More

  ಪೇಮೆಂಟ್ ಗೇಟ್​ವೇ ಮೇಲೆ ಹದ್ದಿನ ಕಣ್ಣು; 1 ಲಕ್ಷ ರೂ. ವಹಿವಾಟಿನ ಮೇಲೂ ನಿಗಾ ವಹಿಸಲು ಲೀಡ್ ಬ್ಯಾಂಕ್ ಸಿಬ್ಬಂದಿ ವಿಶೇಷ ತಂಡ

  | ವಿಲಾಸ ಮೇಲಗಿರಿ, ಬೆಂಗಳೂರು.

  ಲೋಕಸಭೆ ಚುನಾವಣೆ ಮುಹೂರ್ತ ನಿಗದಿ ಬಳಿಕ ಮತದಾರರಿಗೆ ಆಮಿಷವೊಡ್ಡುವ ನಗದು, ಉಡುಗೊರೆಗಳ ಬೆನ್ನತ್ತಿ ಚುನಾವಣಾ ಆಯೋಗ ಭರ್ಜರಿ ಬೇಟೆ ಆರಂಭಿಸಿದೆ. ರಾಜಕಾರಣಿಗಳ ಜತೆಗೆ ಜನಸಾಮಾನ್ಯರಿಗೂ ನೀತಿ ಸಂಹಿತೆ ಬಿಸಿ ತಟ್ಟಿದ್ದು, ಬ್ಯಾಂಕ್​ನಲ್ಲಿ ನಡೆಯುವ ದೊಡ್ಡ ದೊಡ್ಡ ಮೊತ್ತದ ವ್ಯವಹಾರದ ಜತೆಗೆ ಪೇಮೆಂಟ್ ಗೇಟ್ ವೇ ಮೂಲಕ ನಡೆಯುವ 1 ಲಕ್ಷ ರೂ.ಗೂ ಮೇಲ್ಪಟ್ಟ ಹಣದ ವಹಿವಾಟಿನ ಮೇಲೂ ಕಣ್ಗಾವಲಿಡಲು ವಿಶೇಷ ತಂಡ ರಚನೆ ಆಗಿದೆ.

  ಮತದಾರರಿಗೆ ಆನ್​ಲೈನ್ ಮೂಲಕ ಆಮಿಷ ಒಡ್ಡಲಾಗು ತ್ತಿದೆ ಎಂಬ ದೂರಿನ ಅನ್ವಯ ಪೇಮೆಂಟ್ ಗೇಟ್​ವೇಗೆ ಗೇಟ್ ಹಾಕಲು ಆಯೋಗ ಕಟ್ಟುನಿಟ್ಟಿನ ಕ್ರಮಕೈಗೊಂಡಿದೆ. ಕಳೆದ ಚುನಾವಣೆಯಲ್ಲಿ ಆನ್​ಲೈನ್ ವಹಿವಾಟಿನ ಮೇಲೆ ಅಷ್ಟು ಬಿಗಿ ಕ್ರಮ ಕೈಗೊಂಡಿರಲಿಲ್ಲ.

  ಮತದಾರರ ಆಮಿಷಕ್ಕೆ ಡಿಜಿಟಲ್ ವ್ಯಾಲೆಟ್ ಬಳಕೆ!

  ಶಂಕಾಸ್ಪದ ವಹಿವಾಟಿನ ಮೇಲೆ ಕಣ್ಗಾವಲು

  ಹೇಗಿರಲಿದೆ ಕಣ್ಗಾವಲು ವ್ಯವಸ್ಥೆ?

  • 1 ಲಕ್ಷ ರೂ.ಗೂ ಮೇಲ್ಪಟ್ಟ ವಹಿವಾಟಿನ ಮೇಲೆ ಹೆಚ್ಚು ನಿಗಾ
  • ಆನ್​ಲೈನ್ ಪೇಮೆಂಟ್ ಕಣ್ಗಾವಲಿಡಲು ದೊಡ್ಡ ತಂಡ
  • ಪ್ರತಿ ಜಿಲ್ಲಾ ಕೇಂದ್ರಗಳಲ್ಲೂ ವಹಿವಾಟಿನ ಮೇಲೆ ಕಣ್ಣು
  •  ಲೀಡ್ ಬ್ಯಾಂಕ್​ನಿಂದ ಮಾಹಿತಿ ಪಡೆಯುವ ವ್ಯವಸ್ಥೆ
  • ತಾಂತ್ರಿಕ ಸಿಬ್ಬಂದಿ, ಅಂಕಿ ಅಂಶ ವಿಶ್ಲೇಷಕರ ನೇಮಕ
  • ವರ್ಗಾವಣೆ ಮಾದರಿ ಪರೀಕ್ಷೆಗೆ ನುರಿತ ತಂಡ ನೇಮಕ
  • ಚುನಾವಣೆಗೆ ಚಲಾವಣೆ ಆಗುತ್ತದೆಯೇ ಎಂಬ ತನಿಖೆ
  • ಸ್ಟ್ಯಾಂಡರ್ಡ್ ಅಪರೇಟಿಂಗ್ ಪ್ರೊಸೀಸರ್ ಡೇಟಾ ಸಂಗ್ರಹ
  • ಹಣ ವರ್ಗಾವಣೆ ಬಗ್ಗೆ ಅನುಮಾನ ಬಂದರೆ ನೋಟಿಸ್
  • ಖಾತೆದಾರ 5, 10, 20 ಜನರಿಗೆ ಹಣ ಹಾಕಿದ್ದರೆ ತನಿಖೆ

  ಯಾರಿಗೆಲ್ಲಾ ಭಯ ಬೇಡ?

  • ನಿಮ್ಮ ಖಾತೆಗೆ ವೇತನ ಜಮೆ ಆದರೆ ಭಯ ಬೇಡ
  • ನಿಯಮಿತವಾಗಿ ಬರುವ ಹಣಕ್ಕೆ ಆತಂಕ ಬೇಕಿಲ್ಲ
  • ಹಳೇ ಸಾಲ ಖಾತೆಗೆ ಜಮೆ ಆದರೂ ಹೆದರಬೇಕಿಲ್ಲ
  • ಸಾಲ ನಿರೂಪಿಸುವ ದಾಖಲೆಗಳಿದ್ದರೆ ಏನೂ ಆಗಲ್ಲ

  ಪರಿಶೀಲನೆ ಪ್ರಕ್ರಿಯೆ ಹೇಗಿರುತ್ತದೆ?

  • ಆಯೋಗಕ್ಕೆ ನಿತ್ಯ ಮಾಹಿತಿ ನೀಡಲಿರುವ ಲೀಡ್ ಬ್ಯಾಂಕ್
  • ಇಡೀ ದಿನದ ಆನ್​ಲೈನ್ ವಹಿವಾಟಿನ ಮಾಹಿತಿ ಸಲ್ಲಿಕೆ
  • ನಿರ್ದಿಷ್ಟ ನಮೂನೆಯಲ್ಲಿ ಮಾಹಿತಿ ಭರ್ತಿ ಮಾಡಬೇಕು
  • ಆಯೋಗದಲ್ಲಿ ನಿಯುಕ್ತಿಗೊಂಡಿರುವವರಿಂದ ಪರಾಮರ್ಶೆ

  ಯಾರೆಲ್ಲ ವ್ಯಾಪ್ತಿಗೆ?:

  ಚುನಾವಣಾ ಆಯೋಗ ರಚಿಸಿರುವ ಪ್ರತ್ಯೇಕ ತಂಡ ಫೋನ್ ಪೇ, ಗೂಗಲ್ ಪೇ, ಪೇಟಿಎಂ ಸಂಸ್ಥೆಗಳ ಜತೆ ಸಭೆ ನಡೆಸಿ ಪ್ರತಿ ದಿನದ ವಹಿವಾಟಿನ ವರದಿ ಪಡೆಯುತ್ತಿದೆ. ನಿರ್ದಿಷ್ಟ ಮೊತ್ತದ ಹಣ ಹೆಚ್ಚಿನ ಸಂಖ್ಯೆಯ ಜನರಿಗೆ ರವಾನೆ ಮಾಡುತ್ತಿದ್ದರೆ ಅಂತಹವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ.

  ಎನ್​ಪಿಸಿಐ ನಿಗಾ:

  ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ನ್ಯಾಷನಲ್ ಪೇಮೆಂಟ್ ಕಾಪೋರೇಷನ್ ಆಫ್ ಇಂಡಿಯಾ (ಎನ್​ಪಿಸಿಐ) ಈ ಬಾರಿ ಆನ್ ಲೈನ್ ವಹಿವಾಟಿನ ಮೇಲೆ ದೃಷ್ಟಿ ಹರಿಸಿದೆ. ಎನ್​ಪಿಸಿಐ ಜತೆ ಆಯೋಗ ಸಭೆ ಕೂಡ ನಡೆಸಿ ರ್ಚಚಿಸಿದೆ. ಕೇಂದ್ರ ಹಣಕಾಸು ಸಚಿವರು ಕೂಡ ಈ ಸಂಸ್ಥೆಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ. ಹಾಗಾಗಿ ಈ ಬಾರಿ ಆನ್​ಲೈನ್ ವಹಿವಾಟಿನ ಮೇಲೆ ಹೆಚ್ಚು ಜಾಗ್ರತೆ ವಹಿಸಲಾಗುತ್ತದೆ.

  ಆನ್​ಲೈನ್ ವಹಿವಾಟಿಗೆ ಸಂಬಂಧಿಸಿ ಈ ಮೊದಲು ಜಿಲ್ಲಾ ಮಟ್ಟದಲ್ಲಿ ತಾಂತ್ರಿಕ ಸಿಬ್ಬಂದಿ, ಅನಲಿಸ್ಟ್ ನೇಮಿಸಿ ನಿಗಾ ಇಟ್ಟಿರಲಿಲ್ಲ. ಈ ಬಾರಿ ಆ ಪ್ರಯತ್ನ ಮಾಡಲಾಗಿದೆ.

  | ವೆಂಕಟೇಶ್ ಕುಮಾರ್ ಅಪರ ಮುಖ್ಯ ಚುನಾವಣಾಧಿಕಾರಿ

  ದೊಡ್ಡ ಮೊತ್ತದ ಸಂಶಯಾಸ್ಪದ ವಹಿವಾಟನ್ನು ಗುರುತಿಸಿ ಕೆಲವೇ ಕೆಲವು ಪ್ರಕರಣಗಳಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗಿತ್ತು. ಆದರೆ ಈ ಬಾರಿ ಆನ್​ಲೈನ್ ಪೇಮೆಂಟ್ ಮೇಲೆ ಕಣ್ಗಾವಲಿರಿಸಲು ದೊಡ್ಡ ತಂಡ ನಿಯುಕ್ತಿ ಮಾಡಲಾಗಿದೆ. ಒಂದು ಲಕ್ಷ ರೂ.ಗಿಂತ ಹೆಚ್ಚಿನ ವಹಿವಾಟಿನ ಮೇಲೆ ಕಣ್ಣಿಡಲಾಗಿದೆ. ಸಂಶಯಾಸ್ಪದ ವಹಿವಾಟನ್ನೇ ಕೇಂದ್ರೀಕರಿಸಿ ಪರಿಶೀಲನೆ ನಡೆಸಲಾಗುತ್ತದೆ. ಚುನಾವಣೆ ಸಲುವಾಗಿ ಹಣ ಚಲಾವಣೆ ಆಗುತ್ತದೆಯೇ ಎಂಬುದರ ಬಗ್ಗೆ ಸ್ಟ್ಯಾಂಡರ್ಡ್ ಅಪರೇಟಿಂಗ್ ಪ್ರೊಸೀಸರ್ ಮೂಲಕ ಡೇಟಾ ಸಂಗ್ರಹಿಸಲಾಗುತ್ತದೆ. ಹಣ ವರ್ಗಾವಣೆ ಬಗ್ಗೆ ಅನುಮಾನ ಬಂದರೆ ವಹಿವಾಟುದಾರರಿಗೆ ನೋಟಿಸ್ ನೀಡಿ ವಿಚಾರಣೆಗೆ ಒಳಪಡಿಸಲಾಗುತ್ತದೆ.

  ಆಮಿಷಕ್ಕೆ ಡಿಜಿ ವ್ಯಾಲೆಟ್ ಬಳಕೆ: ಡಿಜಿಟಲ್ ವ್ಯಾಲೆಟ್ ಬಳಸಿ ಮತದಾರರನ್ನು ಸೆಳೆಯುವ ಪ್ರಯತ್ನದ ಬಗ್ಗೆ ಆಯೋಗಕ್ಕೂ ಈ ಬಾರಿ ಹೆಚ್ಚಿನ ದೂರುಗಳು ಬರುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿದೆ. ಉಡುಗೊರೆಗಳಿಗಿಂತ ಆನ್​ಲೈನ್ ಪೇಮೆಂಟ್ ಸುಲಭದ ಮಾರ್ಗವಾಗಿ ರಾಜಕಾರಣಿಗಳಿಗೆ ಕಂಡಿದೆ. ಹಾಗಾಗಿ ಅನೇಕ ರಾಜಕಾರಣಿಗಳು ಈ ಮಾರ್ಗದ ಮೂಲಕ ಮತದಾರರಿಗೆ ಆಮಿಷ ಒಡ್ಡುವ ಸಾಧ್ಯತೆ ಹೆಚ್ಚಿದೆ. ಈ ಕಾರಣದಿಂದ ಚುನಾವಣಾ ಆಯೋಗ ಆನ್​ಲೈನ್ ವಹಿವಾಟಿನ ಮೇಲೆ ಕಣ್ಗಾವಲಿರಿಸಿದೆ.

  ಶ್ರೀಲೀಲಾ ಜತೆ ನಟಿಸಲು ಸ್ಟಾರ್​ ನಟರಿಗೆ ಚಿಂತೆ! ಇದು ಮುಂದುವರಿದ್ರೆ ‘ಕಿಸ್’​ ಬೆಡಗಿಗೆ ಸಂಕಷ್ಟ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts