More

    ಉಡುಪಿ ಚರಂಡಿಗಳು ಬ್ಲಾಕ್!

    ಉಡುಪಿ: ಇನ್ನೂ ಕೆಲವೇ ದಿನಗಳಲ್ಲಿ ಮಳೆಗಾಲ ಆರಂಭವಾಗಲಿದ್ದು, ನಗರಸಭೆ ಮಾತ್ರ ಚರಂಡಿ ಹೂಳೆತ್ತುವ, ಸ್ವಚ್ಛತೆ ಮಾಡುವ ಬಗ್ಗೆ ವ್ಯವಸ್ಥಿತ ಸಿದ್ಧತೆ ನಡೆಸಿಲ್ಲ ಎಂದು ನಗರದ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋವಿಡ್-19 ತಡೆಗಟ್ಟುವ ಸಲುವಾಗಿ ನಗರಸಭೆ ಸಂಪೂರ್ಣ ತೊಡಗಿಸಿಕೊಂಡಿದ್ದು, ಇತ್ತ ಮಳೆಗಾಲದ ಪೂರ್ವ ಸಿದ್ಧತಾ ಸ್ವಚ್ಛತಾ ಕಾರ್ಯವನ್ನು ನಿರ್ಲಕ್ಷಿಸಿದೆ. ಚರಂಡಿ ಹೂಳೆತ್ತುವ ಕೆಲಸ ಸಮರ್ಪಕವಾಗಿ ನಡೆಯುತ್ತಿಲ್ಲ. ಕೆಲವು ಕಡೆಗಳಲ್ಲಿ ಕೆಲಸ ನಡೆಯುತ್ತಿದೆ. ಆದರೆ ಕೆಲವು ಕಡೆಗಳಲ್ಲಿ ಕೆಲಸ ನಡೆಯುತ್ತಿಲ್ಲ ಎಂದು ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ನಗರಸಭೆ ವ್ಯಾಪ್ತಿಯ ಗುಂಡಿಬೈಲು, ಕಿನ್ನಿಮೂಲ್ಕಿ, ತೆಂಕಪೇಟೆ, ಸರಳೇಬೆಟ್ಟು, ಬನ್ನಂಜೆ, ಅಜ್ಜರಕಾಡು, ಮಣಿಪಾಲ, ಪರ್ಕಳ, ಮಲ್ಪೆ, ಚಿಟ್ಪಾಡಿ, ಗುಂಡಿಬೈಲು, ದೊಡ್ಡಣಗುಡ್ಡೆಯ ಕೆಲವು ಕಡೆ ಚರಂಡಿಗಳಲ್ಲಿ ಇನ್ನೂ ಹೂಳೆತ್ತುವ ಕೆಲಸ ಆರಂಭಿಸಿಲ್ಲ. ಚರಂಡಿಯಲ್ಲಿ ಕಸಕಡ್ಡಿಗಳು, ಪ್ಲಾಸ್ಟಿಕ್ ಬಾಟಲಿಗಳು ತುಂಬಿಹೋಗಿದ್ದು, ಮಳೆ ನೀರುಗಳು ಸರಾಗವಾಗಿ ಹರಿಯುವುದು ಅಸಾಧ್ಯವಾಗಿದೆ. ನಿರ್ವಹಣೆ ಕೊರತೆಯಿಂದಾಗಿ ಪ್ರತಿ ವಾರ್ಡ್‌ಗಳಲ್ಲೂ ಚರಂಡಿ ಸಮಸ್ಯೆ ಎದ್ದು ಕಾಣುತ್ತಿದೆ. ಪರಿಣಾಮ ಮಳೆಗಾಲದಲ್ಲಿ ಕೃತಕ ನೆರೆ ಸೃಷ್ಟಿಯಾಗುವ ಆತಂಕ ಕಾಡುತ್ತಿದೆ.
    ಸೊಳ್ಳೆ ಕಾಟ: ಅಂಬಾಗಿಲು-ಗುಂಡಿಬೈಲು ರಸ್ತೆಯಲ್ಲಿ ಅಪಾಯಕಾರಿ ಬೃಹತ್ ಚರಂಡಿಯಲ್ಲಿ ಕಸಕಡ್ಡಿ ತುಂಬಿದೆ. ಇಲ್ಲಿ ಎತ್ತರಕ್ಕೆ ಗಿಡಗಂಟಿಗಳು ಬೆಳೆದಿವೆ. ಇದನ್ನು ತೆರವುಗೊಳಿಸದಿದ್ದಲ್ಲಿ ಮಳೆ ನೀರು ಸಾರಾಗವಾಗಿ ಹರಿಯುವುದು ಹೇಗೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಈಗಾಗಲೆ ಮೂರ್ನಾಲ್ಕು ಸಲ ಮಳೆ ಬಂದಿರುವುದರಿಂದ ಅಲ್ಲಲ್ಲಿ ಮಳೆ ನೀರು ನಿಂತು ಸೊಳ್ಳೆಗಳ ಆಶ್ರಯತಾಣವಾಗಿ ಮಾರ್ಪಟ್ಟಿದೆ. ಕರೊನಾ ಭೀತಿಯಲ್ಲಿರುವ ಸಾರ್ವಜನಿಕರಿಗೆ ಮಲೇರಿಯ, ಡೆಂೆ ಆತಂಕವೂ ಕಾಡುತ್ತಿದೆ.

    ಕೃತಕ ನೆರೆಯ ಭೀತಿ: ನಗರದಲ್ಲಿ ಪ್ರತೀ ವರ್ಷ ಮಳೆಗಾಲದಲ್ಲಿ ಚರಂಡಿಯಲ್ಲಿ ಹೂಳು ತುಂಬಿದ್ದ ಕಾರಣ ನೀರು ಹರಿಯದೇ ರಸ್ತೆ ಮೇಲೆಲ್ಲ ನೀರು ನಿಂತು ಕೃತಕ ನೆರೆ ಸೃಷ್ಟಿಯಾಗುತ್ತದೆ. ಕಳೆದ ವರ್ಷ ಕೆಲವು ವಾರ್ಡ್‌ಗಳ ವ್ಯಾಪ್ತಿಯಲ್ಲಿ ಕೃತಕ ನೆರೆ ಉಂಟಾಗಿ ಜನ ಸಮಾನ್ಯರು ತೊಂದರೆಗೊಳಪಟ್ಟಿದ್ದರು. ಈ ಬಾರಿಯು ನಗರಸಭೆ ಎಚ್ಚೆತ್ತುಕೊಂಡು ಶೀಘ್ರ ಚರಂಡಿ ಹೂಳೆತ್ತುವ ಕೆಲಸ ಮಾಡದಿದ್ದರೆ ತೀವ್ರ ಸಮಸ್ಯೆ ಆಗಲಿದೆ. ನಗರಸಭೆ ಅಧಿಕಾರಿಗಳು ಕೂಡಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

    ಈ ಬಾರಿ ನಗರಸಭೆ ಕೋವಿಡ್-19 ತಡೆಗಟ್ಟುವ ಕೆಲಸದಲ್ಲಿ ತೊಡಗಿಸಿಕೊಂಡ ಹಿನ್ನೆಲೆಯಲ್ಲಿ ಮಳೆಗಾಲ ಸಿದ್ಧತೆ ಸ್ವಲ್ಪ ವಿಳಂಬವಾಗಿದೆ. ಮಳೆಗಾಲದ ಪೂರ್ವ ಸಿದ್ಧತೆ, ಚರಂಡಿ ಹೂಳೆತ್ತುವ ಬಗ್ಗೆ ಈಗಾಗಲೆ ತಂಡಗಳನ್ನು ರಚಿಸಲಾಗಿದೆ. ಎಲ್ಲ 35 ವಾರ್ಡ್‌ಗಳಲ್ಲಿ ಚರಂಡಿ ಹೂಳೆತ್ತುವ ಕಾರ್ಯ, ಶುಚಿಗೊಳಿಸುವ ಕೆಲಸ ನಡೆಯಲಿದೆ.
    ಆನಂದ್ ಕಲ್ಲೋಳಿಕರ್ ಪೌರಾಯುಕ್ತ, ಉಡುಪಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts