ಕಣ್ಣೀರಿಟ್ಟ ಅನುಶ್ರೀಗೆ 'ನಿಮ್ಮ ಜೊತೆ ನಾವಿದ್ದೇವೆ, ಧೈರ್ಯವಾಗಿರಿ' ಎಂದ ಮತ್ತೊಬ್ಬ ನಟಿ

Anushree
Published on

ಬೆಂಗಳೂರು: ನಟಿ ಮತ್ತು ಖ್ಯಾತ ನಿರೂಪಕಿ ಅನುಶ್ರೀ ಇತ್ತೀಚಿಗಷ್ಟೇ ಡ್ರಗ್ಸ್​ ಕೇಸ್​ನಲ್ಲಿ ಸಿಸಿಬಿ ವಿಚಾರಣೆ ಎದುರಿಸಿ ಬಂದಿದ್ದಾರೆ. ಈ ಕುರಿತು ಭಾವುಕರಾಗಿ ಮಾತನಾಡಿದ ಅನುಶ್ರೀ, 2020ರ ಸೆ.24 ನನ್ನ ಜೀವನದ ಅತಿ ದೊಡ್ಡ ದುಃಖದ ದಿನ. 12 ವರ್ಷದ ಹಿಂದೆ ರಿಯಾಲಿಟಿ ಶೋ ವಿನ್ ಆಗಿದ್ದೇ ಮುಂದೊಂದು ದಿನ ನನ್ನ ಪಾಲಿಗೆ ಮುಳುವಾಗುತ್ತೆ ಎಂದು ನಾನು ಅಂದು ಕೊಂಡಿರಲಿಲ್ಲ. ಸಿಸಿಬಿ ನೋಟಿಸ್ ಕೊಟ್ಟ ಮಾತ್ರಕ್ಕೆ ನಾನು ಅಪರಾಧಿ ಅಥವಾ ಆರೋಪಿಯಂತಲ್ಲ. ಈ ವಿಚಾರವಾಗಿ ನನ್ನನ್ನು ಬಿಂಬಿಸಿದ ರೀತಿ ಮನಸ್ಸಿಗೆ ತುಂಬಾ ನೋವು ಉಂಟು ಮಾಡಿದೆ...' ಎಂದು ಕಣ್ಣೀರು ಹಾಕಿದ್ದರು. ಈ ವಿಡಿಯೋವನ್ನು ತಮ್ಮ ಫೇಸ್​ಬುಕ್​ ಪೇಜ್​ನಲ್ಲಿ ಶುಕ್ರವಾರ ಬೆಳಗ್ಗೆ ಅಪ್ಲೋಡ್​ ಮಾಡಿಕೊಂಡಿದ್ದರು.

ಸಿಸಿಬಿ ವಿಚಾರಣೆಯನ್ನು ನೆನೆದು ಅನುಶ್ರೀ ಕಣ್ಣೀರಿಟ್ಟಿರುವ ವಿಡಿಯೋ ನೋಡಿದ ಅವರ ಅಭಿಮಾನಿಗಳು ಸತ್ಯಕ್ಕೆ ಸಾವಿಲ್ಲ.. ಆರೋಪದಿಂದ ಮುಕ್ತರಾಗ್ತೀರಿ.. ಡೋಂಟ್​ ವರಿ ಅಕ್ಕ.. ಎಂದೆಲ್ಲ ಕಮೆಂಟ್ಸ್​ ಕೊಡುತ್ತಿದ್ದಾರೆ. ಇವರ ಜತೆಗೆ ಡ್ರಗ್ಸ್ ಕೇಸ್​ನಲ್ಲಿ ಈಗಾಗಲೇ ಸಿಸಿಬಿ ವಿಚಾರಣೆಗೆ ಒಳಗಾಗಿದ್ದ ಮತ್ತೊಬ್ಬ ನಟಿ ಕೂಡ ಅನುಶ್ರೀಗೆ ಧೈರ್ಯ ತುಂಬಿದ್ದಾರೆ.

ಅನುಶ್ರೀ ಲೈವ್ ವಿಡಿಯೋಗೆ ಕಮೆಂಟ್​ ಮಾಡಿರುವ ಕಿರುತೆರೆ ನಟಿ ಗೀತಾ ಭಾರತಿ ಭಟ್, ''ನಿಮ್ಮ ಜೊತೆ ನಾವಿದ್ದೇವೆ. ಧೈರ್ಯವಾಗಿರಿ'' ಎಂದಿದ್ದಾರೆ.

'ಬ್ರಹ್ಮಗಂಟು' ಧಾರಾವಾಹಿ ಖ್ಯಾತಿಯ ಗೀತಾ ಭಾರತಿ ಭಟ್​ ಅವರಿಗೂ ಬೆಂಗಳೂರಿನ ಕಾಟನ್​ಪೇಟೆ ಪೊಲೀಸ್​ ಠಾಣೆಯಲ್ಲಿ ದಾಖಲಾಗಿರುವ ಡ್ರಗ್ಸ್ ಕೇಸ್​ ಸಂಬಂಧ ಸಿಸಿಬಿ ಪೊಲೀಸರು ನೋಟಿಸ್​ ಜಾರಿ ಮಾಡಿದ್ದರು. ಈಗಾಗಲೇ ವಿಚಾರಣೆ ಎದುರಿಸಿರುವ ಗೀತಾ, ಮತ್ತೊಮ್ಮೆ ಕರೆದರೆ ಹೋಗುವೆ. ತನಿಖೆಗೆ ಸಹಕರಿಸುವೆ. ಸಮಾಜಕ್ಕಂಟಿರುವ ಡ್ರಗ್ಸ್​ ಎಂಬ ಪಿಡುಗನ್ನು ನಿರ್ಮೂಲನೆ ಮಾಡಬೇಕು ಎಂದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net