More

    ಬಾಗಿಲು ಮುಚ್ಚಿದ್ದ ಸಾರಥಿ ಹೊಸೂರು ಶಾಲೆಗೀಗ ಜೀವಕಳೆ

    ಚನ್ನಗಿರಿ: ಮಕ್ಕಳ ದಾಖಲಾತಿ ಕೊರತೆಯಿಂದ ಮೂರು ವರ್ಷ ಬೀಗ ಹಾಕಿದ್ದ ತಾಲೂಕಿನ ಸಾರಥಿ ಹೊಸೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೀಗ ಜೀವಕಳೆ ಬಂದಿದೆ.

    ಪಾಲಕರ ಖಾಸಗಿ ವಿದ್ಯಾಸಂಸ್ಥೆಗಳ ವ್ಯಾಮೋಹದಿಂದಾಗಿ ಕ್ರಮೇಣ ಮಕ್ಕಳ ಸಂಖ್ಯೆ ಕಡಿಮೆಯಾಗಿ ಸರ್ಕಾರಿ ಶಾಲೆಗೆ ಬೀಗ ಬಿದ್ದಿದ್ದು, ಮೂರು ವರ್ಷ ಚಿಣ್ಣರ ಕಲರವ ಇಲ್ಲದೆ, ಹಾಳು ಸುರಿಯುತ್ತಿತ್ತು.

    ಪ್ರತಿ ಶೈಕ್ಷಣಿಕ ಸಾಲಿನಲ್ಲೂ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಬಂದು ಗ್ರಾಮಸ್ಥರ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದರು. ಆದರೆ, ಯಾವ ಪಾಲಕರು ಮಕ್ಕಳನ್ನು ಶಾಲೆಗೆ ದಾಖಲಿಸಲು ಮುಂದೆ ಬಂದಿರಲಿಲ್ಲ.

    ಶಾಲೆ ತಾತ್ಕಾಲಿಕವಾಗಿ ಬಂದ್

    ಹೀಗಾಗಿ, ಶಾಲೆ ತಾತ್ಕಾಲಿಕವಾಗಿ ಬಂದ್ ಆಗಿತ್ತು. ಪ್ರತಿ ಸಲದಂತೆ ಈ ಬಾರಿಯೂ ಅಧಿಕಾರಿಗಳು ಪ್ರಯತ್ನ ಮಾಡಿದಾಗ ಗ್ರಾಮಸ್ಥರು ಮನಸು ಮಾಡಿದ್ದರ ಫಲ ಶಾಲೆ ಬಾಗಿಲು ತೆರೆದಿದೆ.

    ಈಗ ಮಕ್ಕಳು ದಾಖಲಾಗಿದ್ದು, ತಕ್ಷಣಕ್ಕೆ ಒಬ್ಬ ಶಿಕ್ಷಕರ ನೇಮಕವೂ ಆಗಿದೆ. ಸುಣ್ಣ ಬಣ್ಣ ಕಂಡು ಮತ್ತೆ ಜೀವಕಳೆ ಬಂದಿದೆ.

    ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಎಸ್.ಶಂಕರಪ್ಪ ಮಾತನಾಡಿ, ಪಾಲಕರು ಖಾಸಗಿ ಶಾಲೆಗಳ ವ್ಯಾಮೋಹಕ್ಕೆ ಒಳಗಾಗಿ ಮಕ್ಕಳನ್ನು ಪಟ್ಟಣದ ಶಾಲೆಗಳಿಗೆ ಕಳುಹಿಸುತ್ತಿದ್ದರಿಂದ ಶಾಲೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿತ್ತು.

    ಆದರೆ, ಮಕ್ಕಳನ್ನು ಸೇರಿಸಲು ಗ್ರಾಮಸ್ಥರನ್ನು ಮನವಿ ಮಾಡಲಾಗುತ್ತಿತ್ತು. ಮೂರು ವರ್ಷಗಳಿಂದ ಯಾರು ಮುಂದೆ ಬಂದಿರಲಿಲ್ಲ. ಈ ಸಾಲಿನಲ್ಲಿ 11 ಮಕ್ಕಳನ್ನು ಗ್ರಾಮಸ್ಥರು ದಾಖಲಾತಿ ಮಾಡಿಸಲು ಮುಂದೆ ಬಂದಿದ್ದಾರೆ.

    ಶಾಲೆಗೆ ಶಿಕ್ಷಕ ಮೇಲಗಿರಿಯಪ್ಪ ಅವರನ್ನು ತಕ್ಷಣ ನೇಮಿಸಲಾಗಿದೆ. ಬಿಸಿಯೂಟ ಪ್ರಾರಂಭಿಸಲಾಗುತ್ತದೆ ಎಂದು ಹೇಳಿದರು.

    ಅಕ್ಷರ ದಾಸೋಹ ನಿರ್ದೇಶಕ ಹಾಲಸಿದ್ದಪ್ಪ, ಸಿಆರ್‌ಪಿ ಮಂಜಪ್ಪ, ಜೋಳದಾಳು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರವಿನಾಯ್ಕ, ಮಾಜಿ ಅಧ್ಯಕ್ಷ ಜೋತ್ಯಪ್ಪ, ಜೆ.ಸಿ.ಸ್ವಾಮಿ, ಪರಮೇಶ್ವರಪ್ಪ ಇದ್ದರು.

    ಶಿಕ್ಷಣ ಇಲಾಖೆ ಉಚಿತವಾಗಿ ಪಠ್ಯಪುಸ್ತಕ, ಸಮವಸ್ತ್ರ, ಶೂಗಳನ್ನು ನೀಡುತ್ತದೆ. ಅಲ್ಲದೆ, ಉತ್ತಮ ಶಿಕ್ಷಕರನ್ನು ನೀಡಿ, ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತದೆ. ಸರ್ಕಾರ ಸರ್ಕಾರಿ ಶಾಲೆಗೆ ಎಲ್ಲ ಸೌಲಭ್ಯಗಳನ್ನು ನೀಡುತ್ತಿದ್ದು, ವಿದ್ಯಾರ್ಥಿಗಳು ಸಮರ್ಪಕವಾಗಿ ಬಳಸಿಕೊಳ್ಳಬೇಕಿದೆ.
    ಡಾ.ಎಸ್.ಶಂಕರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ, ಚನ್ನಗಿರಿ.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts