More

    ಮರಾಠಿಗರ ಪ್ರಾಬಲ್ಯ ವಿರುದ್ಧ ಹೋರಾಡಿದ್ದ ಡಾ. ಸಿದ್ಧನಗೌಡ ಪಾಟೀಲ

    ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮರಾಠಿ ಪ್ರಾಬಲ್ಯದ ನಡುವೆಯೂ ಕನ್ನಡ ಅಸ್ತಿತ್ವಕ್ಕಾಗಿ ಮತ್ತು ಕನ್ನಡಿಗರ ಪರವಾಗಿ ನಿರಂತರ ಹೋರಾಟ ನಡೆಸಿದ್ದ ಹಾಗೂ ಬೆಳಗಾವಿ ಮಹಾನಗರ ಪಾಲಿಕೆಗೆ ಕನ್ನಡದ ಪ್ರಾಥಮ ಮೇಯರ್ ಆಗಿದ್ದ ಡಾ. ಸಿದ್ಧನಗೌಡ ಪಾಟೀಲ (87) ಬುಧವಾರ ವಿಧಿವಶರಾಗಿದ್ದಾರೆ.
    1948ರಿಂದ ಗಡಿ ಭಾಗದಲ್ಲಿ ಕನ್ನಡ ಉಳಿಸಿ ಬೆಳಸಲು ‘ಕನ್ನಡಿಗರ ಜನಸಂಖ್ಯೆ ಹೆಚ್ಚಿಸುವುದನ್ನೇ ನನ್ನ ಗುರಿ’ ಎಂಬ ಅಸ್ತ್ರದೊಂದಿಗೆ ಮರಾಠಿಗರ ಪ್ರಾಬಲ್ಯ ವಿರುದ್ಧ ಗಟ್ಟಿ ಧ್ವನಿ ಎತ್ತಿ ಯಶ ಕಂಡಿದ್ದ ‘ಗಡಿ ಹೋರಾಟದ ಕೊಂಡಿ’ ಕಳಚಿದೆ.

    ಅಂದಿನ ಕನ್ನಡ ಕಾವಲು ಸಮಿತಿ ಸದಸ್ಯರಾಗಿ, ಕನ್ನಡಿಗರ ಸಮಸ್ಯೆಗಳನ್ನು ಸರ್ಕಾರಕ್ಕೆ ಮುಟ್ಟಿಸುವ ಪ್ರತಿನಿಧಿಯಾಗಿ, ಬಳಿಕ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕನ್ನಡ ಭಾಷೆಯ ಮೊದಲ ಮೇಯರ್ ಆಗಿ ಕನ್ನಡಿಗರ ಮನಸ್ಸು ಗೆದ್ದಿದ್ದ ಬೈಲಹೊಂಗಲ ತಾಲೂಕಿನ ಮಲ್ಲಾಪುರ ಗ್ರಾಮದ ಡಾ. ಸಿದ್ಧನಗೌಡ ಪಾಟೀಲ ಅವರು ಇನ್ನು ನೆನಪು ಮಾತ್ರ.

    ಹೋರಾಟದ ದಿನಗಳು: ಬೆಳಗಾವಿಯಲ್ಲಿ 1948ರಿಂದಲೇ ಮರಾಠಿಗರ ದೌರ್ಜನ್ಯ ವಿರುದ್ಧ ಹಾಗೂ ಕನ್ನಡಿಗರ ರಕ್ಷಣೆಗಾಗಿ ಹುಡುಗರ ಗುಂಪು ಕಟ್ಟಿಕೊಂಡು ಆರಂಭಿಸಿದ ಕಿಚ್ಚಿನ ಹೋರಾಟ, 1956ರ ಕರ್ನಾಟಕ ಏಕೀಕರಣದ ಸಂದರ್ಭದಲ್ಲಿ ಬೃಹದಾಕಾರವಾಗಿ ಬೆಳೆಯಿತು. 1952ರಿಂದ 1984ರ ವರೆಗೆ ಸಿದ್ಧನಗೌಡರು ತಮ್ಮ ಅಧ್ಯಕ್ಷತೆಯಲ್ಲಿ ನಾಡಹಬ್ಬಗಳಿಗಾಗಿ ದೊಡ್ಡ ಪ್ರಮಾಣದಲ್ಲಿ ದೇಣಿಗೆ ಸಂಗ್ರಹಿಸಿ ನಿರಂತರ ಕನ್ನಡ ಚಟುವಟಿಕೆ ನಡೆಸಿದರು.

    ಕನ್ನಡ ಶಾಲೆ ಪ್ರಾರಂಭ: 1967ರಲ್ಲಿ ಮಹಾಜನ್ ವರದಿ ರಚನೆ ಸಂದರ್ಭದಲ್ಲಿ ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿ ಭಾಗಗಳಲ್ಲಿರುವ ಗ್ರಾಮಗಳ ಜನರನ್ನು ಒಗ್ಗೂಡಿಸಿ ಕರ್ನಾಟಕ ಪರವಾಗಿ ಕೆಲಸ ಮಾಡಿದರು. 1972ರಲ್ಲಿ ಕನ್ನಡ ಮತ್ತು ಉರ್ದು ಶಾಲೆಗಳ ಸುಧಾರಣೆ ಸಮಿತಿ ಅಧ್ಯಕ್ಷರಾಗಿ ಮರಾಠಿಗರ ಪ್ರಾಬಲ್ಯ ಇರುವ ಭಾಗಗಳಲ್ಲಿ 32 ಸರ್ಕಾರಿ ಕನ್ನಡ ಶಾಲೆ ಪ್ರಾರಂಭಿಸಿದರು. ಜತೆಗೆ ಹಳೇ ಶಾಲೆಗಳನ್ನು ಸುಧಾರಣೆ ಮಾಡಿಸಿದರು.

    ದಾಖಲೆ ನಿರ್ಮಿಸಿದ ಕನ್ನಡಿಗ: 1984ರಲ್ಲಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಅವಧಿಯಲ್ಲಿ ಬೆಳಗಾವಿ ಪಾಲಿಕೆ ವ್ಯಾಪ್ತಿಗೆ 51 ವಾರ್ಡ್‌ಗಳನ್ನು ರಚಿಸಿದರು. ಪರಿಣಾಮವಾಗಿ ಸಿದ್ಧನಗೌಡರು 1984ರಲ್ಲಿ ಬೆಳಗಾವಿ ಪಾಲಿಕೆ ಸದಸ್ಯರಾಗಿ ಆಯ್ಕೆಯಾದರು. ಬಳಿಕ 1990ರಲ್ಲಿ ಮತ್ತೆ ಪುನರಾಯ್ಕೆಗೊಂಡರು. 1991ರಲ್ಲಿ ಪ್ರಥಮ ಬಾರಿಗೆ ಕನ್ನಡ ಮಹಾಪೌರರಾಗಿ ಆಯ್ಕೆಗೊಂಡು ದಾಖಲೆ ನಿರ್ಮಿಸಿದರು.

    ಬೆಳಗಾವಿ ಡಿಸಿಸಿ ಬ್ಯಾಂಕ್‌ನ ನಿರ್ದೇಶಕರಾಗಿ ಮೂರು ಅವಧಿಗೆ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ಗ್ರಾಹಕರ ಮಹಾಮಂಡಳಿ ನಿರ್ದೇಶಕರಾಗಿ 20 ವರ್ಷ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ, 2.5 ವರ್ಷಗಳ ಕಾಲ ಮಹಾಮಂಡಳದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

    ಪ್ರಿಂಟಿಂಗ್ ಪ್ರೆಸ್, ದಿನಪತ್ರಿಕೆಯಲ್ಲಿ ಕೆಲಸ: ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನೇಸರಗಿ ಮಲ್ಲಾಪುರ ಅಥವಾ ಕೆ.ಎನ್. ಮಲ್ಲಾಪುರ ಗ್ರಾಮದ ಬಹುದೊಡ್ಡ ಒಕ್ಕುಲತನ ಹಾಗೂ ಗೌಡಕಿ ಮನೆತನದ ಚನ್ನಬಸವಗೌಡ ಮತ್ತು ನೀಲಮ್ಮ ದಂಪತಿಯ 3ನೇ ಮಗನಾಗಿ 14-4-1934ರಲ್ಲಿ ಸಿದ್ಧನಗೌಡರು ಜನಿಸಿದರು. ಆವತ್ತಿನ ದಿನಗಳಲ್ಲಿ ಮುಲ್ಕಿ ಪರೀಕ್ಷೆ (ಇವತ್ತಿನ ಎಸ್‌ಎಸ್‌ಎಲ್‌ಸಿ) ಉತ್ತೀರ್ಣ ಆಗದ ಕಾರಣ 17ನೇ ವಯಸ್ಸಿನಲಿಯೇ ಎಲ್.ಎಸ್. ಪಾಟೀಲ ಪ್ರಿಂಟಿಂಗ್ ಪ್ರೆಸ್‌ನಲ್ಲಿ ಕೆಲಸಕ್ಕೆ ಸೇರಿದರು. ಬಳಿಕ ‘ತರುಣ ಕರ್ನಾಟಕ’ ದಿನ ಪತ್ರಿಕೆಯಲ್ಲಿ ಕೆಲಸಕ್ಕೆ ಸೇರಿದರು. ಕೆಲಸದ ಜತೆಗೇ 1950ರಿಂದ ಕನ್ನಡ ಏಕೀಕರಣ ಹೋರಾಟಗಳಲ್ಲಿ ಭಾಗವಹಿಸಿದರು. ಸಿದ್ಧನ ೌಡರ ಅವರಿಗೆ ಪತ್ನಿ ಅನ್ನಪೂರ್ಣಾ, ಪುತ್ರ ಮಹಾಂತೇಶ, ಸೊಸೆ ಹಾಗೂ ಮೊಮ್ಮಕ್ಕಳು ಇದ್ದಾರೆ.

    ಸಿದ್ಧನಗೌಡರಿಗೆ ದೊರೆತ ಪ್ರಶಸ್ತಿಗಳು

    2007ಸಹಕಾರಿ ಕ್ಷೇತ್ರದ ಸಾಧನೆಗಾಗಿ ಕೊಡ ಮಾಡುವ ಶ್ರೇಷ್ಠ ಸಹಕಾರಿ ಪ್ರಶಸ್ತಿ
    2008ರಲ್ಲಿ ರಾಜ್ಯೋತ್ಸವ ಪ್ರಶಸ್ತಿ
    2012ರಲ್ಲಿ ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟೇರ್ ಪ್ರಶಸ್ತಿ
    2013ರಲ್ಲಿ ಧಾರವಾಡದಲ್ಲಿ ಕೆಎಸ್‌ಆರ್‌ಟಿಸಿ ಪ್ರಶಸ್ತಿ
    ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪ್ರತಿಷ್ಠಾನದವರಿಂದ ಸಿಗರನ್ನಡಂ ಗೆಲ್ಗೆ ಪ್ರಶಸ್ತಿ
    ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಿಂದ ಕರ್ನಾಟಕ ಶ್ರೀ ಪ್ರಶಸ್ತಿ
    ನಾಗನೂರು ರುದ್ರಾಕ್ಷಿಮಠದಿಂದ ಸೇವಾ ಶ್ರೀ ಪ್ರಶಸ್ತಿ
    ಬೆಂಗಳೂರಿನ ಇಂಜಿನಿಯರಿಂಗ್ ಟ್ರಸ್ಟ್ ವತಿಯಿಂದ ವಿಶ್ವೇಶ್ವರಯ್ಯ ಪ್ರಶಸ್ತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts