More

    ಪಾಂಡವಪುರ ತಾಲೂಕು ಕಚೇರಿ ಮುತ್ತಿಗೆ

    ಪಾಂಡವಪುರ: ಕೆರೆ ಅಭಿವೃದ್ಧಿಗಾಗಿ ರೈತರಿಂದ ಸ್ವಾಧೀನಪಡಿಸಿಕೊಂಡ ಬಳಿಕ ಹೆಚ್ಚುವರಿಯಾಗಿ ಉಳಿದಿದ್ದ ಜಮೀನನ್ನು ಕಂದಾಯ ಇಲಾಖೆ ಅಧಿಕಾರಿಗಳು ಅಕ್ರಮವಾಗಿ ವ್ಯಕ್ತಿಯೊಬ್ಬರಿಗೆ ವರ್ಗಾಯಿಸಿದ್ದು, ಇದರ ಪಹಣಿ ರದ್ದು ಪಡಿಸಬೇಕು ಎಂದು ಆಗ್ರಹಿಸಿ ತಾಲೂಕಿನ ಮಾಡರಹಳ್ಳಿ ಗ್ರಾಮಸ್ಥರು ಸೋಮವಾರ ತಾಲೂಕು ಕಚೇರಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

    ಮಾಡರಹಳ್ಳಿ ಗ್ರಾಮದಲ್ಲಿ ಹೊಸಕೆರೆ ನಿರ್ಮಾಣಕ್ಕಾಗಿ ಗ್ರಾಮದ 54 ರಿಂದ 67 ಮತ್ತು 99ರ ಸರ್ವೇ ನಂಬರ್‌ಗಳ ರೈತರ ಜಮೀನನ್ನು ಸ್ವಾಧೀನಪಡಿಸಿಕೊಂಡು ನೀರಾವರಿ ಇಲಾಖೆಗೆ ಹಸ್ತಾಂತರಿಸಲಾಗಿತ್ತು. ಈ ಜಮೀನಿನ ಮೇಲೆ ಕಂದಾಯ ಇಲಾಖೆಗೆ ಯಾವುದೇ ಹಕ್ಕು ಇಲ್ಲವಾದರೂ ತಾಲೂಕಿನ ಸುಂಕಾತೊಣ್ಣೂರು ಗ್ರಾಮದ ಕಾಳೇಗೌಡ ಅವರಿಗೆ 2.19 ಎಕರೆ ಕೆರೆ ಜಮೀನಿಗೆ ಅಕ್ರಮವಾಗಿ ದಾಖಲೆ ಮಾಡಿಕೊಟ್ಟಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

    ಅಕ್ರಮ ದಾಖಲೆಗಳ ಆಧಾರದ ಮೇಲೆ ಕಾಳೇಗೌಡ ಅವರು ಜಮೀನು ದುರಸ್ತು ಮತ್ತು ಪೋಡಿಗಾಗಿ ಪ್ರಯತ್ನಿಸುತ್ತಿದ್ದಾರೆ. ಕೆರೆ ಜಮೀನಿಗೆ ಅಧಿಕಾರಿಗಳು ಸೃಷ್ಟಿಸಿರುವ ದಾಖಲೆಗಳನ್ನು ವಜಾ ಮಾಡಬೇಕು. ಕೆರೆಯ ಪಕ್ಕದ ಜಮೀನಿನಲ್ಲಿ ಕೃಷಿ ಚಟುವಟಿಕೆಗಳು ನಡೆದರೆ ಏರಿ ಒಡೆದು ಸಾವಿರಾರು ಎಕರೆ ಜಮೀನು ಮುಳುಗಡೆಯಾಗುತ್ತದೆ. ಕೃಷಿಯೇತರ ಉದ್ದೇಶಕ್ಕೆ ರೈತರಿಂದ ಸ್ವಾಧೀನ ಪಡಿಸಿಕೊಂಡಿರುವ ಜಮೀನು ಇದಾಗಿದ್ದು ಇತರ ಉದ್ದೇಶಕ್ಕೆ ಬಳಸುವುದು ಕಾನೂನುಬಾಹಿರವಾಗಿದೆ ಎಂದರು.

    ಕೂಡಲೇ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ವಜಾಗೊಳಿಸಿ ಯಥಾಸ್ಥಿತಿ ಮುಂದುವರಿಸುವಂತೆ ಮನವಿ ಮಾಡಿದರು. ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ ಮಾತನಾಡಿದ ಉಪ ತಹಸೀಲ್ದಾರ್ ಎಸ್.ಸಂತೋಷ್, ತಹಸೀಲ್ದಾರ್ ಜಿ.ಎಸ್.ಶ್ರೇಯಸ್ ಅವರು ರಜೆ ಮೇಲಿದ್ದು, ಅವರು ಬಂದ ತಕ್ಷಣ ಈ ಬಗ್ಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

    ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಯೋಗಣ್ಣ, ವಕೀಲ ಸತೀಶ್, ಜವರೇಗೌಡ, ಪಟೇಲ್ ಮಂಚೇಗೌಡ, ಮಂಜು, ಚೆಲುವೇಗೌಡ, ವಿನಯಕುಮಾರ್, ಬೋರೇಗೌಡ, ದೈತೇಗೌಡ, ಕುಳ್ಳೇಗೌಡ, ನಿಂಗಮ್ಮ, ವಿಜಯಮ್ಮ, ಭಾಗ್ಯಮ್ಮ, ಸಾವಿತ್ರಮ್ಮ, ಜಯಮ್ಮ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts