More

    ವೇತನವೆ ಸಿಗದೆ ಸ್ವಚ್ಛತಾ ಸೇನಾನಿಗಳು ಪರದಾಟ ; ಸತಾಯಿಸುತ್ತಿರುವ ಗುಡಿಬಂಡೆ ಪಟ್ಟಣ ಪಂಚಾಯಿತಿ

    ಗುಡಿಬಂಡೆ: ನೈರ್ಮಲ್ಯ ಕಾಪಾಡುವ ಮೂಲಕ ಪಟ್ಟಣದ ಸ್ವಚ್ಛತೆಗೆ ಶ್ರಮಿಸುತ್ತಿರುವ ಹೊರ ಗುತ್ತಿಗೆಯಾಧಾರಿತ ಪೌರ ಕಾರ್ಮಿಕರು ಕಳೆದ ನಾಲ್ಕೈದು ತಿಂಗಳಿಂದ ವೇತನ ಸಿಗದೆ ಜೀವನ ನಿರ್ವಹಣೆಗೆ ಪರದಾಡುತ್ತಿದ್ದಾರೆ. ಆದರೆ ಪಟ್ಟಣ ಪಂಚಾಯಿತಿ ಮಾತ್ರ ಇದ್ಯಾವುದಕ್ಕೂ ಸಂಬಂಧವೇ ಇಲ್ಲದಂತೆ ಮೌನವಾಗಿದೆ.

    ಕರೊನಾ ಸೋಂಕಿನ ಸಂದರ್ಭದಲ್ಲೂ ಜೀವದ ಹಂಗು ತೊರೆದು ಕಾರ್ಯ ನಿರ್ವಹಿಸುತ್ತ ವಾರಿಯರ್ಸ್ ಪಟ್ಟ ಪಡೆದವರ ಸಮಸ್ಯೆಯ ಬಗ್ಗೆ ಜನಪ್ರತಿನಿಧಿಗಳು ಮತ್ತು ಹಿರಿಯ ಅಧಿಕಾರಿಗಳು ಚಕಾರ ಎತ್ತದೆ ಕೇವಲ ಸಭೆ ಸಮಾರಂಭಗಳಲ್ಲಿ ಪೌರ ಕಾರ್ಮಿಕರನ್ನು ಹೊಗಳುವುದಕ್ಕೆ ಸೀಮಿತರಾಗಿದ್ದು, ಸಮಸ್ಯೆ ಕೇಳೋರಿಲ್ಲದಾಗಿದೆ.

    ಸಮಸ್ಯೆಗೆ ಕಾರಣ ಏನು?: ಪಟ್ಟಣ ಪಂಚಾಯಿತಿಯಲ್ಲಿ ಕೆಲಸ ಮಾಡುವ ಪೌರ ಕಾರ್ಮಿಕರನ್ನು ಹೊರ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿದೆ. ಅವರಿಗೆ ವೇತನವನ್ನು ಪಪಂ ವ್ಯಾಪ್ತಿಯಲ್ಲಿ ಸಂಗ್ರಹವಾದ ಕಂದಾಯ ಹಣದಿಂದ ನೀಡಬೇಕು. ಆದರೆ, ಕರೊನಾ ಸೇರಿ ನಾನಾ ಕಾರಣಗಳ ಹಿನ್ನೆಲೆಯಲ್ಲಿ ಆರ್ಥಿಕ ಸಂಪನ್ಮೂಲ ಸಂಗ್ರಹವಾಗದ ಕಾರಣ ಸರಿಯಾದ ಸಮಯಕ್ಕೆ ವೇತನ ನೀಡಲು ಸಾಧ್ಯವಾಗಿಲ್ಲ ಎನ್ನಲಾಗುತ್ತಿದೆ.

    ಇಂದಿನ ’ಕ್ಯಾಶ್ ಆ್ಯಂಡ್ ಕ್ಯಾರಿ’ ವ್ಯವಸ್ಥೆಯಲ್ಲಿ ತಿಂಗಳ ವೇತನ ತಡವಾದರೆ ಕುಟುಂಬ ನಡೆಸುವುದೇ ಕಷ್ಟ. ಇದರ ಜತೆಗೆ ಕರೊನಾ ಸಂಕಷ್ಟ ಬೇರೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ನಿಯಮಾನುಸಾರ ಸಮರ್ಪಕವಾಗಿ ವೇತನ ನೀಡಿದರೆ ಅನುಕೂಲಕರ. ಆದರೆ, ಇಲ್ಲಿ ನಾಲ್ಕೈದು ತಿಂಗಳಿಂದ ಸತಾಯಿಸಲಾಗುತ್ತಿದೆ.

    ಸೇವಾ ಭದ್ರತೆ ಇಲ್ಲದೇ ಅತಂತ್ರ: ವಾಟರ್‌ಪಂಪ್ ಆಪರೇಟರ್, ಕಂಪ್ಯೂಟರ್ ಆಪರೇಟರ್, ದ್ವಿತೀಯ ದರ್ಜೆ ಸಹಾಯಕರು, ಬಿಲ್ ಕಲೆಕ್ಟರ್, ಹೆಲ್ಪರ್, ಸ್ವಚ್ಛತಾ ಕಾರ್ಮಿಕರು, ವಾಹನ ಚಾಲಕರು ಸೇರಿ ಪಟ್ಟಣ ಪಂಚಾಯಿತಿಯ ನೌಕರರಿಗೆ ವೇತನ ಸಿಕ್ಕಿಲ್ಲ. ವೇತನ ಮತ್ತು ಸೇವಾ ಭದ್ರತೆ ಇಲ್ಲದೇ ಅತಂತ್ರವಾಗಿದ್ದಾರೆ. ಇದರ ನಡುವೆ ವೇತನದಲ್ಲಿ ಕಡಿತಗೊಳಿಸಿದರೂ ನೌಕರರ ವಿಮೆ, ಭವಿಷ್ಯ ನಿಧಿ ವಂತಿಗೆ ಸೌಲಭ್ಯವೂ ಸಿಗುತ್ತಿಲ್ಲ.

    ಕರೊನಾ ಸಂಕಷ್ಟದ ಸಂದರ್ಭದಲ್ಲಿ ಪೌರ ಕಾರ್ಮಿಕರು ಜೀವಭಯ ತೊರೆದು ನೈರ್ಮಲ್ಯ ಕಾಪಾಡುತ್ತಿದ್ದಾರೆ. ಇದನ್ನರಿತು ಸಮರ್ಪಕ ವೇತನ ನೀಡಬೇಕು.
    ಆಶಾ ಜಯಪ್ಪ, ಪಪಂ ಮಾಜಿ ಸದಸ್ಯೆ, ಗುಡಿಬಂಡೆ

    ಈ ಹಿಂದೆ ಎಸ್‌ಎಫ್‌ಸಿ ಅನುದಾನದಡಿ ವೇತನ ಪಾವತಿಯಾಗುತ್ತಿತ್ತು. ಪ್ರಸ್ತುತ ಇದನ್ನು ಸರ್ಕಾರ ನಿಲ್ಲಿಸಿದೆ. ಮತ್ತೊಂದೆಡೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸಮರ್ಪಕವಾಗಿ ಕಂದಾಯ ಸಂಗ್ರಹವಾಗಿಲ್ಲ. ಇದರಿಂದ ಪೌರ ಕಾರ್ಮಿಕರಿಗೆ ವೇತನ ನೀಡಲು ವಿಳಂಬವಾಗಿದೆ. ಈಗಾಗಲೇ ಒಂದು ತಿಂಗಳ ವೇತನ ಬಿಡುಗಡೆಯಾಗಿದೆ. ತ್ವರಿತವಾಗಿ ಬಾಕಿ ವೇತನ ನೀಡಲಾಗುವುದು.
    ರಾಜಶೇಖರ್, ಮುಖ್ಯಾಧಿಕಾರಿ, ಗುಡಿಬಂಡೆ ಪಟ್ಟಣ ಪಂಚಾಯಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts