More

    ಆ ಕ್ಷಣ | ತಾರೆಯಾಗಲು ಹೊರಟು…

    ಆ ಕ್ಷಣ | ತಾರೆಯಾಗಲು ಹೊರಟು...

    ಕರಾವಳಿಯ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ್ದ ಸುಂದರ ಯುವತಿ ಜೂಲಿಗೆ ಚಿಕ್ಕಂದಿನಿಂದಲೂ ನಾಟಕ, ನೃತ್ಯದಲ್ಲಿ ಆಸಕ್ತಿ. ಆಕೆ ಹೈಸ್ಕೂಲಿನಲ್ಲಿ ಕಲಿಯುತ್ತಿದ್ದಾಗಿನಿಂದಲೇ ತಂದೆ-ತಾಯಿ- ‘ನೀನು ಚಿತ್ರನಟಿಯಾಗಿ ದೇಶದಲ್ಲಿಯೇ ಹೆಸರುವಾಸಿಯಾಗಬೇಕು’ ಎಂದು ಪ್ರೋತ್ಸಾಹಿಸುತ್ತಿದ್ದ ಕಾರಣ ಅವಳಿಗೆ ವಿದ್ಯಾಭ್ಯಾಸಕ್ಕಿಂತಲೂ ಬಣ್ಣದಲೋಕವೇ ಆಪ್ತವಾಯಿತು.

    ಪಿಯುಸಿ ಪಾಸಾದ ನಂತರ ಜೂಲಿ ಮುಂದೆ ಓದುವುದನ್ನು ಬಿಟ್ಟು ಬೆಂಗಳೂರಿಗೆ ಬಂದಳು. ಪಿ.ಜಿ.ಯಲ್ಲಿ ವಾಸಮಾಡುತ್ತ ಕಿರುತೆರೆ ಧಾರಾವಾಹಿಗಳ ನಿರ್ವಪಕರನ್ನು ಭೇಟಿ ಮಾಡುತ್ತ ತನಗೆ ಅವಕಾಶ ಕೊಡಬೇಕೆಂದು ಪೀಡಿಸತೊಡಗಿದಳು. ಐದೂಮುಕ್ಕಾಲು ಅಡಿ ಎತ್ತರದ, ಗೋಧಿ ಬಣ್ಣದ, ಸುಂದರ ಮೈಕಟ್ಟಿನ ಆಕೆ ಮೂರು ಭಾಷೆಗಳನ್ನು ಅರಳು ಹುರಿದಂತೆ ಮಾತನಾಡಬಲ್ಲವಳಾದ್ದರಿಂದ ಹಲವಾರು ಧಾರಾವಾಹಿ ನಿರ್ಮಾಪಕರು ಅವಳಿಗೆ ಅವಕಾಶಗಳನ್ನು ಕೊಟ್ಟರು. ಆಕೆ ನಟಿಸಿದ ಮೊದಲ ಧಾರಾವಾಹಿಯಲ್ಲಿಯೇ ವೀಕ್ಷಕರನ್ನು ಆಕರ್ಷಿಸಿದ ಕಾರಣ ಆಕೆಗೆ ಬಿಡುವೇ ಇಲ್ಲದಂತೆ ಅವಕಾಶಗಳು ದೊರೆಯತೊಡಗಿದವು. ಜಾಹೀರಾತುಗಳಲ್ಲಿಯೂ ಮಿಂಚತೊಡಗಿದಳು. ಇಪ್ಪತೆôದನೆಯ ವಯಸ್ಸಿಗೇ ಸಾಕಷ್ಟು ಹಣ, ಖ್ಯಾತಿ ಗಳಿಸಿದಳು. ಕೆಲ ಕನ್ನಡ ಚಿತ್ರಗಳಲ್ಲಿಯೂ ಪಾತ್ರಗಳು ದೊರೆತವು. ಆದರೂ ತನಗೆ ಬಂದಿದ್ದ ಯಶಸ್ಸಿನಿಂದ ಜೂಲಿಗೆ ತೃಪ್ತಿಯಿರಲಿಲ್ಲ. ತಾನು ಹಿಂದಿ ಸಿನಿಮಾದ ಪ್ರಖ್ಯಾತ ನಟಿಯಾಗಬೇಕು ಎನ್ನುವ ಬಾಲ್ಯದ ಕನಸು ನನಸಾಗಲೇ ಇಲ್ಲವಲ್ಲ ಎಂದು ಚಿಂತಿಸತೊಡಗಿದಳು.

    ಜೂಲಿಯ ಎಲ್ಲ ಬಯಕೆಗಳಿಗೆ ಇಂಬು ಕೊಡುತ್ತಿದ್ದವನು ಅವಳ ಬಾಲ್ಯಸ್ನೇಹಿತ ಜೋಸೆಫ್. ಆಕೆಗಿಂತ ಎರಡು ವರ್ಷ ದೊಡ್ಡವನಾಗಿದ್ದ ಆತ ಜೂಲಿಯ ಪಕ್ಕದ ಮನೆಯಲ್ಲಿಯೇ ವಾಸಿಸುತ್ತಿದ್ದ. ಮುಂದೊಂದು ದಿನ ಪತಿ-ಪತ್ನಿಯಾಗಬೇಕೆಂಬ ಕನಸನ್ನು ಅವರಿಬ್ಬರೂ ಚಿಕ್ಕಂದಿನಿಂದಲೂ ಕಂಡಿದ್ದರು. ಇಬ್ಬರ ಮಾತಾಪಿತರೂ ಈ ಬಯಕೆಗೆ ನೀರೆರೆದಿದ್ದರು. ಜೋಸೆಫ್ ಮಧ್ಯಮ ವರ್ಗದ ಕುಟುಂಬದಿಂದ ಬಂದಿದ್ದು, ಪದವಿ ನಂತರ ಸೈನ್ಯದಲ್ಲಿ ಅಧಿಕಾರಿಯಾಗಿ ಸೇರಿಕೊಂಡಿದ್ದ. ಕೆಲಕಾಲ ಕಾಶ್ಮೀರದಲ್ಲಿ ಸೇವೆ ಸಲ್ಲಿಸಿದ ನಂತರ ಆತ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದ.

    ಚಲನಚಿತ್ರವೊಂದರ ಶೂಟಿಂಗ್​ಗೆಂದು ಜೂಲಿ ಮುಂಬೈಗೆ ಹೋದಾಗ ತಾನು ಹಿಂದಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲು ಆಗಲೇ ಇಲ್ಲವಲ್ಲ ಎಂಬ ದುಃಖವನ್ನು ಜೋಸೆಫ್ ಬಳಿ ವ್ಯಕ್ತಪಡಿಸಿದಳು. ಆಗ ಆತ ತನಗೆ ದಿನೇಶ್ ಖನ್ನಾ ಎನ್ನುವ ಹೆಸರಾಂತ ಛಾಯಾಗ್ರಾಹಕನ ಪರಿಚಯವಿರುವುದಾಗಿ ತಿಳಿಸಿ ಅವನ ಸಹಾಯ ಕೇಳೋಣವೆಂದು ಜೂಲಿಯನ್ನು ಕರೆದೊಯ್ದ. ತನಗೆ ಮುಂಬೈ ಚಿತ್ರರಂಗದಲ್ಲಿ ಯಾವುದಾದರೊಂದು ಅವಕಾಶ ಕೊಡಿಸಬೇಕೆಂದು ಜೂಲಿ ಖನ್ನಾನಿಗೆ ದುಂಬಾಲು ಬಿದ್ದಳು. ಆತ ಮಾರನೆಯ ದಿನವೇ ಅವಳ ಫೋಟೋಶೂಟ್ ಮಾಡಿ ಅವಳನ್ನು ಪ್ರಖ್ಯಾತ ಕಿರುತೆರೆ ನಿರ್ವಪಕಿ ಬಳಿ ಕರೆದೊಯ್ದು ಪರಿಚಯ ಮಾಡಿಸಿದ. ಆ ನಿರ್ವಪಕಿ ಜೂಲಿಗೆ ಆಡಿಷನ್ ಮಾಡಿ, ‘ನಿನಗೆ ಅವಕಾಶ ಕೊಡಲು ಸಿದ್ಧ, ಆದರೆ ನೀನು ಬೆಂಗಳೂರಿನಲ್ಲಿದ್ದರೆ ಮುಂಬೈ ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಾಧ್ಯವಿಲ್ಲ, ಮುಂಬೈಗೇ ಬಂದು ನೆಲೆಸು’ ಎಂದು ಸೂಚಿಸಿದಳು. ಆ ಸಮಯದಲ್ಲಿ ಒಪ್ಪಿಕೊಂಡಿದ್ದ ಧಾರಾವಾಹಿಗಳ ಶೂಟಿಂಗ್ ಮುಕ್ತಾಯವಾದ ನಂತರ ಮುಂಬೈಗೆ ಬರುವುದಾಗಿ ಜೂಲಿ ತಿಳಿಸಿದಳು. ಕಡೆಗೂ ತನ್ನ ಕನಸು ನನಸಾಗುವ ಖುಷಿಯಿಂದ ಆಕೆ ಬೀಗತೊಡಗಿದಳು.

    ಇದಾದ ಕೆಲ ವಾರಗಳ ಬಳಿಕ ಜೋಸೆಫ್​ಗೆ ಮುಂಬೈನಿಂದ ಚೆನ್ನೈಗೆ ವರ್ಗವಾಯಿತು. ಒಂದು ಕ್ಷಣ ಜೂಲಿ ವಿಚಲಿತಳಾದಳು. ತಾನು ಜೋಸೆಫ್ ಜತೆ ವಾಸಿಸುತ್ತ ಮುಂಬೈ ಚಿತ್ರರಂಗದಲ್ಲಿ ಅವಕಾಶಕ್ಕಾಗಿ ಓಡಾಡಬಹುದು ಎಂದು ಆಕೆ ಭಾವಿಸಿದ್ದಳು. ಆದರೆ ಅವಳಿಗೀಗ ಹೊಸ ಸಮಸ್ಯೆ ಎದುರಾಗಿತ್ತು. ತನ್ನ ಆತಂಕವನ್ನು ಆಕೆ ಖನ್ನಾನ ಜತೆಗೆ ಹಂಚಿಕೊಂಡಾಗ, ಆತ ‘ನೀನೇನೂ ಚಿಂತೆ ಮಾಡಬೇಡ, ನನ್ನ ಗೆಳೆಯನ ಫ್ಲಾಟ್ ಒಂದು ಖಾಲಿಯಿದೆ, ನಿನಗೆ ಅಲ್ಲಿ ಉಳಿಯುವ ವ್ಯವಸ್ಥೆ ಮಾಡಿಸುತ್ತೇನೆ, ನೀನು ಬೇಗನೇ ಬಾ’ ಎಂದ. ಈ ಸಲಹೆಗೆ ಜೋಸೆಫ್​ನ ಒಪ್ಪಿಗೆಯೂ ದೊರೆಯಿತು. ಮುಂಬೈಗೆ ಬಂದ ಜೂಲಿ ಖನ್ನಾ ಸೂಚಿಸಿದ ಫ್ಲಾಟ್​ನಲ್ಲಿ ಉಳಿದುಕೊಂಡಳು.

    ಆರಂಭದ ದಿನಗಳಲ್ಲಿ ಜೂಲಿಯನ್ನು ಹಲವಾರು ಸಿನಿಮಾ ಮತ್ತು ಕಿರುತೆರೆ ನಿರ್ವಪಕರ ಬಳಿ ಕರೆದೊಯ್ದ ಖನ್ನಾ ಅವಳಿಗೆ ಒಂದೆರಡು ಜಾಹೀರಾತುಗಳಲ್ಲಿ ಮಾಡೆಲ್ ಆಗಿ ಅವಕಾಶ ಕೊಡಿಸಿದ. ಕಾಲಕ್ರಮೇಣ ಜೂಲಿ ಸುಮಾರು ಮೂವತ್ತು ವರ್ಷ ವಯಸ್ಸಿನ ಸ್ಪುರದ್ರೂಪಿ ಯುವಕನಾಗಿದ್ದ ಖನ್ನಾನ ಸನಿಹಕ್ಕೆ ಬಂದಳು. ಅವನೊಡನೆ ರಾತ್ರಿ ಪಾರ್ಟಿಗಳಿಗೆ ಹೋಗುತ್ತಿದ್ದಳು. ಕೆಲವೊಮ್ಮೆ ಖನ್ನಾ ಜೂಲಿಯ ಫ್ಲಾಟಿನಲ್ಲಿಯೇ ಇರುತ್ತಿದ್ದ ಕಾರಣ, ಅವರಿಬ್ಬರ ನಡುವೆ ದೈಹಿಕಸಂಪರ್ಕವೂ ಬೆಳೆಯಿತು. ಆದರೆ ಜೂಲಿ ತನ್ನ ಬಾಲ್ಯಮಿತ್ರ ಹಾಗೂ ಭಾವೀ ಪತಿ ಜೋಸೆಫ್​ನನ್ನೇನೂ ಮರೆತಿರಲಿಲ್ಲ. ಅವನೊಡನೆ ಪ್ರತಿದಿನವೂ ಫೋನ್ ಮೂಲಕ ಸಂಭಾಷಿಸುತ್ತಿದ್ದಳು.

    2008 ಮೇ 6ರ ರಾತ್ರಿ 10 ಗಂಟೆಗೆ ಜೋಸೆಫ್ ಜೂಲಿಗೆ ಕರೆ ಮಾಡಿದಾಗ ಖನ್ನಾ ಅವಳ ಮನೆಯಲ್ಲಿಯೇ ಇದ್ದ. ಜೂಲಿ ಜತೆಗೆ ಸಂಭಾಷಿಸುವಾಗ ಜೋಸೆಫ್​ನಿಗೆ ಗಂಡುಧ್ವನಿಯೊಂದು ಕೇಳಿದಾಗ, ‘ನಿನ್ನ ಮನೆಯಲ್ಲಿ ಯಾವುದೋ ಗಂಡಿನ ಧ್ವನಿ ಕೇಳುತ್ತಿದೆಯಲ್ಲ, ಯಾರು ಬಂದಿದ್ದಾರೆ?’ ಎಂದು ವಿಚಾರಿಸಿದ. ‘ನಮ್ಮ ಕಾಲನಿಯ ಸೆಕ್ಯೂರಿಟಿ ಏನನ್ನೋ ಹೇಳಲು ಬಂದಿದ್ದಾನೆ’ ಎಂಬ ಹಾರಿಕೆಯ ಉತ್ತರ ನೀಡಿ ಜೋಸೆಫ್ ಜತೆಗಿನ ಸಂಭಾಷಣೆಯನ್ನು ಬೇಗನೇ ಮುಗಿಸಿದಳು. ಬೇಸರಗೊಂಡ ಜೋಸೆಫ್ ಅದೇ ರಾತ್ರಿ ಎರಡು, ಮೂರು ಬಾರಿ ಆಕೆಗೆ ಕರೆ ಮಾಡಿದ. ಆ ರಾತ್ರಿ ಖನ್ನಾ ಅವಳೊಡನೆಯೇ ಇದ್ದ ಕಾರಣ ಜೂಲಿ ಯಾವ ಕರೆಯನ್ನೂ ಸ್ವೀಕರಿಸಲಿಲ್ಲ. ಮಾರನೆಯ ದಿನ ಬೆಳಗ್ಗೆ ಸರಿಯಾಗಿ 7.15ಕ್ಕೆ ಜೂಲಿಯ ಫ್ಲಾಟ್​ನ ಕರೆಗಂಟೆ ಬಾರಿಸಿದಾಗ, ನೈಟಿಯಲ್ಲಿದ್ದ ಆಕೆ ಬಾಗಿಲು ತೆರೆದಳು. ಆಗ ಅವಳಿಗಾದ ಆಶ್ಚರ್ಯ ಅಷ್ಟಿಷ್ಟಲ್ಲ. ಏಕೆಂದರೆ ಎದುರಿಗೆ ಜೋಸೆಫ್ ಸೂಟ್​ಕೇಸ್ ಹಿಡಿದುಕೊಂಡು ನಿಂತಿದ್ದ. ಆತ ಜೂಲಿ ಜತೆ ಮಾತನಾಡದೆ ನೇರವಾಗಿ ಬೆಡ್​ರೂಂಗೆ ಧಾವಿಸಿದ. ಜೂಲಿಯ ಮಂಚದ ಮೇಲೆ ನಗ್ನಾವಸ್ಥೆಯಲ್ಲಿ ಮಲಗಿದ್ದ ದಿನೇಶ್ ಖನ್ನಾನನ್ನು ನೋಡಿ ರೊಚ್ಚಿಗೆದ್ದ. ಅವನನ್ನು ಬಡಿದೆಬ್ಬಿಸಿ, ‘ನಾನು ನಿನ್ನನ್ನು ಸ್ನೇಹಿತನೆಂದು ನಂಬಿ ಜೂಲಿಗೆ ಪರಿಚಯ ಮಾಡಿಕೊಟ್ಟರೆ, ನಾನು ಮದುವೆಯಾಗುವವಳ ಜೊತೆಗೇ ದೈಹಿಕಸಂಪರ್ಕ ಮಾಡುವ ಧೈರ್ಯ ತೋರಿಸಿದೆಯಾ’ ಎನ್ನುತ್ತ ಅವನಿಗೆ ಹಿಗ್ಗಾಮುಗ್ಗಾ ಥಳಿಸತೊಡಗಿದ. ಮಂಚದಿಂದ ಮೇಲೆದ್ದ ಖನ್ನಾ ಜೋಸೆಫ್ ಜತೆಗೆ ಕೆಲಕಾಲ ಹೋರಾಟ ನಡೆಸಿದನಾದರೂ ಸೈನಿಕನಾಗಿದ್ದ ಜೋಸೆಫ್​ನನ್ನು ಮಣಿಸಲಾರದೇ ಗಾಯಗೊಂಡು ಕೆಳಗೆ ಬಿದ್ದ. ಅಡುಗೆಮನೆಗೆ ಧಾವಿಸಿದ ಜೋಸೆಫ್ ಅಲ್ಲಿದ್ದ ಚಾಕು ತೆಗೆದುಕೊಂಡು ಬಂದು ಖನ್ನಾನ ಹೊಟ್ಟೆಗೆ ಪದೇಪದೆ ತಿವಿದ. ಖನ್ನಾನ ಕರುಳು ದೇಹದಿಂದ ಹೊರಬಂದು ಆತ ಸತ್ತು ಬಿದ್ದ. ಅವರಿಬ್ಬರ ಕಾಳಗವನ್ನು ಜೂಲಿ ನೋಡುತ್ತಲೇ ಇದ್ದರೂ ಯಾವುದೇ ರೀತಿಯ ಪ್ರತಿಕ್ರಿಯೆ ತೋರಲಿಲ್ಲ. ಆದರೆ ಖನ್ನಾನ ಮೃತದೇಹ ನೋಡಿ ಆತಂಕಗೊಂಡಳು. ‘ನೀನೇನೂ ಹೆದರಬೇಡ, ನಾನು ಹೇಳಿದಂತೆ ಮಾಡು’ ಎಂದ ಜೋಸೆಫ್ ಅದೇ ಬೆಡ್​ರೂಂನಲ್ಲಿಯೇ ಜೂಲಿ ಜತೆಗೆ ಲೈಂಗಿಕ ಕ್ರಿಯೆ ನಡೆಸಿದ. ನಂತರ ಅವರಿಬ್ಬರೂ ಚಹಾ ಮಾಡಿಕೊಂಡು ಕುಡಿದರು.

    ಹತ್ತೂವರೆ ಗಂಟೆ ಸುಮಾರಿಗೆ ಜೋಸೆಫ್​ನ ಸೂಚನೆ ಮೇರೆಗೆ ಜೂಲಿ ಮಾಲ್​ಗೆ ಹೋಗಿ ಅಲ್ಲಿಂದ ನಾಲ್ಕು ದೊಡ್ಡ ಪ್ಲಾಸ್ಟಿಕ್ ಚೀಲಗಳು, ಎರಡು ಬೆಡ್​ಶೀಟು, ಕಿಟಕಿಗೆ ಹಾಕುವ ಕರ್ಟನ್​ಗಳು, ಏರ್​ಫ್ರೆಷನರ್ ಹಾಗೂ ಮಾಂಸ ಕತ್ತರಿಸುವ ಎರಡು ಚಾಕುಗಳನ್ನು ಖರೀದಿಸಿ ಮನೆಗೆ ಬಂದಳು. ಆನಂತರ ಇಬ್ಬರೂ ಸೇರಿ ಬೆಡ್​ರೂಂನಲ್ಲಿದ್ದ ಖನ್ನಾನ ದೇಹವನ್ನು ಬಾತ್​ರೂಂಗೆ ಎಳೆದುಕೊಂಡು ಬಂದು ಮೃತದೇಹವನ್ನು ಹಲವಾರು ಭಾಗಗಳಾಗಿ ಕತ್ತರಿಸಲಾರಂಭಿಸಿದರು. ಅಷ್ಟರಲ್ಲಿ ಊಟದ ಸಮಯವಾದ್ದರಿಂದ ಹತ್ತಿರದ ಹೋಟೆಲಿನಿಂದ ಊಟ ತರಿಸಿಕೊಂಡರು. ಆನಂತರ ಖನ್ನಾನ ದೇಹವನ್ನು ಸಂಪೂರ್ಣವಾಗಿ ಕತ್ತರಿಸಿ ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿ ಆ ತುಂಡುಗಳನ್ನು ರಕ್ತಸಿಕ್ತ ಬೆಡ್​ಶೀಟುಗಳು ಮತ್ತು ಕರ್ಟನ್​ಗಳಲ್ಲಿ ಜೋಡಿಸಿ ಅವೆಲ್ಲವನ್ನೂ ಜೂಲಿ ತಂದಿದ್ದ ನಾಲ್ಕು ಪ್ಲಾಸ್ಟಿಕ್ ಬ್ಯಾಗ್​ಗಳಲ್ಲಿ ತುಂಬಿದರು. ಇದಲ್ಲದೆ ಖನ್ನಾ ಧರಿಸಿದ್ದ ಬಟ್ಟೆಗಳು, ವಾಚು ಮತ್ತು ಪರ್ಸನ್ನೂ ಅವುಗಳಲ್ಲೇ ತುಂಬಿದರು.

    ಬಳಿಕ ಜೂಲಿ ಜೋಸೆಫ್ ಜತೆಗೆ ಆಟೋರಿಕ್ಷಾದಲ್ಲಿ ತನ್ನ ಸ್ನೇಹಿತ ಕಿರಣ್ ಎನ್ನುವವನ ಮನೆಗೆ ಹೋಗಿ ಅವನ ಸಾಂಟ್ರೋ ಕಾರನ್ನು ದಿನದ ಮಟ್ಟಿಗೆ ಎರವಲು ಪಡೆದಳು. ಆ ಕಾರಿನಲ್ಲಿ ಪೆಟ್ರೋಲ್ ಬಂಕಿಗೆ ಹೋಗಿ ಪೆಟ್ರೋಲ್ ತುಂಬಿಸಿ, ಐದು ಲೀಟರ್ ಪೆಟ್ರೋಲನ್ನು ಕ್ಯಾನಲ್ಲಿ ತುಂಬಿಸಿಕೊಂಡರು. ಅಪಾರ್ಟ್​ವೆುಂಟ್​ಗೆ ವಾಪಸಾದ ನಂತರ ಖನ್ನಾನ ದೇಹದ ತುಂಡುಗಳಿದ್ದ್ದ ನಾಲ್ಕು ಬ್ಯಾಗುಗಳನ್ನು ಕಾರಿನ ಡಿಕ್ಕಿಯಲ್ಲಿಟ್ಟರು. ಆ ವಾಹನವನ್ನು ಮುಂಬೈ-ಅಹ್ಮದಾಬಾದ್ ಹೆದ್ದಾರಿಯಲ್ಲಿ ಚಲಿಸಿಕೊಂಡು ಹೋದ ಜೋಸೆಫ್ ಮುಂಬೈನಿಂದ 90 ಕಿ.ಮೀ. ದೂರದಲ್ಲಿ, ಮನೋರ್ ಎಂಬ ಊರಿನ ಬಳಿಯಿರುವ ಅರಣ್ಯಕ್ಕೆ ಹೋಗಿ ಕಾರನ್ನು ನಿಲ್ಲಿಸಿದ. ಅಲ್ಲಿನ ನಿರ್ಜನ ಪ್ರದೇಶದಲ್ಲಿ ಬ್ಯಾಗುಗಳನ್ನು ಎಸೆದು ಅವುಗಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ. ಆಗ ರಾತ್ರಿ 11 ಗಂಟೆಯಾಗಿತ್ತು.

    (ಮುಂದುವರಿಯುವುದು)

    (ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts