More

    ಮಾದಕ ವಸ್ತುಗಳ ಬಲೆ, ಸರಣಿ ಕೊಲೆ: ಆ ಕ್ಷಣ..

    ಮಾದಕ ವಸ್ತುಗಳ ಬಲೆ, ಸರಣಿ ಕೊಲೆ: ಆ ಕ್ಷಣ..ಬ್ಯಾಂಕಾಕ್​ಗೆ ಬರುತ್ತಿದ್ದ ವಿದೇಶಿ ಪ್ರವಾಸಿಗರನ್ನು ತನ್ನ ಮನೆಗೆ ಬಂದು ಉಳಿಯುವಂತೆ ಮಾಡಲು ಶೋಭರಾಜ್ ಕೆಲವು ಏಜೆಂಟರನ್ನು ನೇಮಿಸಿಕೊಂಡಿದ್ದ. ಅಂತಹವರಲ್ಲೊಬ್ಬ ಅಜಯ್ ಚೌಧರಿ ಎಂಬ ಭಾರತೀಯ ಮೂಲದ ಯುವಕ. ಈತ ಶೋಭರಾಜ್​ನ ಅಡಿಯಾಳಿನಂತೆಯೇ ಆಗಿ ಮಾಲೀಕ ಯಾವ ಕೆಲಸ ಹೇಳಿದರೂ ಕೂಡಲೇ ಮಾಡುತ್ತಿದ್ದ. ಕಾಲಕ್ರಮೇಣ ಶೋಭರಾಜ್ ಮೇರಿಯ ನಂತರದ ಸ್ಥಾನವನ್ನು ಅವನಿಗೆ ಕೊಟ್ಟ.

    1975ರ ಅಂತ್ಯಭಾಗದಲ್ಲಿ ಟೆರೆಸಾ ಎನ್ನುವ ಅಮೆರಿಕನ್ ಪ್ರವಾಸಿ ಶೋಭರಾಜನ ಮನೆಗೆ ಬಂದಳು. ಆಕೆ ಸನ್ಯಾಸಿನಿಯಾಗಲು ನೇಪಾಳದ ಬೌದ್ಧ ಆಶ್ರಮವೊಂದಕ್ಕೆ ಸೇರಹೊರಟಿದ್ದಳು. ಅವಳ ಬಳಿ ಸಾಕಷ್ಟು ಹಣವಿದ್ದುದನ್ನು ಗಮನಿಸಿದ ಶೋಭರಾಜ್, ‘ನೀನು ಸನ್ಯಾಸಿನಿಯಾಗುವ ಮುನ್ನ ಒಂದು ದಿನವಾದರೂ ಜೀವನದ ಎಲ್ಲ ಸುಖಗಳನ್ನೂ ಅನುಭವಿಸಲೇಬೇಕು’ ಎಂದು ಅವಳ ಮನವೊಲಿಸಿದ. ಅಜಯ್ನ ಜತೆಗೂಡಿ ಅವಳನ್ನು ಥೈಲೆಂಡಿನ ಸಮುದ್ರ ತೀರದ ಪಟ್ಟಣ ಪಟ್ಟಾಯಕ್ಕೆ ಕರೆದೊಯ್ದ. ಆ ರಾತ್ರಿ ಶೋಭರಾಜ್ ಅವಳಿಗೆ ಮಾದಕ ವಸ್ತುಗಳನ್ನು ತಿನ್ನಿಸಿದ. ಆಕೆ ನಶೆಗಿಳಿದಾಗ ಅವಳನ್ನು ಸಮುದ್ರದಲ್ಲಿ ಈಜಾಡಲು ಕರೆದ. ಎಲ್ಲರೂ ನೀರಿಗಿಳಿದಾಗ ಅಜಯ್ನ ಜತೆಗೂಡಿ ಅವಳ ಮುಖವನ್ನು ಬಲವಂತವಾಗಿ ಸಮುದ್ರದಲ್ಲಿ ಮುಳುಗಿಸಿ ಉಸಿರುಗಟ್ಟಿಸಿ ಕೊಲೆ ಮಾಡಿದ. ಅವಳ ದೇಹವನ್ನು ಸಮುದ್ರದಲ್ಲಿಯೇ ಬಿಟ್ಟು ಆಕೆಯ ಬೆಲೆಬಾಳುವ ವಸ್ತುಗಳು ಮತ್ತು ಪಾಸ್​ಪೋರ್ಟನ್ನು ಕದ್ದು ಪರಾರಿಯಾದ. ಮಾರನೆಯ ಮುಂಜಾನೆ ಬಿಕಿನಿ ಧರಿಸಿದ್ದ ಅವಳ ದೇಹವು ಪತ್ತೆಯಾಗಿ ಪೊಲೀಸರಿಗೆ ದೂರು ಹೋಯಿತು. ಮೃತಳು ವಿದೇಶದಿಂದ ಬಂದವಳೆಂದು ಮೇಲುನೋಟಕ್ಕೇ ತಿಳಿದರೂ ಆಕೆಯ ವಿವರಗಳು ಪೊಲೀಸರಿಗೆ ಲಭ್ಯವಾಗಲಿಲ್ಲ. ಶವದ ಫೋಟೋಗಳನ್ನು ತೆಗೆದುಕೊಂಡ ತನಿಖಾಧಿಕಾರಿ ವಿದೇಶದಿಂದ ಬಂದ ಹಿಪ್ಪಿಯೊಬ್ಬಳು ಅತಿಯಾಗಿ ಮಾದಕವಸ್ತುಗಳನ್ನು ಸೇವಿಸಿದ ಪರಿಣಾಮವಾಗಿ ಸಮುದ್ರದಲ್ಲಿ ಮುಳುಗಿ ಸತ್ತಿದ್ದಾಳೆ ಎಂದು ರ್ತಸಿ ಕೇಸನ್ನು ಅಲ್ಲಿಗೇ ಮುಕ್ತಾಯ ಮಾಡಿದರು.

    ಇದಾದ ಕೆಲ ದಿನಗಳ ನಂತರ ಶೋಭರಾಜನ ಮನೆಗೆ ಟರ್ಕಿ ದೇಶದ ಪ್ರವಾಸಿ ವಿತಾಲಿ ಹಕೀಂ ಎನ್ನುವವನು ಬಂದ. ಆ ಶ್ರೀಮಂತ ಯುವಕ ಮಾದಕ ವಸ್ತುಗಳ ವ್ಯಾಪಾರಕ್ಕಾಗಿಯೇ ಆ ದೇಶಕ್ಕೆ ಬಂದಿರಬಹುದೆಂಬ ಅನುಮಾನ ಶೋಭರಾಜಗೆ ಬಂದಿತು. ಆತನ ಬಗ್ಗೆ ಹೆಚ್ಚು ಮಾಹಿತಿ ಪಡೆಯಲು ಶೋಭರಾಜ್ ಅವನಿಗೆ ವಾಂತಿಭೇದಿ ರೋಗ ಬರಿಸುವ ಔಷಧಿಗಳನ್ನು ನೀಡುತ್ತಾ ಶುಶ್ರೂಷೆ ಮಾಡತೊಡಗಿದ. ಕೆಲಕಾಲಾನಂತರ ಆ ಯುವಕ ತನಗೆ ರೋಗ ಬರಲು ಶೋಭರಾಜನೇ ಕಾರಣವೆಂದು ಪತ್ತೆ ಮಾಡಿ ಕೂಡಲೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲು ಒತ್ತಾಯಿಸತೊಡಗಿದ. ಇದಕ್ಕೊಪ್ಪದಿದ್ದಾಗ ಶೋಭರಾಜನ ಮನೆಗೆ ಬರುತ್ತಿದ್ದ ಇತರ ಪ್ರವಾಸಿಗಳಿಗೆ ಅವನ ಬಗ್ಗೆ ವಿತಾಲಿ ದೂರತೊಡಗಿದ. ಇದರಿಂದ ಗಾಬರಿಯಾದ ಶೋಭರಾಜ್ ವಿತಾಲಿಯನ್ನು ಮುಗಿಸಿಬಿಡಲು ತೀರ್ವನಿಸಿದ. ಅವನನ್ನು ಪಟ್ಟಾಯ ಬೀಚಿನ ಬಳಿಯಿರುವ ಅರಣ್ಯಕ್ಕೆ ಕರೆದೊಯ್ದು ಅಜಯನ ಜತೆಗೂಡಿ ಇರಿದು ಕೊಂದ. ಮೃತನ ವಸ್ತುಗಳನ್ನು ದೋಚಿದ ನಂತರ ಅವನ ಪೆಟ್ರೋಲ್ ಸುರಿದು ದೇಹದ ಗುರುತು ಸಿಗದಂತೆ ಸುಟ್ಟರು. ಥೈಲೆಂಡಿನ ಪೊಲೀಸರಿಗೆ ಸುಟ್ಟ ದೇಹದ ಬಗ್ಗೆ ದೂರು ಬಂದಾಗ ಅವರು ಕೊಲೆಯ ಪ್ರಕರಣ ದಾಖಲಿಸಿದರಾದರೂ ಮೃತ ವ್ಯಕ್ತಿ ಯಾರೆಂದೇ ಗೊತ್ತಾಗದ ಕಾರಣ ತನಿಖೆ ಮುಂದುವರಿಯಲಿಲ್ಲ. ಮನೆಗೆ ವಾಪಸಾದ ಶೋಭರಾಜನನ್ನು ವಿತಾಲಿಯೆಲ್ಲಿ ಎಂದು ಇತರ ಪ್ರವಾಸಿಗರು ಕೇಳಿದಾಗ ಆತ ತನ್ನ ದೇಶಕ್ಕೆ ವಾಪಸಾದನೆಂದು ಸುಳ್ಳು ಹೇಳಿದ.

    ಸರಿಸುಮಾರು ಇದೇ ಸಮಯಕ್ಕೆ ಶೋಭರಾಜನ ಮನೆಗೆ ಡಾಮಿನಿಕ್ ಎಂಬ ಫ್ರೆಂಚ್ ಯುವಕ ಬಂದಿದ್ದ. ತನ್ನ ದೇಶದವನೇ ಆಗಿದ್ದ ಅವನನ್ನು ಅನುಯಾಯಿಯನ್ನಾಗಿ ಮಾಡಿಕೊಳ್ಳಲು ನಿರ್ಧರಿಸಿದ ಶೋಭರಾಜ್ ಅವನ ಸಂಪೂರ್ಣ ವಿಶ್ವಾಸ ಗಳಿಸಲು ಅವನಿಗೂ ಕಾಯಿಲೆ ಬರುವಂತೆ ಮಾಡಿ ಶೂಶ್ರೂಷೆ ಮಾಡತೊಡಗಿದ್ದ.

    ವಿತಾಲಿಯ ಕೊಲೆಯ ನಂತರ ಶೋಭರಾಜ್ ಪ್ರಶಸ್ತ ಕಲ್ಲುಗಳ ವ್ಯಾಪಾರಕ್ಕೆಂದು ಹಾಂಕಾಂಗ್​ಗೆ ಹೋದ. ಅಲ್ಲಿನ ಅಂಗಡಿಯೊಂದರಲ್ಲಿ ನೆಕ್​ಲೇಸ್ ಕೊಳ್ಳಲು ಬಂದಿದ್ದ ನೆದರ್​ಲ್ಯಾಂಡ್ ದೇಶದ ಯುವಜೋಡಿಯೊಂದರ ಪರಿಚಯ ಅವನಿಗಾಯಿತು. ಬಿಂಟಾನ್ಯಾ (29) ಮತ್ತು ಆತ ನಿಶ್ಚಿತಾರ್ಥ ಮಾಡಿಕೊಂಡಿದ್ದ ಹೇಮ್ಕರ್ (25) ಇಬ್ಬರನ್ನೂ ತನ್ನ ಮಾತುಗಳಿಂದ ಮರುಳು ಮಾಡಿದ ಶೋಭರಾಜ್, ಅದೇ ಆಭರಣವನ್ನು ಬ್ಯಾಂಕಾಕ್​ನಲ್ಲಿ ಇನ್ನೂ ಕಡಿಮೆ ಬೆಲೆಗೆ ಖರೀದಿಸಬಹುದೆಂದು ಅವರಿಗೆ ಮನವರಿಕೆ ಮಾಡಿದ. ಅವರನ್ನು ತನ್ನೂರಿಗೆ ಬರಲು ಬಲವಂತ ಮಾಡಿದ. ಅವರು ಒಪ್ಪಿ ಬ್ಯಾಂಕಾಕ್​ಗೆ ಬಂದರು. ಅವರಿಬ್ಬರನ್ನೂ ತನ್ನ ಮನೆಯಲ್ಲಿಯೇ ಇಟ್ಟುಕೊಂಡು ಊರು ತೋರಿಸಿದ. ಆನಂತರ ಇಬ್ಬರಿಗೂ ರೋಗ ತರುವ ಔಷಧವುಣಿಸಿ ಶುಶ್ರೂಷೆ ಮಾಡಿದ. ಅವರು ಚೇತರಿಸಿಕೊಳ್ಳುತ್ತಿರುವಾಗ ಇಬ್ಬರ ಪಾಸ್​ಪೋರ್ಟುಗಳು ಮತ್ತು ಹಣವನ್ನು ಕಳವು ಮಾಡಿದ. ಆಗ ಬಿಂಟಾನ್ಯಾಗೆ ಶೋಭರಾಜನ ನಿಜರೂಪದ ಬಗ್ಗೆ ಅನುಮಾನ ಬಂದಿತು. ಇದನ್ನರಿತ ಶೋಭರಾಜ್ 1975ರ ಡಿಸೆಂಬರ್ 16ರಂದು ಆ ಯುವಜೋಡಿಗೆ ಮಾದಕ ವಸ್ತು ತಿನಿಸಿ ಇಬ್ಬರೂ ನಶೆಯ ಸ್ಥಿತಿಯಲ್ಲಿರುವಾಗಲೇ ಅವರನ್ನು ತನ್ನ ಕಾರಿನಲ್ಲಿ ಹಾಕಿಕೊಂಡ. ಅಜಯನ ಜತೆಗೂಡಿ ನಗರದಿಂದ ಹೊರಗಿದ್ದ ನಿರ್ಜನ ಪ್ರದೇಶವೊಂದಕ್ಕೆ ಕರೆದೊಯ್ದ. ಅವರ ಕತ್ತು ಹಿಸುಕಿ ಸಾಯುವ ಮುಂಚೆಯೇ ಅವರ ಮೈಮೇಲೆ ಪೆಟ್ರೋಲನ್ನು ಸುರಿದು ಸಜೀವದಹನ ಮಾಡಿದ. ಆ ಎರಡೂ ದೇಹಗಳು ಸಾಕಷ್ಟು ಸುಟ್ಟ ಕಾರಣ ಪೊಲೀಸರಿಗೆ ಮೃತರು ಯಾರು ಎಂದೇ ತಿಳಿಯಲಿಲ್ಲ. ತನಿಖೆಯ ಸಮಯದಲ್ಲಿಯೇ ಥೈಲೆಂಡಿಗೆ ಬಂದಿದ್ದ ಆಸ್ಟ್ರೇಲಿಯಾದ ಜೋಡಿಯೊಂದು ಕಾಣೆಯಾಗಿದ್ದ ಕಾರಣ ಮೃತರು ಆಸ್ಟ್ರೇಲಿಯನ್ ಜೋಡಿ ಎಂದೇ ಭಾವಿಸಿದ ಪೊಲೀಸರು ತನಿಖೆಯನ್ನು ಮುಂದುವರಿಸಿದರು.

    ಏತನ್ಮಧ್ಯೆ ಸಂಪೂರ್ಣ ನಿತ್ರಾಣರಾಗಿದ್ದ ಬಿಂಟಾನ್ಯ ಮತ್ತು ಹೇಮ್ಕರ್​ರನ್ನು ಕಾರಿನಲ್ಲಿ ಹಾಕಿಕೊಂಡು ಶೋಭರಾಜ್ ಮತ್ತು ಅಜಯ್ ಎಲ್ಲಿಗೋ ಹೋಗುತ್ತಿದ್ದುದನ್ನು ಅವನ ಮನೆಯಲ್ಲಿಯೇ ಇದ್ದ ಡಾಮಿನಿಕ್ ನೋಡಿಬಿಟ್ಟಿದ್ದ. ಮಧ್ಯರಾತ್ರಿಯ ನಂತರ ಶೋಭರಾಜ್ ಮತ್ತು ಅಜಯ್ ಇಬ್ಬರೇ ಮನೆಗೆ ಮರಳಿದಾಗ ಡಚ್ ಜೋಡಿಯೆಲ್ಲಿ ಎಂದಾತ ಅವರನ್ನು ವಿಚಾರಿಸಿದ. ಇಬ್ಬರೂ ತಮ್ಮ ದೇಶಕ್ಕೆ ವಾಪಸಾದರೆಂಬ ಹಾರಿಕೆಯ ಉತ್ತರವನ್ನು ಶೋಭರಾಜ್ ಕೊಟ್ಟಾಗ ಡಾಮಿನಿಕ್​ಗೆ ಸಂಶಯ ಬಂದಿತು. ಅವರಿಬ್ಬರನ್ನೂ ಕೊಲೆ ಮಾಡಿರಬಹುದೆಂದು ಊಹಿಸಿ ಗಾಬರಿಗೊಂಡ. ತನಗೂ ಅದೇ ಗತಿ ಬರಬಹುದೆಂದು ಭಾವಿಸಿದ ಆತ ಶೋಭರಾಜನ ನೆರೆಯವಳೂ, ತನ್ನಂತೆಯೇ ಫ್ರೆಂಚ್ ಪ್ರಜೆಯೂ ಆಗಿದ್ದ ನದೀನ್ ಎನ್ನುವವಳನ್ನು ಸಂರ್ಪಸಿದ. ಶೋಭರಾಜನ ಮನೆಗೆ ನದೀನ್ ಬಂದುಹೋಗುತ್ತಿದ್ದುದು ಅವನಿಗೆ ತಿಳಿದಿತ್ತು. ಅವಳ ಮುಂದೆ ತನಗೆ ಬಂದಿದ್ದ ಅನುಮಾನವನ್ನು ವ್ಯಕ್ತಪಡಿಸಿದ. ಗಾಬರಿಯಾದ ನದೀನ್ ಈ ಬಗ್ಗೆ ಮೇರಿಯನ್ನು ವಿಚಾರಿಸಿದಾಗ ಆಕೆಯಿಂದಲೂ ಹಾರಿಕೆಯ ಉತ್ತರವೇ ಬಂದಿತು. ಹೇಗಾದರೂ ಮಾಡಿ ತನ್ನನ್ನು ಕನೀತ್ ಹೌಸಿನಿಂದ ಪಾರು ಮಾಡೆಂದು ಡಾಮಿನಿಕನು ನದೀನ್​ಳನ್ನು ಬೇಡಿಕೊಂಡದ್ದಲ್ಲದೆ, ತನ್ನ ಪಾಸ್​ಪೋರ್ಟನ್ನು ಶೋಭರಾಜ್ ಇಟ್ಟುಕೊಂಡಿರುವುದನ್ನೂ ತಿಳಿಸಿದ.

    ಏತನ್ಮಧ್ಯೆ ಡಿಸೆಂಬರ್ 17ರಂದು ಕಾಣೆಯಾಗಿದ್ದ ತನ್ನ ಪ್ರಿಯಕರ ವಿತಾಲಿಯನ್ನು ಹುಡುಕಿಕೊಂಡು ಆತನ ಪ್ರೇಯಸಿ ಫ್ರಾನ್ಸ್ ದೇಶದ ಷಾಮೇನ್, ಬ್ಯಾಂಕಾಕ್​ಗೆ ಬಂದು ಶೋಭರಾಜ್​ನನ್ನು ಭೇಟಿಯಾದಳು. ಆರಂಭದಲ್ಲಿ ತನಗೇನೂ ಗೊತ್ತಿಲ್ಲ ಎಂದೇ ಶೋಭರಾಜ್ ಮತ್ತವನ ಸಹಚರರು ಅವಳಿಗೆ ತಿಳಿಸಿದರು. ಆಕೆ ಇದನ್ನು ನಂಬದೆ ಪೊಲೀಸರ ಮೊರೆ ಹೋಗಲು ನಿರ್ಧರಿಸಿದಾಗ ಅವಳನ್ನೂ ಮುಗಿಸಿಬಿಡಲು ಶೋಭರಾಜ್ ತೀರ್ವನಿಸಿದ. ಮತ್ತೊಮ್ಮೆ ಅಜಯ್ನ ಜತೆಗೂಡಿ ಅದೇ ರಾತ್ರಿ ಅವಳನ್ನು ಪಟ್ಟಾಯಾದ ಸಮುದ್ರ ತೀರಕ್ಕೆ ಕರೆದುಕೊಂಡು ಹೋದ. ಅಲ್ಲಿ ಅವಳಿಗೆ ಮಾದಕ ವಸ್ತುಗಳನ್ನು ತಿನ್ನಿಸಿ ಟೆರೇಸಾಳನ್ನು ಕೊಲೆ ಮಾಡಿದಂತೆಯೇ ಅವಳನ್ನೂ ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿದ. ಬಿಕಿನಿ ಧರಿಸಿದ್ದ ಅವಳ ದೇಹ ಸಿಕ್ಕಾಗಲೂ ಥೈಲೆಂಡ್ ದೇಶದ ಪೊಲೀಸರು ತಲೆಕೆಡಿಸಿಕೊಳ್ಳಲಿಲ್ಲ.

    ಕೊಲೆಯಾಗಿದ್ದ ನೆದರ್​ಲ್ಯಾಂಡ್​ನ ಜೋಡಿಯ ಪಾಸ್​ಪೋರ್ಟುಗಳಿಗೆ ತಮ್ಮ ಫೋಟೋಗಳನ್ನು ಅಂಟಿಸಿದ ಶೋಭರಾಜ್ ಮತ್ತು ಮೇರಿ ಅವರ ಹೆಸರಿನಲ್ಲಿ ಡಿಸೆಂಬರ್ 18ರಂದೇ ನೇಪಾಳದ ರಾಜಧಾನಿ ಕಠ್ಮಂಡುಗೆ ಅಜಯ್ ಜತೆಗೆ ಬಂದರು. ತಾನು ಪ್ರಶಸ್ತ ಕಲ್ಲುಗಳ ವ್ಯಾಪಾರಿಯೆಂದು ಹೇಳಿಕೊಂಡ ಶೋಭರಾಜ್, ಕಠ್ಮಂಡುವಿನ ಒಬೆರಾಯ್ ಪಂಚತಾರಾ ಹೊಟೆಲಿನಲ್ಲಿ ಕೋಣೆಯನ್ನು ಪಡೆದ. ನೇಪಾಳದಲ್ಲಿ ಹಿಪ್ಪಿಗಳು ತಂಗುತ್ತಿದ್ದ ಜಾಗಕ್ಕೆ ಹೋಗಿ ಅಲ್ಲಿದ್ದ ಅಮೆರಿಕದ ಯುವ ಜೋಡಿ ಕೋನಿ ಜೋ (25) ಮತ್ತು ಆಕೆಯ ಗೆಳೆಯ ಲಾರೆಂಟ್ ಕೆರಿಯರ್ (29) ಎನ್ನುವವರನ್ನು ಪರಿಚಯ ಮಾಡಿಕೊಂಡ. ಕೋನಿ ಜೋಗೆ ತನ್ನಲ್ಲಿದ್ದ ಹರಳುಗಳನ್ನು ತೋರಿಸಿದ ಶೋಭರಾಜ್ ಅವುಗಳನ್ನು ಕೊಳ್ಳಲು ಸೂಕ್ತ ಗ್ರಾಹಕರನ್ನು ಕರೆತಂದರೆ ಕೈತುಂಬಾ ಕಮಿಷನ್ ಕೊಡುವುದಾಗಿ ತಿಳಿಸಿದ. ಡಿಸೆಂಬರ್ 20ರ ರಾತ್ರಿ ಅವರಿಬ್ಬರಿಗೂ ತಾನಿಳಿದುಕೊಂಡಿದ್ದ ಹೊಟೆಲ್ಲಿನಲ್ಲಿಯೇ ಡಿನ್ನರ್ ಕೊಡಿಸಿದ. ಊಟ ಮಾಡುವಾಗ ಇಬ್ಬರಿಗೂ ಮಾದಕವಸ್ತುಗಳನ್ನು ಬೆರೆಸಿದ್ದ ಪೇಯವನ್ನು ನೀಡಿದ ಶೋಭರಾಜ್ ಅವರನ್ನು ನಶೆಯ ಸ್ಥಿತಿಯಲ್ಲಿಯೇ ತಾನು ಪಡೆದಿದ್ದ ಬಾಡಿಗೆ ಕಾರಿನಲ್ಲಿ ಕೂರಿಸಿದ. ಅಜಯ್ನ ಜತೆಗೂಡಿ ಅವರನ್ನು ಕಠ್ಮಂಡುವಿನ ಹೊರವಲಯಕ್ಕೆ ಕರೆದುಕೊಂಡು ಹೋದ.

    ಮಾರನೆಯ ಬೆಳಗ್ಗೆ ಕಠ್ಮಂಡು ಬಳಿಯ ಗೋಧಿಯ ಹೊಲವೊಂದರಲ್ಲಿ ಕೋನಿಯ ಅರೆನಗ್ನ ದೇಹ ದೊರಕಿತು. ಅವಳ ದೇಹದ ಮೇಲೆ ಹಲವಾರು ಇರಿತದ ಗಾಯಗಳಾಗಿದ್ದವು. ಪೊಲೀಸರು ಕೊಲೆಯ ಕೇಸ್ ದಾಖಲಿಸಿ ತನಿಖೆ ಆರಂಭಿಸಿದರು. ಇದಾದ ಮಾರನೆಯ ದಿನವೇ ಕಠ್ಮಂಡು ವಿಮಾನ ನಿಲ್ದಾಣದ ಬಳಿ ಲಾರೆಂಟನ ದೇಹ ದೊರಕಿತು. ಅವನನ್ನೂ ಇರಿದು ಕೊಲೆ ಮಾಡಿ ದೇಹವನ್ನು ಅರೆಬರೆ ಸುಡಲಾಗಿತ್ತು. ಅವರಿಬ್ಬರ ಪಾಸ್​ಪೋರ್ಟ್ ಮತ್ತು ಹಣ ನಾಪತ್ತೆಯಾಗಿದ್ದವು. ಕೊಲೆಯಾದವರು ಒಬೆರಾಯ್ ಹೋಟೆಲ್ಲಿನಲ್ಲಿ ಉಳಿದುಕೊಂಡಿದ್ದ ವ್ಯಕ್ತಿಯೊಬ್ಬನನ್ನು ಸಂರ್ಪಸಿದ್ದರೆಂದು ತಿಳಿದ ಪೊಲೀಸರು ಶೋಭರಾಜ್​ನನ್ನು ವಿಚಾರಣೆಗೆ ಕರೆಸಿದರು. ಪೊಲೀಸರಿಗೆ ತಾನು ಸಮಾಜಶಾಸ್ತ್ರದ ಪೊ›ಫೆಸರ್ ಎಂದು ಹೇಳಿಕೊಂಡ ಆತ, ಮೃತರನ್ನು ಭೇಟಿಯೇ ಆಗಿಲ್ಲ ಎಂದು ತನ್ನ ಮರುಳು ಮಾತುಗಳಿಂದ ಮನದಟ್ಟು ಮಾಡಿದ. ಅವನನ್ನು ಮಾರನೆಯ ದಿನ ವಿಚಾರಣೆಗೆ ಬರಲು ತಿಳಿಸಿ ಕಳುಹಿಸಲಾಯಿತು. ಅದೇ ರಾತ್ರಿ ಶೋಭರಾಜ್ ತಾನು ಕದ್ದಿದ್ದ ಅಮೆರಿಕನ್ ಜೋಡಿಯ ಪಾಸ್​ಪೋರ್ಟುಗಳಿಗೆ ತನ್ನ, ಮೇರಿಯ ಫೋಟೋ ಗಳನ್ನು ಅಂಟಿಸಿ ಅವನ್ನು ಬಳಸಿ ರಸ್ತೆಯ ಮೂಲಕ ಭಾರತಕ್ಕೆ ಬಂದ.

    (ಮುಂದುವರಿಯುವುದು)

    (ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

    ಮಕ್ಕಳಾಗಲಿ ಎಂದು ಮಹಿಳೆಗೆ ಮನೆಯವರೇ ಮನುಷ್ಯರ ಎಲುಬಿನ ಪುಡಿ ತಿನ್ನಿಸಿದ್ರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts