More

    ಕುಡಿಯುವ ನೀರಿಗೆ ಸಮಸ್ಯೆ ಆಗಬಾರದು

    ಶ್ರೀರಂಗಪಟ್ಟಣ: ಮುಂಬರುವ ಬೇಸಿಗೆ ವೇಳೆಗೆ ಕ್ಷೇತ್ರದ ಯಾವ ಗ್ರಾಮಗಳಲ್ಲೂ ಜಾನುವಾರುಗಳು ಹಾಗೂ ಜನರಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಬರಗಾಲವನ್ನು ಸಮರ್ಥವಾಗಿ ಎದುರಿಸಲು ತಾಲೂಕಿನ ಎಲ್ಲ ಇಲಾಖೆಗಳು ಎಚ್ಚರಿಕೆ ಕ್ರಮ ವಹಿಸಬೇಕು ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ತಾಕೀತು ಮಾಡಿದರು.

    ಪಟ್ಟಣ ಪುರಸಭೆಯ ಸಭಾಂಗಣದಲ್ಲಿ ಮಂಗಳವಾರ ಎಲ್ಲ ಇಲಾಖೆಗಳ ಅಧಿಕಾರಿಗಳೊಂದಿಗೆ ವಿಪತ್ತು ನಿರ್ವಹಣಾ ಟಾಸ್ಕ್‌ಫೋರ್ಸ್ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಪ್ರಸ್ತುತ ರಾಜ್ಯದಲ್ಲಿ ಸರ್ಕಾರದಿಂದ ಬರಗಾಲ ಘೋಷಣೆಯಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ತಾಲೂಕಿನ ಯಾವ ಗ್ರಾಮಗಳಲ್ಲೂ ಕುಡಿಯುವ ನೀರು ಹಾಗೂ ಜಾನುವಾರುಗಳ ಮೇವು ಸಂಬಂಧ ಸಮಸ್ಯೆ ತಲೆದೋರಿಲ್ಲ. ಆದರೆ ಡಿಸೆಂಬರ್ ಅಂತ್ಯ ಮತ್ತು ಜನವರಿ ವೇಳೆಗೆ ಕೊಂಚ ಸಮಸ್ಯೆ ಕಾಣಲಿದೆ. ಅದಕ್ಕೆ ಮುಂಚೆಯೇ ಯಾವ ಯಾವ ಗ್ರಾಮಗಳಲ್ಲಿ ನೀರಿನ ಕೊರತೆ ಇದೆ ಅದನ್ನು ಪರಿಶೀಲಿಸಿ ತಕ್ಷಣ ಪಟ್ಟಿ ನೀಡಬೇಕು. ಯಾವ ಗ್ರಾಮಗಳಲ್ಲಿ ಶುದ್ಧ ನೀರಿನ ಘಟಕಗಳು ಕೆಟ್ಟಿವೆಯೋ ಅವುಗಳು ದುರಸ್ತಿಯಾಗಿ ನೀರು ಪೂರೈಕೆಯಾಗಬೇಕು. ಜತೆಗೆ ಜಾನುವಾರುಗಳ ಕುಡಿಯುವ ನೀರಿನ ಸಾರ್ವಜನಿಕ ತೊಟ್ಟಿಗಳನ್ನು ಶುಚಿತ್ವಗೊಳಿಸಿ ನೀರು ತುಂಬಿಸಬೇಕು. ಮುಖ್ಯವಾಗಿ ರೈತಾಪಿ ಜನರ ಕೃಷಿಗೆ ಪೂರೈಸುವ ವಿದ್ಯುತ್ ಸಂಬಂಧ ಸೆಸ್ಕ್ ಎಚ್ಚರ ವಹಿಸಬೇಕು. ವಿದ್ಯುತ್ ಕೊರತೆ ಸೇರಿದಂತೆ ಯಾವುದೇ ಇಲಾಖೆಗಳ ವ್ಯಾಪ್ತಿಯಲ್ಲೂ ಜನರ ದೂರು ಮತ್ತು ಸಮಸ್ಯೆಗಳು ಕಂಡುಬಂದಲ್ಲಿ ತಾತ್ಸಾರ ಮಾಡದೆ ತಕ್ಷಣ ಪಟ್ಟಿ ಮಾಡಿ ನನ್ನ ಗಮನಕ್ಕೆ ತರಬೇಕು ಎಂದು ಸೂಚಿಸಿದರು.

    ಉಳಿದಂತೆ ಆಡಳಿತಾತ್ಮಕವಾಗಿ ಎಲ್ಲ ಇಲಾಖೆ ಅಧಿಕಾರಿಗಳಿಂದ ಆಯಾ ಕಾರ್ಯ ವ್ಯಾಪ್ತಿಗೆ ತಕ್ಕಂತೆ ಕ್ಷೇತ್ರದ ಕುರಿತು ಮಾಹಿತಿ ಪಡೆದ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಪಿಡಿಒಗಳು ಗ್ರಾಮೀಣ ಪ್ರದೇಶಕ್ಕೆ ಭೇಟಿ ನೀಡಿ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಸಲಹೆ ನೀಡಿದರು.

    ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ, ತಾಪಂ ಇಒ ವೇಣು, ಮೀನುಗಾರಿಕೆ ಇಲಾಖೆ ಉಪನಿರ್ದೇಶಕ(ನೋಡಲ್ ಅಧಿಕಾರಿ) ಬಾಬಾ ಸಾಹೇಬ್ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts