More

    ಬರ ಪರಿಹಾರಕ್ಕೆ ರಾಜ್ಯ ಸರ್ಕಾರದಿಂದ 324 ಕೋಟಿ ರೂ. ಬಿಡುಗಡೆ

    ಬೆಂಗಳೂರು: ಬರ ಪರಿಹಾರಕ್ಕಾಗಿ ರಾಜ್ಯ ವಿಪತ್ತು ಪರಿಹಾರ ನಿಧಿ(ಎಸ್‌ಡಿಆರ್‌ಎ್)ಅಡಿ 324 ಕೋಟಿ ರೂ.ಗಳನ್ನು ಸರ್ಕಾರ ಬಿಡುಗಡೆ ಮಾಡಿದೆ.

    2023ನೇ ಸಾಲಿನ ನೈರುತ್ಯ ಮುಂಗಾರು ರಾಜ್ಯಕ್ಕೆ ಜೂ.18 ರಂದು ಪ್ರವೇಶಿಸಿ ರಾಜ್ಯದ ಎಲ್ಲೆಡೆ 14 ದಿನ ವ್ಯಾಪಿಸಿತು. ಇದು ಸಾಮಾನ್ಯ ದಿನಕ್ಕಿಂತ ಒಂದು ವಾರ ತಡವಾಗಿದೆ. ಜೂನ್ ತಿಂಗಳಲ್ಲಿ ಮುಂಗಾರು ದುರ್ಬಲಗೊಂಡು ವಾಡಿಕೆಗಿಂತ ಶೇ.56 ರಷ್ಟು ಮಳೆ ಕೊರತೆ ಉಂಟಾಗಿದೆ. ಜುಲೈ ತಿಂಗಳಲ್ಲಿ ಮುಂಗಾರು ಚುರುಕುಗೊಂಡು ವಾಡಿಕೆಗಿಂತ ಶೇ.29 ರಷ್ಟು ಹೆಚ್ಚು ಮಳೆಯಾಗಿದೆ. ಆಗಸ್ಟ್ ತಿಂಗಳಲ್ಲಿ ವಾಡಿಕೆಗಿಂತ ಶೇ.73 ರಷ್ಟು ಮಳೆ ಕೊರತೆಯಾಗಿದ್ದು, 125 ವರ್ಷಗಳಲ್ಲಿ ಅತಿ ಕಡಿಮೆ ಮಳೆ ದಾಖಲಾಗಿದೆ. ಕೇಂದ್ರ ಸರ್ಕಾರದ ಬರ ನಿರ್ವಹಣೆ ಕೈಪಿಡಿ ಅನಯ್ವ ಕಡ್ಡಾಯ ಮತ್ತು ತತ್ಪರಿಣಾಮ ಸೂಚಕಗಳ ನಿರಂತರ ಮೇಲ್ವಿಚಾರಣೆ ಆಧಾರದ ಮೇಲೆ 216 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲಾಗಿದೆ‌.

    ಬರ ನಿರ್ವಹಣೆಗಾಗಿ ರಾಜ್ಯದ 31 ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಜಿಲ್ಲಾವಾರು ಹಣ ಬಿಡುಗಡೆ ಮಾಡಿ ಕಂದಾಯ ಇಲಾಖೆ ಆದೇಶ ಹೊರಡಿಸಿದೆ. ಕನಿಷ್ಟ ಮೂರು ಕೋಟಿ ರೂ.ಗಳಿಂದ ಗರಿಷ್ಠ 22.50 ಕೋಟಿ ರೂ.ವರೆಗೆ ಬರ ಪರಿಹಾರ ಬಿಡುಗಡೆ ಮಾಡಲಾಗಿದೆ.

    ಆಯವ್ಯಯದಲ್ಲಿ ಅನುದಾನ

    ಪ್ರಸಕ್ತ ಸಾಲಿನ ನೈರುತ್ಯ ಮುಂಗಾರು ಹಂಗಾಮಿನಲ್ಲಿ ರಾಜ್ಯ ಸರ್ಕಾರ 216 ತಾಲ್ಲೂಕುಗಳನ್ನು ಬರಪೀಡಿತವೆಂದು ಘೋಷಣೆ ಮಾಡಿತ್ತು. ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ರಾಜ್ಯ ವಿಪತ್ತು ಪರಿಹಾರ ನಿಯಮದಡಿ 930.14 ಕೋಟಿ ಅನುದಾನ ಒದಗಿಸಲಾಗಿದೆ. ಇದರಲ್ಲಿ ಶೇ.75ರಷ್ಟು ಕೇಂದ್ರದ ಪಾಲು 697.60 ಕೋಟಿ ರೂ., ರಾಜ್ಯದ ಪಾಲು ಶೇ.25ರಷ್ಟು 232.54 ಕೋಟಿ ರೂ. ಸೇರಿದೆ.

    ಡಿಸಿಗಳಿಗೆ 324 ಕೋಟಿ ರೂ. ಹಂಚಿಕೆ

    ಬರ ನಿರ್ವಹಣೆಗೆ ಲಭ್ಯವಿದ್ದ 434.02 ಕೋಟಿ ರೂ. ಪೈಕಿ 324 ಕೋಟಿ ರೂ.ಗಳನ್ನು ಸರ್ಕಾರ ಬಿಡುಗಡೆಗೊಳಿಸಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಬಳ್ಳಾರಿ, ಕೊಡಗು ಜಿಲ್ಲೆಗಳಿಗೆ ತಲಾ 750 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಬೀದರ್, ಉಡುಪಿ ಜಿಲ್ಲೆಗಳಿಗೆ ತಲಾ 450 ಲಕ್ಷ, ದಕ್ಷಿಣ ಕನ್ನಡ ಜಿಲ್ಲೆಗೆ 300 ಲಕ್ಷ ಕನಿಷ್ಟ ಅನುದಾನ ಬಿಡುಗಡೆ ಮಾಡಲಾಗಿದೆ. ಬೆಳಗಾವಿ ಜಿಲ್ಲೆಗೆ 2250 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಹೀಗೆ ಜಿಲ್ಲಾವಾರು ಅನುದಾನವನ್ನು ಹಂಚಿಕೆ ಮಾಡಲಾಗಿದೆ.

    ಕೇಂದ್ರದ ವಿರುದ್ಧ ಸಿಎಂ ವಾಗ್ದಾಳಿ

    ರಾಜ್ಯದಲ್ಲಿ ತಲೆದೋರಿರುವ ಬರ ಪರಿಸ್ಥಿತಿ ನಿರ್ವಹಣೆಗೆ ಹೆಚ್ಚು ಪರಿಹಾರವನ್ನು ನೀಡುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಆದರೆ, ಕೇಂದ್ರ ಸರ್ಕಾರ ಇದುವರೆಗ ಬರ ಪರಿಹಾರದ ಅನುದಾನ ಬಿಡುಗಡೆ ಮಾಡಿಲ್ಲ. ಕೇಂದ್ರದ ನಡೆ ಖಂಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.

    ಯಾವ ಜಿಲ್ಲೆ? ಎಷ್ಟು(ಕೋಟಿ ರೂ.ಗಳಲ್ಲಿ)?

    ಬೆಂಗಳೂರು ನಗರ ಜಿಲ್ಲೆ 7.50 ಕೋಟಿ ರೂ., ಬೆಂಗಳೂರು ಗ್ರಾಮಾಂತರ 6.00, ರಾಮನಗರ 7.50,ಕೋಲಾರ 9.00, ಚಿಕ್ಕಬಳ್ಳಾಪುರ 9.00, ತುಮಕೂರು 15.00, ಚಿತ್ರದುರ್ಗ 9.00, ದಾವಣಗೆರೆ 9.00, ಚಾಮರಾಜನಗರ 7.50, ಮೈಸೂರು 13.50, ಮಂಡ್ಯ 10.50, ಬಳ್ಳಾರಿ 7.50, ಕೊಪ್ಪಳ 10.50, ರಾಯಚೂರು 9.00, ಕಲಬುರಗಿ 16.50, ಬೀದರ್ 4.50, ಬೆಳಗಾವಿ 22.50, ಬಾಗಲಕೋಟೆ 13.50, ವಿಜಯಪುರ 18.00, ಗದಗ 10.50, ಹಾವೇರಿ 12.00, ಧಾರವಾಡ 12.00, ಶಿವಮೊಗ್ಗ 10.50, ಹಾಸನ 12.00, ಚಿಕ್ಕಮಗಳೂರು 12.00, ಕೊಡಗು 7.50, ದಕ್ಷಿಣ ಕನ್ನಡ 3.00, ಉಡುಪಿ 4.50, ಉತ್ತರ ಕನ್ನಡ 16.50, ಯಾದಗಿರಿ 9.00 ಹಾಗೂ ವಿಜಯನಗರ ಜಿಲ್ಲೆಗೆ 9.00 ಕೋಟಿ ರೂ.ಗಳ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿ ಆದೇಶಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts