More

    ಹಳೆಯ ಕಥೆಗೆ ಹೊಸ ಕ್ಲೈಮ್ಯಾಕ್ಸ್: ದೃಶ್ಯ 2 ಸಿನಿಮಾ ವಿಮರ್ಶೆ

    • ಚಿತ್ರ: ದೃಶ್ಯ 2
    • ನಿರ್ಮಾಣ: ಮುಕೇಶ್ ಆರ್. ಮೆಹ್ತಾ, ಸಿ.ವಿ. ಸಾರಥಿ
    • ನಿರ್ದೇಶನ: ಪಿ. ವಾಸು
    • ತಾರಾಗಣ: ರವಿಚಂದ್ರನ್, ನವ್ಯಾ ನಾಯರ್, ಅನಂತ್ ನಾಗ್, ಪ್ರಮೋದ್ ಶೆಟ್ಟಿ, ಶಿವಾಜಿ ಪ್ರಭು ಮುಂತಾದವರು

    | ಚೇತನ್ ನಾಡಿಗೇರ್

    ‘ಭಯ ಪಡಬೇಡಿ. ನಿಮ್ಮ ಮೂರು ಜನಕ್ಕೆ ಏನೂ ಆಗಲ್ಲ. ನಾನಿದ್ದೀನಿ …’

    ಹಾಗಂತ ಮತ್ತೊಮ್ಮೆ ಪ್ರಾಮಿಸ್ ಮಾಡುತ್ತಾನೆ ರಾಜೇಂದ್ರ ಪೊನ್ನಪ್ಪ. ಮೊದಲ ಅಧ್ಯಾಯದಲ್ಲೂ ಅವನು ಅದೇ ರೀತಿ ಪ್ರಾಮಿಸ್ ಮಾಡಿರುತ್ತಾನೆ. ಅಚಾತುರ್ಯದಿಂದ ಆದ ಕೊಲೆಯನ್ನು ಮುಚ್ಚಿ ಹಾಕುವುದಕ್ಕೆ ತಂತ್ರ-ರಣತಂತ್ರಗಳನ್ನು ರೂಪಿಸಿರುತ್ತಾನೆ. ತನ್ನ ಬುದ್ಧಿಶಕ್ತಿಯಿಂದ ಹೆಂಡತಿ-ಮಕ್ಕಳನ್ನು ರಕ್ಷಿಸಿರುತ್ತಾನೆ. ಎಲ್ಲವೂ ಮುಗಿದು, ಹಳೆಯ ನೆನಪುಗಳಿಂದ ಹೊರಕ್ಕೆ ಬರಬೇಕು ಎನ್ನುವಷ್ಟರಲ್ಲಿ ಏಳು ವರ್ಷಗಳ ಹಿಂದಿನ ಕೇಸ್ ಮತ್ತೆ ಪ್ರಾರಂಭವಾಗುತ್ತದೆ. ರಾಜೇಂದ್ರ ಪೊನ್ನಪ್ಪ ಮೊದಲ ಬಾರಿ ಗೆದ್ದಂತೆ ಈ ಬಾರಿಯೂ ಗೆಲ್ಲುವುದಕ್ಕೆ ಸಾಧ್ಯವಾ? ಆಗ ಹೆಂಡತಿ ಮಕ್ಕಳಿಗೆ ಏನೂ ಆಗದಂತೆ ನೋಡಿಕೊಂಡಂತೆ, ಈಗಲೂ ನೋಡಿಕೊಳ್ಳುವುದಕ್ಕೆ ಸಾಧ್ಯವಾ?

    ‘ದೃಶ್ಯ 2’, ಏಳು ವರ್ಷಗಳ ಹಿಂದೆ ಬಿಡುಗಡೆಯಾದ ‘ದೃಶ್ಯ’ ಚಿತ್ರದ ಮುಂದುವರಿದ ಭಾಗ. ಆ ಚಿತ್ರವನ್ನು ನೋಡಿದವರು, ಅಲ್ಲಿ ರಾಜೇಂದ್ರ ಪೊನ್ನಪ್ಪನ ಬುದ್ಧಿವಂತಿಕೆಯನ್ನು ಮೆಚ್ಚಿಕೊಂಡವರು ಖಂಡಿತಾ ಈ ಚಿತ್ರವನ್ನು ಸಹ ನೋಡಲೇಬೇಕು. ಏಕೆಂದರೆ, ಕಥೆ ಅಲ್ಲಿಗೇ ಮುಗಿಯಿತು ಎಂದುಕೊಂಡವರಿಗೆ, ಅದನ್ನು ಇನ್ನಷ್ಟು ಚೆನ್ನಾಗಿ ಮುಂದುವರಿಸಬಹುದು ಎಂದು ಇಲ್ಲಿ ತೋರಿಸಲಾಗಿದೆ. ಅದೇ ಕ್ಲೈಮ್ಯಾಕ್ಸ್ ಎಂದುಕೊಂಡವರಿಗೆ, ಕ್ಲೈಮ್ಯಾಕ್ಸ್ ಅದಲ್ಲ, ಬೇರೇನೋ ಇದೆ ಎಂದು ಇನ್ನೊಂದು ಹೊಸ ಟ್ವಿಸ್ಟ್ ಕೊಡಲಾಗಿದೆ. ಅದಕ್ಕೇ ಹೇಳಿದ್ದು, ಆ ಚಿತ್ರವನ್ನು ನೋಡಿದವರು, ಈ ಚಿತ್ರವನ್ನು ನೋಡಲೇಬೇಕು ಎಂದು.

    ಈ ಚಿತ್ರದ ಹೈಲೈಟ್ ಎಂದರೆ ಪರಿಕಲ್ಪನೆ ಮತ್ತು ಚಿತ್ರಕಥೆ. ಆ ಕ್ರೆಡಿಟ್ ಸಲ್ಲಬೇಕಿದ್ದು, ಈ ಚಿತ್ರಕ್ಕೆ ಮೂಲವಾಗಿರುವ ಮಲಯಾಳಂನ ‘ದೃಶ್ಯಂ 2’ ಚಿತ್ರದ ಕಥೆ ಬರೆದು ನಿರ್ದೇಶಿಸಿರುವ ಜೀತು ಜೋಸೆಫ್. ಜೀತು ಬಹಳ ಬುದ್ಧಿವಂತಿಕೆಯಿಂದ ಈ ಕಥೆಯನ್ನು ಹೆಣೆದಿದ್ದಾರೆ. ಮೊದಲಾರ್ಧ ಒಂದಿಷ್ಟು ಬಿಡಿ ಘಟನೆಗಳು ನಡೆಯುತ್ತವೆ. ರಾಜೇಂದ್ರ ಪೊನ್ನಪ್ಪ ಹಳೆಯದನ್ನೆಲ್ಲ ಮರೆತು ಚಿತ್ರಮಂದಿರ ಆರಂಭಿಸಿರುತ್ತಾನೆ, ಚಿತ್ರ ಮಾಡಬೇಕು ಎಂದು ಒಬ್ಬ ಕಥೆಗಾರರ ಹತ್ತಿರ ಆಗಾಗ ಚರ್ಚೆ ಮಾಡುತ್ತಿರುತ್ತಾನೆ, ಇನ್ಯಾರದ್ದೋ ಜತೆಗೆ ಕೂತು ಗುಂಡು ಹಾಕುತ್ತಿರುತ್ತಾನೆ, ಆಫೀಸ್-ಚಿತ್ರಮಂದಿರಕ್ಕೆ ಸಿಸಿಟಿವಿ ಹಾಕಿಸುವಲ್ಲಿ ತೊಡಗಿಸಿಕೊಂಡಿರುತ್ತಾನೆ … ಒಟ್ಟಾರೆ ಮೂಲಕಥೆಗೂ, ಈಗಾಗುತ್ತಿರುವುದಕ್ಕೂ ಸಂಬಂಧವೇ ಇಲ್ಲ ಎನ್ನುವಂತೆ ಚಿತ್ರ ಸಾಗುತ್ತಿರುತ್ತದೆ. ಆದರೆ, ಅದೆಲ್ಲಕ್ಕೂ ಒಂದು ಉತ್ತರ ಅಂತ ಸಿಗುವುದು ದ್ವಿತೀಯಾರ್ಧದಲ್ಲಿ. ಮೊದಲಾರ್ಧ ಪೊನ್ನಪ್ಪ ಮಾಡುವ ಪ್ರತಿ ಕೆಲಸಕ್ಕೂ, ದ್ವಿತೀಯಾರ್ಧದಲ್ಲಿ ಉತ್ತರ ಸಿಗುತ್ತದೆ. ಹಾಗಾಗಿ, ಮೊದಲಾರ್ಧ ಸ್ವಲ್ಪ ತಾಳ್ಮೆಯಿಂದ ನೋಡಿಬಿಟ್ಟರೆ, ದ್ವಿತೀಯಾರ್ಧವಂತೂ ಮೊದಲ ಭಾಗದಷ್ಟೇ ಭಾವುಕ ಮತ್ತು ರೋಚಕ. ಇಂಥದ್ದೊಂದು ಬಿಗಿಯಾದ ಚಿತ್ರಕಥೆಗೆ ನಟನೆ, ನಿರೂಪಣೆ, ಹಿನ್ನೆಲೆ ಸಂಗೀತ, ಸಂಕಲನ ಎಲ್ಲವೂ ಪೂರಕವಾಗಿದೆ. ಅದರಲ್ಲೂ ರವಿಚಂದ್ರನ್ ಏಳು ವರ್ಷಗಳ ನಂತರವೂ ಅದೇ ಚಾಮ್ರ್ ಉಳಿಸಿಕೊಂಡಿದ್ದಾರೆ. ಇಲ್ಲಿ ಅವರ ಪಾತ್ರಕ್ಕೆ ಕ್ಲಾಸಿಕ್ ಕ್ರಿಮಿನಲ್ ಎಂಬ ಬಿರುದು ನೀಡಲಾಗಿದ್ದು, ಅದಕ್ಕೆ ಪೂರಕವಾಗಿ ರವಿಚಂದ್ರನ್ ಕಾಣಿಸಿಕೊಂಡಿದ್ದಾರೆ. ಅನಂತ್ ನಾಗ್ ಅವರದ್ದು ತೂಕದ ಅಭಿನಯ. ನವ್ಯಾ ನಾಯರ್, ಆರೋಹಿ, ಪ್ರಭು, ಪ್ರಮೋದ್ ಶೆಟ್ಟಿ ಎಲ್ಲರೂ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ.

    ಒಮಿಕ್ರಾನ್​ ಮಾರಕವಲ್ಲ ಎಂಬ ಅಭಿಪ್ರಾಯದ ಬೆನ್ನಿಗೇ ಹೊರಬಿತ್ತು ಅದು ಜಾಗತಿಕವಾಗಿ ಅಪಾಯಕಾರಿ ಎನ್ನುವ ವಿಷಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts