More

    ರಾಹುಲ್ ದ್ರಾವಿಡ್ ಅವರನ್ನು ಗ್ರೇಗ್ ಚಾಪೆಲ್ ಹೊಗಳಿದ್ದು ಯಾಕೆ ಗೊತ್ತೇ?

    ಸಿಡ್ನಿ: ಆಸ್ಟ್ರೇಲಿಯಾ ಕ್ರಿಕೆಟ್‌ನಲ್ಲಿದ್ದ ಪ್ರತಿಭಾನ್ವೇಷಣಾ ವ್ಯವಸ್ಥೆಯನ್ನು ರಾಹುಲ್ ದ್ರಾವಿಡ್ ಅನುಕರಣೆ ಮಾಡಿದ್ದಾರೆ. ಈ ಮೂಲಕ ಭಾರತದಲ್ಲಿ ಆಸ್ಟ್ರೇಲಿಯಾಕ್ಕಿಂತಲೂ ಬಲಿಷ್ಠವಾದ ಕ್ರಿಕೆಟ್ ವ್ಯವಸ್ಥೆಯನ್ನು ರೂಪಿಸಿದ್ದಾರೆ. ಇದರಿಂದ ಭಾರತ ತಂಡ ಈಗ ಬಲಿಷ್ಠವಾದ ಮೀಸಲು ಬಳಗವನ್ನೂ ಹೊಂದಿದೆ ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ಗ್ರೇಗ್ ಚಾಪೆಲ್ ಹೇಳಿದ್ದಾರೆ.

    ಯುವ ಪ್ರತಿಭೆಗಳನ್ನು ಗುರುತಿಸುವಲ್ಲಿ ಈಗ ಆಸ್ಟ್ರೇಲಿಯಾವನ್ನು ಭಾರತ ಮತ್ತು ಇಂಗ್ಲೆಂಡ್ ಹಿಂದಿಕ್ಕಿದೆ ಎಂದು ಅಭಿಪ್ರಾಯಪಟ್ಟಿರುವ ಚಾಪೆಲ್, ‘ರಾಹುಲ್ ದ್ರಾವಿಡ್ ನಮ್ಮ ಮಿದುಳನ್ನು ಅನುಕರಿಸಿದ್ದಾರೆ. ಹಿಂದೆ ನಾವೇನೂ ಮಾಡುತ್ತಿದ್ದೇವೋ, ಅದನ್ನೇ ಅವರು ಭಾರತದಲ್ಲಿ ಮಾಡಿದ್ದಾರೆ. ದೊಡ್ಡ ಜನಸಂಖ್ಯೆಯ ವ್ಯಾಪ್ತಿಯೂ ಅವರಿಗೆ ಇದೆ. ಇದರಿಂದಾಗಿ ಇಂದು ಭಾರತೀಯ ಕ್ರಿಕೆಟ್ ಬಲಿಷ್ಠವಾಗಿದೆ’ ಎಂದು ಹೊಗಳಿದ್ದಾರೆ. ಗ್ರೇಗ್ ಚಾಪೆಲ್ 2006-07ರ ಅವಧಿಯಲ್ಲಿ ಭಾರತ ತಂಡದ ಕೋಚ್ ಕೂಡ ಆಗಿದ್ದರು. ಆ ಸಮಯದಲ್ಲಿ ದ್ರಾವಿಡ್ ಅವರೇ ತಂಡದ ನಾಯಕರಾಗಿದ್ದರು.

    ದ್ರಾವಿಡ್ ಸದ್ಯ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದು, ಯುವ ಕ್ರಿಕೆಟಿಗರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಅವರು ಈ ಮುನ್ನ 2016ರಿಂದ 2019ರವರೆಗೆ ಭಾರತ ಎ ಮತ್ತು 19 ವಯೋಮಿತಿ ತಂಡಗಳ ಮುಖ್ಯ ಕೋಚ್ ಕೂಡ ಆಗಿದ್ದರು. ಭಾರತ ತಂಡ 2020-21ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಆತಿಥೇಯರನ್ನು ಟೆಸ್ಟ್ ಸರಣಿಯಲ್ಲಿ ಸೋಲಿಸಿತ್ತು. ಇದಕ್ಕೆ ಭಾರತದ ಬಲಿಷ್ಠ ಮೀಸಲು ಆಟಗಾರರ ಬಳಗ ಕಾರಣವಾಗಿತ್ತು. ಪ್ರಮುಖ ಆಟಗಾರರ ಗೈರಿನ ನಡುವೆಯೂ ಭಾರತ ಗೆಲುವು ಸಾಧಿಸಿತ್ತು.

    ‘ಬ್ರಿಸ್ಬೇನ್ ಟೆಸ್ಟ್‌ನಲ್ಲಿ ಭಾರತ ತಂಡ ಕಣಕ್ಕಿಳಿದಾಗ 3-4 ಆಟಗಾರರು ಹೊಸಬರಾಗಿದ್ದರು. ಇದು ಭಾರತದ 2ನೇ ಹನ್ನೊಂದರ ಬಳಗ ಎಂದೇ ಎಲ್ಲರೂ ಹೇಳಿದ್ದರು. ಆದರೆ ಅವರೆಲ್ಲರೂ ಭಾರತ ಎ ತಂಡದ ಪರ ಆಡಿದವರಾಗಿದ್ದರು. ಭಾರತ ಮಾತ್ರವಲ್ಲದೆ ವಿಶ್ವದೆಲ್ಲೆಡೆ ಆಡಿದ ಅನುಭವ ಅವರಿಗೆ ಇತ್ತು. ಹೀಗಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಅವರು ಸಜ್ಜಾಗಿದ್ದರು’ ಎಂದು ಚಾಪೆಲ್ ವಿವರಿಸಿದ್ದಾರೆ.

    ಈಗ ಆಸೀಸ್ ಕ್ರಿಕೆಟ್ ಹದಗೆಟ್ಟಿದೆ!
    ಈ ಹಿಂದೆ ಉತ್ತಮ ಪ್ರತಿಭಾನ್ವೇಷಣಾ ವ್ಯವಸ್ಥೆ ಹೊಂದಿದ್ದ ಆಸೀಸ್ ಕ್ರಿಕೆಟ್ ಸ್ವರೂಪ ಇದೀಗ ಹದಗೆಟ್ಟಿದೆ ಎಂದೂ ಚಾಪೆಲ್ ದೂರಿದ್ದಾರೆ. ಆಸ್ಟ್ರೇಲಿಯಾದಲ್ಲಿನ ಈಗಿನ ದೇಶೀಯ ಕ್ರಿಕೆಟ್ ಸ್ವರೂಪದಲ್ಲಿ ಪ್ರತಿಭಾನ್ವಿತ ಆಟಗಾರರು ಕೂಡ ಸಂಕಷ್ಟದಲ್ಲಿದ್ದಾರೆ ಎಂದಿದ್ದಾರೆ. ಕಳೆದ ಕೆಲ ವರ್ಷಗಳಿಂದ ಆಸ್ಟ್ರೇಲಿಯಾದಲ್ಲಿ ಯುವ ಪ್ರತಿಭೆಗಳನ್ನು ಸರಿಯಾಗಿ ಗುರುತಿಸುವ ಕೆಲಸಗಳು ನಡೆಯುತ್ತಿಲ್ಲ. ಈ ವಿಚಾರದಲ್ಲಿ ಭಾರತ, ಇಂಗ್ಲೆಂಡ್ ಈಗ ನಮಗಿಂತ ಮುಂದೆ ಹೋಗಿವೆ ಎಂದು 72 ವರ್ಷದ ಚಾಪೆಲ್ ಹೇಳಿದ್ದಾರೆ.

    ಅಮ್ಮ ಕರೊನಾದಿಂದ ಬಳಲುತ್ತಿದ್ದರೂ ಸ್ಪರ್ಧಿಸಿ ಒಲಿಂಪಿಕ್ಸ್ ಅರ್ಹತೆ ಪಡೆದ ಭವಾನಿ ದೇವಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts