More

    ಗದಗದಲ್ಲಿ ಕುಡಿಯುವ ನೀರು ಪೋಲು

    ಗದಗ: ಕಳೆದ ಹಲವಾರು ದಿನಗಳಿಂದ ನಗರದ ಮುಂಡರಗಿ ರಸ್ತೆಯಲ್ಲಿರುವ ಎಲ್​ಐಸಿ ಕಚೇರಿ ಸಮೀಪ ಕುಡಿಯುವ ನೀರಿನ ಪೈಪ್ ಒಡೆದು ನಿತ್ಯ ಸಾವಿರಾರು ಲೀಟರ್ ನೀರು ಪೋಲಾಗುತ್ತಿದೆ.

    ಗದಗ-ಬೆಟಗೇರಿ ನಗರಸಭೆಯಲ್ಲಿ ಜನಪ್ರತಿನಿಧಿಗಳು ಇಲ್ಲದಿರುವುದರಿಂದ ಅಧಿಕಾರಿಗಳು ಮಾಡಿದ್ದೇ ಕಾರುಬಾರು ಎನ್ನುವಂತಾಗಿದೆ. ಕುಡಿಯುವ ನೀರು ಯೋಜನೆಯ ಜವಾಬ್ದಾರಿ ಹೊತ್ತಿರುವ ಕರ್ನಾಟಕ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ಇಲಾಖೆ (ಕೆಯುಐಡಿಎಫ್​ಸಿ) ಅಧಿಕಾರಿಗಳು ಏನು ಮಾಡುತ್ತಿದ್ದಾರೋ ತಿಳಿಯದಾಗಿದೆ ಎಂದು ಜನ ಆರೋಪಿಸುತ್ತಿದ್ದಾರೆ.

    ನಗರಸಭೆಗೆ ಜನಪ್ರತಿನಿಧಿಗಳು ಇಲ್ಲದಿರುವುದನ್ನೇ ದುರುಪಯೋಗ ಮಾಡಿಕೊಂಡಿರುವ ಅಧಿಕಾರಿ ವರ್ಗ ಕೆಲಸ ಮಾಡುತ್ತಿಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ನಗರಸಭೆಯ ಉಸ್ತುವಾರಿ ವಹಿಸಿಕೊಂಡಿರುವ ಜಿಲ್ಲಾಧಿಕಾರಿ ಸುಂದರೇಶಬಾಬು ಸಹ ಈ ಕುರಿತು ಕಟ್ಟುನಿಟ್ಟಿನ ಆದೇಶ ಹೊರಡಿಸದ ಹಿನ್ನೆಲೆಯಲ್ಲಿ ಅಧಿಕಾರಿಗಳಿಗೆ ಮೂಗುದಾರ ಹಾಕುವವರಿಲ್ಲದಂತಾಗಿದೆ.

    ಗದಗ ಬೆಟಗೇರಿ ಅವಳಿ ನಗರದಲ್ಲಿ 24*7 ಕುಡಿಯುವ ನೀರು ಯೋಜನೆ ಜಾರಿಗೊಂಡಿದೆ. ಕೆಲ ಬಡಾವಣೆಗೆ ಎರಡ್ಮೂರು ದಿನಗಳಿಗೊಮ್ಮೆ ನಿಯಮಿತವಾಗಿ ನೀರು ಪೂರೈಕೆಯಾಗುತ್ತಿದೆ. ಆದರೆ, ಸ್ಲಂ ಮತ್ತು ಮೂಲಸೌಕರ್ಯದಿಂದ ಹಿಂದುಳಿದ ಪ್ರದೇಶಗಳಿಗೆ ನೀರು ಪೂರೈಕೆಯ ಸಮಯವನ್ನೇ ನಿಗದಿಪಡಿಸಿಲ್ಲ. ಪೈಪ್ ಒಡೆಯುವುದು, ಸೋರಿಕೆ ಆಗುವುದರಿಂದ ಜನರಿಗೆ ಸಮಯಕ್ಕೆ ಸರಿಯಾಗಿ ನೀರು ಪೂರೈಸಲು ಆಗುತ್ತಿಲ್ಲ. ಇದರಿಂದ ಅಲ್ಲಿನ ಜನರು ತೊಂದರೆ ಅನುಭವಿಸುತ್ತಿದ್ದಾರೆ. ವರ್ಷಪೂರ್ತಿ ದುರಸ್ತಿ ಮಾಡುವುದರಲ್ಲಿಯೇ ಸಮಯ ಕಳೆಯಲಾಗುತ್ತಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ‘ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಬಳಿಯ ತುಂಗಭದ್ರಾ ನದಿಯಿಂದ ನಗರಕ್ಕೆ ನೀರು ಸರಬರಾಜಾಗುತ್ತಿದೆ. ಅದರಲ್ಲಿ ಅರ್ಧದಷ್ಟು ನೀರು ಮಾರ್ಗದಲ್ಲಿ ಬರುವ ಜಮೀನುಗಳಿಗೆ ಬಳಕೆಯಾಗುತ್ತಿದೆ. ಇದನ್ನು ತಡೆದು ಸಮರ್ಪಕವಾಗಿ ಜನರಿಗೆ ಕುಡಿಯುವ ನೀರು ಒದಗಿಸಬೇಕು’ ಎಂದು ಅಖಿಲ ಕರ್ನಾಟಕ ಮುಸ್ಲಿಂ ಮಹಾಸಭಾ ಸಂಘಟನೆ ಅಧ್ಯಕ್ಷ ಮಹ್ಮದ್​ಶಫಿ ನಾಗರಕಟ್ಟಿ ಒತ್ತಾಯಿಸಿದ್ದಾರೆ.

    ಗದಗ ನಗರದ ಮುಂಡರಗಿ ರಸ್ತೆಯಲ್ಲಿ ಕುಡಿಯುವ ನೀರು ಸೋರಿಕೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಈಗಾಗಲೇ ಮೂರು ಸಲ ರಿಪೇರಿ ಮಾಡಲಾಗಿದೆ. ಆದರೆ, ಪೈಪ್ ಹಳೆಯದಾಗಿದ್ದರಿಂದ ವೆಲ್ಡಿಂಗ್ ಹಿಡಿಯುತ್ತಿಲ್ಲ. ಹೀಗಾಗಿ ಸಮಸ್ಯೆ ಉಂಟಾಗಿದೆ. ಹೈದರಾಬಾದ್​ನಿಂದ ಹೊಸ ಪೈಪ್ ತರಿಸಲಾಗುತ್ತಿದ್ದು, 2-3 ದಿನಗಳಲ್ಲಿ ಸರಿಯಾಗಲಿದೆ.
    ಸುರೇಶ ಭಜಣ್ಣವರ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಕೆಯುಐಡಿಎಫ್​ಸಿ, ಗದಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts