಲಕ್ಷ ಸಾವಯವ ಕೃಷಿಕರಿದ್ದು, ಸಾವಯವ ಕೃಷಿ ಪದ್ಧತಿ ಇಂದಿನ ಅವಶ್ಯಕತೆಯಾಗಿದೆ ಎಂದರು.

    ವಿಜಯಪುರದ ಅಮ್ಮನ ಮಡಿಲು ಟ್ರಸ್ಟ್ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮಾತನಾಡಿ, ಸಾವಯವ ಕೃಷಿಯ ಜಾಗೃತಿ ಮನೆ ಮನಗಳಲ್ಲಿ ನಡೆಯಬೇಕು. ರೈತರ ಆರೋಗ್ಯಪೂರ್ಣ ಜೀವನಕ್ಕಾಗಿ ಇದ್ದುದನ್ನು ಇದ್ದಂತೆ ಹೇಳುವ ಎದೆಗಾರಿಕೆ ಇರುವಂಥ ಕಾಡಸಿದಧೇಶ್ವರ ಸ್ವಾಮೀಜಿ ನಮ್ಮೊಂದಿಗಿರುವ ಬೆಳಕು. ರೈತನ ಬಗ್ಗೆ ಉದ್ದುದ್ದ ಭಾಷಣ ಮಾಡದೆ ನಿಜವಾದ ಕಾಳಜಿ ತೋರಿಸಬೇಕು. ರೈತರಿಗೆ ಗೌರವ ಕೊಡುವ ಅಧಿಕಾರಿಗಳು, ಸರ್ಕಾರ ಬರುವತನಕ ದೇಶ ಉದ್ಧಾರವಾಗಲ್ಲ ಎಂದರು.

    ರಾಜ್ಯ ರೈತ ಸಂಘದ ಅಧ್ಯಕ್ಷ ವಾಸುದೇವ ಮೇಟಿ, ಸಾನ್ನಿಧ್ಯ ವಹಿಸಿದ್ದ ಹುಣಶ್ಯಾಳದ ಆನಂದ ದೇವರು, ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಮಾತನಾಡಿದರು. ಗಡಿಗೌಡಗಾಂವ ಹಾವಗಿ ಶಾಂತಲಿಂಗೇಶ್ವರ ಮಠದ ಶಾಂತಲಿಂಗ ಶಿವಾಚಾರ್ಯರು, ಕವಡಿಮಟ್ಟಿಯ ಬಸವಪ್ರಭು ಹಿರೇಮಠ, ಬಳಗಾನೂರದ ಶರಣೆ ಮಂಜುಳಾತಾಯಿ ಸಾನ್ನಿಧ್ಯ ವಹಿಸಿದ್ದರು.

    ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ, ಗಣ್ಯರಾದ ಸಿ.ಪಿ.ಸಜ್ಜನ, ಸಂಗನಗೌಡ ಪಾಟೀಲ, ಡಾ.ಬಸವರಾಜ ಅಸ್ಕಿ, ಎಂ.ಬಿ.ನಾವದಗಿ, ಸಿದ್ದನಗೌಡ ಬಿರಾದಾರ, ಗುರು ತಾರನಾಳ, ವೈ.ಎಚ್.ವಿಜಯಕರ, ಬಸವರಾಜ ಕುಂಬಾರ, ರೈತ ಸಂಘದ ಪದಾಧಿಕಾರಿಗಳಾದ ಶಾರದಾ ಕಾಳಣ್ಣವರ, ಸಂಗಣ್ಣ ಬಾಗೇವಾಡಿ ಇತರರಿದ್ದರು.

    ಕಾಡಸಿದ್ಧೇಶ್ವರ ಸ್ವಾಮೀಜಿ ಅವರನ್ನು ಗುರುಪಟ್ಟಾಧಿಕಾರ ಮಹೋತ್ಸವ ಸಮಿತಿ, ಕೊಣ್ಣೂರಿನ ಡಾ.ಬಸವರಾಜ ಅಸ್ಕಿ ಬಳಗ, ಮುದ್ದೇಬಿಹಾಳದ ಎಸ್.ಎಸ್.ಶಿವಾಚಾರ್ಯ ಶಿಕ್ಷಣ ಸಂಸ್ಥೆಯ ರವಿ ನಾಯಕ ಬಳಗ ಸೇರಿ ಹಲವರು ಸನ್ಮಾನಿಸಿದರು. ಚನ್ನವೀರ ದೇವರನ್ನು ಕಾಸಿದ್ಧೇಶ್ವರ ಸ್ವಾಮೀಜಿ ಅವರು ಕಿನ್ನಾಳ ಕಲೆಯ ಸ್ಮರಣಿಕೆ ನೀಡಿ ಶುಭಾಶೀರ್ವದಿಸಿದರು. ರೈತರಿಗೆ ಉಚಿತವಾಗಿ ಗೋಕೃಪಾಮೃತ ವಿತರಿಸಲಾಯಿತು. ಸಂಗಮೇಶ ಅಂಕದ, ಮಲ್ಲಿಕಾರ್ಜುನ ನರಸಲಗಿ ಪ್ರಾರ್ಥಿಸಿದರು. ಸಂಗಯ್ಯಸ್ವಾಮಿಗಳು ಸ್ವಾಗತಿಸಿದರು. ಯರನಾಳದ ಶಿವಪ್ರಸಾದ ದೇವರು ಕಾರ್ಯಕ್ರಮ ನಿರ್ವಹಿಸಿದರು.

    ಬಸವನಬಾಗೇವಾಡಿಯಲ್ಲಿ ಬಸವಣ್ಣನ ಜೀವನ ಚರಿತ್ರೆ ತಿಳಿಸುವ ದೊಡ್ಡ ಮಟ್ಟದ ಮ್ಯೂಜಿಯಂ ಪ್ರಾರಂಭಿಸಲಾಗುತ್ತಿದೆ. ರೈತರಿಗೆ ಬೀಜೋತ್ಪಾದನೆ ಸೇರಿ ಸಾವಯವ ಕೃಷಿಗೆ ಪೂರಕವಾದ ತರಬೇತಿಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಆಸಕ್ತರು ಪ್ರಯೋಜನ ಪಡೆದುಕೊಳ್ಳಬೇಕು.
    ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ, ಸಿದ್ದಗಿರಿ ಸಂಸ್ಥಾನಮಠ, ಕನ್ಹೇರಿ, ಮಹಾರಾಷ್ಟ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts