ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ಸ್ಥಿತಿ ತೀರಾ ಹದಗೆಟ್ಟಿದೆ. ಎತ್ತ ನೋಡಿದರೂ ಬರೀ ಹೊಗೆಯೇ ಆವರಿಸಿದ್ದು, ಶುದ್ಧ ಗಾಳಿ ಕಣ್ಮರೆಯಾಗಿ, ನಗರದ ಪರಿಸ್ಥಿತಿಯು ಅತ್ಯಂತ ಚಿಂತಾಜನಕವಾಗಿದೆ. ಇದರ ನಡುವೆ ಎಎನ್ಐ ಸುದ್ದಿಸಂಸ್ಥೆ ಡ್ರೋನ್ ಕ್ಯಾಮೆರಾದಲ್ಲಿ ಸೆರೆಹಿಡಿದಿರುವ ವಿಡಿಯೋವೊಂದು ದೆಹಲಿಯ ಕರಾಳ ಪರಿಸ್ಥಿತಿಯನ್ನು ಜನ ಕಣ್ಮುಂದೆ ತೆರೆದಿಟ್ಟಿದೆ.
ವಿಡಿಯೋದಲ್ಲಿ ದೆಹಲಿಯ ಕೆಂಪುಕೋಟೆಯ ಸುತ್ತ ಗಾಳಿಯಲ್ಲಿ ಆವರಿಸಿರುವ ದಪ್ಪ ಪದರದ ಹೊಗೆಯ ದೃಶ್ಯವಿದೆ. ಎಷ್ಟರ ಮಟ್ಟಿಗೆ ಹೊಗೆ ಆವರಿಸಿದೆ ಎಂದರೆ ಕೆಂಪು ಕೋಟೆ ಅಲ್ಲಿ ಇದೆ ಎಂಬುದೇ ಗೊತ್ತಾಗುವುದಿಲ್ಲ. ಈ ದೃಶ್ಯವನ್ನು ಇಂದು ಬೆಳಗ್ಗೆ 7.45 ಕ್ಕೆ ಎಎನ್ಐ ಸುದ್ದಿ ಸಂಸ್ಥೆ ಡ್ರೋನ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದು, ವಿಡಿಯೋ ವೈರಲ್ ಆಗಿದೆ.
#WATCH | Delhi: ANI drone camera footage from the Red Fort area shows a thick layer of haze in the air. Visuals shot at 7.45 am today.
The air quality in Delhi continues to be in the 'Severe' category as per CPCB (Central Pollution Control Board). pic.twitter.com/84hqKQc1WE
— ANI (@ANI) November 5, 2023
ಹದಗೆಟ್ಟ ಗಾಳಿಯ ಗುಣಮಟ್ಟ
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಪ್ರಕಾರ ದೆಹಲಿಯ ಗಾಳಿಯ ಗುಣಮಟ್ಟವು ಮತ್ತೊಮ್ಮೆ‘ತೀವ್ರ ಹದೆಗಟ್ಟ’ ವರ್ಗಕ್ಕೆ ಬಂದಿದ್ದು, ವಾಯು ಗುಣಮಟ್ಟ ಸೂಚ್ಯಂಕವು (ಎಕ್ಯೂಐ) ಭಾನುವಾರ ಬೆಳಗ್ಗೆ 7 ಗಂಟೆಗೆ 460 ಅಂಕ ದಾಖಲಾಗಿದ್ದು, ಮೂರನೇ ದಿನಕ್ಕೂ ಗಂಭೀರ ಸ್ಥಿತಿ ಮುಂದುವರಿದಿದೆ. ಸಿಪಿಸಿಬಿ ಪ್ರಕಾರ ನಗರದಾದ್ಯಂತ ಹೆಚ್ಚಿನ ಪ್ರದೇಶಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) 400 ಕ್ಕಿಂತ ಹೆಚ್ಚಿತ್ತು, ಕೆಲವು ಪ್ರದೇಶಗಳಲ್ಲಿ ಬೆಳಿಗ್ಗೆ 7 ಗಂಟೆಗೆ 500ರ ಸಮೀಪ ದಾಖಲಾಗಿದೆ. ದೆಹಲಿಯ ಅಯಾ ನಗರದಲ್ಲಿ 464, ದ್ವಾರಕಾ ಸೆಕ್ಟರ್ 8 ರಲ್ಲಿ 490, ಬವಾನಾದಲ್ಲಿ 479, ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 482, ಜಹಾಂಗೀರ್ಪುರಿಯಲ್ಲಿ 465, ಲೋಧಿ ರಸ್ತೆಯಲ್ಲಿ 430 ಮತ್ತು ಸಿರಿ ಕೋಟೆಯಲ್ಲಿ 478 ಎಕ್ಯೂಐ ದಾಖಲಾಗಿದೆ.
ಕಾರಣವೇನು?
ತಾಪಮಾನದಲ್ಲಿನ ಕ್ರಮೇಣ ಕುಸಿತ, ಮಾಲಿನ್ಯ ಹಿಡಿದಿಟ್ಟುಕೊಳ್ಳುವ ಶಾಂತ ಗಾಳಿ ಹಾಗೂ ಪಂಜಾಬ್ ಮತ್ತು ಹರಿಯಾಣದಾದ್ಯಂತ ಕಟಾವಿನ ನಂತರ ಭತ್ತದ ಒಣಹುಲ್ಲು ಸುಡುವುದು ಸೇರಿದಂತೆ ಅನೇಕ ಸಂಗತಿಗಳಿಂದಾಗಿ ಕಳೆದ ಕೆಲವು ದಿನಗಳಿಂದ ಗಾಳಿಯ ಗುಣಮಟ್ಟವು ಕುಸಿಯುತ್ತಿದೆ. ಮಾಲಿನ್ಯದ ಹೆಚ್ಚಳ ನಿಯಂತ್ರಿಸಲು ಮತ್ತು ಎಕ್ಯೂಐ ಮಟ್ಟ ಕಡಿಮೆ ಮಾಡಲು ದೆಹಲಿ ಸರ್ಕಾರ ಪ್ರಯತ್ನಗಳನ್ನು ಹೆಚ್ಚಿಸಿದೆ.
ಯಾವ ನಗರದಲ್ಲಿ ಎಷ್ಟು ಮಾಲಿನ್ಯ?
ಸ್ವಿಸ್ ಸಂಸ್ಥೆ ಐಕ್ಯುಎರ್ ಪ್ರಕಾರ ದೆಹಲಿಯು ಜಗತ್ತಿನ ಅತ್ಯಂತ ಮಾಲಿನ್ಯಯುಕ್ತ ನಗರವಾಗಿದೆ. ದೆಹಲಿಯ ಎಕ್ಯುಐ (ವಾಯು ಗುಣಮಟ್ಟ ಸೂಚ್ಯಂಕ) 565 ಇದೆ. ನಂತರದ ಸ್ಥಾನದಲ್ಲಿ ಪಾಕಿಸ್ತಾನದ ಲಾಹೋರ್ (277); ಕೋಲ್ಕತಾ (185); ಮುಂಬೈ (173); ಕುವೈತ್ ಸಿಟಿ (165); ಬಾಗ್ದಾದ್ (164); ಢಾಕಾ (162); ಜಕಾರ್ತಾ (158); ದೊಹಾ (153); ವುಹಾನ್ (153) ಇವೆ.