More

    ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ

    ಪಾಂಡವಪುರ: ಕುಡಿಯುವ ನೀರು ಪೂರೈಸುವಲ್ಲಿ ಅಧಿಕಾರಿಗಳು ವಿಫಲರಾಗಿರುವುದರಿಂದ ವಾರ್ಡ್‌ನಲ್ಲಿ ನೀರಿಗಾಗಿ ಹಾಹಾಕಾರ ಎದುರಾಗಿದೆ ಎಂದು ಆರೋಪಿಸಿ ಪಟ್ಟಣದ 11 ವಾರ್ಡ್‌ನ ನಿವಾಸಿಗಳು ಸದಸ್ಯ ಶಿವಕುಮಾರ್ ನೇತೃತ್ವದಲ್ಲಿ ಸೋಮವಾರ ಪುರಸಭೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

    ಪುರಸಭೆ ಆವರಣದಲ್ಲಿ ಮಕ್ಕಳೊಂದಿಗೆ ಜಮಾವಣೆಗೊಂಡ ಮಹಿಳೆಯರು, ಖಾಲಿ ಕೊಡ ಪ್ರದರ್ಶನ ಮಾಡಿದರು. ಬಳಿಕ ಪುರಸಭೆ ಅಧಿಕಾರಿಗಳನ್ನು ಕಚೇರಿಯಿಂದ ಹೊರಗೆ ಕಳುಹಿಸಿ ಬಾಗಿಲು ಬಂದ್ ಮಾಡಿ, ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

    ಪೈಪ್‌ಲೈನ್ ಅಳವಡಿಕೆಯಾಗಿ ಕಾಮಗಾರಿ ಪೂರ್ಣಗೊಂಡರೂ ಪುರಸಭೆ ಇಂಜಿನಿಯರ್ ಚೌಡಪ್ಪ ಕಮಿಷನ್ ಆಸೆಗಾಗಿ ನೀರು ಸರಬರಾಜಿಗೆ ಕ್ರಮ ಕೈಗೊಳ್ಳುತ್ತಿಲ್ಲ. 30 ವರ್ಷಗಳಿಂದಲೂ ಇಲ್ಲಿನ ನಿವಾಸಿಗಳು ಇದೇ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ನೀರಿಗಾಗಿ ಕುಟುಂಬದ ಸದಸ್ಯರು ಬಿಂದಿಗೆ ಹಿಡಿದು ಅಲೆಯಬೇಕಿದೆ. ಫಿಲ್ಟರ್ ನೀರು ಕುಡಿಯುವ ಅಧಿಕಾರಿಗಳಿಗೆ ಬಡವರ ನೀರಿಗಾಗಿ ಅಲೆಯುವುದು ಕಾಣಿವುದಿಲ್ಲ ಎಂದು ಕಿಡಿಕಾರಿದರು.

    ವಾರ್ಡ್ ಸದಸ್ಯ ಶಿವಕುಮಾರ್ ಮಾತನಾಡಿ, ಇಲ್ಲಿನ ನಿವಾಸಿಗಳಿಗೆ ಕುಡಿಯುವ ನೀರು ಪೂರೈಸಲೆಂದೆ ಪಟ್ಟಣದ ಗಡಿ ಭಾಗ ಹಾಗೂ ಹಾರೋಹಳ್ಳಿ ಬಳಿ 4.10 ಕೋಟಿ ರೂ. ವೆಚ್ಚದಲ್ಲಿ 5 ಲಕ್ಷ ಲೀಟರ್ ಸಾಮರ್ಥ್ಯದ ಎರಡು ಓವರ್ ಹೆಡ್ ಟ್ಯಾಂಕ್‌ಗಳನ್ನು ನಿರ್ಮಾಣ ಮಾಡಲು ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಅನುದಾನ ಬಿಡುಗಡೆಗೊಳಿಸಿದ್ದರು. ಈ ಎರಡೂ ಟ್ಯಾಂಕ್‌ಗಳ ಕೆಲಸ 2020ರಲ್ಲೇ ಪೂರ್ಣಗೊಂಡಿದೆ. ಅದಕ್ಕೆ ಪೈಪ್‌ಲೈನ್ ಅಳವಡಿಕೆಗಾಗಿ 15ನೇ ಹಣಕಾಸು ಯೋಜನೆಯಡಿ 24.75 ಲಕ್ಷ ರೂ., ಪುರಸಭೆಯಿಂದ 19.75 ಲಕ್ಷ ರೂ. ಹಾಗೂ ಎಸ್‌ಸಿಎಫ್‌ಸಿ 5 ಲಕ್ಷ ರೂ. ಸೇರಿದಂತೆ ಒಟ್ಟಾರೆ 56.25 ಲಕ್ಷ ರೂ.ಅನುದಾನ ಬಿಡುಗಡೆಯಾಗಿ ಗುತ್ತಿಗೆದಾರರ ಕೈ ಸೇರಿದೆ. ಕಾಮಗಾರಿ ಪೂರ್ಣಗೊಂಡು ಎರಡೂ ಟ್ಯಾಂಕ್‌ಗಳನ್ನು ಪುರಸಭೆ ಸ್ವಾಧೀನಕ್ಕೆ ತೆಗೆದುಕೊಂಡಿದ್ದರೂ ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಸಲು ಪುರಸಭೆ ಇಂಜಿನಿಯರ್ ಚೌಡಪ್ಪ ಅವರಿಗೆ ಸಾಧ್ಯವಾಗಿಲ್ಲ. ಹೀಗಾಗಿ ವಾರ್ಡ್‌ನ ಜನತೆಗೆ ನೀರು ಪೂರೈಕೆಗಾಗಿ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

    ರಜೆ ಮೇಲಿದ್ದ ಪುರಸಭೆ ಮುಖ್ಯಾಧಿಕಾರಿ ವೀಣಾ ಅವರು ದೂರವಾಣಿ ಕರೆ ಮೂಲಕ ಅಗತ್ಯ ಕ್ರಮದ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಡಲಾಯಿತು. ಪುರಸಭೆ ಪರಿಸರ ಇಂಜಿನಿಯರ್ ಶಫಿನಾಜ್ ಅವರ ಮೂಲಕ ಉಪವಿಭಾಗಾಧಿಕಾರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.

    ಪ್ರತಿಭಟನೆಯಲ್ಲಿ ವಾರ್ಡ್‌ನ ಮುಖಂಡರಾದ ರಾಜೇಶ್, ಬಾಲಣ್ಣ, ಮಲ್ಲಣ್ಣ, ಮಂಗಳಮ್ಮ, ಲಕ್ಷ್ಮೀ, ಶಿವಮ್ಮ, ಹೇಮಾ ಇತರರು ಇದ್ದರು.

    ವಾರ್ಡ್‌ಗೆ ಕುಡಿಯುವ ನೀರು ಸರಬರಾಜು ಮಾಡಲು ತಾತ್ಕಾಲಿಕ ಕ್ರಮ ಕೈಗೊಳ್ಳಲಾಗಿದ್ದು ನೀರು ಪೂರೈಕೆಯಾಗುತ್ತಿದೆ. ಟ್ಯಾಂಕ್‌ನಿಂದ ನೀರು ಪೂರೈಕೆಗಾಗಿ ಕೈಗೊಂಡಿರುವ ಕಾಮಗಾರಿಯ ಸಣ್ಣ-ಪುಟ್ಟ ಕೆಲಸ ಬಾಕಿ ಇದ್ದು, ಅಮೃತ್ ಯೋಜನೆ ಕಾಮಗಾರಿ ಕೂಡ ಪ್ರಗತಿಯಲ್ಲಿದೆ. ಶೀಘ್ರ ಕುಡಿಯುವ ನೀರು ಸರಬರಾಜಿಗೆ ಕ್ರಮ ಕೈಗೊಳ್ಳಲಾಗುವುದು.
    ವೀಣಾ, ಪುರಸಭೆ ಮುಖ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts