More

    ಇ-ಖಾತಾ ಅದಾಲತ್‌ಗೆ ಸಮ್ಮತಿ ; ಜನರ ಬಳಿಗೆ ಪಟ್ಟಣ ಪಂಚಾಯಿತಿ ಆಡಳಿತ

    ಗುಡಿಬಂಡೆ: ಆಸ್ತಿಗಳ ಇ-ಖಾತಾಗೆ ಅದಾಲತ್ ನಡೆಸಲು ಹಾಗೂ ಗ್ರಾಮ ಠಾಣಾ ಜಾಗಗಳ ರಕ್ಷಣೆಗೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ಕ್ರಮಗಳಿಗೆ ಪಟ್ಟಣ ಪಂಚಾಯಿತಿಯ ಬಷೀರಾ ರಿಜ್ವಾನ್ ಅಧ್ಯಕ್ಷತೆಯಲ್ಲಿ ಗುರುವಾರ ಏರ್ಪಡಿಸಿದ್ದ ಸಾಮಾನ್ಯ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

    ಆಸ್ತಿಗಳ ಇ-ಖಾತಾ ಮಾಡಿಕೊಡಲು ವಾರ್ಡ್‌ಗಳಲ್ಲಿ ಅದಾಲತ್ ನಡೆಸಲು ತೀರ್ಮಾನಿಸಲಾಗಿದ್ದು ಈ ಕುರಿತು ಮೊದಲೇ ಕರಪತ್ರಗಳ ಮೂಲಕ ಜನರಿಗೆ ಮಾಹಿತಿ ನೀಡಿ, ಅವರ ಬಳಿಗೇ ಆಡಳಿತವೆ ತೆರಳಿ ದಾಖಲೆ ಪರಿಶೀಲಿಸಿ 15 ದಿನಗಳೊಳಗೆ ಖಾತಾ ನೀಡುವ ಯೋಜನೆ ರೂಪಿಸಲಾಗಿದೆ ಎಂದು ಪಪಂ ಉಪಾಧ್ಯಕ್ಷ ಜಿ.ಎಂ.ಅನೀಲ್ ಕುಮಾರ್ ತಿಳಿಸಿದರು.

    ಗ್ರಾಮ ಠಾಣಾ ಸ್ಥಳ ಪಪಂ ವಶಕ್ಕೆ: ಪಟ್ಟಣದ ಸುರಸದ್ಮಗಿರಿ ಬೆಟ್ಟದ ತಪ್ಪಲಿನ ಗ್ರಾಮ ಠಾಣಾ ಜಾಗವನ್ನು ಖಾಸಗಿ ವ್ಯಕ್ತಿಗಳು ಆಕ್ರಮಿಸಿಕೊಂಡು ಸೈಟ್‌ಗಳನ್ನು ಮಾಡಿ ಮಾರಾಟ ಮಾಡಿದ್ದಾರೆ. ಕೂಡಲೆ ಪಪಂ ಅಧಿಕಾರಿಗಳು ಜಾಗವನ್ನು ಗುರುತಿಸಿ ಕಾಂಪೌಂಡ್ ಹಾಕಿಸಬೇಕೆಂದು ಅನೀಲ್ ಕುಮಾರ್ ಸೂಚನೆ ನೀಡಿದರು.

    10ನೇ ವಾರ್ಡ್‌ನ ವ್ಯಕ್ತಿಯೊಬ್ಬರಿಗೆ ಹಕ್ಕುಪತ್ರ ವಿತರಣೆ ಮಾಡಿದ್ದು ಅವರ ಹುಟ್ಟಿದ ದಿನಾಂಕ ಹಾಗೂ ಹಕ್ಕು ಪತ್ರ ವಿತರಣೆ ಮಾಡಿದ ದಿನಾಂಕಕ್ಕೆ ಹೋಲಿಕೆ ಮಾಡಿದರೆ ಹಕ್ಕು ಪತ್ರ ಪಡೆದವರಿಗೆ ಕೇವಲ 6 ವರ್ಷವಿದೆ. ಈ ವಿಚಾರದಲ್ಲಿ ಅವ್ಯವಹಾರ ನಡೆದಿದ್ದು ಕೂಡಲೆ ಸರಿಪಡಿಸಬೇಕು ಎಂದು 9ನೇ ವಾರ್ಡ್‌ನ ಸದಸ್ಯೆ ವೀಣಾ ನಿತಿನ್ ಒತ್ತಾಯಿಸಿದರು ನವೆಂಬರ್ ಮಾಹೆಯ ಜಮಾ ಖರ್ಚುಗಳ ಮಂಡನೆ ಮಾಡಲಾಯಿತು.

    ಸದಸ್ಯರಾದ ಇಸ್ಮಾಯಿಲ್, ಆಜಾದ್‌ಬಾಬು, ಬಷೀರ್ ಅಹಮದ್, ಜಿ.ಗಂಗರಾಜು, ಎ.ವಿಕಾಸ್, ರಾಜೇಶ್, ಅನೂಷ, ನಗೀನ್‌ತಾಜ್, ಕೆ.ಎನ್.ಮಂಜುಳಾ, ಆರೋಗ್ಯ ನಿರೀಕ್ಷಕ ಶಿವಣ್ಣ, ಸಿಬ್ಬಂದಿ ಬಾಲಪ್ಪ, ಜಯರಾಮ್, ಶ್ರೀವಾಸ್, ಶಂಕರಪ್ಪ, ಹುಸ್ಮಾನ್‌ಬೇಗ್, ಶಶಿಕಳಾ, ಭರತ್, ಲೋಕೇಶ್, ಮೂರ್ತಿ, ಗಂಗಾಧರಪ್ಪ ಸೇರಿ ಪಪಂ ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts