More

    ಹಿಂದು ಸಂಘಟನೆಗಳಿಂದ ಪ್ರತಿಭಟನೆ

    ಶ್ರೀರಂಗಪಟ್ಟಣ: ಹುಬ್ಬಳ್ಳಿಯ ನೇಹಾ ಹಿರೇಮಠ ಹತ್ಯೆ ಪ್ರಕರಣ ಹಾಗೂ ಯಾದಗಿರಿಯಲ್ಲಿ ನಡೆದ ದಲಿತ ಯುವಕ ರಾಕೇಶ್‌ನ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆ ಒಳಪಡಿಸಿ, ಇದರಲ್ಲಿ ಭಾಗಿಯಾಗಿರುವ ಅಪರಾಧಿಗಳನ್ನು ಶೀಘ್ರ ನೇಣು ಶಿಕ್ಷೆಗೆ ಒಳಪಡಿಸಿ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿ ಹಿಂದು ಸಂಘಟನೆಗಳು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದವು.

    ಪಟ್ಟಣದ ತಾಲೂಕು ಕಚೇರಿಯ ಮುಂಭಾಗ ಮಂಗಳವಾರ ವಿಶ್ವ ಹಿಂದು ಪರಿಷತ್, ಬಜರಂಗದಳ ಸೇರಿದಂತೆ ವಿವಿಧ ಹಿಂದು ಸಂಘಟನೆಗಳ ಕಾರ್ಯಕರ್ತರು ಜಮಾಯಿಸಿ ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ಭೀಕರವಾಗಿ ಹತ್ಯೆಯಾದ ವಿದ್ಯಾರ್ಥಿನಿ ನೇಹಾ ಹಾಗೂ ಯುವಕ ರಾಕೇಶ್ ಹತ್ಯೆಯನ್ನು ಖಂಡಿಸಿದರು. ಅಲ್ಲದೆ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ವಿಶ್ವ ಹಿಂದು ಪರಿಷತ್‌ನ ಜಿಲ್ಲಾ ಕಾರ್ಯದರ್ಶಿ ಸುನೀಲ್ ಮಾತನಾಡಿ, ರಾಜ್ಯಾದ್ಯಂತ ಹಿಂದು ಯುವತಿಯರನ್ನು ಲವ್‌ಜಿಹಾದ್‌ಗೆ ಒಳಪಡಿಸುವ ಕಾರ್ಯ ಮುಸ್ಲಿಂ ಯುವಕರಿಂದ ಸಕ್ರಿಯವಾಗಿ ನಡೆಯುತ್ತಿದ್ದು, ಇದಕ್ಕೆ ವ್ಯವಸ್ಥಿತವಾಗಿ ಹಲವು ಮುಸ್ಲಿಂ ಸಂಘಟನೆಗಳು ಪ್ರಚೋದಿಸಿ ಬೆಂಬಲ ನೀಡಿವೆ. ಅಲ್ಲದೆ ಹಿಂದು ವ್ಯಾಪಾರಿಗಳು ಸೇರಿದಂತೆ ಬಡ ಯುವಕರ ಮೇಲೆ ದಾಳಿ ಮಾಡಿ ಹತ್ಯೆ ಮಾಡುವಂತಹ ಕೃತ್ಯ ಮೇಲಿಂದ ಮೇಲೆ ನಡೆಯುತ್ತಿವೆ ಎಂದರು.

    ಇದಕ್ಕೆ ಸಾಕ್ಷಿಯಾಗಿ ಲವ್ ಜಿಹಾದ್‌ಗೆ ವಿರೋಧ ವ್ಯಕ್ತಪಡಿಸಿದ ವಿದ್ಯಾರ್ಥಿನಿ ನೇಹಾಳನ್ನು ಮುಸ್ಲಿಂ ಯುವಕ ಫಯಾಜ್ ಆಕೆ ಓದುತ್ತಿದ್ದ ಕಾಲೇಜು ಕ್ಯಾಂಪಸ್‌ನಲ್ಲೇ ಬರ್ಬರವಾಗಿ ಚೂರಿಯಿಂದ ಇರಿದು ಕೊಂದಿರುವುದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕೆಟ್ಟಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಮತ್ತೊಂದು ಪ್ರಕರಣದಲ್ಲಿ ಯಾದಗಿರಿಯ ದಲಿತ ಯುವಕ ರಾಕೇಶ್‌ನನ್ನು ಮುಸ್ಲಿಂ ಜನರು ಹತ್ಯೆಗೈದಿದ್ದು, ಒಂದು ದಿನದ ಬಳಿಕ ಘಟನೆ ಬೆಳಕಿಗೆ ಬಂದು ಪ್ರಕರಣ ದಾಖಲಿಸಿಕೊಳ್ಳುವಲ್ಲಿ ಪೊಲೀಸರು ತಡ ಮಾಡಿದ್ದಾರೆ. ನಮ್ಮ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ಮುಸ್ಲಿಂ ವ್ಯಾಪಾರಿಯೊಬ್ಬ ಹಿಂದು ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿ ಸಾರ್ವಜನಿಕವಾಗಿ ಗೂಸಾ ತಿಂದಿರುವ ಪ್ರಕರಣ ನಡೆದಿದೆ. ರಾಜ್ಯ ಸರ್ಕಾರ ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.

    ಬಜರಂಗದಳ ತಾಲೂಕು ಸಂಚಾಲಕ ಶಂಕರ್, ಧರ್ಮ ಪ್ರಚಾರ ಸಂಚಾಲಕ ಸಂತೋಷ್, ತಾಲೂಕು ಸಹ ಕಾರ್ಯದರ್ಶಿ ಅವಿನಾಶ್, ಮುಖಂಡರಾದ ವಕೀಲ ಜಯಕುಮಾರ್, ಚಂದಗಾಲು ಶಂಕರ್, ಇಂದ್ರ ಕುಮಾರ್ ಪಾಲಹಳ್ಳಿ ಸಂತೋಷ್, ಅವಿನಾಶ್, ಪ್ರದೀಪ್, ವಿನಾಯಕ, ಕುಮಾರ್, ಮಹೇಶ್, ಚಿನ್ಮಯ್, ಆಕಾಶ್, ಶಿವು, ಹೇಮಂತ್ ಹಲವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts