More

    877 ಪ್ರದೇಶಗಳಿಗೆ ಶಾಶ್ವತ ಕುಡಿಯುವ ನೀರು ಯೋಜನೆ, ಸಂಸದ ಬಿ.ವೈ.ರಾಘವೇಂದ್ರ ಮಾಹಿತಿ

    ಗಂಗೊಳ್ಳಿ: ಮನೆಗಳಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಕೇಂದ್ರ ಸರ್ಕಾರ ಜಲಜೀವನ್ ಮಿಷನ್ ಯೋಜನೆ ಅನುಷ್ಠಾನಗೊಳಿಸಿದ್ದು, ಬೈಂದೂರು ವಿಧಾನಸಭಾ ಕ್ಷೇತ್ರದ 43 ಗ್ರಾ.ಪಂ.ನ 67 ಗ್ರಾಮಗಳ 877 ಜನವಸತಿ ಪ್ರದೇಶಗಳಿಗೆ ಶಾಶ್ವತ ಕುಡಿಯುವ ನೀರು ಒದಗಿಸಲು 505 ಕೋಟಿ ರೂ. ವೆಚ್ಚದಲ್ಲಿ ಎರಡು ಯೋಜನೆಗಳನ್ನು ರೂಪಿಸಲಾಗಿದೆ. ನಬಾರ್ಡ್, ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಹಭಾಗಿತ್ವದ ಈ ಯೋಜನೆ ಕಾಮಗಾರಿ ಎರಡು ವರ್ಷದಲ್ಲಿ ಪೂರ್ಣಗೊಳ್ಳಲಿದೆ ಎಂದು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು.
    ಮಂಗಳವಾರ ಬೈಂದೂರು ಕುಡಿಯುವ ನೀರಿನ ಯೋಜನೆ ರೂಪುರೇಷೆ ಕುರಿತ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗಿನ ಪೂರ್ವ ಸಿದ್ಧತಾ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

    ಶಂಕರನಾರಾಯಣ ಸಮೀಪ ಹಾಗೂ ಗುಲ್ವಾಡಿ ಸೇತುವೆ ಬಳಿಯಿಂದ ನೀರು ಪೂರೈಕೆಗೆ ಪಂಪಿಂಗ್ ಮಾಡಲು ಈಗಾಗಲೇ ಯೋಜನೆ ಸಿದ್ಧಪಡಿಸಲಾಗಿದೆ. ಅಲ್ಲಿಂದ ಕೊಲ್ಲೂರು ಕಡೆಗೆ, ಬೈಂದೂರು, ಶಿರೂರು ಕಡೆ ಹಾಗೂ ಇನ್ನುಳಿದ ಗ್ರಾಮೀಣ ಭಾಗಗಳಿಗೆ ಆದ್ಯತೆ ಮೇರೆಗೆ ನೀರು ಪೂರೈಕೆ ಮಾಡಲಾಗುತ್ತದೆ. ಈ ಯೋಜನೆಗಾಗಿ ನಬಾರ್ಡ್‌ನಿಂದ 181 ಕೋಟಿ, ಕೇಂದ್ರದ ಜಲಜೀವನ್ ಮಿಷನ್‌ನಡಿ 135 ಕೋಟಿ ಹಾಗೂ ರಾಜ್ಯದಿಂದ 123 ಕೋಟಿ ಸೇರಿದಂತೆ ಒಟ್ಟಾರೆ 505 ಕೋಟಿ ರೂ. ಬಿಡುಗಡೆಯಾಗಲಿದೆ ಎಂದು ವಿವರಿಸಿದರು.

    220 ಓವರ್ ಹೆಡ್ ಟ್ಯಾಂಕ್: ಕ್ಷೇತ್ರದಲ್ಲಿ ಪ್ರಸ್ತುತ 59,386 ಮನೆಗಳಿದ್ದು, ಮುಂದಿನ ಐದು ವರ್ಷಗಳಲ್ಲಿ 71 ಸಾವಿರಗಳಾಗುವ ನಿರೀಕ್ಷೆಯಿದೆ. ಇದನ್ನು ಗಮನದಲ್ಲಿಟ್ಟು ಯೋಜನೆ ಸಿದ್ಧಪಡಿಸಲಾಗಿದೆ. ಕ್ಷೇತ್ರದಲ್ಲಿ 132 ಓವರ್‌ಹೆಡ್ ಟ್ಯಾಂಕ್‌ಗಳಿದ್ದು, ಹೊಸದಾಗಿ 220 ಟ್ಯಾಂಕ್ ನಿರ್ಮಾಣವಾಗಲಿದೆ. ಇವುಗಳಲ್ಲಿ 10 ಸಾವಿರ ಲೀಟರ್‌ನಿಂದ ಆರಂಭಗೊಂಡು 2 ಲಕ್ಷ ಲೀ. ನೀರು ಸಂಗ್ರಹ ಮಾಡುವಷ್ಟು ಸಾಮರ್ಥ್ಯವಿರಲಿದೆ. 5 ವರ್ಷಗಳವರೆಗೆ ನಿರ್ವಹಣೆ ಹೊಣೆಗೂ ಅನುದಾನ ಕಾಯ್ದಿರಿಸಲಾಗುವುದು. ನಂತರ ಸ್ಥಳೀಯ ಪಂಚಾಯಿತಿಗೆ ವಹಿಸಿಕೊಡಲಾಗುವುದು ಎಂದು ಸಂಸದರು ತಿಳಿಸಿದರು. ಮುಖ್ಯಮಂತ್ರಿ ಕಚೇರಿ ಉಪ ಕಾರ‌್ಯದರ್ಶಿ ರವಿ, ವಿಶೇಷ ಅಧಿಕಾರಿ ರಾಜಪ್ಪ, ಜಿ.ಪಂ. ಸದಸ್ಯರಾದ ಬಾಬು ಶೆಟ್ಟಿ, ಸುರೇಶ್ ಬಟವಾಡಿ, ಶಂಕರ ಪೂಜಾರಿ, ಶೋಭಾ ಜಿ. ಪುತ್ರನ್, ರೋಹಿತ್ ಕುಮಾರ್ ಶೆಟ್ಟಿ, ಬೈಂದೂರು ಬಿಜೆಪಿ ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಬೈಂದೂರು ತಾಪಂ ಅಧ್ಯಕ್ಷ ಮಹೇಂದ್ರ ಪೂಜಾರಿ, ಕುಂದಾಪುರ ತಾಪಂ ಅಧ್ಯಕ್ಷೆ ಇಂದಿರಾ ಶೆಟ್ಟಿ ಮತ್ತಿತರರಿದ್ದರು.

    ಪ್ರತಿ ಮನೆಗೂ ನೀರು: ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಂಸದ ರಾಘವೇಂದ್ರ ಮುತವರ್ಜಿಯಿಂದಾಗಿ 505 ಕೋಟಿ ರೂ. ವೆಚ್ಚದ ಯೋಜನೆ ಮಂಜೂರಾಗಿದ್ದು, ಪ್ರತಿ ಮನೆಗೂ ನೀರು ಕೊಡುವ ಸಂಕಲ್ಪ 2023ರೊಳಗೆ ಈಡೇರಿದಂತಾಗುತ್ತದೆ. ಇದಲ್ಲದೆ ಸುಬ್ಬರಾಡಿ ಅಣೆಕಟ್ಟು ನಿರ್ಮಾಣ ಮೂಲಕ 30 ವರ್ಷಗಳಿಗೂ ಹೆಚ್ಚು ಕಾಲದ ಕನಸು ನನಸಾದಂತಾಗುತ್ತದೆ. ಇದು 30 ಸಾವಿರ ಜನರಿಗೆ ಕುಡಿಯಲು ಹಾಗೂ ಕೃಷಿಗೆ ನೀರು ಪೂರೈಸಲಿದೆ. ಮಿನಿ ವಿಧಾನಸಭಾ ಕಟ್ಟಡ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಪ್ರವಾಸೋದ್ಯಮ, ಮೀನುಗಾರಿಕೆ ಸೇರಿದಂತೆ ಕ್ಷೇತ್ರದ ಅಭಿವೃದ್ಧಿಗೆ 1,350 ಕೋಟಿ ರೂ.ಗೂ ಮಿಕ್ಕಿ ಅನುದಾನ ತರಿಸಲಾಗಿದೆ ಎಂದು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts