More

    ನನಸಾದ ಬಹುವರ್ಷದ ಕನಸು: 185 ಕೋಟಿ ರೂ ವೆಚ್ಚದ ದುದ್ದ ಏತ ನೀರಾವರಿ ಯೋಜನೆ ಲೋಕಾರ್ಪಣೆ

    ಮಂಡ್ಯ: ಮಳೆಯಾಶ್ರಿತ ಪ್ರದೇಶವಾಗಿರುವ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ದುದ್ದ ಹೋಬಳಿಯ ಜನರ ಬಹುದಿನದ ಕನಸು ಕೊನೆಗೂ ನನಸಾಗಿದೆ. 185 ಕೋಟಿ ರೂ ವೆಚ್ಚದಲ್ಲಿ 54 ಕೆರೆ ಕಟ್ಟೆ ತುಂಬಿಸುವ ಏತ ನೀರಾವರಿ ಯೋಜನೆ ಶುಕ್ರವಾರ ಲೋಕಾರ್ಪಣೆಗೊಂಡಿದೆ. ಈ ಮೂಲಕ ಅಂತರ್ಜಲದ ವೃದ್ಧಿಗೆ ನಾಂದಿಯಾಡಲಾಯಿತು.
    ತಾಲೂಕಿನ ಕಾಳೇನಹಳ್ಳಿ ಗ್ರಾಮದ ಮಹದೇಶ್ವರಸ್ವಾಮಿ ದೇವಸ್ಥಾನದ ಬಳಿ ಯೋಜನೆಯನ್ನು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಉದ್ಘಾಟಿಸಿದರು. ಶ್ರೀರಂಗಪಟ್ಟಣ ತಾಲೂಕು ಶ್ರೀನಿವಾಸ ಅಗ್ರಹಾರ ಬಳಿಯ ಲೋಕಪಾವನಿ ನದಿಯಿಂದ 19 ಕ್ಯೂಸೆಕ್ ನೀರನ್ನು ಪಂಪ್ ಮಾಡಿ ದುದ್ದ ಭಾಗಕ್ಕೆ ಹರಿಸುವ ಯೋಜನೆ ಇದಾಗಿದೆ. ಮೊದಲ ಹಂತದಲ್ಲಿ 20 ಕೆರೆ ಮತ್ತು ಎರಡನೇ ಹಂತದಲ್ಲಿ 34 ಕೆರೆಗೆ ನೀರು ತುಂಬಿಸಿ ಅಂತರ್ಜಲ ಅಭಿವೃದ್ಧಿ ಮತ್ತು ಸುತ್ತಮುತ್ತಲಿನ ಹಳ್ಳಿಗಳಿಗೆ ನೀರನ್ನು ಒದಗಿಸಲಾಗುವುದು. ಇದೇ ನೀರನ್ನು ಬಳಸಿಕೊಂಡು ಹೆಚ್ಚುವರಿಯಾಗಿ ಇನ್ನೂ 24 ಕೆರೆಗಳಿಗೆ ಸಂಪರ್ಕ ಕಲ್ಪಿಸಲು ಯೋಜಿಸಲಾಗಿದೆ. ಶ್ರೀರಂಗಪಟ್ಟಣ ವ್ಯಾಪ್ತಿಯಲ್ಲಿ 150 ಮೀ ಉದ್ದಕ್ಕೆ ಏರು ಕೊಳವೆ ಮಾರ್ಗ ನಿರ್ಮಿಸಿ ಯೋಜನೆ ಮಾಡಲಾಗಿದೆ.
    ಈ ವೇಳೆ ಮಾತನಾಡಿದ ಸಚಿವರು, ಗೆಲ್ಲುವವರೆಗೂ ಬೇರೆ ಬೇರೆ ಪಕ್ಷಗಳು. ಗೆದ್ದು ಬಂದ ಮೇಲೆ ನಮ್ಮೆಲ್ಲರ ಉದ್ದೇಶಗಳು ರಾಜ್ಯದ ಅಭಿವೃದ್ಧಿ ಕಡೆಗೆ ಇರುತ್ತದೆ. ನಾಡಿನ ಪ್ರತಿಯೊಬ್ಬರಿಗೂ ಶಕ್ತಿ ನೀಡುವ ಮೂಲಕ ಅಭಿವೃದ್ಧಿಯತ್ತ ಕೊಂಡೊಯ್ಯಬೇಕು. ರಾಜಕಾರಣ ಮಾಡುವುದು ಮೋಜಿಗಾಗಲ್ಲ. ರಾಜಕಾರಣ ಮಾಡಲು ಬರುವವರು ನಾನು ಏಕೆ ಬಂದಿದ್ದೇನೆ. ಏನು ಮಾಡಲು ಬಂದಿದ್ದೇನೆ. ಜನರಿಗೆ ನಾನೇನು ಕೊಡಬಲ್ಲೇ ಎಂಬುದರ ಬಗ್ಗೆ ಚಿಂತನೆ ಮಾಡಿದರೆ ಇಂತಹ ಅಭಿವೃದ್ಧಿ ಕಾರ್ಯ ಮಾಡಲು ಸಾಧ್ಯವಾಗಲಿದೆ ಎಂದು ಹೇಳಿದರು.
    ಮಂತ್ರಿಯಾಗುವುದು ಹೆಚ್ಚಲ್ಲ. ಅಧಿಕಾರ ಸಿಕ್ಕಾಗ ಕ್ಷೇತ್ರದ ಅಭಿವೃದ್ಧಿ ಮಾಡಬೇಕು. ಅಭಿವೃದ್ಧಿ ವಿಚಾರದಲ್ಲಿ ಶಾಸಕ ಸಿ.ಎಸ್.ಪುಟ್ಟರಾಜು ಅವರ ಕಾರ್ಯ ಶ್ಲಾಘನೀಯ. ಮಂಡ್ಯ ಸಂಪೂರ್ಣ ನೀರಾವರಿ ಜಿಲ್ಲೆ ಎಂದುಕೊಂಡಿದ್ದೆ. ನಾನು ಸಣ್ಣ ನೀರಾವರಿ ಸಚಿವನಾಗಿದ್ದಾಗಲೇ ಇನ್ನೂ ಇಲ್ಲಿಯೂ ನೀರಾವರಿ ವಂಚಿತ ಪ್ರದೇಶಗಳಿವೆ. ಗ್ರಾಮ, ತಾಲೂಕು ಇದೆ ಎಂಬುದು ಗೊತ್ತಾಯಿತು ಎಂದ ಅವರು, ಪುಟ್ಟರಾಜು ಅವರು ಸಣ್ಣ ನೀರಾವರಿ ಸಚಿವರಾಗಿದ್ದಾಗ ನೀರಾವರಿ ವಂಚಿತ ಪ್ರದೇಶಗಳನ್ನು ಗುರುತಿಸಿ ಅನುದಾನ ತಂದು ಅಭಿವೃದ್ಧಿಪಡಿಸಿದ್ದಾರೆ. ಸಣ್ಣ ನೀರಾವರಿ ಇಲಾಖೆಯ ಅರ್ಧ ಅನುದಾನ ಮೇಲುಕೋಟೆ ಕ್ಷೇತ್ರಕ್ಕೆ ತಂದಿದ್ದಾರೆ. ಮಂತ್ರಿಯಾಗುವುದಕ್ಕಿಂತ ಮುಂಚೆ ಇಲಾಖೆಯನ್ನು ಪ್ರಶ್ನಿಸಿದ್ದೆ. ಏನು ಒಂದೇ ತಾಲೂಕಿಗೆ ಸಣ್ಣ ನೀರಾವರಿ ಇಲಾಖೆ ಕೆಲಸ ಮಾಡುತ್ತಿದೆ ಎಂದು, ನಂತರ ನಾನೇ ಸಚಿವನಾಗಿ ಬಂದು ನೋಡಿದಾಗ ಪುಟ್ಟರಾಜು ಅವರ ಕಾರ್ಯ ಕಣ್ಣ ಮುಂದೆ ಇತ್ತು ಎಂದು ಶ್ಲಾಘಿಸಿದರು.
    ಸಣ್ಣ ನೀರಾವರಿ ಇಲಾಖೆಯ 740 ಕೋಟಿ ರೂಗಳನ್ನು ಮಂಡ್ಯ ಜಿಲ್ಲೆಗೆ ಖರ್ಚು ಮಾಡಲಾಗಿದೆ. ಸಂಸದರಾಗಿದ್ದಾಗಲೂ ಸಿಎಸ್‌ಪಿ ಕೆಲಸ ಮಾಡಿದ್ದರು. ಇಂತಹ ಯೋಜನೆಗಳನ್ನು ಜಾರಿಗೊಳಿಸಲು ರೈತರು ಸಹಕಾರ ನೀಡಬೇಕು. ಮೇಲುಕೋಟೆ, ಕೆ.ಆರ್.ಪೇಟೆ ತಾಲೂಕಲ್ಲೂ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಒಳ್ಳೆಯ ಜನಪ್ರತಿನಿಧಿಗಳು ಕ್ಷೇತ್ರಕ್ಕೆ ಸಿಗುವುದು ಕಷ್ಟ. ನಿಮಗೆ ಒಳ್ಳೆಯ ಜನಪ್ರತಿನಿಧಿ ಸಿಕ್ಕಿದ್ದಾರೆ. ಮೇಲುಕೋಟೆ ಕ್ಷೇತ್ರಕ್ಕೆ ಇನ್ನಷ್ಟು ಯೋಜನೆಗಳನ್ನು ಮಾಡಲು ಪ್ರಸ್ತಾವನೆ ಸಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಅದನ್ನು ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.
    ಶಾಸಕ ಸಿ.ಎಸ್.ಪುಟ್ಟರಾಜು ಮಾತನಾಡಿ, ದುದ್ದ ಭಾಗದ ಬಹುದಿನಗಳ ಬೇಡಿಕೆ ಈಡೇರಿದೆ. ನೀರಾವರಿ ವಂಚಿತ ಪ್ರದೇಶಕ್ಕೆ ನೀರನ್ನು ಒದಗಿಸಲಾಗಿದೆ. ಈ ಯೋಜನೆಯಲ್ಲಿಯೇ ಪೈಪ್‌ಲೈನ್ ಅಳವಡಿಸುವ ಮೂಲಕ ಮತ್ತಷ್ಟು ಕೆರೆಗಳನ್ನು ತುಂಬಿಸಲಾಗುವುದು. ಆದರೆ ಕೆಲವರು ನಮ್ಮ ಯೋಜನೆ ಎಂದು ರಾಜಕಾರಣ ಮಾಡುತ್ತಿದ್ದಾರೆ. ನಾನು ಇಲಾಖೆಯ ಸಚಿವನಾಗಿ ಸಚಿವ ಸಂಪುಟದಲ್ಲಿ ಯೋಜನೆಗೆ ಅನುಮೋದನೆ ಮಾಡಿಸಿಕೊಂಡು ಬಂದಿದ್ದೇನೆ. ಆಗ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರು ಯೋಜನೆ ಜಾರಿಗೊಳಿಸಲು ಅನುಮೋದನೆ ನೀಡಿದರು ಎಂದರು.
    ಬದಲಾದ ರಾಜಕಾರಣದಲ್ಲಿ ಸರ್ಕಾರ ಬದಲಾದ ಹಿನ್ನೆಲೆಯಲ್ಲಿ ಎಲ್ಲ ಕೆಲಸಗಳನ್ನು ಸ್ಥಗಿತಗೊಳಿಸಿದ್ದರು. ಆದರೆ ಸಚಿವ ಮಾಧುಸ್ವಾಮಿ ಅವರು ನನ್ನ ಕ್ಷೇತ್ರದ ಎಲ್ಲ ಯೋಜನೆಗಳಿಗೂ ಯಾವುದೇ ತಡೆ ನೀಡದೆ ಅನುಷ್ಠಾನಗೊಳಿಸಲು ಸಹಕರಿಸಿದರು. ಯೋಜನೆಗೆ ಬೇಕಾದ 185 ಕೋಟಿ ರೂ ಬಿಡುಗಡೆ ಮಾಡುವ ಮೂಲಕ ಸಹಕಾರ ನೀಡಿದರು. ಯೋಜನೆ ಒಂದು ವರ್ಷ ಮುಂಚೆಯೇ ಅನುಷ್ಠಾನವಾಗಬೇಕಾಗಿತ್ತು. ಕೆಲವು ಹಲವು ಸಮಸ್ಯೆ ಎದುರಾದವು. ಅಂತಿಮವಾಗಿ ಜವಾಬ್ದಾರಿ ನಿರ್ವಹಿಸಿ ಯೋಜನೆ ಇಂದು ಸಂಪೂರ್ಣಗೊಂಡಿದ್ದು, ಎಲ್ಲ ಕೆರೆಗಳಿಗೂ ನೀರು ಹರಿಯುವಂತಾಗಿದೆ ಎಂದು ತಿಳಿಸಿದರು.
    ಪಾಂಡವಪುರ ಉಪವಿಭಾಗಾಧಿಕಾರಿ ನಂದೀಶ್, ತಹಸೀಲ್ದಾರ್ ಕೆ.ಸಿ.ಸೌಮ್ಯಾ, ಮನ್‌ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರು, ಜಿಪಂ ಮಾಜಿ ಸದಸ್ಯ ಸಿ.ಅಶೋಕ್, ಮಾಜಿ ಶಾಸಕ ಜಿ.ಬಿ.ಶಿವಕುಮಾರ್, ಸುಂಕಾತೊಣ್ಣೂರು ಗ್ರಾಪಂ ಅಧ್ಯಕ್ಷ ಮಹೇಶ್, ಶಿವಣ್ಣ, ಮಾದೇಗೌಡ, ಮೃತ್ಯುಂಜಯಸ್ವಾಮಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts